ಜನಾಂದೋಲನವನ್ನು ಅಪರಾಧೀಕರಿಸುವ ಉಡುಪಿ ಸಂಸದ ಕೋಟ ಪೂಜಾರಿಯ ಉಡಾಫೆಯ ರಾಜಕಾರಣ: ಬದಲಾಗದಿದ್ದರೆ ತಕ್ಕ ಶಾಸ್ತಿ!
ನೇರಾನೇರ * ಬಿವಿಸೀ
ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಪ್ರಜಾಪ್ರಭುತ್ವದಲ್ಲಿ ಜನಾಂದೋಲನಗಳು ಕಂಡಾಗಲೆಲ್ಲ ಅದರಲ್ಲಿ `ಅಪರಾಧಿಗಳು', 'ಸಮಾಜ ಕಂಟಕರು' ಮತ್ತು 'ಭಯೋತ್ಪಾದಕರು' ಕಾಣಿಸುವುದು ಈಗ ಅಭ್ಯಾಸವಾಗಿ ಬಿಟ್ಟಿದೆ. ದೆಹಲಿಯ ಜಂತರ್ ಮಂತರ್‍ನಲ್ಲಿ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ `ಭಯೋತ್ಪಾದಕ' ಪಟ್ಟ ಕಟ್ಟಿರುವುದು ಅವರ ಬೇಜವಾಬ್ದಾರಿ ಹಾಗೂ ಆತ್ಮರತಿಯ ರಾಜಕಾರಣದ ಅತ್ಯಂತ ಕೆಟ್ಟ ನಿದರ್ಶನ. ಜನರಿಂದ ಆಯ್ಕೆಯಾದ ಒಬ್ಬ ಪ್ರತಿನಿಧಿ ಜನಾಕ್ರೋಶಕ್ಕೆ ಸ್ಪಂದಿಸುವುದನ್ನು ಬಿಟ್ಟು, ಪ್ರತಿಭಟನಾಕಾರರನ್ನು ಕ್ರಿಮಿನಲ್‍ಗಳಂತೆ ಬಿಂಬಿಸುತ್ತಿರುವುದು ನಾಚಿಕೆಗೇಡು.
ಇದು ಶ್ರೀನಿವಾಸ ಪೂಜಾರಿಯವರ ದಿಢೀರ್ ಹೇಳಿಕೆಯಲ್ಲ; ಇದೊಂದು ಸ್ವಾರ್ಥಪೂರಿತ ರಾಜಕೀಯ ತಂತ್ರಗಾರಿಕೆ. ಈ ಹಿಂದೆ ಧರ್ಮಸ್ಥಳದ ಅಸಹಜ ಸಾವುಗಳ ಹಾಗೂ ಸಮೂಹ ಹತ್ಯೆಗಳ ವಿರುದ್ಧ ಧ್ವನಿಯೆತ್ತಿ, ನ್ಯಾಯಕ್ಕಾಗಿ ಹೋರಾಡಿದ ನಾಗರಿಕರನ್ನು ಮತ್ತು ಸಂಘಟನೆಗಳನ್ನು ಇದೇ ಪೂಜಾರಿ `ವಿದೇಶಿ ಫಂಡ್ ಪಡೆದ ಅಪರಾಧಿಗಳು' ಎಂದು ಹಂಗಿಸಿದ್ದರು. ಈಗ ದೆಹಲಿಯ ವಿದ್ಯಾರ್ಥಿ ಹೋರಾಟಕ್ಕೂ ಅದೇ ಹಳೆಯ, ಕಿಲುಬು ಹಿಡಿದ ತಂತ್ರವನ್ನು ಬಳಸುತ್ತಿದ್ದಾರೆ. ಅವರು ಇಂತಹ ಉದ್ರೇಕಕಾರಿ ಹೇಳಿಕೆಗಳನ್ನು ನೀಡುವುದು ದೆಹಲಿಯ ಹೈಕಮಾಂಡ್ ಕಣ್ಣಿಗೆ ಬಿದ್ದು ಕೇಂದ್ರ ಸಂಪುಟದಲ್ಲಿ ಮಂತ್ರಿಗಿರಿ ಗಿಟ್ಟಿಸಿಕೊಳ್ಳುವ ಹಪಾಹಪಿಯಿಂದ ಹೊರತು ಬೇರೇನೂ ಅಲ್ಲ!
ತಾವೇ ಸ್ವತಃ ಶೋಷಿತ ಮತ್ತು ಹಿಂದುಳಿದ ವರ್ಗದಿಂದ ಬಂದವರಾಗಿಯೂ, ವ್ಯವಸ್ಥೆಯ ಕಿರುಕುಳಕ್ಕೆ ಒಳಗಾದ ಸಂತ್ರಸ್ತರ ಬಗ್ಗೆ ಇವರಿಗೆ ಎಳ್ಳಷ್ಟೂ ಕರುಣೆ ಇಲ್ಲದಿರುವುದು ಅತ್ಯಂತ ಖೇದಕರ. ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಅಥವಾ ಬಡವರ ಪರ ಧ್ವನಿಯೆತ್ತಲು ಎಂದೂ ಶ್ರಮಿಸದ ಪೂಜಾರಿ, ಶೋಷಕ ವ್ಯವಸ್ಥೆಯ ಗುಲಾಮರಂತೆ ವರ್ತಿಸುತ್ತಿದ್ದಾರೆ. ತಮ್ಮ ಅಧಿಕಾರದ ಆಸೆಗೆ ಇಡೀ ನಾಗರಿಕ ಸಮಾಜವನ್ನೇ ದೇಶದ್ರೋಹಿಗಳಂತೆ ಬಿಂಬಿಸುವ ಇವರ ತರ್ಕರಹಿತ ಹೇಳಿಕೆಗಳು ಇಂದು ಕರಾವಳಿಯ ಜನತೆಯಲ್ಲೇ ಹಾಸ್ಯಾಸ್ಪದವಾಗಿ ಮಾರ್ಪಟ್ಟಿವೆ.
ಸ್ಪಷ್ಟ ಎಚ್ಚರಿಕೆ
ಕೋಟ ಶ್ರೀನಿವಾಸ ಪೂಜಾರಿಯವರೇ, ಪ್ರಜಾಪ್ರಭುತ್ವದಲ್ಲಿ ಜನಪ್ರತಿನಿಧಿಯಾದವನು ಸಾರ್ವಜನಿಕರ ಅಹವಾಲುಗಳನ್ನು ಆಲಿಸಿ ವ್ಯವಸ್ಥೆಯನ್ನು ತಿದ್ದಬೇಕೇ ಹೊರತು, ಹಕ್ಕಿಗಾಗಿ ಹೋರಾಡುವ ವಿದ್ಯಾರ್ಥಿಗಳು ಮತ್ತು ನಾಗರಿಕರ ಮೇಲೆ ದೇಶದ್ರೋಹದ ಪಟ್ಟ ಕಟ್ಟುವುದಲ್ಲ. ದೆಹಲಿ ವರಿಷ್ಠರನ್ನು ಒಲಿಸಲು ಕ್ರೂರ ವ್ಯವಸ್ಥೆಯಿಂದ ಕಂಗೆಟ್ಟು ಸುಧಾರಣೆಗಾಗಿ ಬೀದಿಗಿಳಿದ ಜನರನ್ನೇ ಹೀಯಾಳಿಸುವ ನಿಮ್ಮ ಈ ನಾಟಕೀಯ ರಾಜಕಾರಣ ಇನ್ಮುಂದೆ ನಡೆಯುವುದಿಲ್ಲ. ಅಧಿಕಾರವೆಂಬುದು ಜನ ಕೊಟ್ಟದ್ದು, ಹೈಕಮಾಂಡ್ ನೀಡಿದ ಭಿಕ್ಷೆಯಲ್ಲ! ತಕ್ಷಣವೇ ನಿಮ್ಮ ಮೌಲ್ಯಗಳನ್ನು ತಿದ್ದಿಕೊಂಡು, ಜನಪರ ಹೋರಾಟಗಳಿಗೆ ಗೌರವ ಕೊಡುವುದನ್ನು ಕಲಿಯಿರಿ. ಇಲ್ಲದಿದ್ದರೆ ಮುಂಬರುವ ಚುನಾವಣೆಯಲ್ಲಿ ಕರಾವಳಿಯ ಜಾಗೃತ ಮತದಾರರು ನಿಮಗೆ ಸರಿಯಾದ ಪಾಠ ಕಲಿಸುವುದು ನಿಶ್ಚಿತ.
Comments
Post a Comment