ಬದಲಾಗದ ರಾಜಕೀಯ ಅಸ್ತ್ರ ಮತ್ತು ತನಿಖಾ ಸಂಸ್ಥೆಗಳ ಸ್ವಾಯತ್ತತೆ
ಖುಲ್ಲಂ ಖುಲ್ಲಾ * ಬಿವಿಸೀ
ತನಿಖಾ ಸಂಸ್ಥೆಗಳ ದುರ್ಬಳಕೆ ಭಾರತೀಯ ರಾಜಕಾರಣದಲ್ಲಿ ಹೊಸದೇನಲ್ಲ. ಪ್ರಸ್ತುತ ಕೇಂದ್ರ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳ ನಾಯಕರನ್ನು ಗುರಿಯಾಗಿಸಿ ಸಿಬಿಐ ಹಾಗೂ ಜಾರಿ ನಿರ್ದೇಶನಾಲಯಗಳ (ಇಡಿ) ಮೂಲಕ ದಾಳಿ ನಡೆಸಲಾಗುತ್ತಿದೆ ಎಂಬ ಆರೋಪಗಳು ಜೋರಾಗಿ ಕೇಳಿಬರುತ್ತಿವೆ. ಇದನ್ನು ಪ್ರಜಾಪ್ರಭುತ್ವದ ಮೇಲಿನ ದಾಳಿ ಎಂದು ಕಾಂಗ್ರೆಸ್ ಬಣ್ಣಿಸುತ್ತಿದೆ. ಆದರೆ, ಇತಿಹಾಸದ ಪುಟಗಳನ್ನು ತಿರುವಿ ಹಾಕಿದಾಗ, ಅಧಿಕಾರದ ಗದ್ದುಗೆಯಲ್ಲಿದ್ದಾಗ ಯಾವುದೇ ರಾಜಕೀಯ ಪಕ್ಷವೂ ಈ ಪ್ರಲೋಭನೆಯಿಂದ ಮುಕ್ತವಾಗಿರಲಿಲ್ಲ ಎಂಬ ಕಹಿ ಸತ್ಯ ಹೊರಬರುತ್ತದೆ.
ಹಿಂದಿನ ಯುಪಿಎ ಆಡಳಿತಾವಧಿಯಲ್ಲಿ ಕೇಂದ್ರ ತನಿಖಾ ಸಂಸ್ಥೆಗಳನ್ನು ವಿರೋಧ ಪಕ್ಷಗಳ ವಿರುದ್ಧ ಅಸ್ತ್ರವಾಗಿ ಬಳಸಿಕೊಂಡ ನಿದರ್ಶನಗಳು ಸಾಕಷ್ಟಿವೆ. ಅಂದು ಉತ್ತರ ಪ್ರದೇಶದ ಮಾಯಾವತಿ ಅವರ ಮೇಲಿನ ಪ್ರಕರಣಗಳನ್ನು ರಾಜಕೀಯ ಲಾಭ-ನಷ್ಟಗಳ ಆಧಾರದ ಮೇಲೆ ನಿಭಾಯಿಸಿದ ರೀತಿ ಹಾಗೂ ಗುಜರಾತ್‍ನ ಅಂದಿನ ಬಿಜೆಪಿ ನಾಯಕರನ್ನು ಸಿಲುಕಿಸಲು ಏಜೆನ್ಸಿಗಳನ್ನು ಬಳಸಿಕೊಂಡ ಆರೋಪಗಳು ಇದಕ್ಕೆ ಸಾಕ್ಷಿ. ಅದೇ ಸಮಯದಲ್ಲಿ, ತಮ್ಮದೇ ಸರ್ಕಾರದ ಸಚಿವರಾಗಿದ್ದ ಚಿದಂಬರಂ ಅಥವಾ ಮೈತ್ರಿ ಪಕ್ಷದ ಡಿಎಂಕೆ ನಾಯಕ ರಾಜಾ ಅವರ ವಿರುದ್ಧದ ನೂರಾರು, ಸಾವಿರಾರು ಕೋಟ್ಯಂತರ ರೂಪಾಯಿಗಳ ಭ್ರಷ್ಟಾಚಾರದ ಹಗರಣಗಳು ಮುನ್ನೆಲೆಗೆ ಬಂದಾಗ, ಸ್ವಯಂಪ್ರೇರಿತವಾಗಿ ತನಿಖೆ ನಡೆಸಿ ಸತ್ಯ ಹೊರಗೆಳೆಯುವಲ್ಲಿ ಅಂದಿನ ಯುಪಿಎ ಸರ್ಕಾರ ತೋರಿದ ಉದಾಸೀನತೆ ಜಗಜ್ಜಾಹೀರಾಗಿತ್ತು. ದೇಶದ ಪ್ರಮುಖ ತನಿಖಾ ಸಂಸ್ಥೆಯು ಅಂದು ಆಡಳಿತ ಪಕ್ಷದ ಹಿತಾಸಕ್ತಿಗೆ ತಕ್ಕಂತೆ ಕಾರ್ಯನಿರ್ವಹಿಸುತ್ತಿದೆ ಎಂಬ ವ್ಯಾಪಕ ಟೀಕೆಗಳು ಕೇಳಿಬಂದಿದ್ದವು.
ಇದೇ ಪ್ರವೃತ್ತಿ ರಾಜ್ಯ ರಾಜಕಾರಣದಲ್ಲೂ ಮುಂದುವರಿದಿದೆ. ಕರ್ನಾಟಕದಲ್ಲಿ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರವು ಕೇಂದ್ರ ಸಂಸ್ಥೆಗಳ ದುರ್ಬಳಕೆಯ ವಿರುದ್ಧ ಅಬ್ಬರದ ಭಾಷಣಗಳನ್ನು ಮಾಡಿತ್ತಾದರೂ, ಮುಡಾ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ಭೂ ಹಗರಣದಂತಹ ಸಾವಿರಾರು ಕೋಟಿ ರೂ ಹಗರಣದ ಗಂಭೀರ ಆರೋಪ ಎದುರಾದಾಗ ರಾಜ್ಯದ ತನಿಖಾ ಸಂಸ್ಥೆಗಳ ಮೂಲಕ ಮುಖ್ಯಮಂತ್ರಿಗೆ ತರಾತುರಿಯಲ್ಲಿ `ಕ್ಲೀನ್ ಚಿಟ್' ಕೊಡಿಸಿಕೊಳ್ಳಲು ಹಿಂಜರಿಯಲಿಲ್ಲ.
ಅಧಿಕಾರ ಕೈಯಲ್ಲಿದ್ದಾಗ ತನಿಖಾ ಸಂಸ್ಥೆಗಳನ್ನು ರಕ್ಷಣಾ ಕವಚವಾಗಿ ಬಳಸುವುದು ಮತ್ತು ವಿರೋಧ ಪಕ್ಷದಲ್ಲಿದ್ದಾಗ ಅದೇ ಸಂಸ್ಥೆಗಳನ್ನು ಬೇಟೆಗಾರರು ಎಂದು ಕರೆಯುವುದು ಎಲ್ಲಾ ರಾಜಕೀಯ ಪಕ್ಷಗಳ ಸಿದ್ಧ ಸೂತ್ರವಾಗಿದೆ. ರಾಜಕೀಯ ನಾಯಕರು ತಮ್ಮ ಮೇಲಿನ ಆರೋಪಗಳಿಂದ ನುಣುಚಿಕೊಳ್ಳಲು ಈ ಸಂಸ್ಥೆಗಳನ್ನು ನಿಯಂತ್ರಿಸುವುದು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಧಕ್ಕೆ ತರುತ್ತದೆ.
ಹಾಗಾದರೆ ಈ ರಾಜಕೀಯ ಹಿತಾಸಕ್ತಿಯ ದುರುಪಯೋಗಕ್ಕೆ ಮುಕ್ತಿ ಹಾಡುವುದು ಹೇಗೆ? ತನಿಖಾ ಸಂಸ್ಥೆಗಳನ್ನು ರಾಜಕೀಯ ಮುಷ್ಟಿಯಿಂದ ಮುಕ್ತಗೊಳಿಸುವುದು ಅತ್ಯಗತ್ಯ, ಆದರೆ ಅದು ಹೇಳಿದಷ್ಟು ಸುಲಭವಲ್ಲ. ಇದಕ್ಕೆ ಇರುವ ಏಕೈಕ ಮಾರ್ಗವೆಂದರೆ, ಈ ಸಂಸ್ಥೆಗಳಿಗೆ ಸಂಪೂರ್ಣ ಸ್ವಾಯತ್ತತೆ ನೀಡುವುದು. ಚುನಾವಣಾ ಆಯೋಗ ಅಥವಾ ನ್ಯಾಯಾಂಗದ ಮಾದರಿಯಲ್ಲಿ ಸಿಬಿಐ ಮತ್ತು ಇಡಿ ಸಂಸ್ಥೆಗಳ ಮುಖ್ಯಸ್ಥರ ನೇಮಕಾತಿಯನ್ನು ಕೇವಲ ಸರ್ಕಾರದ ನಿರ್ಧಾರಕ್ಕೆ ಬಿಡದೆ, ಆಡಳಿತ ಪಕ್ಷ, ವಿರೋಧ ಪಕ್ಷದ ನಾಯಕರು ಮತ್ತು ಮುಖ್ಯ ನ್ಯಾಯಮೂರ್ತಿಗಳನ್ನೊಳಗೊಂಡ ತಟಸ್ಥ ಸಮಿತಿಯ ಮೂಲಕ ನಿರ್ಧರಿಸಬೇಕು. ತನಿಖಾ ಸಂಸ್ಥೆಗಳ ಆರ್ಥಿಕ ಅಧಿಕಾರ ಮತ್ತು ಆಡಳಿತಾತ್ಮಕ ನಿಯಂತ್ರಣವನ್ನು ಕಾಯಾರ್ಂಗದಿಂದ ಬೇರ್ಪಡಿಸಬೇಕು. ತನಿಖೆಯ ಪ್ರತಿಯೊಂದು ಹಂತದಲ್ಲೂ ನ್ಯಾಯಾಲಯಗಳ ನೇರ ಉಸ್ತುವಾರಿ ಇರಬೇಕು. ರಾಜಕೀಯ ಪ್ರಭಾವದಿಂದ ಮುಕ್ತವಾದ, ಕೇವಲ ಸಂವಿಧಾನ ಮತ್ತು ಕಾನೂನಿಗೆ ಮಾತ್ರ ಉತ್ತರದಾಯಿಯಾದ ಸ್ವತಂತ್ರ ವ್ಯವಸ್ಥೆಯನ್ನು ರೂಪಿಸದ ಹೊರತು, ತನಿಖಾ ಸಂಸ್ಥೆಗಳು ರಾಜಕೀಯ ದಾಳಗಳಾಗಿ ಬಳಕೆಯಾಗುವುದನ್ನು ತಡೆಯಲು ಸಾಧ್ಯವಿಲ್ಲ.
Comments
Post a Comment