ಅಖಂಡ ಭಾರತದ ಬೋಧಕನಾಗಿದ್ದ ಆರೆಸ್ಸೆಸ್ ಪಾಕಿಸ್ತಾನದ ವಕೀಲನಾಗಿ ಮಾರ್ಪಟ್ಟಿದ್ದು ಹೇಗೆ?

 ಅಭಿಮತ

* ಬಿವಿಸೀ

ಅಖಂಡ ಭಾರತದ ಹೆಸರಿನಲ್ಲಿ ದಶಕಗಳ ಕಾಲ ದೇಶದ ಜನರ ಭಾವನೆಗಳನ್ನು ಕೆರಳಿಸುತ್ತ ಬಂದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಇಂದಿನ ನಿಲುವು ನೋಡಿದರೆ ಒಂದು ಪ್ರಶ್ನೆ ಅನಿವಾರ್ಯವಾಗಿ ಎದುರಾಗುತ್ತದೆ. ನಿನ್ನೆ ಪಾಕಿಸ್ತಾನವನ್ನು ಭಾರತದ ವಿಭಜನೆಯ ಸಂಕೇತವೆಂದು ಖಂಡಿಸಿದ್ದ ಸಂಘಕ್ಕೆ ಇಂದು ಅದೇ ಪಾಕಿಸ್ತಾನದೊಂದಿಗೆ ಮಾತುಕತೆಯ ಬಾಗಿಲು ತೆರೆದಿಡಬೇಕೆಂಬ ಹಠ ಏಕೆ? ಪಾಕಿಸ್ತಾನ ಭಾರತದ ವಿರುದ್ಧ ಸಂಚು ರೂಪಿಸುತ್ತಲೇ ಇದೆ ಎಂದು ಹೇಳಿಕೊಂಡು ಬಂದ ಸಂಘವೇ ಈಗ ಸಂವಾದದ ಪರವಾಗಿ ವಕಾಲತ್ತು ವಹಿಸುವ ಮಟ್ಟಕ್ಕೆ ಏಕೆ ಇಳಿದಿದೆ?

ಇದು ಕೇವಲ ನಿಲುವಿನ ಬದಲಾವಣೆಯಲ್ಲ. ಇದು ಸಂಘದ ಸೈದ್ಧಾಂತಿಕ ಸ್ಥಿರತೆಯ ಮೇಲೆಯೇ ಪ್ರಶ್ನೆ ಎಬ್ಬಿಸುವ ದ್ವಂದ್ವ ನೀತಿ.

ಬಿಜೆಪಿ ವರಿಷ್ಠರಾಗಿದ್ದ ಮಾಜಿ ಉಪಪ್ರಧಾನಿ ಎಲ್ ಕೆ ಅಡ್ವಾಣಿ ಪಾಕಿಸ್ತಾನಕ್ಕೆ ತೆರಳಿ ಮೊಹಮ್ಮದ್ ಅಲಿ ಜಿನ್ನಾರನ್ನು ಶ್ಲಾಘಿಸಿ, ಅವರನ್ನು `ಮಹಾ ಪ್ರಜಾಪ್ರಭುತ್ವವಾದಿ' ಎಂದು ಬಣ್ಣಿಸಿದಾಗ ಸಂಘ ಎಂತಹ ಆಕ್ರೋಶ ವ್ಯಕ್ತಪಡಿಸಿತ್ತು ಎಂಬುದನ್ನು ದೇಶ ಮರೆತಿಲ್ಲ. ಜಿನ್ನಾ ಎಂಬ ಹೆಸರೇ ಸಂಘದ ರಾಜಕೀಯ ವಲಯದಲ್ಲಿ ವಿಭಜನೆಯ ಪ್ರತೀಕವಾಗಿದ್ದ ಸಂದರ್ಭದಲ್ಲಿ, ಅಡ್ವಾಣಿಯ ಹೇಳಿಕೆ ಸಂಘಕ್ಕೆ ಅಷ್ಟು ಅಸಹನೀಯವಾಗಿತ್ತು. ಅದರ ಪರಿಣಾಮವಾಗಿ ಅಡ್ವಾಣಿ ಬಿಜೆಪಿಯ ಅತ್ಯುನ್ನತ ರಾಜಕೀಯ ಸ್ಥಾನದಿಂದ ಬದಿಗೆ ಸರಿಯುವಂತಾಯಿತು. ನಂತರ ನರೇಂದ್ರ ಮೋದಿ ಅವರ ಉದಯಕ್ಕೆ ದಾರಿ ಸುಗಮವಾಯಿತು.

ಅಂದು ಜಿನ್ನಾರನ್ನು ಹೊಗಳಿದರೆ ಸೈದ್ಧಾಂತಿಕ ಅಪರಾಧ. ಇಂದು ಪಾಕಿಸ್ತಾನದ ಜೊತೆ ಮಾತುಕತೆಗೆ ಒತ್ತಾಯಿಸಿದರೆ ಅದು ರಾಷ್ಟ್ರಹಿತದ ಕಾಳಜಿ! ಈ ಎರಡು ನಿಲುವುಗಳ ನಡುವಿನ ಅಂತರವನ್ನು ಸಂಘ ಹೇಗೆ ವಿವರಿಸುತ್ತದೆ?

ಅಡ್ವಾಣಿಯ ಹೇಳಿಕೆ ಸಂಘಕ್ಕೆ ಸ್ವೀಕಾರಾರ್ಹವಾಗದಿದ್ದರೆ, ಇಂದು ಪಾಕಿಸ್ತಾನದ ಜೊತೆ ಮಾತುಕತೆಯ ಅಗತ್ಯವನ್ನು ಹೊಸಬಾಳೆ ಮತ್ತು ರಾಮಮಾಧವ ಪದೇಪದೇ ಪ್ರತಿಪಾದಿಸುವುದು ಯಾವ ಸಿದ್ಧಾಂತದ ಭಾಗ? ಪಾಕಿಸ್ತಾನ ಬದಲಾಗಿದೆಯೇ? ಭಾರತದ ವಿರುದ್ಧ ಅದರ ನೀತಿ ಬದಲಾಗಿದೆಯೇ? ಗಡಿಯಾಚೆಗಿನ ಭಯೋತ್ಪಾದನೆ ನಿಂತಿದೆಯೇ? ಭಾರತದ ವಿರುದ್ಧದ ಅದರ ರಾಜಕೀಯ ಮತ್ತು ಸೈನಿಕ ಉದ್ದೇಶಗಳು ಕರಗಿಹೋಗಿವೆಯೇ? ಇವುಗಳಲ್ಲಿ ಯಾವುದಕ್ಕೂ ಸಂಘವು `ಹೌದು' ಎಂದು ಹೇಳಲು ಸಾಧ್ಯವಿಲ್ಲ.

ಹಾಗಾದರೆ ಬದಲಾಗಿರುವುದು ಪಾಕಿಸ್ತಾನವಲ್ಲ; ಸಂಘದ ಲೆಕ್ಕಾಚಾರವೇ ಬದಲಾಗಿದೆ.

ಅಖಂಡ ಭಾರತದ ಘೋಷಣೆ ಸಂಘದ ದಶಕಗಳ ರಾಜಕೀಯ ಬಂಡವಾಳ. ಅದೇ ಸಂಘ ಈಗ ಪಾಕಿಸ್ತಾನದೊಂದಿಗೆ ಸಂವಾದಕ್ಕೆ ಒತ್ತಾಯಿಸುತ್ತಿರುವುದು ಅದರ ಹಿಂದಿನ ಘೋಷಣೆಗಳೇ ಎಷ್ಟು ರಾಜಕೀಯ ಅನುಕೂಲಕ್ಕೆ ತಕ್ಕಂತೆ ಬಳಸಲ್ಪಟ್ಟವು ಎಂಬುದನ್ನು ಬಹಿರಂಗಪಡಿಸುತ್ತದೆ. ತತ್ವ ಒಂದೇ ಆಗಿದ್ದರೆ ಅದರ ಅನ್ವಯವೂ ಒಂದೇ ಆಗಿರಬೇಕು. ಆದರೆ ಸಂಘಕ್ಕೆ ಬೇಕಾದಾಗ ಕಠಿಣ ರಾಷ್ಟ್ರ್ರವಾದ, ಬೇಕಾದಾಗ ಸಂಧಾನದ ಮಾತು - ಇದು ತತ್ವನಿಷ್ಠೆ ಅಲ್ಲ; ಅನುಕೂಲಸಾಧಕ ರಾಜಕೀಯ.

ಇನ್ನೂ ಗಂಭೀರವಾದ ಪ್ರಶ್ನೆಯೆಂದರೆ, ಸಂಘದ ಈ ಹೊಸ ವಕಾಲತ್ತಿಗೆ ಕೇಂದ್ರ ಸರ್ಕಾರವೇ ಕಿವಿಗೊಡುತ್ತಿಲ್ಲ. ನರೇಂದ್ರ ಮೋದಿ ನೇತೃತ್ವದ ಸರ್ಕಾರ ಪಾಕಿಸ್ತಾನದ ವಿಷಯದಲ್ಲಿ ತನ್ನದೇ ಕಠಿಣ ನಿಲುವನ್ನು ಮುಂದುವರಿಸುತ್ತಿರುವಾಗ, ಸಂಘ ಮಾತ್ರ ಶತ್ರು ದೇಶದೊಡನೆ ಏಕೆ ಪದೇಪದೇ ಮಾತುಕತೆಯ ಅಗತ್ಯವನ್ನು ನೆನಪಿಸುತ್ತಿದೆ? ಸರ್ಕಾರಕ್ಕೆ ಸಂಘದ ಸಲಹೆ ಅಗತ್ಯವಿಲ್ಲದಿದ್ದರೂ ಸಂಘ ಏಕೆ ಈ ವಿಚಾರವನ್ನು ಮುಂದಕ್ಕೆ ತಳ್ಳುತ್ತಿದೆ?

ಬಹುಶಃ ಉತ್ತರ ರಾಜಕೀಯದಲ್ಲಿದೆ. ಪಾಕಿಸ್ತಾನವನ್ನು ಶಾಶ್ವತ ಶತ್ರುವೆಂದು ಚಿತ್ರಿಸುವ ರಾಜಕಾರಣಕ್ಕೂ, ಭವಿಷ್ಯದಲ್ಲಿ ಮಾತುಕತೆಗೆ ಅವಕಾಶ ಉಳಿಸಿಕೊಳ್ಳುವ ಅಗತ್ಯಕ್ಕೂ ಸಂಘ ಒಂದೇ ಸಮಯದಲ್ಲಿ ಬಾಗಿಲು ತೆರೆದಿಡುತ್ತಿದೆ. ಆದರೆ ಇದು ಜನರ ಮುಂದೆ ಪ್ರಾಮಾಣಿಕವಾಗಿ ಒಪ್ಪಿಕೊಳ್ಳಬೇಕಾದ ರಾಜಕೀಯ ಲೆಕ್ಕಾಚಾರ. ಅದನ್ನು ಸಿದ್ಧಾಂತದ ಹೊದಿಕೆಯಲ್ಲಿ ಮುಚ್ಚಿಡುವುದು ಮಾತ್ರ ಅಪ್ರಾಮಾಣಿಕತೆ.

ಅಡ್ವಾಣಿಗೆ ಜಿನ್ನಾ ವಿಚಾರದಲ್ಲಿ ವಿಧಿಸಿದ ಮಾನದಂಡವನ್ನು ಇಂದು ಸಂಘ ತನ್ನ ಮೇಲೂ ಅನ್ವಯಿಸಿಕೊಳ್ಳಲಿ. ಇಲ್ಲವಾದರೆ ಅಖಂಡ ಭಾರತ, ರಾಷ್ಟ್ರವಾದ ಮತ್ತು ಪಾಕಿಸ್ತಾನ ವಿರೋಧದ ಅದರ ದಶಕಗಳ ಘೋಷಣೆಗಳು ತತ್ವಗಳಲ್ಲ, ಸಂದರ್ಭಾನುಸಾರ ಬಳಸಿಕೊಳ್ಳುವ ರಾಜಕೀಯ ಆಯುಧಗಳು ಎಂಬ ಆರೋಪದಿಂದ ಸಂಘ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.

ಸಂಘದ ದ್ವಂದ್ವ ನೀತಿಯನ್ನು ಪ್ರಶ್ನಿಸುವುದು ಪಾಕಿಸ್ತಾನದ ಪರ ನಿಲ್ಲುವುದಲ್ಲ. ಅದು ಸಂಘವೇ ವರ್ಷಗಳ ಕಾಲ ದೇಶದ ಮುಂದೆ ಪ್ರತಿಪಾದಿಸಿದ ಸೈದ್ಧಾಂತಿಕ ಮಾನದಂಡವನ್ನು ಸಂಘದ ಮುಂದೆಯೇ ಇಡುವುದು. ಆ ಪ್ರಶ್ನೆಗೆ ಸಂಘ ನೇರ ಉತ್ತರ ನೀಡಬೇಕಾಗಿದೆ.

Comments

Popular posts from this blog

ಕರಾವಳಿಯ ನೆಮ್ಮದಿಗೆ ಕೊಲೆಗಳ ಕರಿನೆರಳು

ಮಾತಿನ ಸಂಸ್ಕøತಿ ಕಳೆದುಕೊಳ್ಳುತ್ತಿರುವ ರಾಜಕೀಯ

WHEN COMMUNAL POLITICS POISONS TRADITION: A WARNING FROM UDUPI