ಮಂಗಳೂರನ್ನು ಮೈಸೂರು ರೈಲ್ವೇ ವಿಭಾಗಕ್ಕೆ ಸೇರಿಸುವುದನ್ನೇ ವಿರೋಧಿಸುವ ಕಾಂಗ್ರೆಸ್, ಕಮ್ಯುನಿಸ್ಟರ ರಾಜಕಾರಣ ಏನು?
ಮಂಗಳೂರು ಅದೇ ರಾಜ್ಯದ ಮೈಸೂರು ವಿಭಾಗಕ್ಕೆ ಸೇರಿದರೆ ಕಾಂಗ್ರೆಸ್‍ಗೆ ನಷ್ಟವೇನು?
ಅವಿವೇಕಿಗಳಿವರು * ಬಿವಿಸೀ
ಮಂಗಳೂರಿನ ರೈಲ್ವೆ ನಿಲ್ದಾಣಗಳು ಮತ್ತು ಸುತ್ತಮುತ್ತಲಿನ ಪ್ರದೇಶವನ್ನು ಪಾಲಕ್ಕಾಡು ವಿಭಾಗದಿಂದ ತೆಗೆದು ಮೈಸೂರು ವಿಭಾಗಕ್ಕೆ ಸೇರಿಸುವ ರೈಲ್ವೆ ಸಚಿವಾಲಯದ ನಿರ್ಧಾರವನ್ನು ಕೇರಳದ ಜನತೆ ವಿರೋಧಿಸುತ್ತಿದ್ದಾರೆ ಎಂದು ಬಿಂಬಿಸುವುದು ತಪ್ಪು. ಕೇರಳದ ಸಾಮಾನ್ಯ ಜನರ ವಿರುದ್ಧ ಯಾವುದೇ ಆಕ್ಷೇಪವಿಲ್ಲ. ಈ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವವರು ಮುಖ್ಯವಾಗಿ ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ಪಕ್ಷಗಳ ರಾಜಕೀಯ ನಾಯಕರು ಹಾಗೂ ಕಾರ್ಯಕರ್ತರು. ಹೀಗಾಗಿ ಈ ವಿಚಾರವನ್ನು ಕೇರಳ ಮತ್ತು ಕರ್ನಾಟಕದ ನಡುವಿನ ಸಂಘರ್ಷವೆಂದು ನೋಡುವ ಬದಲು, ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ಪಕ್ಷಗಳ ಸಂಕುಚಿತ ರಾಜಕಾರಣವೆಂದು ನೋಡಬೇಕು.
ಇಲ್ಲಿ ಕಾಂಗ್ರೆಸ್‍ನ ನಿಲುವು ಇನ್ನಷ್ಟು ಅಚ್ಚರಿಯದ್ದಾಗಿದೆ. ಕಾಂಗ್ರೆಸ್ ಕರ್ನಾಟಕದಲ್ಲೂ ಅಧಿಕಾರದಲ್ಲಿದೆ, ಕೇರಳದಲ್ಲೂ ಅಧಿಕಾರದಲ್ಲಿದೆ. ಎರಡೂ ರಾಜ್ಯಗಳಲ್ಲಿ ಸರ್ಕಾರ ನಡೆಸುತ್ತಿರುವ ಒಂದೇ ರಾಷ್ಟ್ರೀಯ ಪಕ್ಷಕ್ಕೆ ಮಂಗಳೂರಿನ ರೈಲ್ವೆ ಆಡಳಿತವನ್ನು ಕರ್ನಾಟಕದ ಮೈಸೂರು ವಿಭಾಗಕ್ಕೆ ಸೇರಿಸುವುದರಲ್ಲಿ ಏನು ತೊಂದರೆ? ಕರ್ನಾಟಕದ ಮಂಗಳೂರು ಕರ್ನಾಟಕದ ಮೈಸೂರು ವಿಭಾಗಕ್ಕೆ ಸೇರಿದರೆ ಕಾಂಗ್ರೆಸ್‍ಗೆ ನಷ್ಟವೇನು? ಬದಲಾಗಿ, ಎರಡೂ ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ರಾಷ್ಟ್ರೀಯ ಪಕ್ಷವಾಗಿ ಕಾಂಗ್ರೆಸ್ ಈ ಬದಲಾವಣೆಯನ್ನು ಸ್ವಾಗತಿಸಿ, ಎರಡೂ ರಾಜ್ಯಗಳ ರೈಲ್ವೆ ಅಭಿವೃದ್ಧಿಗೆ ಸಮನ್ಯಾಯ ದೊರೆಯುವಂತೆ ನೋಡಿಕೊಳ್ಳಬೇಕಿತ್ತು. ಕರ್ನಾಟಕ ಮತ್ತು ಮೈಸೂರು ಬೇರೆ ದೇಶದಲ್ಲಿದೆಯೇ?
ಕಾಂಗ್ರೆಸ್‍ಗೆ ಕೇರಳದ ಪಾಲಕ್ಕಾಡು ವಿಭಾಗದ ಆದಾಯದ ಬಗ್ಗೆ ಕಾಳಜಿ ಇದ್ದರೆ, ಅದು ಕೇರಳ ಸರ್ಕಾರದ ಪರವಾಗಿ ಕೇಂದ್ರದ ಬಳಿ ಹೆಚ್ಚುವರಿ ರೈಲ್ವೆ ಯೋಜನೆಗಳನ್ನು ಕೇಳಬಹುದು. ಪಾಲಕ್ಕಾಡು ವಿಭಾಗವನ್ನು ಬಲಪಡಿಸಲು ಕ್ರಮಗಳನ್ನು ಒತ್ತಾಯಿಸಬಹುದು. ಆದರೆ ಕರ್ನಾಟಕದ ಒಂದು ನಗರವನ್ನು ಕರ್ನಾಟಕದ ಮತ್ತೊಂದು ವಿಭಾಗಕ್ಕೆ ಸೇರಿಸುವುದನ್ನು ವಿರೋಧಿಸುವುದು ರಾಷ್ಟ್ರೀಯ ಪಕ್ಷದ ನಿಲುವಿಗೆ ತಕ್ಕದ್ದೇ?
ಇದೇ ಪ್ರಶ್ನೆ ಕಮ್ಯುನಿಸ್ಟ್ ಪಕ್ಷಗಳಿಗೂ ಅನ್ವಯಿಸುತ್ತದೆ. ವರ್ಗ, ಪ್ರದೇಶ ಮತ್ತು ರಾಜ್ಯಗಳ ಗಡಿಗಳನ್ನು ಮೀರಿ ರಾಷ್ಟ್ರೀಯ ದೃಷ್ಟಿಕೋನದ ಬಗ್ಗೆ ಮಾತನಾಡುವ ಕಮ್ಯುನಿಸ್ಟರು ಮಂಗಳೂರಿನ ಆಡಳಿತಾತ್ಮಕ ವ್ಯಾಪ್ತಿಯ ಬದಲಾವಣೆಗೆ ಕೇರಳದಲ್ಲಿ ಬೀದಿಗಿಳಿಯುವುದು ಅತ್ಯಂತ ಸಂಕುಚಿತ ರಾಜಕಾರಣ. ಮಂಗಳೂರು ಕರ್ನಾಟಕದಲ್ಲಿದೆ. ಮೈಸೂರು ಕರ್ನಾಟಕದಲ್ಲಿದೆ. ಮಂಗಳೂರನ್ನು ಮೈಸೂರು ವಿಭಾಗಕ್ಕೆ ಸೇರಿಸುವುದರಲ್ಲಿ ಅಸಹಜವಾದದ್ದು ಏನಿದೆ?
ನಿಜವಾದ ಸಮಸ್ಯೆ ಬಹುಶಃ ಮಂಗಳೂರಿನಿಂದ ಪಾಲಕ್ಕಾಡು ವಿಭಾಗಕ್ಕೆ ಬರುತ್ತಿದ್ದ ಆದಾಯ. ಆ ಆದಾಯ ಕಡಿಮೆಯಾಗುತ್ತದೆ ಎಂಬ ಆತಂಕ ಇದ್ದರೆ, ಅದಕ್ಕೆ ಪರಿಹಾರ ಮಂಗಳೂರನ್ನು ಹಿಡಿದುಕೊಳ್ಳುವುದಲ್ಲ; ಪಾಲಕ್ಕಾಡು ವಿಭಾಗಕ್ಕೆ ಹೊಸ ಆದಾಯದ ಮೂಲಗಳು ಮತ್ತು ಅಭಿವೃದ್ಧಿ ಯೋಜನೆಗಳನ್ನು ತರುವುದು.
ರೈಲ್ವೆ ಆಡಳಿತವು ರಾಜ್ಯದ ಭೌಗೋಳಿಕ ವಾಸ್ತವಕ್ಕೆ ಹೊಂದಿಕೊಳ್ಳುವುದು ಸಹಜ. ಮಂಗಳೂರಿನ ರೈಲ್ವೆ ಅಭಿವೃದ್ಧಿ ಮಂಗಳೂರಿನ ಜನರ ಅಗತ್ಯಗಳಿಗೆ ಅನುಗುಣವಾಗಿ ವೇಗವಾಗಿ ನಡೆಯಬೇಕು. ಅದಕ್ಕೆ ಅನುಕೂಲವಾಗುವ ಆಡಳಿತಾತ್ಮಕ ವ್ಯವಸ್ಥೆಯನ್ನು ವಿರೋಧಿಸುವುದರಿಂದ ಕಾಂಗ್ರೆಸ್ ಮತ್ತು ಕಮ್ಯುನಿಸ್ಟರಿಗೆ ಸಿಗುವ ರಾಜಕೀಯ ಲಾಭವೇನು?
ಇದು ಕೇವಲ ಮಂಗಳೂರು ಅಥವಾ ಮೈಸೂರು ಪ್ರಶ್ನೆಯಲ್ಲ. ರಾಷ್ಟ್ರೀಯ ಪಕ್ಷಗಳು ರಾಜ್ಯ ಗಡಿಗಳಾಚೆ ಯೋಚಿಸಬೇಕೇ, ಅಥವಾ ತಮ್ಮ ರಾಜಕೀಯ ನೆಲೆಯ ಆದಾಯ ಮತ್ತು ಹಿತಾಸಕ್ತಿಗಳಿಗಾಗಿ ಪ್ರಾದೇಶಿಕ ಒತ್ತಡಕ್ಕೆ ಮಣಿಯಬೇಕೇ ಎಂಬ ಪ್ರಶ್ನೆ.
ಮಂಗಳೂರಿನ ಜನರಿಗೆ ಈಗ ಕೇಳಬೇಕಾದ ಪ್ರಶ್ನೆ ಒಂದೇ. ಇಷ್ಟು ವರ್ಷಗಳ ಕಾಲ ನಮ್ಮ ಪ್ರದೇಶದಿಂದ ಬಂದ ಆದಾಯದ ಬಗ್ಗೆ ಕೇರಳದ ರಾಜಕೀಯ ನಾಯಕರು ಇಷ್ಟು ಕಾಳಜಿ ತೋರಿಸಿದ್ದರೆ, ಮಂಗಳೂರಿನ ರೈಲ್ವೆ ಅಭಿವೃದ್ಧಿಗೆ ಅದೇ ಪ್ರಮಾಣದ ಕಾಳಜಿ ಎಲ್ಲಿತ್ತು?
ಮಂಗಳೂರಿನ ಮೇಲೆ ಆಡಳಿತಾತ್ಮಕ ಹಿಡಿತ ಬೇಕೆಂಬ ಹಠಕ್ಕಿಂತ, ಮಂಗಳೂರಿನ ರೈಲು ಪ್ರಯಾಣಿಕರಿಗೆ ಉತ್ತಮ ಸೇವೆ ಬೇಕೆಂಬ ಹಠವೇ ಮುಖ್ಯ. ರೈಲ್ವೆ ಅಭಿವೃದ್ಧಿ ಆದಾಯದ ಗಡಿ ರಾಜಕಾರಣಕ್ಕಿಂತ ದೊಡ್ಡದು. ಇದನ್ನು ಅರ್ಥಮಾಡಿಕೊಳ್ಳದ ರಾಜಕಾರಣದಲ್ಲಿಯೇ ನಿಜವಾದ ದೂರದೃಷ್ಟಿಯ ಕೊರತೆ ಇದೆ.
Comments
Post a Comment