ಇಂಗ್ಲಿಷ್ ಭಾರತೀಯ ಭಾಷೆಯೇ?
ಸುಪ್ರೀಂ ಪ್ರಶ್ನೆಯ ಹಿಂದಿನ ಸವಾಲಿನ ಚಿಂತನೆ
* ಬಿವಿಸೀ
ಒಂದು ಕಾಲದಲ್ಲಿ ಆಳ್ವಿಕೆಯ ಸಂಕೇತವಾಗಿದ್ದ ಇಂಗ್ಲಿಷ್, ಇಂದು ಭಾರತೀಯತೆಯ ಭಾಗವಾಗಿದೆಯೇ? ಸುಪ್ರೀಂ ಕೋರ್ಟ್ ಇತ್ತೀಚೆಗೆ ಕೇಳಿರುವ ಈ ಪ್ರಶ್ನೆ ಕೇವಲ ಭಾಷೆಯ ಚರ್ಚೆಯಲ್ಲ. ಅದು ಭಾರತದ ಇತಿಹಾಸ, ಸಂವಿಧಾನ, ಶಿಕ್ಷಣ ನೀತಿ, ಸಾಂಸ್ಕøತಿಕ ಅಸ್ಮಿತೆ ಮತ್ತು ಭವಿಷ್ಯದ ಭಾಷಾ ರಾಜಕಾರಣದ ಕುರಿತ ವಿಶಾಲವಾದ ಚಿಂತನೆಗೆ ದಾರಿ ಮಾಡಿಕೊಟ್ಟಿದೆ. ಭಾಷೆಯ ಜನ್ಮಸ್ಥಳ ಮುಖ್ಯವೇ, ಅಥವಾ ಅದನ್ನು ಬದುಕಿಸಿದ ಜನರ ಸ್ವೀಕಾರ ಮುಖ್ಯವೇ ಎಂಬ ಮೂಲ ಪ್ರಶ್ನೆಯನ್ನು ಈ ಚರ್ಚೆ ನಮ್ಮ ಮುಂದೆ ಇಟ್ಟಿದೆ.
ಮೂರು ಭಾಷಾ ನೀತಿಯ ಅನುಷ್ಠಾನಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್, ಇಂಗ್ಲಿಷ್ ಅನ್ನು ಇನ್ನೂ 'ವಿದೇಶಿ' ಅಥವಾ 'ಸ್ಥಳೀಯವಲ್ಲದ' ಭಾಷೆ ಎಂದು ನೋಡುವುದು ಎಷ್ಟರಮಟ್ಟಿಗೆ ಸಮಂಜಸ ಎಂಬ ಪ್ರಶ್ನೆ ಎತ್ತಿತು. ಎರಡು ಶತಮಾನಗಳಿಗೂ ಹೆಚ್ಚು ಕಾಲ ಭಾರತದಲ್ಲಿ ಬಳಕೆಯಲ್ಲಿರುವ ಭಾಷೆಯನ್ನು ಅದರ ವಸಾಹತುಶಾಹಿ ಹಿನ್ನೆಲೆಯ ಕಾರಣಕ್ಕೆ ಮಾತ್ರ ಪರಿಗಣಿಸಬೇಕೇ ಎಂದು ನ್ಯಾಯಾಲಯ ಪ್ರಶ್ನಿಸಿತು. ಇದು ಅಂತಿಮ ತೀರ್ಪಲ್ಲದಿದ್ದರೂ, ದೇಶದ ಭಾಷಾ ನೀತಿಯ ಕುರಿತು ಹೊಸ ಚರ್ಚೆಗೆ ನಾಂದಿ ಹಾಡಿದೆ.
ಇಂಗ್ಲಿಷ್ ಈಗ ಭಾರತೀಯ ಜೀವನದ ಪ್ರತಿಯೊಂದು ಪ್ರಮುಖ ಕ್ಷೇತ್ರದಲ್ಲೂ ತನ್ನ ಸ್ಥಾನವನ್ನು ಗಟ್ಟಿಯಾಗಿ ಪಡೆದುಕೊಂಡಿದೆ. ನ್ಯಾಯಾಂಗ, ಆಡಳಿತ, ಉನ್ನತ ಶಿಕ್ಷಣ, ವೈದ್ಯಕೀಯ, ವಿಜ್ಞಾನ, ಮಾಹಿತಿ ತಂತ್ರಜ್ಞಾನ, ಉದ್ಯಮ, ವಾಣಿಜ್ಯ ಮತ್ತು ಜಾಗತಿಕ ಸಂಪರ್ಕದ ಪ್ರಮುಖ ಭಾಷೆಯಾಗಿ ಅದು ಕಾರ್ಯನಿರ್ವಹಿಸುತ್ತಿದೆ. ಜಗತ್ತಿನಲ್ಲೇ ಅತಿ ದೊಡ್ಡ ಇಂಗ್ಲಿಷ್ ಬಳಕೆದಾರ ಭಾರತ. 22 ಪ್ರಮುಖ ಭಾಷೆಗಳನ್ನು ಬಳಸುವ ಭಾರತೀಯರ ಬಳಕೆಯಿಂದ ಇಂಗ್ಲಿಷ್ ತನ್ನದೇ ಆದ ವಿಶಿಷ್ಟ ರೂಪವನ್ನೂ ಪಡೆದಿದೆ. ಭಾರತದಲ್ಲಿಯೇ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಮತ್ತು ಕೇಂದ್ರ ಸರಕಾರದೊಂದಿಗೆ ಸಂಪರ್ಕ ಸಾಧಿಸಲು ಇಂಗ್ಲಿಷ್ ಆಗಿರುವಾಗ ಅದನ್ನು ಪರಕೀಯ ಎಂದು ದೂರ ಮಾಡಲಾಗುವುದಿಲ್ಲ ಎನ್ನುವುದು ದಕ್ಷಿಣ ಭಾರತೀಯರ ವಾದ. ದಕ್ಷಿಣ ಭಾರತದವರು ಯಾವ ಕಾರಣಕ್ಕೂ ಸಂಪರ್ಕ ಭಾಷೆಯಾಗಿ ಹಿಂದಿಯನ್ನು ಒಪ್ಪುವುದಿಲ್ಲ. ಇಂಗ್ಲಿಷೇ ಇರಲಿ ಎಂದು ವಾದಿಸುತ್ತಾರೆ. ಭಾರತೀಯ ಉಚ್ಚಾರಣೆ, ಪದಪ್ರಯೋಗ ಮತ್ತು ಅಭಿವ್ಯಕ್ತಿಗಳು ಅದಕ್ಕೆ ಹೊಸ ಸ್ವರೂಪ ನೀಡಿವೆ. ಈ ಕಾರಣಕ್ಕೆ ಅನೇಕ ಭಾಷಾ ತಜ್ಞರು ಇಂಗ್ಲಿಷ್ ಈಗ ಭಾರತೀಯ ಸಮಾಜದ ಭಾಷೆಯೂ ಆಗಿದೆ ಎಂದು ವಾದಿಸುತ್ತಾರೆ.
ಆದರೆ ಈ ವಾದಕ್ಕೆ ಬಲವಾದ ಪ್ರತಿವಾದವೂ ಇದೆ. ಇಂಗ್ಲಿಷ್ ಭಾರತೀಯರ ದೈನಂದಿನ ಬದುಕಿನಲ್ಲಿ ವ್ಯಾಪಕವಾಗಿದ್ದರೂ, ಅದು ಭಾರತೀಯ ನೆಲದಲ್ಲಿ ಹುಟ್ಟಿದ ಭಾಷೆಯಲ್ಲ. ಸಂವಿಧಾನದ ಎಂಟನೇ ಅನುಸೂಚಿಯಲ್ಲಿ ಸ್ಥಾನ ಪಡೆದಿರುವ 22 ಭಾಷೆಗಳಂತೆಯೇ ಅದನ್ನು ಪರಿಗಣಿಸಲಾಗುವುದಿಲ್ಲ ಎಂದು ವಿರೋಧಿಗಳು ಹೇಳುತ್ತಾರೆ. ಇಂಗ್ಲಿಷ್‍ಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವುದರಿಂದ ಕನ್ನಡ, ತಮಿಳು, ತೆಲುಗು, ಮರಾಠಿ, ಬೆಂಗಾಲಿ ಸೇರಿದಂತೆ ಭಾರತೀಯ ಭಾಷೆಗಳ ಬೆಳವಣಿಗೆ ಕುಂಠಿತವಾಗಬಹುದು ಎಂಬ ಆತಂಕವೂ ಇದೆ. ಶಿಕ್ಷಣ ಮತ್ತು ಉದ್ಯೋಗದಲ್ಲಿ ಇಂಗ್ಲಿಷ್ ಮೇಲುಗೈ ಸಾಧಿಸಿದರೆ, ಭಾಷೆಯ ಜೊತೆಗೆ ಸಾಮಾಜಿಕ ಅಸಮಾನತೆಯೂ ಹೆಚ್ಚಾಗಬಹುದು ಎನ್ನುವ ಎಚ್ಚರಿಕೆಯೂ ಕೇಳಿಬರುತ್ತಿದೆ.
ಸಂವಿಧಾನವೂ ಈ ಪ್ರಶ್ನೆಗೆ ನೇರ ಉತ್ತರ ನೀಡುವುದಿಲ್ಲ. ಅದು ಹಿಂದಿಯನ್ನು ಒಕ್ಕೂಟದ ಅಧಿಕೃತ ಭಾಷೆಯಾಗಿ ಗುರುತಿಸಿದರೆ, ಇಂಗ್ಲಿಷ್‍ಗೆ ಅಧಿಕೃತ ವ್ಯವಹಾರಗಳಲ್ಲಿ ಮುಂದುವರಿದ ಬಳಕೆಯ ಅವಕಾಶ ನೀಡಿದೆ. ಆದರೆ ಅದನ್ನು ಭಾರತೀಯ ಭಾಷೆಗಳ ಪಟ್ಟಿಯಲ್ಲಿ ಸೇರಿಸಿಲ್ಲ. ಹೀಗಾಗಿ ಕಾನೂನು ದೃಷ್ಟಿಯಿಂದ ಇಂಗ್ಲಿಷ್‍ಗೆ ವಿಶೇಷ ಸ್ಥಾನವಿದ್ದರೂ, ಅದರ ಗುರುತು ವಿಶಿಷ್ಟ ಮತ್ತು ಪ್ರತ್ಯೇಕವಾಗಿದೆ.
ಹಾಗಾದರೆ ಇಂಗ್ಲಿಷ್ ಭಾರತೀಯ ಭಾಷೆಯೇ? ಇತಿಹಾಸದ ದೃಷ್ಟಿಯಿಂದ ಉತ್ತರ `ಅಲ್ಲ' ಎನ್ನಬಹುದು. ಆದರೆ ಸಾಮಾಜಿಕ ಮತ್ತು ಸಾಂಸ್ಕೃತಿಕ ದೃಷ್ಟಿಯಿಂದ ಉತ್ತರ ಅಷ್ಟೇ ಸರಳವಾಗಿರುವುದಿಲ್ಲ. ಒಂದು ಭಾಷೆಯ ಗುರುತನ್ನು ಅದರ ಹುಟ್ಟಿದ ನೆಲ ಮಾತ್ರ ನಿರ್ಧರಿಸುವುದಿಲ್ಲ; ಅದನ್ನು ಮಾತನಾಡುವ ಜನರು, ಅದರಲ್ಲಿ ಸೃಷ್ಟಿಯಾಗುವ ಸಾಹಿತ್ಯ, ಅದರಿಂದ ರೂಪುಗೊಳ್ಳುವ ಜೀವನಶೈಲಿಯೂ ನಿರ್ಧರಿಸುತ್ತವೆ. ಭಾರತ ಇಂಗ್ಲಿಷ್ ಅನ್ನು ಕೇವಲ ಬಳಸಿಲ್ಲ; ಅದನ್ನು ತನ್ನ ಅಗತ್ಯಗಳಿಗೆ ತಕ್ಕಂತೆ ರೂಪಿಸಿಕೊಂಡಿದೆ.
ಹೀಗಾಗಿ ಸುಪ್ರೀಂ ಕೋರ್ಟ್ ಎತ್ತಿರುವ ಪ್ರಶ್ನೆಗೆ ಉತ್ತರ ಹುಡುಕುವಾಗ ಭಾವನೆಗಿಂತ ವಾಸ್ತವ, ಇತಿಹಾಸಕ್ಕಿಂತ ವರ್ತಮಾನ ಮತ್ತು ಭಾಷಾ ಹೆಮ್ಮೆಯ ಜೊತೆಗೆ ಜಾಗತಿಕ ಅಗತ್ಯಗಳನ್ನೂ ಸಮತೋಲನದಿಂದ ಪರಿಗಣಿಸಬೇಕಾಗಿದೆ. ಇಂಗ್ಲಿಷ್ ಭಾರತೀಯ ಭಾಷೆಯೇ ಎಂಬುದಕ್ಕಿಂತಲೂ, ಅದು ಭಾರತದ ಭಾಷಾ ಬದುಕಿನಲ್ಲಿ ಇಂದು ಯಾವ ಸ್ಥಾನದಲ್ಲಿದೆ ಎಂಬ ಪ್ರಶ್ನೆಗೆ ಪ್ರಾಮಾಣಿಕ ಉತ್ತರ ಹುಡುಕುವುದು ಹೆಚ್ಚು ಮುಖ್ಯವಾಗಿದೆ.
Comments
Post a Comment