ಬ್ಯಾಂಕ್‍ಗಳ ವಿಲೀನ: ಗಾತ್ರ ಹೆಚ್ಚಿದರೆ ಬ್ಯಾಂಕಿಂಗ್ ವ್ಯವಸ್ಥೆ ಬಲಗೊಳ್ಳುವುದೇ?
ನಮ್ಮ ಕರಾವಳಿಯ ರಾಷ್ಟ್ರೀಕೃತ ಕಾರ್ಪೊರೇಷನ್ ಬ್ಯಾಂಕ್, ವಿಜಯಾ ಬ್ಯಾಂಕ್ ಮತ್ತು ಸಿಂಡಿಕೇಟ್ ಬ್ಯಾಂಖ್ ವಿಲೀನಕ್ಕೆ ಬಲಿಯಾದವು. ಯಾರಿಗೇನು ಪ್ರಯೋಜನವಾಯಿತು?
.................
ಖುಲ್ಲಂಖುಲ್ಲಾ * ಬಿವಿಸೀ
ಸಾರ್ವಜನಿಕ ವಲಯದ ಬ್ಯಾಂಕ್‍ಗಳ ವಿಲೀನವನ್ನು ಸಾಮಾನ್ಯವಾಗಿ ಬ್ಯಾಂಕಿಂಗ್ ಕ್ಷೇತ್ರದ ಸುಧಾರಣೆಯ ಪ್ರಮುಖ ಹೆಜ್ಜೆಯಾಗಿ ಪರಿಗಣಿಸಲಾಗುತ್ತದೆ. ದೊಡ್ಡ ಬ್ಯಾಂಕ್‍ಗಳು ಹೆಚ್ಚು ಬಂಡವಾಳ ಹೊಂದಿರುತ್ತವೆ, ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಬಲ್ಲವು ಮತ್ತು ಆರ್ಥಿಕ ಬೆಳವಣಿಗೆಗೆ ವೇಗ ನೀಡಬಲ್ಲವು ಎಂಬ ವಾದವನ್ನು ಮುಂದಿಡಲಾಗುತ್ತದೆ. ಆದರೆ ಬ್ಯಾಂಕಿಂಗ್ ಕ್ಷೇತ್ರದ ಅನುಭವವನ್ನು ಗಮನಿಸಿದರೆ, ಬ್ಯಾಂಕ್‍ಗಳ ಗಾತ್ರ ಹೆಚ್ಚುವುದರಿಂದ ಮಾತ್ರ ಅವುಗಳ ಕಾರ್ಯಕ್ಷಮತೆ ಮತ್ತು ಹಣಕಾಸಿನ ಆರೋಗ್ಯ ಸುಧಾರಿಸುತ್ತದೆ ಎನ್ನುವುದು ಖಚಿತವಲ್ಲ. ಸಮಸ್ಯೆಯ ಮೂಲವನ್ನು ಸ್ಪರ್ಶಿಸದ ವಿಲೀನಗಳು ಹಲವು ಬಾರಿ ಕೇವಲ ಆಡಳಿತಾತ್ಮಕ ಬದಲಾವಣೆಯಾಗಿಯೇ ಉಳಿಯುತ್ತವೆ.
ಭಾರತದ ಬ್ಯಾಂಕಿಂಗ್ ವ್ಯವಸ್ಥೆಯ ಪ್ರಮುಖ ಸವಾಲು ಬ್ಯಾಂಕ್‍ಗಳ ಸಂಖ್ಯೆಯಲ್ಲ. ದುರ್ಬಲ ಆಡಳಿತ, ಸಾಲ ಮಂಜೂರಾತಿಯಲ್ಲಿನ ಲೋಪಗಳು, ಅಪಾಯವನ್ನು ಸರಿಯಾಗಿ ಅಂದಾಜಿಸದಿರುವುದು, ರಾಜಕೀಯ ಹಾಗೂ ಇತರ ಪ್ರಭಾವಗಳಿಂದ ತೆಗೆದುಕೊಳ್ಳುವ ನಿರ್ಧಾರಗಳು ಮತ್ತು ಸಮರ್ಪಕ ಮೇಲ್ವಿಚಾರಣೆಯ ಕೊರತೆಯೇ ಅನೇಕ ಬ್ಯಾಂಕ್‍ಗಳನ್ನು ಸಂಕಷ್ಟಕ್ಕೆ ತಳ್ಳಿವೆ. ಇಂತಹ ಪರಿಸ್ಥಿತಿಯಲ್ಲಿ ಎರಡು ಅಥವಾ ಮೂರು ಬ್ಯಾಂಕ್‍ಗಳನ್ನು ಒಂದಾಗಿಸಿದರೂ ಮೂಲಭೂತ ಸಮಸ್ಯೆಗಳು ಹಾಗೆಯೇ ಉಳಿಯುತ್ತವೆ.
ವಿಲೀನದ ಬಳಿಕ ಶಾಖೆಗಳು, ಸಿಬ್ಬಂದಿ, ತಂತ್ರಜ್ಞಾನ ವ್ಯವಸ್ಥೆಗಳು ಮತ್ತು ಆಡಳಿತಾತ್ಮಕ ರಚನೆಗಳನ್ನು ಏಕೀಕರಿಸುವುದು ದೊಡ್ಡ ಸವಾಲಾಗುತ್ತದೆ. ಈ ಪ್ರಕ್ರಿಯೆಗೆ ಸಾಕಷ್ಟು ಸಮಯ ಮತ್ತು ಸಂಪನ್ಮೂಲ ಬೇಕಾಗುತ್ತದೆ. ಪರಿಣಾಮವಾಗಿ, ಗ್ರಾಹಕ ಸೇವೆ, ಹೊಸ ಸಾಲಗಳ ಗುಣಮಟ್ಟ ಮತ್ತು ಅಪಾಯ ನಿರ್ವಹಣೆಯ ಕಡೆ ಗಮನ ಕಡಿಮೆಯಾಗುವ ಸಾಧ್ಯತೆಯೂ ಇದೆ. ವಿವಿಧ ಕಾರ್ಯಸಂಸ್ಕøತಿಗಳನ್ನು ಒಂದೇ ವ್ಯವಸ್ಥೆಯಲ್ಲಿ ಹೊಂದಿಸುವುದು ಸುಲಭದ ಕೆಲಸವಲ್ಲ.
ಅತಿದೊಡ್ಡ ಬ್ಯಾಂಕ್‍ಗಳು ಯಾವಾಗಲೂ ಸುರಕ್ಷಿತವಾಗಿರುತ್ತವೆ ಎನ್ನುವುದೂ ತಪ್ಪು ಕಲ್ಪನೆ. ಗಾತ್ರ ಹೆಚ್ಚಿದಂತೆ ಮೇಲ್ವಿಚಾರಣೆಯೂ ಸಂಕೀರ್ಣವಾಗುತ್ತದೆ. ದೊಡ್ಡ ಸಂಸ್ಥೆಗಳಲ್ಲಿನ ದೋಷಗಳು ಆರಂಭದಲ್ಲೇ ಪತ್ತೆಯಾಗದಿದ್ದರೆ, ನಂತರ ಅವುಗಳ ಪರಿಣಾಮ ಇಡೀ ಹಣಕಾಸು ವ್ಯವಸ್ಥೆಯ ಮೇಲೆ ಬೀಳಬಹುದು. ಹೀಗಾಗಿ ಬ್ಯಾಂಕ್‍ಗಳ ಬಲವನ್ನು ಅವುಗಳ ಗಾತ್ರದಿಂದಲ್ಲ, ಆಡಳಿತದ ಗುಣಮಟ್ಟದಿಂದ ಅಳೆಯಬೇಕು.
ಇನ್ನೊಂದು ಪ್ರಮುಖ ಪ್ರಶ್ನೆ ಎಂದರೆ ಸಾಲ ಮರುಪಾವತಿಸದ ಉದ್ದೇಶಪೂರ್ವಕ ಸುಸ್ತಿದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಬದಲು, ವಿಲೀನವನ್ನೇ ಪರಿಹಾರವಾಗಿ ಬಿಂಬಿಸುವ ಪ್ರವೃತ್ತಿ. ಕೆಟ್ಟ ಸಾಲಗಳ ಮೂಲ ಕಾರಣಗಳನ್ನು ನಿವಾರಿಸದೆ, ಹೊಣೆಗಾರಿಕೆಯನ್ನು ನಿಶ್ಚಯಿಸದೆ ಮತ್ತು ಪಾರದರ್ಶಕತೆಯನ್ನು ಹೆಚ್ಚಿಸದೆ ಬ್ಯಾಂಕ್‍ಗಳ ಆರ್ಥಿಕ ಸ್ಥಿತಿ ಸುಧಾರಿಸುವುದು ಕಷ್ಟ. ಪ್ರಾಮಾಣಿಕ ಸಾಲಗಾರರು ಮತ್ತು ಠೇವಣಿದಾರರಲ್ಲಿ ವಿಶ್ವಾಸ ಮೂಡಬೇಕಾದರೆ ನಿಯಮಗಳು ಎಲ್ಲರಿಗೂ ಸಮಾನವಾಗಿ ಅನ್ವಯವಾಗಬೇಕು.
ಬ್ಯಾಂಕಿಂಗ್ ಕ್ಷೇತ್ರದಲ್ಲಿ ನಿಜವಾದ ಸುಧಾರಣೆ ಎಂದರೆ ಸ್ವತಂತ್ರ ಹಾಗೂ ವೃತ್ತಿಪರ ನಿರ್ದೇಶಕ ಮಂಡಳಿಗಳು, ಪರಿಣಾಮಕಾರಿ ನಿಯಂತ್ರಣ, ಹಿರಿಯ ಅಧಿಕಾರಿಗಳ ಸ್ಪಷ್ಟ ಹೊಣೆಗಾರಿಕೆ, ಸಾಲ ಮಂಜೂರಾತಿಯಲ್ಲಿ ಸಂಪೂರ್ಣ ವೃತ್ತಿಪರತೆ ಮತ್ತು ರಾಜಕೀಯ ಹಸ್ತಕ್ಷೇಪಕ್ಕೆ ಕಡಿವಾಣ. ಬ್ಯಾಂಕ್‍ಗಳ ಸಂಖ್ಯೆಯನ್ನು ಕಡಿಮೆ ಮಾಡುವುದು ಅಥವಾ ಅವುಗಳ ಗಾತ್ರವನ್ನು ಹೆಚ್ಚಿಸುವುದು ಸಹಾಯಕ ಕ್ರಮವಾಗಬಹುದು. ಆದರೆ ಅದು ಗುರಿಯಲ್ಲ; ಉತ್ತಮ ಆಡಳಿತ ಮತ್ತು ಜವಾಬ್ದಾರಿಯುತ ಬ್ಯಾಂಕಿಂಗ್ ಸಂಸ್ಕೃತಿಯನ್ನು ನಿರ್ಮಿಸುವುದೇ ಅಂತಿಮ ಗುರಿಯಾಗಬೇಕು. ಆಗ ಮಾತ್ರ ಬ್ಯಾಂಕ್‍ಗಳ ವಿಲೀನವು ಕಾಗದದ ಮೇಲಿನ ಬದಲಾವಣೆಯಾಗಿ ಉಳಿಯದೆ, ದೇಶದ ಆರ್ಥಿಕ ವ್ಯವಸ್ಥೆಯನ್ನು ನಿಜವಾದ ಅರ್ಥದಲ್ಲಿ ಬಲಪಡಿಸುವ ಸುಧಾರಣೆಯಾಗಿ ಪರಿಣಮಿಸುತ್ತದೆ.
Comments
Post a Comment