ಬಿಡದಿ ಟೌನ್‍ಶಿಪ್ ಯೋಜನೆ ಮತ್ತು ದೇವೇಗೌಡರ ಕುಟುಂಬ ಸ್ವಾರ್ಥ

 ನೇರಾನೇರ * ಬಿವಿಸೀ

ಬೆಂಗಳೂರು ಮತ್ತು ಮೈಸೂರು ನಗರಗಳ ಮಧ್ಯೆ ಅತಿ ವೇಗವಾಗಿ ಬೆಳೆಯುತ್ತಿರುವ ಬಿಡದಿ ಭಾಗದಲ್ಲಿ ಕರ್ನಾಟಕ ಸರ್ಕಾರವು ಅತ್ಯಂತ ಮಹತ್ವಾಕಾಂಕ್ಷೆಯ ಟೌನ್‍ಶಿಪ್ ಯೋಜನೆಯನ್ನು ಕೈಗೆತ್ತಿಕೊಳ್ಳಲು ಮುಂದಾಗಿದೆ. ಆದರೆ, ಈ ಭಾಗದಲ್ಲಿರುವ ತಮ್ಮ ಹಾಗೂ ತಮ್ಮ ಕುಟುಂಬದ ಭೂಮಿಯನ್ನು ಉಳಿಸಿಕೊಳ್ಳಲು ಜೆಡಿಎಸ್ ರಾಜ್ಯ ಅಧ್ಯಕ್ಷ ಹಾಗೂ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರು ಹತಾಶ ಪ್ರಯತ್ನ ನಡೆಸುತ್ತಿದ್ದಾರೆ. ಇದು ಕೇವಲ ರಾಜಕೀಯ ವಿರೋಧವಾಗಿ ಉಳಿಯದೆ, ಅಭಿವೃದ್ಧಿ ಕಾರ್ಯಗಳಿಗೆ ಕಲ್ಲು ಹಾಕುವ ಮತ್ತು ಕಾನೂನು ಸುವ್ಯವಸ್ಥೆಯನ್ನು ಬುಡಮೇಲು ಮಾಡುವ ತಂತ್ರವಾಗಿ ಮಾರ್ಪಟ್ಟಿದೆ. ಇಡೀ ರಾಜ್ಯವನ್ನು ತಮ್ಮ ಕುಟುಂಬಾಸಕ್ತಿಗಾಗಿ ಬಳಸಿಕೊಳ್ಳುವುದಕ್ಕೂ ರೆಡಿ ಇರುವ ಭಂಡರು ಈ ಗೌಡ ಎಂಡ್ ಸನ್ಸ್. ಇವರು ಇನ್ನೂ ಫ್ಯೂಡೆಲ್ ಮೈಂಡ್ ಸೆಟ್‍ನಿಂದ ಹೊರಬಂದಿಲ್ಲ.

ಆರಂಭದಲ್ಲಿ ಸ್ಥಳೀಯ ರೈತರನ್ನು ಪ್ರಚೋದಿಸಿ ಉಪವಾಸ ಸತ್ಯಾಗ್ರಹ ನಡೆಸುವಂತೆ ಮಾಡಲಾಯಿತು. ಅದರಿಂದ ಯಾವುದೇ ಪ್ರಯೋಜನವಾಗದಿದ್ದಾಗ, ಸರ್ಕಾರಿ ಸರ್ವೇಕ್ಷಣಾಧಿಕಾರಿಗಳ ಮೇಲೆ ಮಹಿಳೆಯರು ಮತ್ತು ಪುಂಡರ ಗುಂಪನ್ನು ಎತ್ತಿಕಟ್ಟಿ ಪೆÇರಕೆಯಿಂದ ಹಲ್ಲೆ ನಡೆಸುವಂತೆ ಪ್ರಚೋದಿಸಲಾಗಿದೆ. (ರಾಜಕೀಯವಾಗಿ ಪ್ರಬಲರಾಗಿರುವವರ ಪ್ರಚೋದನೆಯಿಲ್ಲದೇ ಅವರು ಇಂಥ ಕೆಲಸ ಮಾಡಲು ಸಾಧ್ಯವಿಲ್ಲ.) ವಾಹನದಿಂದ ಕೆಳಗಿಳಿಯುತ್ತಿದ್ದ ಅಧಿಕಾರಿಗಳನ್ನು ಅಟ್ಟಾಡಿಸಿ ಹೊಡೆದಿರುವುದು ಕೇವಲ ಬೇಜವಾಬ್ದಾರಿತನವಲ್ಲ, ಅದೊಂದು ಕ್ರಿಮಿನಲ್ ಕೃತ್ಯ. ಕರ್ತವ್ಯನಿರತ ಸರ್ಕಾರಿ ನೌಕರರ ಕೆಲಸಕ್ಕೆ ಅಡ್ಡಿಪಡಿಸುವುದು ಕಾನೂನಿನ ಪ್ರಕಾರ ಗಂಭೀರ ಅಪರಾಧವಾಗಿದೆ.

ಇಂತಹ ಘಟನೆ ನಡೆದ ತಕ್ಷಣವೇ ದುಷ್ಕರ್ಮಿಗಳನ್ನು ಬಂಧಿಸಬೇಕಿದ್ದ ಪೆÇಲೀಸರು ಮೂಕಪ್ರೇಕ್ಷಕರಾಗಿ ನಿಂತಿದ್ದು ದುರದೃಷ್ಟಕರ. ಎರಡು ಪ್ರಥಮ ಮಾಹಿತಿ ವರದಿಗಳನ್ನು ದಾಖಲಿಸಲು ಇಡೀ ದಿನ ತೆಗೆದುಕೊಂಡರೂ, ಇದುವರೆಗೆ ಯಾರನ್ನೂ ಬಂಧಿಸಿಲ್ಲ. ಒಬ್ಬ ಕೇಂದ್ರ ಸಚಿವನಾಗಿ ಕುಮಾರಸ್ವಾಮಿ ಇಂತಹ ಕಾನೂನುಬಾಹಿರ ಕೃತ್ಯಗಳಿಗೆ ಕುಮ್ಮಕ್ಕು ನೀಡುವುದು ಎಷ್ಟು ಸರಿ? ಯೋಜನೆಯ ಬಗ್ಗೆ ಭಿನ್ನಾಭಿಪ್ರಾಯಗಳಿದ್ದರೆ ನ್ಯಾಯಾಲಯದ ಮೊರೆ ಹೋಗಲು ಮುಕ್ತ ಅವಕಾಶವಿದೆ. ಅದನ್ನು ಬಿಟ್ಟು ಇಂತಹ ಉಗ್ರ ಸ್ವರೂಪದ ಹೋರಾಟಕ್ಕೆ ಇಳಿದಿರುವುದು ಖಂಡನೀಯ.

ಈಗ ಈ ನಾಟಕ ರಂಗಕ್ಕೆ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ಪ್ರವೇಶಿಸಿದ್ದಾರೆ. 93 ವರ್ಷದ ಇಳಿವಯಸ್ಸಿನಲ್ಲಿ ಅವರು ಬಿಡದಿಯಲ್ಲಿ ಉಪವಾಸ ಕೂರುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ದೇವೇಗೌಡರ ಕುಟುಂಬವು ಅಧಿಕಾರದಲ್ಲಿದ್ದಾಗಲೆಲ್ಲಾ ಸಾರ್ವಜನಿಕ ಮತ್ತು ಬೆಲೆಬಾಳುವ ಭೂಮಿಯ ಮೇಲೆ ಕಣ್ಣಿಟ್ಟು ದಾಖಲೆ ತಿರುಚಿ ಆಸ್ತಿ ಲಪಟಾಯಿಸಿಕೊಂಡ ಇತಿಹಾಸವಿದೆ. ಅವರ ಕುಟುಂಬದ ವಿರುದ್ಧ ಈಗಾಗಲೇ ಹಲವಾರು ಭೂಕಬಳಿಕೆ ಪ್ರಕರಣಗಳು ನ್ಯಾಯಾಲಯದಲ್ಲಿವೆ. ಇಷ್ಟಕ್ಕೂ ಗೌಡ ಎಂಡ್ ಸನ್ಸ್ ಬಿಡದಿ ಟೌನ್ ಶಿಪ್ ಯೋಜನೆಯನ್ನು ಯಾತಕ್ಕಾಗಿ ವಿರೋಧಿಸುತ್ತಿದ್ದೇವೆ ಎಂದು ಕಾರಣ ನೀಡಿಲ್ಲ ಎನ್ನುವುದು ಮುಖ್ಯ. ಕುಮಾರಸ್ವಾಮಿ ಕೂಡ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದವರು. ಅವರ ಅಪ್ಪ ಪ್ರಧಾನ ಮಂತ್ರಿಯೂ ಆಗಿದ್ದವರು. ಜನಸಂಖ್ಯಾ ಭಾರದಿಂದ ಕುಸಿಯುತ್ತಿರುವ ಬೆಂಗಳೂರಿನ ಒಡಲು ಸಡಿಲಗೊಳಿಸಲು ಊರಿಂದ ಹೊರಗೆ ಟೌನ್ ಶಿಪ್ ಯಾಕೆ ಬೇಡ ಎಂದು ಅವರು ಮೊದಲು ಹೇಳಲಿ.

ಡಿ ಕೆ ಶಿವಕುಮಾರ್ ನೇತೃತ್ವದ ಸರ್ಕಾರವು ಇಂತಹ ಬೆದರಿಕೆಗಳಿಗೆ ಮಣಿಯಬಾರದು. ಸಾರ್ವಜನಿಕ ಹಿತಾಸಕ್ತಿಯ ಈ ಯೋಜನೆಯನ್ನು ಯಾವುದೇ ಹಿಂಜರಿಕೆಯಿಲ್ಲದೆ ಮುಂದುವರಿಸಬೇಕು. ಪ್ರಸ್ತುತ ಸ್ಥಳದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು ಕೃತಕ ಮತ್ತು ವ್ಯವಸ್ಥಿತವಾಗಿ ರೂಪಿಸಲ್ಪಟ್ಟಿವೆ. ರಾಜ್ಯದ ಜನರ ಹಿತದೃಷ್ಟಿಯಿಂದ ಜಾರಿಯಾಗುತ್ತಿರುವ ಈ ಯೋಜನೆಯನ್ನು ತಡೆಯಲು ಯತ್ನಿಸುವ ಪ್ರತಿಯೊಬ್ಬರನ್ನೂ ಸರ್ಕಾರವು ಜೈಲಿಗಟ್ಟಬೇಕು. ಈ ಮೂಲಕ ಅಭಿವೃದ್ಧಿ ವಿರೋಧಿಗಳಿಗೆ ಸೂಕ್ತ ಪಾಠ ಕಲಿಸಬೇಕಾಗಿದೆ.

Comments

Popular posts from this blog

ಕರಾವಳಿಯ ನೆಮ್ಮದಿಗೆ ಕೊಲೆಗಳ ಕರಿನೆರಳು

ಮಾತಿನ ಸಂಸ್ಕøತಿ ಕಳೆದುಕೊಳ್ಳುತ್ತಿರುವ ರಾಜಕೀಯ

WHEN COMMUNAL POLITICS POISONS TRADITION: A WARNING FROM UDUPI