ವಿಕಸಿತ ಭಾರತ ಶಿಕ್ಷಣ ವಿಧೇಯಕಕ್ಕೆ ದೇಶಾದ್ಯಂತ ತೀವ್ರ ವಿರೋಧ
ವಿಶ್ಲೇಷಣೆ * ಬಿವಿಸೀ
ಕೇಂದ್ರ ಸರ್ಕಾರವು ದೇಶದ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಪ್ರಮುಖ ಆಡಳಿತಾತ್ಮಕ ಸುಧಾರಣೆಗಳನ್ನು ತರುವ ಉದ್ದೇಶದಿಂದ ವಿಕಸಿತ ಭಾರತ ಶಿಕ್ಷಣ ಅಧಿಷ್ಠಾನ ವಿಧೇಯಕವನ್ನು ಜಾರಿಗೆ ತರಲು ಮುಂದಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿ 2020ಡಿ ಅಂಗವಾಗಿ ಪ್ರಸ್ತಾಪಿಸಲಾಗಿರುವ ಈ ವಿಧೇಯಕವು ಪ್ರಸ್ತುತ ದೇಶದಲ್ಲಿ ಜಾರಿಯಲ್ಲಿರುವ ಬಹು-ನಿಯಂತ್ರಣ ವ್ಯವಸ್ಥೆಯನ್ನು ರದ್ದುಗೊಳಿಸಿ, ಸಂಪೂರ್ಣ ಉನ್ನತ ಶಿಕ್ಷಣ ಕ್ಷೇತ್ರಕ್ಕೆ ಒಂದೇ ಒಡೆತನದ ಉನ್ನತ ಪ್ರಾಧಿಕಾಧಿಕಾರವನ್ನು ರಚಿಸುವ ಗುರಿಯನ್ನು ಹೊಂದಿದೆ. ಈ ನೂತನ ಕಾಯ್ದೆಯು ಈಗ ಪ್ರತ್ಯೇಕವಾಗಿ ಕಾರ್ಯನಿರ್ವಹಿಸುತ್ತಿರುವ ವಿಶ್ವವಿದ್ಯಾಲಯ ಧನಸಹಾಯ ಆಯೋಗ, ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ಹಾಗೂ ರಾಷ್ಟ್ರೀಯ ಶಿಕ್ಷಕ ಶಿಕ್ಷಣ ಮಂಡಳಿಗಳನ್ನು ಸಂಯೋಜಿಸಿ ಒಂದೇ ಮೇಲ್ವಿಚಾರಣಾ ಸಂಸ್ಥೆಯ ಅಡಿಯಲ್ಲಿ ತರಲಿದೆ. ನೂತನವಾಗಿ ರಚನೆಯಾಗಲಿರುವ ಈ ಅಧಿಷ್ಠಾನದ ಅಡಿಯಲ್ಲಿ ವಿವಿಧ ಶೈಕ್ಷಣಿಕ ಸಂಸ್ಥೆಗಳ ಕಾರ್ಯಾಚರಣೆಯ ನಿಯಂತ್ರಣ, ಶೈಕ್ಷಣಿಕ ಗುಣಮಟ್ಟದ ಮೌಲ್ಯಮಾಪನ ಹಾಗೂ ಶಿಕ್ಷಣದ ಅರ್ಹತಾ ಮಾನದಂಡಗಳನ್ನು ನಿಗದಿಪಡಿಸಲು ಮೂರು ಪ್ರತ್ಯೇಕ ವಿಶೇಷ ಪರಿಷತ್ತುಗಳು ಕಾರ್ಯನಿರ್ವಹಿಸಲಿವೆ. ಶಿಕ್ಷಣ ಕ್ಷೇತ್ರದಲ್ಲಿನ ಅನಗತ್ಯ ನಿಯಮಗಳ ಗೊಂದಲ ನಿವಾರಿಸಿ, ಪಾರದರ್ಶಕತೆ ಹೆಚ್ಚಿಸುವುದು ಮತ್ತು ಶಿಕ್ಷಣ ಸಂಸ್ಥೆಗಳ ವಾಣಿಜ್ಯೀಕರಣವನ್ನು ತಡೆಯುವುದು ಕೇಂದ್ರ ಸರ್ಕಾರದ ಮುಖ್ಯ ಉದ್ದೇಶವಾಗಿದೆ ಎಂದು ಸ್ಪಷ್ಟಪಡಿಸಲಾಗಿದೆ.
ಆದರೆ ಈ ಹೊಸ ಮಸೂದೆಯು ದೇಶಾದ್ಯಂತ ಶೈಕ್ಷಣಿಕ ಕ್ಷೇತ್ರದಲ್ಲಿ ಹಾಗೂ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆ ಮತ್ತು ವಿರೋಧಕ್ಕೆ ಕಾರಣವಾಗಿದೆ. ನೂತನ ವ್ಯವಸ್ಥೆಯು ವಿಶ್ವವಿದ್ಯಾಲಯಗಳ ಸ್ವಾಯತ್ತತೆಯನ್ನು ಕಸಿದುಕೊಳ್ಳುತ್ತದೆ ಮತ್ತು ರಾಜ್ಯಗಳ ಒಕ್ಕೂಟ ವ್ಯವಸ್ಥೆಯ ಹಕ್ಕುಗಳಿಗೆ ನೇರ ಧಕ್ಕೆ ತರುತ್ತದೆ ಎಂದು ವಿರೋಧ ಪಕ್ಷಗಳು, ವಿವಿಧ ರಾಜ್ಯ ಸರ್ಕಾರಗಳು ಹಾಗೂ ಶೈಕ್ಷಣಿಕ ತಜ್ಞರು ಆರೋಪಿಸಿದ್ದಾರೆ. ಭಾರತೀಯ ಸಂವಿಧಾನದ ಪ್ರಕಾರ ಶಿಕ್ಷಣವು ಕೇಂದ್ರ ಮತ್ತು ರಾಜ್ಯಗಳ ಜಂಟಿ ಪಟ್ಟಿಯಲ್ಲಿರುವ ವಿಷಯವಾಗಿದ್ದರೂ, ಈ ವಿಧೇಯಕವು ರಾಜ್ಯ ಸರ್ಕಾರಗಳ ಅಧಿಕಾರವನ್ನು ಕುಗ್ಗಿಸಿ ಕೇಂದ್ರ ಸರ್ಕಾರದ ಹಿಡಿತವನ್ನು ಅತಿಯಾಗಿ ಹೆಚ್ಚಿಸುತ್ತದೆ ಎಂಬ ಆತಂಕ ವ್ಯಕ್ತವಾಗಿದೆ. ಈ ಪ್ರಾಧಿಕಾರದ ಮುಖ್ಯಸ್ಥರು, ಸದಸ್ಯರು ಹಾಗೂ ನಿರ್ವಾಹಕರ ನೇಮಕಾತಿಯಲ್ಲಿ ಕೇಂದ್ರ ಸರ್ಕಾರವೇ ಪ್ರಮುಖ ಹಾಗೂ ಅಂತಿಮ ನಿರ್ಧಾರಗಳನ್ನು ತೆಗೆದುಕೊಳ್ಳುವುದರಿಂದ ಶೈಕ್ಷಣಿಕ ಸಂಸ್ಥೆಗಳ ಸ್ವತಂತ್ರ ನಿರ್ಧಾರ ಕೈಗೊಳ್ಳುವ ಸಾಮಥ್ರ್ಯಕ್ಕೆ ಕಂಠಕವಾಗಲಿದೆ ಎಂದು ವಿರೋಧ ವ್ಯಕ್ತಪಡಿಸಲಾಗಿದೆ.
ಆಂಧ್ರಪ್ರದೇಶ, ಕೇರಳ, ಮಧ್ಯಪ್ರದೇಶ ಹಾಗೂ ಮೇಘಾಲಯ ಸೇರಿದಂತೆ ಹಲವು ರಾಜ್ಯಗಳು ಈ ಕೇಂದ್ರೀಕೃತ ಆಡಳಿತ ಮಾದರಿಗೆ ತಮ್ಮ ತೀವ್ರ ಖಂಡನೆಯನ್ನು ವ್ಯಕ್ತಪಡಿಸಿವೆ. ಪ್ರಮುಖವಾಗಿ ಕೇಂದ್ರ ಆಡಳಿತಾರೂಢ ಒಕ್ಕೂಟದ ಪ್ರಮುಖ ಭಾಗವಾಗಿರುವ ತೆಲುಗು ದೇಶಂ ಪಕ್ಷದ ಆಡಳಿತವಿರುವ ಆಂಧ್ರಪ್ರದೇಶವೂ ಈ ಮಸೂದೆಯನ್ನು ವಿರೋಧಿಸಿರುವುದು ಪ್ರಮುಖ ರಾಜಕೀಯ ಬೆಳವಣಿಗೆ. ಇದರ ಜೊತೆಗೆ ದೇಶದ ಅತ್ಯುನ್ನತ ತಂತ್ರಜ್ಞಾನ ಹಾಗೂ ನಿರ್ವಹಣಾ ಸಂಸ್ಥೆಗಳಾದ ಭಾರತೀಯ ತಂತ್ರಜ್ಞಾನ ಸಂಸ್ಥೆಗಳು, ಭಾರತೀಯ ನಿರ್ವಹಣಾ ಸಂಸ್ಥೆಗಳು ಮತ್ತು ಭಾರತೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗಳು ತಮ್ಮನ್ನು ಈ ನೂತನ ಕಾಯ್ದೆಯ ನಿಯಂತ್ರಣಗಳಿಂದ ಸಂಪೂರ್ಣವಾಗಿ ವಿನಾಯಿತಿ ನೀಡಿ ಹೊರಗಿಡಬೇಕೆಂದು ಜಂಟಿ ಸಂಸದೀಯ ಸಮಿತಿಗೆ ಮನವಿ ಮಾಡಿವೆ. ಉನ್ನತ ಶಿಕ್ಷಣ ಕ್ಷೇತ್ರಕ್ಕೆ ಅಗತ್ಯವಿರುವ ಆರ್ಥಿಕ ಸಹಕಾರ ಹಾಗೂ ಶೈಕ್ಷಣಿಕ ಮಾರ್ಗದರ್ಶನ ನೀಡುವ ಬದಲು, ವಿಶ್ವವಿದ್ಯಾಲಯಗಳ ದಿನನಿತ್ಯದ ಆಡಳಿತ ಮತ್ತು ಶೈಕ್ಷಣಿಕ ನಿರ್ಧಾರಗಳಲ್ಲಿ ಕೇಂದ್ರ ಸರ್ಕಾರವು ಅನಗತ್ಯವಾಗಿ ಹಸ್ತಕ್ಷೇಪ ಮಾಡುತ್ತಿದೆ ಎಂಬ ಆರೋಪಗಳು ಬಲವಾಗಿ ಕೇಳಿಬರುತ್ತಿವೆ.
Comments
Post a Comment