ಪ್ರಧಾನ್ ವಿಕೆಟ್ ಪತನದ ಬಳಿಕ ಈಗ ಗಡ್ಕರಿ ಮೇಲೆ ತೂಗುಕತ್ತಿ
ತೂಗುಕತ್ತಿ * ಬಿವಿಸೀ
ಕೇಂದ್ರ ಶಿಕ್ಷಣ ಸಚಿವರಾಗಿದ್ದ ಧಮೇರ್ಂದ್ರ ಪ್ರಧಾನ್ ಅವರ ಸಚಿವ ಸ್ಥಾನ ಬಲಿಯಾದ ತಕ್ಷಣವೇ, ಈಗ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಅವರ ರಾಜೀನಾಮೆಗೂ ದೇಶಾದ್ಯಂತ ಅತ್ಯಂತ ತೀವ್ರ ಸ್ವರೂಪದ ಒತ್ತಡ ಮತ್ತು ಆಕ್ರೋಶ ಮುಗಿಲುಮುಟ್ಟಿದೆ. ಕೋಟ್ಯಂತರ ವಾಹನ ಮಾಲೀಕರ ಜೇಬಿಗೆ ಕನ್ನ ಹಾಕುತ್ತಿರುವ ಇ20 ಇಂಧನ ನೀತಿ ಮತ್ತು ನಿರಂತರವಾಗಿ ಬಯಲಾಗುತ್ತಿರುವ ಮೂಲಸೌಕರ್ಯ ವೈಫಲ್ಯಗಳು ಗಡ್ಕರಿ ಅವರ ಕುರ್ಚಿಯನ್ನು ಅಲ್ಲಾಡಿಸಲು ತೊಡಗಿವೆ.
ಕೇಂದ್ರ ಸರ್ಕಾರವು ಯಾವುದೇ ಪೂರ್ವಸಿದ್ದತೆಯಿಲ್ಲದೆ ಏಕಾಏಕಿ ದೇಶದಾದ್ಯಂತ ಶೇಕಡಾ 20ರಷ್ಟು ಎಥನಾಲ್ ಮಿಶ್ರಿತ ಪೆಟ್ರೋಲ್ ಜಾರಿಗೆ ತಂದಿರುವುದು ಸಾರ್ವಜನಿಕರ ಮೇಲಿನ ನೇರ ಪ್ರಹಾರವಾಗಿದೆ. 2023ಕ್ಕಿಂತ ಮುಂಚಿತವಾಗಿ ರಸ್ತೆಗಿಳಿದ ಕೋಟ್ಯಂತರ ಕಾರು ಮತ್ತು ದ್ವಿಚಕ್ರ ವಾಹನಗಳ ಎಂಜಿನ್‍ಗಳು ಈ ಎಥನಾಲ್ ಇಂಧನದಿಂದಾಗಿ ನಾಶವಾಗುತ್ತಿವೆ. ವಾತಾವರಣದ ತೇವಾಂಶವನ್ನು ಎಳೆದುಕೊಳ್ಳುವ ಎಥನಾಲ್ ಗುಣದಿಂದಾಗಿ ಇಂಧನ ಟ್ಯಾಂಕ್‍ಗಳಲ್ಲಿ ನೀರು ಶೇಖರಣೆಯಾಗಿ ತುಕ್ಕು ಹಿಡಿಯುತ್ತಿದೆ, ಅತ್ಯಂತ ದುಬಾರಿ ಬಿಡಿಭಾಗಗಳು ಹಾಳಾಗುತ್ತಿವೆ ಮತ್ತು ವಾಹನಗಳ ಮೈಲೇಜ್ ಕನಿಷ್ಠ ಶೇಕಡಾ 5ರಿಂದ 10ರಷ್ಟು ದಿಢೀರ್ ಕುಸಿದಿದೆ. ಆಟೋಮೊಬೈಲ್ ಸಂಸ್ಥೆಗಳ ಜೊತೆ ತಾಂತ್ರಿಕ ಸಮನ್ವಯ ಸಾಧಿಸದೆ, ಗ್ರಾಹಕರಿಗೆ ಯಾವುದೇ ಪರ್ಯಾಯ ಇಂಧನದ ಆಯ್ಕೆಯನ್ನೇ ನೀಡದೆ ಈ ಅಪಕ್ವ ನೀತಿಯನ್ನು ದೇಶದ ಜನರ ಮೇಲೆ ಬಲವಂತವಾಗಿ ಹೇರಲಾಗಿದೆ. ಈ ನೀತಿಯ ಅಡ್ಡಪರಿಣಾಮಗಳಿಂದಾಗಿ ಇಂದು ಕೋಟ್ಯಂತರ ಕುಟುಂಬಗಳು ತಮ್ಮ ವಾಹನಗಳ ದುರಸ್ತಿಗೆ ಸಾವಿರಾರು ರೂಪಾಯಿ ಹೆಚ್ಚುವರಿ ಹಣ ತೆರಬೇಕಾದ ದೌರ್ಭಾಗ್ಯ ಎದುರಾಗಿದೆ.
ಅತ್ತ ಕಚ್ಚಾ ತೈಲ ಆಮದು ವೆಚ್ಚ ಶೇಕಡಾ 20ರಷ್ಟು ಕಡಿಮೆಯಾಗುತ್ತಿದ್ದರೂ, ಎಥನಾಲ್ ಕನಿಷ್ಠ ಶಕ್ತಿಯನ್ನು ನೀಡುತ್ತಿದ್ದರೂ, ಸರ್ಕಾರ ಪೆಟ್ರೋಲ್ ಬೆಲೆಯಲ್ಲಿ ನಯಾಪೈಸೆ ಕಡಿಮೆ ಮಾಡದೆ ಸಾರ್ವಜನಿಕರನ್ನು ಸುಲಿಗೆ ಮಾಡುತ್ತಿದೆ. ಇದರ ಜೊತೆಗೆ, ಬೃಹತ್ ಸಕ್ಕರೆ ಕಾರ್ಖಾನೆಗಳು ಮತ್ತು ಎಥನಾಲ್ ಉತ್ಪಾದಕರಿಗೆ ಲಾಭ ಮಾಡಿಕೊಡಲು ಕೋಟ್ಯಂತರ ಸಾಮಾನ್ಯ ವಾಹನ ಮಾಲೀಕರನ್ನು ಬಲಿಪಶು ಮಾಡಲಾಗುತ್ತಿದೆ ಎಂಬ ಆರೋಪ ಬಲವಾಗುತ್ತಿದೆ. ಪ್ರಭಾವಿ ಉದ್ಯಮಿಗಳ ಹಿತಾಸಕ್ತಿ ಕಾಯಲು ಸಾರ್ವಜನಿಕರ ಹಿತಬಲಿಯನ್ನು ಕೊಡಲಾಗುತ್ತಿದೆ ಎಂಬ ಸತ್ಯ ಈಗ ಜಗಜ್ಜಾಹೀರಾಗಿದೆ. ಕೇವಲ ಇಂಧನ ನೀತಿ ಮಾತ್ರವಲ್ಲ, ಶತಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ರಾಷ್ಟ್ರೀಯ ಹೆದ್ದಾರಿಗಳು ಮೊದಲ ಮಳೆಗೇ ಕಿತ್ತುಹೋಗುತ್ತಿರುವುದು, ಮೇಲ್ಸೇತುವೆಗಳು ಬಿರುಕು ಬಿಡುತ್ತಿರುವುದು ಗಡ್ಕರಿ ಅವರ ಹೆದ್ದಾರಿ ಕ್ರಾಂತಿಯ ಅಸಲಿ ಮುಖವಾಡವನ್ನು ಕಳಚಿಹಾಕಿದೆ.
ಪ್ರಧಾನ್ ರಾಜೀನಾಮೆಯ ಸರಣಿ ಈಗ ಗಡ್ಕರಿ ಬಾಗಿಲಿಗೆ ಬಂದು ನಿಂತಿದೆ. ಇ20 ಇಂಧನ ನೀತಿಯ ಜನಾಕ್ರೋಶ ಮತ್ತು ಕಳಪೆ ಮೂಲಸೌಕರ್ಯದ ವೈಫಲ್ಯಕ್ಕೆ ನೇರ ಹೊಣೆ ಹೊರಬೇಕಾದ ಸಚಿವ ಗಡ್ಕರಿ ಅವರು ರಾಜೀನಾಮೆ ನೀಡಲೇಬೇಕು ಎಂಬ ಆಗ್ರಹ ದೇಶಾದ್ಯಂತ ಕಾಡ್ಗಿಚ್ಚಿನಂತೆ ಹರಡುತ್ತಿದ್ದು, ಸರ್ಕಾರ ಈಗ ತೀವ್ರ ರಾಜಕೀಯ ಸಂಕಷ್ಟಕ್ಕೆ ಸಿಲುಕಿದೆ. ಸಾರ್ವಜನಿಕರ ಈ ತೀವ್ರ ಪ್ರತಿಭಟನೆಗೆ ಸರ್ಕಾರ ಬಗ್ಗುತ್ತದೆಯೇ ಅಥವಾ ಜನವಿರೋಧಿ ನೀತಿಯನ್ನೇ ಮುಂದುವರಿಸುತ್ತದೆಯೇ ಎಂಬುದನ್ನು ದೇಶವೇ ಉಸಿರುಬಿಗಿದು ವೀಕ್ಷಿಸುತ್ತಿದೆ.
Comments
Post a Comment