ಪೆಲೆಟ್ ಗನ್‍ಗಳ ಪ್ರಯೋಗ: ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆಗೆ ಇದೇನಾ ಉತ್ತರ?
* ಬಿವಿಸೀ
ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಒಂದು ಮೂಲಭೂತ ಹಕ್ಕು. ಅದೇ ವೇಳೆ ಕಾನೂನು ಸುವ್ಯವಸ್ಥೆ ಕಾಪಾಡುವುದು ಸರ್ಕಾರದ ಜವಾಬ್ದಾರಿ. ಈ ಎರಡರ ನಡುವೆ ಸಮತೋಲನ ಕಾಯ್ದುಕೊಳ್ಳುವುದು ಪ್ರಜಾಪ್ರಭುತ್ವದ ಪರಿಪಕ್ವತೆಯ ನಿಜವಾದ ಪರೀಕ್ಷೆಯಾಗಿದೆ. ಇತ್ತೀಚೆಗೆ ದೆಹಲಿಯಲ್ಲಿ ನಡೆದ ವಿದ್ಯಾರ್ಥಿಗಳ ಶಾಂತಿಯುತ ಪ್ರತಿಭಟನೆಯನ್ನು ಚದುರಿಸಲು ಪೆಲೆಟ್ ಗನ್‍ಗಳನ್ನು ಬಳಸಲಾಗಿದೆ ಎಂಬುದು ಈಗ ಕೇವಲ ಆರೋಪವಾಗಿ ಉಳಿದಿಲ್ಲ. ಕ್ಷಿಪ್ರ ಕಾರ್ಯಪಡೆ ದಾಖಲಿಸಿರುವ ದಿನಚರಿ ದಾಖಲೆಯೇ ಆ ಸಂಗತಿಯನ್ನು ದೃಢೀಕರಿಸಿದೆ. ಹೀಗಿರುವಾಗ, ಈಗ ಚರ್ಚೆಯಾಗಬೇಕಾದ ವಿಷಯ ಪೆಲೆಟ್ ಗನ್ ಬಳಸಲಾಗಿದೆಯೇ ಎಂಬುದಲ್ಲ; ಅದಕ್ಕೆ ಯಾರು ಆದೇಶ ನೀಡಿದರು, ಯಾವ ಅಧಿಕಾರದಡಿ ನೀಡಿದರು ಮತ್ತು ಕಾನೂನು ಉಲ್ಲಂಘಿಸಿದವರ ವಿರುದ್ಧ ಸರ್ಕಾರ ಯಾವ ಕ್ರಮ ಕೈಗೊಳ್ಳಲಿದೆ ಎಂಬುದಾಗಿದೆ.
ಭಾರತದಲ್ಲಿ ಪೆಲೆಟ್ ಗನ್‍ಗಳ ಬಳಕೆಯ ಕುರಿತು ಸಂಪೂರ್ಣ ದೇಶವ್ಯಾಪಿ ನಿಷೇಧವಿಲ್ಲ. ಆದರೆ ಅವುಗಳನ್ನು ಜನಸಮೂಹ ನಿಯಂತ್ರಣದ ಸಾಧನವಾಗಿ ಬಳಸುವ ಪ್ರಶ್ನೆ ದೀರ್ಘಕಾಲದಿಂದ ವಿವಾದಕ್ಕೆ ಕಾರಣವಾಗಿದೆ. ವಿಶೇಷವಾಗಿ ನಾಗರಿಕರ ಕಣ್ಣುಗಳಿಗೆ ಮತ್ತು ದೇಹಕ್ಕೆ ಉಂಟಾಗಿರುವ ಗಂಭೀರ ಗಾಯಗಳ ಹಿನ್ನೆಲೆಯಲ್ಲಿ ಅವುಗಳ ಬಳಕೆಯ ಬಗ್ಗೆ ಮಾನವ ಹಕ್ಕು ಸಂಘಟನೆಗಳು ಮತ್ತು ಕಾನೂನು ತಜ್ಞರು ನಿರಂತರ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ವಿಶ್ವಸಂಸ್ಥೆ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದೆ. ನಿವೃತ್ತ ನಾಗರಿಕ ಸೇವಾ ಅಧಿಕಾರಿಗಳು ಹಾಗೂ ಕಾನೂನು ಜಾರಿ ವ್ಯವಸ್ಥೆಯ ಹಿರಿಯ ಅಧಿಕಾರಿಗಳೂ ಸಹ ಶಾಂತಿಯುತ ಪ್ರತಿಭಟನಾಕಾರರ ವಿರುದ್ಧ ಪೆಲೆಟ್ ಗನ್ ಬಳಸಲು ಯಾವುದೇ ಕಾನೂನು ಅವಕಾಶವಿಲ್ಲ ಎಂದು ಸ್ಪಷ್ಟವಾಗಿ ಹೇಳುತ್ತಿದ್ದಾರೆ. ಹಾಗಿದ್ದರೂ ದೆಹಲಿ ಪೆÇಲೀಸರು ಆ ಮಿತಿಯನ್ನು ಉದ್ದೇಶಪೂರ್ವಕವಾಗಿ ಮೀರಿ ವರ್ತಿಸಿದ್ದರೆ, ಅದು ಕೇವಲ ಆಡಳಿತಾತ್ಮಕ ಲೋಪವಲ್ಲ; ಕಾನೂನಿನ ಮೇಲೆಯೇ ನಡೆದ ಧಿಕ್ಕಾರವಾಗಿದೆ.
ದೆಹಲಿ ಪೆÇಲೀಸ್ ಕೇಂದ್ರ ಗೃಹ ಸಚಿವಾಲಯದ ಆಡಳಿತ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಆದ್ದರಿಂದ ಈ ಪ್ರಕರಣದ ನೈತಿಕ ಮತ್ತು ಆಡಳಿತಾತ್ಮಕ ಹೊಣೆಗಾರಿಕೆಯಿಂದ ಕೇಂದ್ರ ಸರ್ಕಾರ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಮೌನ ಅಥವಾ ತಾಂತ್ರಿಕ ಸಮರ್ಥನೆಗಳು ಇಲ್ಲಿ ಸಾಕಾಗುವುದಿಲ್ಲ. ಕೇಂದ್ರ ಗೃಹ ಸಚಿವರು ಮತ್ತು ಸಂಬಂಧಪಟ್ಟ ಅಧಿಕಾರಿಗಳು ದೇಶದ ಮುಂದೆ ಸ್ಪಷ್ಟನೆ ನೀಡಬೇಕು. ಪೆಲೆಟ್ ಗನ್ ಬಳಕೆಗೆ ಅನುಮತಿ ನೀಡಿದ ಅಧಿಕಾರಿಗಳ ಹೆಸರು ಬಹಿರಂಗವಾಗಬೇಕು. ನಿಯಮ ಉಲ್ಲಂಘನೆ ನಡೆದಿದ್ದರೆ ಅಮಾನತು, ಇಲಾಖಾ ತನಿಖೆ ಮತ್ತು ಅಗತ್ಯವಿದ್ದರೆ ಕ್ರಿಮಿನಲ್ ಪ್ರಕರಣ ದಾಖಲಿಸುವ ಕ್ರಮವೂ ವಿಳಂಬವಾಗಬಾರದು.
ಪ್ರಜಾಪ್ರಭುತ್ವದಲ್ಲಿ ಸರ್ಕಾರಕ್ಕೆ ವಿರೋಧ ವ್ಯಕ್ತಪಡಿಸುವ ನಾಗರಿಕರನ್ನು ಶತ್ರುಗಳಂತೆ ಕಾಣುವ ಮನೋಭಾವ ಅಪಾಯಕಾರಿ. ಲಾಠಿ, ಅಶ್ರುವಾಯು, ಜಲಫಿರಂಗಿ ಎಲ್ಲವೂ ವಿಫಲವಾದ ಕೊನೆಯ ಹಂತದಲ್ಲಿಯೂ ಜೀವ ಮತ್ತು ದೃಷ್ಟಿಗೆ ಶಾಶ್ವತ ಹಾನಿ ಉಂಟುಮಾಡುವ ಸಾಧನಗಳ ಬಳಕೆ ಅತ್ಯಂತ ಅಪರೂಪದ ಮತ್ತು ಕಟ್ಟುನಿಟ್ಟಿನ ನಿಯಂತ್ರಣಕ್ಕೆ ಒಳಪಟ್ಟಿರಬೇಕು. ಶಾಂತಿಯುತವಾಗಿ ಪ್ರತಿಭಟಿಸುತ್ತಿರುವ ವಿದ್ಯಾರ್ಥಿಗಳ ವಿರುದ್ಧ ಅಂತಹ ಸಾಧನ ಬಳಸಿದ್ದರೆ ಅದು ಅಧಿಕಾರದ ದುರುಪಯೋಗವೇ ಹೊರತು ಕಾನೂನು ಜಾರಿ ಅಲ್ಲ. ಕಾನೂನನ್ನು ಪಾಲಿಸಬೇಕಾದ ಸಂಸ್ಥೆಯೇ ಕಾನೂನನ್ನು ಉಲ್ಲಂಘಿಸಿದರೆ ನಾಗರಿಕರು ನ್ಯಾಯಕ್ಕಾಗಿ ಯಾರನ್ನು ನಂಬಬೇಕು? ಸರ್ಕಾರ ಈ ಪ್ರಶ್ನೆಗೆ ಉತ್ತರಿಸುವುದಷ್ಟೇ ಅಲ್ಲ, ತಪ್ಪಿತಸ್ಥರ ವಿರುದ್ಧ ಗೋಚರಿಸುವ ಮತ್ತು ಮಾದರಿಯಾಗುವ ಕ್ರಮ ಕೈಗೊಂಡಾಗ ಮಾತ್ರ ಕಾನೂನಿನ ಆಳ್ವಿಕೆಯ ಮೇಲಿನ ಜನರ ವಿಶ್ವಾಸ ಉಳಿಯುತ್ತದೆ. ಇಲ್ಲವಾದರೆ ಪ್ರಜಾಪ್ರಭುತ್ವದ ಹೆಸರಿನಲ್ಲಿ ಅಧಿಕಾರದ ದರ್ಪವೇ ಆಡಳಿತದ ಹೊಸ ಮುಖವಾಗುತ್ತದೆ.
ಕಾಂಗ್ರೆಸ್ ಮೊಸಳೆ ಕಣ್ಣೀರು
ದೆಹಲಿ ವಿದ್ಯಾರ್ಥಿಗಳ ಪ್ರತಿಭಟನೆಗೆ ಕಾಂಗ್ರೆಸ್ ನಾಯಕರು ಬೆಂಬಲ ಸೂಚಿಸಿ, ಪ್ರತಿಭಟನಾಕಾರರೊಂದಿಗೆ ನಿಂತು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುವುದು ಒಂದು ಮುಖವಾದರೆ, ಅದೇ ಕಾಂಗ್ರೆಸ್ ಆಡಳಿತದ ಕೇರಳದಲ್ಲಿ ಇದೇ ಹೋರಾಟಕ್ಕೆ ಬೆಂಬಲವಾಗಿ ಪ್ರತಿಭಟಿಸಿದ 5 ಸಾವಿರ ಮಂದಿಯ ವಿರುದ್ಧ ಪ್ರಕರಣ ದಾಖಲಿಸಿರುವುದು ಮತ್ತೊಂದು ಮುಖ. ಇದು ರಾಜಕೀಯ ದ್ವಂದ್ವ ನೀತಿಯ ಸ್ಪಷ್ಟ ಉದಾಹರಣೆ. ಅಧಿಕಾರದಲ್ಲಿದ್ದಾಗ ಒಂದು ಮಾನದಂಡ, ಪ್ರತಿಪಕ್ಷದಲ್ಲಿದ್ದಾಗ ಇನ್ನೊಂದು ಮಾನದಂಡ ಎಂಬ ಧೋರಣೆ ಪ್ರಜಾಪ್ರಭುತ್ವದ ವಿಶ್ವಾಸವನ್ನೇ ಕುಗ್ಗಿಸುತ್ತದೆ. ಪ್ರತಿಭಟನೆಯ ಹಕ್ಕು ದೆಹಲಿಯಲ್ಲಿ ಪವಿತ್ರವಾಗಿದ್ದರೆ, ಕೇರಳದಲ್ಲಿಯೂ ಅದೇ ಪವಿತ್ರವಾಗಿರಬೇಕು. ಇಲ್ಲದಿದ್ದರೆ ಕಾಂಗ್ರೆಸ್ ನಾಯಕರು ಪ್ರಜಾಪ್ರಭುತ್ವದ ಮೌಲ್ಯಗಳ ಬಗ್ಗೆ ಮಾತನಾಡುವ ನೈತಿಕ ಹಕ್ಕನ್ನೇ ಕಳೆದುಕೊಳ್ಳುತ್ತಾರೆ. ಒಂದೇ ವಿಷಯಕ್ಕೆ ಎರಡು ನಿಲುವುಗಳನ್ನು ಸಮರ್ಥಿಸುವುದು ರಾಜಕೀಯವಲ್ಲ; ಅದು ಕೇವಲ ಆಷಾಡಭೂತಿತನ.
Comments
Post a Comment