ಅಮೆರಿಕದಲ್ಲಿ ಮತದಾನದ ನಿಯಮ ಬಿಗಿಗೊಳಿಸಲು ಭಾರತದ ಮಾದರಿ ಉಲ್ಲೇಖಿಸಿದ ಡೊನಾಲ್ಡ್ ಟ್ರಂಪ್
ಇಣುಕುನೋಟ * ಬಿವಿಸೀ
ಶಾಪಿಂಗ್, ಬ್ಯಾಂಕಿಂಗ್ ಮತ್ತು ವಿವಿಧ ಸರ್ಕಾರಿ ಯೋಜನೆಗಳ ಲಾಭ ಪಡೆಯಲು ಗುರುತಿನ ಚೀಟಿ ಕಡ್ಡಾಯವಾಗಿರುವಾಗ, ದೇಶದ ಭವಿಷ್ಯವನ್ನು ನಿರ್ಧರಿಸುವ ಚುನಾವಣೆಯಲ್ಲಿ ಮತದಾನ ಮಾಡಲು ಮತದಾರರ ಭಾವಚಿತ್ರವಿರುವ ಅಧಿಕೃತ ಗುರುತಿನ ಚೀಟಿ ಏಕೆ ಕಡ್ಡಾಯವಾಗಿರಬಾರದು?
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ವಿಷಯವೊಂದು ಈಗ ಜಾಗತಿಕ ಮಟ್ಟದಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿದೆ. ಅಮೆರಿಕದಲ್ಲಿ ಮತದಾನದ ನಿಯಮಗಳನ್ನು ಮತ್ತಷ್ಟು ಬಿಗಿಗೊಳಿಸಲು ಮತ್ತು ಮತದಾರರ ಗುರುತಿನ ಚೀಟಿಯನ್ನು ಕಡ್ಡಾಯಗೊಳಿಸಲು ಟ್ರಂಪ್ ಅವರು ಭಾರತದ ಚುನಾವಣಾ ವ್ಯವಸ್ಥೆಯನ್ನು ಮಾದರಿಯಾಗಿ ಉಲ್ಲೇಖಿಸಿದ್ದಾರೆ.
ಟ್ರಂಪ್ ಪ್ರಕಾರ, ಭಾರತದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರೊಂದಿಗಿನ ಸಂಭಾಷಣೆಯ ವೇಳೆ, ``ವಿಶ್ವದ ಅತ್ಯಂತ ಹಳೆಯ ಪ್ರಜಾಪ್ರಭುತ್ವ ರಾಷ್ಟ್ರವಾದ ಅಮೆರಿಕದಲ್ಲಿ ಮತದಾರರ ಗುರುತಿನ ಚೀಟಿ ಇಲ್ಲದೆ ಹಾಗೂ ಸೂಕ್ತ ಪುರಾವೆಗಳಿಲ್ಲದೆ ಮತದಾನ ಮಾಡಲು ಹೇಗೆ ಅವಕಾಶ ನೀಡಲಾಗುತ್ತದೆ?'' ಎಂದು ಆಯುಕ್ತರು ಅಚ್ಚರಿ ವ್ಯಕ್ತಪಡಿಸಿದ್ದರು. ಈ ಮಾತುಗಳು ಅಮೆರಿಕದ ಪ್ರಸ್ತುತ ಚುನಾವಣಾ ವ್ಯವಸ್ಥೆಯ ಲೋಪದೋಷಗಳನ್ನು ಎತ್ತಿ ತೋರಿಸುತ್ತವೆ ಎಂದು ಟ್ರಂಪ್ ಪ್ರತಿಪಾದಿಸಿದ್ದಾರೆ.
ಭಾರತದಲ್ಲಿ ಇತ್ತೀಚೆಗೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಸುಮಾರು 64.6 ಕೋಟಿಗೂ ಅಧಿಕ ಜನರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಪ್ರತಿಯೊಬ್ಬ ಮತದಾರನೂ ತನ್ನ ಭಾವಚಿತ್ರವಿರುವ ಅಧಿಕೃತ ಮತದಾರರ ಗುರುತಿನ ಚೀಟಿ ಅಥವಾ ಸರ್ಕಾರ ಅನುಮೋದಿಸಿದ ಇತರ ಭಾವಚಿತ್ರವಿರುವ ಗುರುತಿನ ದಾಖಲೆಯನ್ನು ತೋರಿಸುವುದು ಇಲ್ಲಿ ಕಡ್ಡಾಯವಾಗಿದೆ. ಜೊತೆಗೆ, ಭಾರತದಲ್ಲಿ ಅಂಚೆ ಮತದಾನದ ಪ್ರಮಾಣ ಶೇಕಡಾ ಒಂದಕ್ಕಿಂತಲೂ ಕಡಿಮೆಯಿದೆ. ಈ ಶಿಸ್ತುಬದ್ಧ ಹಾಗೂ ಪಾರದರ್ಶಕ ವ್ಯವಸ್ಥೆಯೇ ಭಾರತದ ಚುನಾವಣಾ ಪ್ರಕ್ರಿಯೆಯನ್ನು ವಿಶ್ವದಲ್ಲೇ ಮಾದರಿಯಾಗಿಸಿದೆ ಎಂಬುದು ಟ್ರಂಪ್ ಅವರ ಅಭಿಪ್ರಾಯ.
ಅಮೆರಿಕದಲ್ಲಿ ಪ್ರಸ್ತುತ ನೂತನ ಕಾಯ್ದೆಯನ್ನು ಜಾರಿಗೆ ತರಲು ಟ್ರಂಪ್ ಶ್ರಮಿಸುತ್ತಿದ್ದಾರೆ. ಚುನಾವಣೆಗಳಲ್ಲಿ ಮತದಾನ ಮಾಡಲು ಅಮೆರಿಕದ ಪೌರತ್ವದ ಸಾಕ್ಷಿ (ಪಾಸ್‍ಪೆÇೀರ್ಟ್ ಅಥವಾ ಜನನ ಪ್ರಮಾಣಪತ್ರ), ಭಾವಚಿತ್ರವಿರುವ ಗುರುತಿನ ಚೀಟಿ ಕಡ್ಡಾಯಗೊಳಿಸುವುದು ಮತ್ತು ಅಂಚೆ ಮತದಾನಕ್ಕೆ ಕಟ್ಟುನಿಟ್ಟಿನ ಮಿತಿ ಹೇರುವುದು ಈ ಕಾಯ್ದೆಯ ಮುಖ್ಯ ಉದ್ದೇಶವಾಗಿದೆ.
ಅಮೆರಿಕದಲ್ಲಿ ಭಾರತದಂತೆ ಏಕೀಕೃತ ಕೇಂದ್ರ ಚುನಾವಣಾ ಆಯೋಗವಿಲ್ಲ. ಬದಲಾಗಿ, ಪ್ರತಿಯೊಂದು ರಾಜ್ಯವೂ ತನ್ನದೇ ಆದ ಚುನಾವಣಾ ನಿಯಮಗಳನ್ನು ಹೊಂದಿದೆ. ಸದ್ಯ ಸುಮಾರು 36 ರಾಜ್ಯಗಳಲ್ಲಿ ಯಾವುದಾದರೂ ಒಂದು ರೀತಿಯ ಗುರುತಿನ ಚೀಟಿ ಕೇಳಿದರೆ, ಉಳಿದ 14 ರಾಜ್ಯಗಳಲ್ಲಿ ಮತ್ತು ರಾಜಧಾನಿ ಪ್ರದೇಶದಲ್ಲಿ ಸಹಿ ಹೋಲಿಕೆ ಅಥವಾ ಸ್ವಯಂ ದೃಢೀಕರಣದ ಆಧಾರದ ಮೇಲೆಯೇ ಮತದಾನಕ್ಕೆ ಅವಕಾಶ ನೀಡಲಾಗುತ್ತಿದೆ.
ರಿಪಬ್ಲಿಕನ್ ಪಕ್ಷವು ಅಕ್ರಮ ಮತದಾನ ತಡೆಯಲು ಕಟ್ಟುನಿಟ್ಟಿನ ನಿಯಮ ಅಗತ್ಯ ಎಂದು ವಾದಿಸುತ್ತಿದ್ದರೆ, ಡೆಮಾಕ್ರಟಿಕ್ ಪಕ್ಷವು ಇದು ಬಡವರು ಮತ್ತು ಅಲ್ಪಸಂಖ್ಯಾತರಿಗೆ ತೊಂದರೆಯಾಗಲಿದೆ ಎಂದು ವಿರೋಧಿಸುತ್ತಿದೆ. ಈ ಎಲ್ಲಾ ರಾಜಕೀಯ ಜಟಾಪಟಿಯ ನಡುವೆ, ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದ ಚುನಾವಣಾ ಮಾದರಿಯು ಅಮೆರಿಕದ ಪ್ರಜಾಪ್ರಭುತ್ವ ವ್ಯವಸ್ಥೆಗೆ ದಾರಿದೀಪವಾಗಿರುವುದು ಗಮನಾರ್ಹ
Comments
Post a Comment