ಬಾಂಗ್ಲಾ ವಲಸಿಗರ ಹುಡುಕಾಟ: ಉಳಿದ ಜಿಲ್ಲೆಗಳ ಮೌನ ಏಕೆ?
ಮಂಗಳೂರು ಪೊಲೀಸರು ಕಂಡಿದ್ದು, ಉಳಿದವರು ಕಾಣಲಿಲ್ಲವೇಕೆ?
ಇದ್ದುದು ಇದ್ದಹಾಗೆ * ಬಿವಿಸೀ
ಮಂಗಳೂರು ನಗರ ಪೆÇಲೀಸರು ಅಕ್ರಮವಾಗಿ ಭಾರತದಲ್ಲಿ ನೆಲೆಸಿದ್ದ ಬಾಂಗ್ಲಾದೇಶ ಮೂಲದ ವಲಸಿಗರನ್ನು ಮತ್ತೊಮ್ಮೆ ಪತ್ತೆಹಚ್ಚಿರುವುದು ಶ್ಲಾಘನೀಯ ಕ್ರಮ. ಇದು ಕೇವಲ ಕಾನೂನು ಜಾರಿಯ ವಿಷಯವಲ್ಲ; ರಾಷ್ಟ್ರದ ಆಂತರಿಕ ಭದ್ರತೆಗೂ ಸಂಬಂಧಿಸಿದ ಪ್ರಶ್ನೆಯಾಗಿದೆ. ಆದರೆ ಈ ಯಶಸ್ಸು ಮತ್ತೊಂದು ಪ್ರಶ್ನೆಯನ್ನು ಸಹ ಎತ್ತಿದೆ. ಅಕ್ರಮ ಬಾಂಗ್ಲಾದೇಶಿ ವಲಸಿಗರು ಕರ್ನಾಟಕದಲ್ಲಿ ಮಂಗಳೂರು ಮತ್ತು ಅದರ ಸುತ್ತಮುತ್ತ ಮಾತ್ರ ಇದ್ದಾರೆಯೇ? ಅಥವಾ ರಾಜ್ಯದ ಇತರ ನಗರಗಳಲ್ಲಿಯೂ ಇದ್ದು, ಅವರನ್ನು ಪತ್ತೆಹಚ್ಚುವ ಪ್ರಯತ್ನಗಳು ಸಮರ್ಪಕವಾಗಿ ನಡೆಯುತ್ತಿಲ್ಲವೇ?
ಇದುವರೆಗೆ ಮಂಗಳೂರು ಪೆÇಲೀಸರು ಎರಡು ಕಾರ್ಯಾಚರಣೆಗಳಲ್ಲಿ ಒಟ್ಟು 19 ಮಂದಿಯನ್ನು ಬಂಧಿಸಿದ್ದಾರೆ. ಈ ಸಂಖ್ಯೆ ದೊಡ್ಡದಾಗಿರದಿದ್ದರೂ, ಸಮಸ್ಯೆಯ ವ್ಯಾಪ್ತಿಯನ್ನು ಸೂಚಿಸುವ ಆರಂಭಿಕ ಸೂಚಕವಾಗಿ ಕಾಣಬಹುದು. ಸ್ಥಳೀಯವಾಗಿ ಹಲವು ವರ್ಷಗಳಿಂದ ನಿರ್ಮಾಣ, ಮೀನುಗಾರಿಕೆ, ಸಣ್ಣ ಕೈಗಾರಿಕೆ ಹಾಗೂ ಅಸಂಘಟಿತ ಕಾರ್ಮಿಕ ವಲಯಗಳಲ್ಲಿ ಅಕ್ರಮ ವಲಸಿಗರು ಕೆಲಸ ಮಾಡುತ್ತಿರುವ ಕುರಿತು ಮಾತುಗಳು ಕೇಳಿಬರುತ್ತಿವೆ. ಈ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ನಡೆದ ಕಾರ್ಯಾಚರಣೆಗಳು ಇತರ ಜಿಲ್ಲೆಗಳಿಗೂ ಮಾದರಿಯಾಗಬೇಕಾಗಿದೆ.
ಬೆಂಗಳೂರು, ಮೈಸೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಶಿವಮೊಗ್ಗ, ಕಲಬುರಗಿ ಸೇರಿದಂತೆ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಸಹ ಇಂತಹ ಅಕ್ರಮ ವಲಸಿಗರು ಇಲ್ಲವೆಂದು ಯಾರೂ ಹೇಳಲು ಸಾಧ್ಯವಿಲ್ಲ. ಹಾಗಿದ್ದರೆ ರಾಜ್ಯದ ಇತರ ಪೆÇಲೀಸ್ ಘಟಕಗಳು ಈ ವಿಷಯದಲ್ಲಿ ವಿಶೇಷ ಕಾರ್ಯಾಚರಣೆಗಳನ್ನು ಏಕೆ ಕೈಗೊಂಡಿಲ್ಲ ಎಂಬ ಪ್ರಶ್ನೆಗೆ ಸರ್ಕಾರ ಸ್ಪಷ್ಟ ಉತ್ತರ ನೀಡಬೇಕು. ಈಗಷ್ಟೇ ಸಿಂಧನೂರಿನಲ್ಲಿ ಕೆಲವು ಬಾಂಗ್ಲಾದೇಶಿ ವಲಸಿಗರ ಪತ್ತೆಯಾಗಿದೆ ಎಂದು ಗೊತ್ತಾಗಿದ್ದರೂ, ವಿವರಗಳು ದೊರಕಿಲ್ಲ. ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿ ನಾಗರಿಕರ ಬಗ್ಗೆ ಸರ್ಕಾರದ ಬಳಿ ಯಾವುದೇ ಅಂದಾಜಿದೆಯೇ? ಜಿಲ್ಲಾವಾರು ಪರಿಶೀಲನೆ ನಡೆದಿದೆಯೇ? ಎಷ್ಟು ಮಂದಿಯನ್ನು ಗುರುತಿಸಲಾಗಿದೆ? ಎಷ್ಟು ಮಂದಿಯ ವಿರುದ್ಧ ಕಾನೂನು ಕ್ರಮ ಆರಂಭಿಸಲಾಗಿದೆ? ಕೇಂದ್ರ ಸರ್ಕಾರದ ಸಂಸ್ಥೆಗಳೊಂದಿಗೆ ಯಾವ ಮಟ್ಟದ ಸಮನ್ವಯವಿದೆ? ಈ ಪ್ರಶ್ನೆಗಳಿಗೆ ಸರ್ಕಾರ ಉತ್ತರಿಸುವುದು ಸಾರ್ವಜನಿಕರ ಹಕ್ಕು.
ಇದೇ ವೇಳೆ, ರಾಜಕೀಯ ಉದ್ದೇಶಗಳಿಗಾಗಿ ಅಕ್ರಮ ವಲಸಿಗರ ವಿರುದ್ಧದ ಕ್ರಮವನ್ನು ಉದ್ದೇಶಪೂರ್ವಕವಾಗಿ ನಿಧಾನಗೊಳಿಸಲಾಗುತ್ತಿದೆ ಎಂಬ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿರುವ ಅನುಮಾನಗಳನ್ನೂ ಸರ್ಕಾರ ನಿರ್ಲಕ್ಷಿಸಬಾರದು. ಅಂತಹ ಆರೋಪಗಳಿಗೆ ಅತ್ಯುತ್ತಮ ಉತ್ತರ ರಾಜಕೀಯ ಹೇಳಿಕೆಗಳಲ್ಲ, ಪಾರದರ್ಶಕ ಮತ್ತು ರಾಜ್ಯವ್ಯಾಪಿ ಕಾನೂನು ಜಾರಿಯಾಗಿದೆ. ಕಾನೂನು ಎಲ್ಲರಿಗೂ ಒಂದೇ ಎಂಬುದನ್ನು ಸರ್ಕಾರ ತನ್ನ ಕಾರ್ಯಾಚರಣೆಯ ಮೂಲಕವೇ ಸಾಬೀತುಪಡಿಸಬೇಕು.
ಮಂಗಳೂರು ಪೆÇಲೀಸರು ತಮ್ಮ ಕರ್ತವ್ಯವನ್ನು ಭಾಗಶಃ ನಿರ್ವಹಿಸಿದ್ದಾರೆ. ಈಗ ಚೆಂಡು ಸರ್ಕಾರದ ಅಂಗಳದಲ್ಲಿದೆ. ರಾಜ್ಯದಾದ್ಯಂತ ಇದೇ ಬದ್ಧತೆಯನ್ನು ತೋರಿಸುವುದೇ, ಅಥವಾ ಮಂಗಳೂರಿನ ಕಾರ್ಯಾಚರಣೆಯನ್ನು ಪ್ರಚಾರದ ಸಾಧನೆಯಾಗಿ ಬಿಂಬಿಸಿ ಉಳಿದ ಜಿಲ್ಲೆಗಳ ಮೌನವನ್ನು ಮುಂದುವರಿಸುವುದೇ ಎಂಬುದನ್ನು ಸರ್ಕಾರವೇ ನಿರ್ಧರಿಸಬೇಕು. ಜನರು ಈಗ ಉತ್ತರಗಳನ್ನು ಬಯಸುತ್ತಿದ್ದಾರೆ; ಕೇವಲ ಭರವಸೆಗಳನ್ನು ಅಲ್ಲ.
ಈ ವಿಷಯದಲ್ಲಿ ಸರ್ಕಾರ ಪಾರದರ್ಶಕತೆ ತೋರಿಸಬೇಕಾಗಿದೆ. ರಾಜ್ಯ ಮಟ್ಟದಲ್ಲಿ ಸಮಗ್ರ ಸಮೀಕ್ಷೆ ನಡೆಸುವ ಉದ್ದೇಶವಿದೆಯೇ, ಎಲ್ಲಾ ಜಿಲ್ಲೆಗಳಿಗೆ ವಿಶೇಷ ನಿರ್ದೇಶನ ನೀಡಲಾಗಿದೆಯೇ, ಕೇಂದ್ರ ಸರ್ಕಾರದ ಸಂಬಂಧಿತ ಸಂಸ್ಥೆಗಳೊಂದಿಗೆ ಸಮನ್ವಯ ಹೇಗಿದೆ ಎಂಬುದನ್ನು ಜನರಿಗೆ ತಿಳಿಸಬೇಕು. ಕಾನೂನು ಎಲ್ಲೆಡೆ ಸಮಾನವಾಗಿ ಜಾರಿಯಾಗುತ್ತಿದೆ ಎಂಬ ವಿಶ್ವಾಸ ಮೂಡಿಸುವುದು ಪ್ರಜಾಪ್ರಭುತ್ವದ ಆಡಳಿತದ ಜವಾಬ್ದಾರಿಯಾಗಿದೆ.
ಮಂಗಳೂರು ಪೆÇಲೀಸರ ಕಾರ್ಯಾಚರಣೆ ಕೇವಲ ಪ್ರಶಂಸೆಗೆ ಸೀಮಿತವಾಗದೆ, ರಾಜ್ಯವ್ಯಾಪಿ ಅಭಿಯಾನಕ್ಕೆ ನಾಂದಿಯಾಗಬೇಕು. ಅಕ್ರಮ ವಲಸೆಯ ಪ್ರಶ್ನೆಯಲ್ಲಿ ಸರ್ಕಾರ ಸ್ಪಷ್ಟ ನೀತಿ, ಸಮಾನ ಜಾರಿ ಮತ್ತು ಪಾರದರ್ಶಕ ಮಾಹಿತಿಯ ಮೂಲಕ ಜನರ ವಿಶ್ವಾಸವನ್ನು ಬಲಪಡಿಸಬೇಕು. ನಾಗರಿಕರು ಶಂಕಿತ ಅಕ್ರಮ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರೆ ಅದನ್ನು ಕಾನೂನುಬದ್ಧವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು. ರಾಷ್ಟ್ರದ ಭದ್ರತೆ, ಕಾನೂನಿನ ಆಳ್ವಿಕೆ ಮತ್ತು ಮಾನವ ಹಕ್ಕುಗಳು - ಈ ಮೂರರ ನಡುವೆ ಸಮತೋಲನ ಕಾಯ್ದುಕೊಂಡಾಗ ಮಾತ್ರ ಈ ಸೂಕ್ಷ್ಮ ಸಮಸ್ಯೆಗೆ ಶಾಶ್ವತ ಮತ್ತು ನ್ಯಾಯಸಮ್ಮತ ಪರಿಹಾರ ಸಾಧ್ಯ.
Comments
Post a Comment