`ಕೊಂದವರು ಯಾರು?' ಪ್ರಶ್ನೆಗೆ ಉತ್ತರವಿಲ್ಲ, ಗುಡ್ಡ ಅಗೆದು ಇಲಿಯನ್ನೂ ತೆಗೆಯದ ಕಸರತ್ತು

 ನ್ಯಾಯದ ಸಮಾಧಿಯ ಮೇಲೆ ನಿಂತ ಎಸ್‍ಐಟಿ ವರದಿ: 

ಧರ್ಮಸ್ಥಳದ ಸಂತ್ರಸ್ತೆಯರ ರಕ್ತದ ಕಲೆಗೆ ಸಿಗದ ಮುಕ್ತಿ

ಧರ್ಮಸ್ಥಳ ಮತ್ತು ಅದರ ಸುತ್ತಮುತ್ತಲಿನ ಪರಿಸರದಲ್ಲಿ ಕಳೆದ ಎರಡು ದಶಕಗಳಲ್ಲಿ ಸಂಭವಿಸಿದ ನೂರಾರು ನಿಗೂಢ ಸಾವುಗಳು ಹಾಗೂ ಭೀಕರ ಅತ್ಯಾಚಾರಗಳ ಸತ್ಯಾಸತ್ಯತೆಯನ್ನು ಬಯಲಿಗೆಳೆಯಲು ರಚನೆಯಾಗಿದ್ದ ವಿಶೇಷ ತನಿಖಾ ತಂಡವು ಸಾರ್ವಜನಿಕರ ನಂಬಿಕೆಗೆ ಘೋರ ದ್ರೋಹ ಬಗೆದಿದೆ. 

ಅತ್ಯಾಚಾರಕ್ಕೊಳಗಾಗಿ ಅಮಾನುಷವಾಗಿ ಕೊಲೆಯಾದ ಸೌಜನ್ಯ ಸೇರಿದಂತೆ ಅಸಂಖ್ಯಾತ ಅಸಹಾಯಕ ಹೆಣ್ಣುಮಕ್ಕಳಿಗೆ ನ್ಯಾಯ ಕೊಡಿಸಬೇಕಿದ್ದ ತನಿಖಾ ತಂಡವು, ಅದರ ಮೂಲ ಉದ್ದೇಶಕ್ಕೆ ತದ್ವಿರುದ್ಧವಾಗಿ ನಡೆದುಕೊಂಡಿರುವುದು ಪ್ರಜಾಪ್ರಭುತ್ವದ ಅತಿ ದೊಡ್ಡ ದುರಂತವಾಗಿದೆ. ಸಾರ್ವಜನಿಕರ ತೀವ್ರ ಹೋರಾಟ ಮತ್ತು ರಾಜ್ಯ ಮಹಿಳಾ ಆಯೋಗದ ಒತ್ತಾಯದ ಮೇರೆಗೆ ಅಸ್ತಿತ್ವಕ್ಕೆ ಬಂದ ಈ ಸಮಿತಿಯು ನ್ಯಾಯಕ್ಕಾಗಿ ದನಿಯೆತ್ತಿದವರನ್ನೇ ಜೈಲಿಗಟ್ಟಲು ಸಂಚು ರೂಪಿಸಿರುವುದು ಜಗತ್ತಿನ ಕಣ್ಣಿಗೆ ಮಣ್ಣೆರಚುವ ಕುತಂತ್ರವಾಗಿದೆ. ಕರಾವಳಿ ಜನತೆಯ ಸುದೀರ್ಘ ಹೋರಾಟವನ್ನು ಹತ್ತಿಕ್ಕಲು ತನಿಖಾ ವರದಿಯನ್ನು ಅಸ್ತ್ರವಾಗಿ ಬಳಸಿರುವುದು ಇಡೀ ತನಿಖಾ ವ್ಯವಸ್ಥೆಯ ವಿಶ್ವಾಸಾರ್ಹತೆಯನ್ನೇ ಸಂಪೂರ್ಣವಾಗಿ ಪ್ರಶ್ನಿಸುವಂತೆ ಮಾಡಿದೆ.

ಧರ್ಮಸ್ಥಳದ ಪಾವಿತ್ರ್ಯತೆಯ ಮರೆಯಲ್ಲಿ ನಡೆದ ಅತ್ಯಾಚಾರಗಳು ಮತ್ತು ನಿಗೂಢ ಕೃತ್ಯಗಳ ವಿರುದ್ಧ ದಕ್ಷಿಣ ಕನ್ನಡ ಜಿಲ್ಲೆಯ ಮೂಲೆ ಮೂಲೆಗಳಲ್ಲಿ ಸಹಸ್ರಾರು ಸಾರ್ವಜನಿಕ ಪ್ರತಿಭಟನಾ ಸಭೆಗಳು ಜರುಗಿದ್ದವು. ನ್ಯಾಯಕ್ಕಾಗಿ ಆಗ್ರಹಿಸಿದ ಸಾಮಾನ್ಯ ಜನರ ಆಕ್ರೋಶ ಕೇವಲ ಕರಾವಳಿಗೆ ಮಾತ್ರ ಸೀಮಿತವಾಗಿರದೆ, ಇಡೀ ರಾಜ್ಯದ ನಾನಾ ಭಾಗಗಳಿಂದ ಬಂದ ಮಹಿಳಾ ಸಂಘಟನೆಗಳು ಬೆಳ್ತಂಗಡಿಯಲ್ಲಿ ಒಗ್ಗೂಡಿ ಐತಿಹಾಸಿಕ ಚಳವಳಿಯನ್ನು ನಡೆಸಿದ್ದವು. ಹೆಣ್ಣುಮಕ್ಕಳ ರಕ್ಷಣೆಗೆ ಬದ್ಧರಾಗಬೇಕಾದ ಸರಕಾರ ಮತ್ತು ಕಾನೂನು ವ್ಯವಸ್ಥೆ ಇಷ್ಟೊಂದು ದಿವ್ಯ ನಿರ್ಲಕ್ಷ್ಯ ವಹಿಸುತ್ತದೆ ಎಂದು ಸಾರ್ವಜನಿಕರು ಎಂದೂ ಊಹಿಸಿರಲಿಲ್ಲ. ಪ್ರಸ್ತುತ ಹೊರಬಿದ್ದಿರುವ ವರದಿಯು ಧರ್ಮಸ್ಥಳದ ಕೊಲೆಗಡುಕರನ್ನು ಮತ್ತು ಕಾಮುಕರನ್ನು ರಕ್ಷಿಸುವ ಮೂಲಕ ಇಡೀ ವ್ಯವಸ್ಥೆಯ ಗರ್ಭಗುಡಿಯಲ್ಲಿ ಅಡಗಿರುವ ರಹಸ್ಯಗಳನ್ನು ಶಾಶ್ವತವಾಗಿ ಹೂತುಹಾಕುವ ಪ್ರಯತ್ನವಾಗಿದೆ. ಇದು ದಕ್ಷಿಣ ಕನ್ನಡದ ಪ್ರತಿಯೊಬ್ಬ ಸ್ವಾಭಿಮಾನಿ ಪ್ರಜೆಯ ಆತ್ಮಗೌರವಕ್ಕೆ ಎಸಗಿದ ದ್ರೋಹವಾಗಿದ್ದು, ಪ್ರತಿಯೊಬ್ಬ ನಾಗರಿಕನಲ್ಲೂ ತೀವ್ರ ನಿರಾಸೆ ಮತ್ತು ಆಕ್ರೋಶದ ಕಿಚ್ಚನ್ನು ಹೊತ್ತಿಸಿದೆ.

ಸಾವಿರಾರು ಪುಟಗಳ ಬೃಹತ್ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿರುವ ವಿಶೇಷ ತನಿಖಾ ತಂಡಕ್ಕೆ ದಶಕಗಳಿಂದ ಇಡೀ ನಾಡನ್ನು ಕಾಡುತ್ತಿರುವ ಮೂಲಭೂತ ಪ್ರಶ್ನೆಯಾದ "ನಮ್ಮ ಹೆಣ್ಣುಮಕ್ಕಳನ್ನು ಕೊಂದ ಆ ನೈಜ ನರಹಂತಕರು ಯಾರು?" ಎಂಬ ಸರಳ ಪ್ರಶ್ನೆಗೆ ಉತ್ತರಿಸಲು ಸಾಧ್ಯವಾಗಿಲ್ಲ. ಇದಕ್ಕೆ ಉತ್ತರಿಸುವ ಬದಲು, ಕೃತಕ ಮತ್ತು ನಂಬಲನರ್ಹ ಸಾಕ್ಷ್ಯಗಳನ್ನು ಆಧರಿಸಿ, ವ್ಯವಸ್ಥಿತವಾಗಿ ದೂರು ನೀಡಿದವರನ್ನೇ ಮತ್ತು ಸಂತ್ರಸ್ತ ಕುಟುಂಬಗಳ ಪರವಾಗಿ ನ್ಯಾಯಕ್ಕಾಗಿ ಹೋರಾಟದ ಮುಂಚೂಣಿಯಲ್ಲಿದ್ದ ಧೀಮಂತರನ್ನೇ ಅಪರಾಧಿಗಳನ್ನಾಗಿ ಬಿಂಬಿಸಿರುವುದು ತನಿಖಾ ಸಂಸ್ಥೆಯ ಪ್ರಭಾವಿ ಶಕ್ತಿಗಳ ಎದುರಿನ ಶರಣಾಗತಿಯನ್ನು ಬೆತ್ತಲೆಗೊಳಿಸಿದೆ. ನ್ಯಾಯಕ್ಕಾಗಿ ಬೀದಿಗಿಳಿದು ಹೋರಾಡಿದ ಧೀಮಂತ ಮಹಿಳಾ ಸಂಘಟನೆಗಳ ತೀವ್ರ ಆಕ್ರೋಶಕ್ಕೆ, ಬೆಳ್ತಂಗಡಿಯಲ್ಲಿ ನಡೆದ ನೂರಾರು ಬೃಹತ್ ಪ್ರತಿಭಟನೆಗಳಿಗೆ ಮತ್ತು ಸಾವಿರಾರು ಸಾರ್ವಜನಿಕ ಜಾಗೃತಿ ಸಭೆಗಳ ನ್ಯಾಯಯುತ ಕೂಗಿಗೆ ಈ ವರದಿಯಲ್ಲಿ ಯಾವುದೇ ಬೆಲೆ ಸಿಕ್ಕಿಲ್ಲ. ವ್ಯವಸ್ಥೆಯ ಕಪಿಮುಷ್ಠಿಯಲ್ಲಿರುವ ಪ್ರಭಾವಿ ಶಕ್ತಿಗಳ ಹಿತಾಸಕ್ತಿಗಳನ್ನು ಕಾಪಾಡಲು ಮತ್ತು ಅವರ ತಲೆಯನ್ನು ರಕ್ಷಿಸಲು ಇಡೀ ತನಿಖಾ ಪ್ರಕ್ರಿಯೆಯನ್ನು ಸತ್ಯದ ಕತ್ತು ಹಿಸುಕುವ ಆಯುಧವಾಗಿ ಬಳಸಲಾಗಿದೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತಿದೆ.

ರಾಜ್ಯ ಸರ್ಕಾರದ ಉನ್ನತ ನಾಯಕರು ಈ ಇಡೀ ಸಾವು-ನೋವುಗಳ ಹಿಂದೆ ಕೇವಲ ರಾಜಕೀಯ ಪಿತೂರಿ ಅಡಗಿದೆ ಎಂದು ಈ ಹಿಂದೆಯೇ ನೀಡಿದ್ದ ಹೇಳಿಕೆಗಳು ಈ ನಿರಾಶಾದಾಯಕ ಫಲಿತಾಂಶಕ್ಕೆ ಮುನ್ನುಡಿಯಾಗಿದ್ದವು ಎಂಬುದು ಈಗ ಸಾಬೀತಾಗಿದೆ. ಈ ವರದಿಯು ಆಡಳಿತ ಮತ್ತು ವಿರೋಧ ಪಕ್ಷಗಳೆರಡಕ್ಕೂ ಅತ್ಯಂತ ಆನಂದದಾಯಕ ಸಮಾಧಾನವನ್ನು ತಂದಿದೆ ಎಂಬುದು ಗುಟ್ಟಾಗಿ ಉಳಿದಿಲ್ಲ. 

ಇಂತಹ ರಾಜಕೀಯ ಹಿತಾಸಕ್ತಿಗಳ ನಡುವೆ ಬಸವಳಿಯುತ್ತಿರುವ ಸಾಮಾನ್ಯ ಜನತೆ ಈಗ ನೂತನ ಗೃಹ ಸಚಿವರಾದ ಪ್ರಿಯಾಂಕ್ ಖರ್ಗೆ ಅವರ ನಿಲುವಿನ ಕಡೆಗೆ ಅತ್ಯಂತ ಆಶಾವಾದದಿಂದ ಮುಖ ಮಾಡಿದ್ದಾರೆ. ಅವರು ಈ ಧೃತರಾಷ್ಟ್ರ ನೀತಿಯ ವರದಿಯನ್ನು ಯಥಾವತ್ತಾಗಿ ಒಪ್ಪಿಕೊಳ್ಳುತ್ತಾರೋ ಅಥವಾ ದಕ್ಷಿಣ ಕನ್ನಡದ ನೊಂದ ಜನರ ಪರವಾಗಿ ನಿಂತು ಮರುಪರಿಶೀಲನೆಗೆ ಮತ್ತು ನಿಷ್ಪಕ್ಷಪಾತ ತನಿಖೆಗೆ ಆದೇಶಿಸುತ್ತಾರೋ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ತೀವ್ರವಾಗಿ ಕಾಡುತ್ತಿದೆ. 

ಒಟ್ಟಾರೆ ಈ ವರದಿ ಸಾವು ಮತ್ತು ನೋವಿನ ಮೇಲೆ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಶಾಸಕಾಂಗ ಹಾಗೂ ಕಾಯಾರ್ಂಗದ ಕ್ರೂರ ಮುಖಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಮುಂದಿನ ದಿನಗಳಲ್ಲಿ ನೊಂದ ಮಹಿಳಾ ಸಂಘಟನೆಗಳು ಮತ್ತು ರಾಜ್ಯ ಮಹಿಳಾ ಆಯೋಗವು ಇಂತಹ ವಂಚನೆಯ ವರದಿಯ ವಿರುದ್ಧ ಉನ್ನತ ನ್ಯಾಯಾಲಯದ ಮೆಟ್ಟಿಲೇರಲಿದೆಯೇ ಎಂಬುದನ್ನು ಸಾರ್ವಜನಿಕರು ಅತ್ಯಂತ ಕಾತರದಿಂದ ಹಾಗೂ ನಂಬಿಕೆಯಿಂದ ಕಾಯುತ್ತಿದ್ದಾರೆ.

Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

When Prestige Is Gifted, Not Earned: The Padma Vibhushan Controversy Of Veerendra Heggade

ಧರ್ಮಸ್ಥಳದ ಪ್ರಕರಣಗಳಲ್ಲಿ ಸತ್ಯ ಸಾಯುವುದಿಲ್ಲ