ಜಿರಳೆಗಳ ಮುತ್ತಿಗೆಗೆ ಕಾಯುತ್ತಿದೆ ಭ್ರಷ್ಟಾಚಾರದ ಆಲೆಮನೆಯಾದ ಕೆಪಿಎಸ್‍ಸಿ

 ಕೆಪಿಎಸ್‍ಸಿ ಕೇವಲ ನೇಮಕಾತಿ ನಡೆಸುವ ಕಚೇರಿಯಲ್ಲ; ಅದು ಕರ್ನಾಟಕ ಆಡಳಿತದ ಹೆರಿಗೆಮನೆ

...........

* ಬಿವಿಸೀ

ಸಂವಿಧಾನದ 315ನೇ ವಿಧಿಯಡಿ ಸ್ಥಾಪಿತವಾಗಿರುವ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‍ಸಿ) ರಾಜ್ಯದ ಅತ್ಯಂತ ಮುಖ್ಯ ಸಂವಿಧಾನಾತ್ಮಕ ಸಂಸ್ಥೆಗಳಲ್ಲಿ ಒಂದು. ರಾಜ್ಯದ ಆಡಳಿತಕ್ಕೆ ಅತ್ಯುತ್ತಮ ಪ್ರತಿಭೆಗಳನ್ನು ಆಯ್ಕೆ ಮಾಡಿ ಕಳುಹಿಸುವ ಹೊಣೆ ಈ ಸಂಸ್ಥೆಯದು. ಅಧ್ಯಕ್ಷರು ಮತ್ತು ಸದಸ್ಯರನ್ನು ಒಳಗೊಂಡಿರುವ ಈ ಆಯೋಗವು ಸರ್ಕಾರದ ಉದ್ಯೋಗಗಳಿಗೆ ನ್ಯಾಯಸಮ್ಮತ, ಪಾರದರ್ಶಕ ಮತ್ತು ಅರ್ಹತೆಯಾಧಾರಿತ ನೇಮಕಾತಿ ನಡೆಸಬೇಕಾಗಿದೆ. ಆದರೆ ಇಂದು ಕರ್ನಾಟಕದ ಜನಸಾಮಾನ್ಯರ ಮನಸ್ಸಿನಲ್ಲಿ ಕೆಪಿಎಸ್‍ಸಿ ಎಂದರೆ ಪ್ರತಿಭೆಯ ಪ್ರತೀಕವಲ್ಲ, ಭ್ರಷ್ಟಾಚಾರದ ಪ್ರತೀಕ ಎಂಬ ಭಾವನೆ ಮೂಡಿರುವುದು ರಾಜ್ಯಕ್ಕೆ ಅತ್ಯಂತ ದೊಡ್ಡ ಅವಮಾನ. ಪರಿಸ್ಥಿತಿ ಜಿರಳೆಗಳನ್ನು ಆಹ್ವಾನಿಸುತ್ತಿದೆ. 

ಇತ್ತೀಚಿನ ಬೆಳವಣಿಗೆಗಳು ಈ ಅನುಮಾನವನ್ನು ಮತ್ತಷ್ಟು ಗಾಢಗೊಳಿಸಿವೆ. ರಾಜ್ಯಪಾಲರು ಭ್ರಷ್ಟ ಕೆಪಿಎಸ್‍ಸಿ ಅಧ್ಯಕ್ಷರನ್ನು ಅಮಾನತುಗೊಳಿಸಿ, ಸಂವಿಧಾನಾತ್ಮಕ ಪ್ರಕ್ರಿಯೆಯಡಿ ಮುಂದಿನ ತನಿಖೆಗೆ ಶಿಫಾರಸು ಮಾಡಿರುವುದು ಸಾಮಾನ್ಯ ಆಡಳಿತಾತ್ಮಕ ಕ್ರಮವಲ್ಲ. ಇದು ಕರ್ನಾಟಕದ ಆಡಳಿತ ವ್ಯವಸ್ಥೆಯ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸುವ ಅಪರೂಪದ ಬೆಳವಣಿಗೆಯಾಗಿದೆ. ಆರೋಪಗಳು ಅಂತಿಮವಾಗಿ ಸಾಬೀತಾಗಬೇಕಿರುವುದು ಸತ್ಯ. ಆದರೆ ಇಂತಹ ಕ್ರಮ ಕೈಗೊಳ್ಳುವ ಹಂತಕ್ಕೆ ಪರಿಸ್ಥಿತಿ ತಲುಪಿರುವುದೇ ಎಷ್ಟು ಗಂಭೀರ ಎಂಬುದಕ್ಕೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇಕಿಲ್ಲ. 

ಇಂದು ಕರ್ನಾಟಕದ ನಗರದಿಂದ ಹಳ್ಳಿವರೆಗೆ ಸರ್ಕಾರಿ ಉದ್ಯೋಗಾಕಾಂಕ್ಷಿಗಳ ನಡುವೆ ಒಂದೇ ಮಾತು ಕೇಳಿಬರುತ್ತಿದೆ. ಕೆಪಿಎಸ್‍ಸಿಯ ಕೆಲವು ಉನ್ನತ ಹುದ್ದೆಗಳ ನೇಮಕಾತಿಗೆ ರೂ 50 ಲಕ್ಷದಿಂದ ರೂ 1 ಕೋಟಿ, ಕೆಲವೊಮ್ಮೆ ಅದಕ್ಕಿಂತಲೂ ಹೆಚ್ಚಿನ ಲಂಚದ ಬೇಡಿಕೆ ಇರುತ್ತದೆ ಎಂಬ ಗಂಭೀರ ಆರೋಪಗಳನ್ನು ಅಭ್ಯರ್ಥಿಗಳೇ ಬಹಿರಂಗವಾಗಿ ಹೇಳುತ್ತಿದ್ದಾರೆ. ಇಂತಹ ಆರೋಪಗಳು ಇಡೀ ರಾಜ್ಯದಲ್ಲಿ ಸಾರ್ವಜನಿಕ ನಂಬಿಕೆಯಾಗಿ ಬೆಳೆದಿರುವುದೇ ಕೆಪಿಎಸ್‍ಸಿಯ ನೈತಿಕ ಪತನದ ಭೀಕರ ಚಿತ್ರಣ. ಒಂದು ಸಂವಿಧಾನಾತ್ಮಕ ಸಂಸ್ಥೆಯ ಬಗ್ಗೆ ಜನರು ಹೀಗೆ ಮಾತನಾಡುವ ಪರಿಸ್ಥಿತಿ ಬಂದಿದ್ದರೆ, ಅದು ಕೇವಲ ವದಂತಿಯ ಸಮಸ್ಯೆಯಲ್ಲ; ವಿಶ್ವಾಸ ಸಂಪೂರ್ಣ ಕುಸಿದಿರುವ ಸಂಕೇತ.

ಅತ್ಯಂತ ಭಯಾನಕ ಪ್ರಶ್ನೆಯೆಂದರೆ ಕೋಟ್ಯಂತರ ರೂಪಾಯಿ ಕೊಟ್ಟು ಸರ್ಕಾರಿ ಹುದ್ದೆ ಪಡೆದಿದ್ದಾನೆ ಎಂಬ ಅನುಮಾನದಲ್ಲಿರುವ ವ್ಯಕ್ತಿಯಿಂದ ಪ್ರಾಮಾಣಿಕ ಆಡಳಿತವನ್ನು ಹೇಗೆ ನಿರೀಕ್ಷಿಸಬೇಕು? ಉದ್ಯೋಗವೇ ಹೂಡಿಕೆಯಾಗಿದ್ದರೆ, ಸಾರ್ವಜನಿಕ ಸೇವೆ ನಂತರ ಲಾಭದ ವ್ಯವಹಾರವಾಗುವ ಅಪಾಯ ತಪ್ಪದು. ಆಗ ಭ್ರಷ್ಟಾಚಾರ ಕಚೇರಿಯಲ್ಲಿ ಆರಂಭವಾಗುವುದಿಲ್ಲ; ನೇಮಕಾತಿ ಆದೇಶ ಹೊರಬೀಳುವ ಕ್ಷಣದಲ್ಲೇ ಆರಂಭವಾಗುತ್ತದೆ. ನಂತರ ಲಂಚ, ಕಮಿಷನ್, ದುರುಪಯೋಗ ಮತ್ತು ಅಧಿಕಾರದ ವ್ಯಾಪಾರ ಹೆಚ್ಚುತ್ತಿದೆ ಎಂದು ಅಳುವುದಕ್ಕೆ ಯಾವುದೇ ನೈತಿಕ ಹಕ್ಕು ಸರ್ಕಾರಕ್ಕೂ ಸಮಾಜಕ್ಕೂ ಉಳಿಯುವುದಿಲ್ಲ.

ಇದು ಒಬ್ಬ ಅಧ್ಯಕ್ಷರ ವೈಫಲ್ಯವೇ? ಕೆಲ ಸದಸ್ಯರ ತಪ್ಪೇ? ಅಥವಾ ವರ್ಷಗಳಿಂದ ಕೆಪಿಎಸ್‍ಸಿಯನ್ನು ರಾಜಕೀಯ ಪ್ರಭಾವ, ಶಿಫಾರಸು, ಮಧ್ಯವರ್ತಿಗಳ ಜಾಲ ಮತ್ತು ಅಧಿಕಾರದ ದುರುಪಯೋಗದಿಂದ ಕಲುಷಿತಗೊಳಿಸಿದ ಸಂಪೂರ್ಣ ವ್ಯವಸ್ಥೆಯ ವೈಫಲ್ಯವೇ? ಈ ಪ್ರಶ್ನೆಗೆ ಉತ್ತರ ಹುಡುಕಲೇಬೇಕು. 

ಕೆಪಿಎಸ್‍ಸಿ ಕೇವಲ ನೇಮಕಾತಿ ನಡೆಸುವ ಕಚೇರಿಯಲ್ಲ; ಅದು ಕರ್ನಾಟಕದ ಆಡಳಿತದ ಹೆರಿಗೆಮನೆ. ಅಲ್ಲಿಯೇ ಭ್ರಷ್ಟಾಚಾರದ ವಿಷಬೀಜ ಬಿತ್ತಿದರೆ, ಮುಂದೆ ಪ್ರಾಮಾಣಿಕ ಅಧಿಕಾರಿಗಳ ಬೆಳೆ ಬೆಳೆಯುತ್ತದೆ ಎಂದು ನಿರೀಕ್ಷಿಸುವುದು ಆತ್ಮವಂಚನೆ. ಲಕ್ಷಾಂತರ ಯುವಕರು ಹಗಲು-ರಾತ್ರಿ ಓದಿ ಪರೀಕ್ಷೆ ಬರೆಯುವಾಗ, ಅವರ ಎದುರು ಹಣ, ಪ್ರಭಾವ ಮತ್ತು ದಲ್ಲಾಳಿಗಳ ನೆರಳು ನಿಂತಿದೆ ಎಂಬ ಭಾವನೆ ಮೂಡಿದ ಕ್ಷಣವೇ ಪ್ರಜಾಪ್ರಭುತ್ವ ಸೋಲುತ್ತದೆ.

ಈ ಹಗರಣಕ್ಕೆ ಕೇವಲ ತನಿಖೆ ಸಾಕಾಗುವುದಿಲ್ಲ; ಕೆಪಿಎಸ್‍ಸಿಯ ಸಂಪೂರ್ಣ ವ್ಯವಸ್ಥೆಯ ಶಸ್ತ್ರಚಿಕಿತ್ಸೆ ಅಗತ್ಯ. ಪ್ರತಿಯೊಂದು ನೇಮಕಾತಿಯೂ ಸಾರ್ವಜನಿಕ ಪರಿಶೀಲನೆಗೆ ಒಳಪಡುವಷ್ಟು ಪಾರದರ್ಶಕವಾಗಬೇಕು. ರಾಜಕೀಯ ಹಸ್ತಕ್ಷೇಪಕ್ಕೆ ಶಾಶ್ವತ ಬೀಗ ಹಾಕಬೇಕು. ತಪ್ಪಿತಸ್ಥರು ಯಾರೇ ಆಗಿರಲಿ, ಅವರ ಹುದ್ದೆ, ಪ್ರಭಾವ ಅಥವಾ ಸಂಪರ್ಕವನ್ನು ಲೆಕ್ಕಿಸದೆ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ಇಲ್ಲವಾದರೆ ಕರ್ನಾಟಕದ ಯುವಜನತೆ ಪರೀಕ್ಷಾ ಹಾಲ್‍ಗೆ ಉತ್ತರಪತ್ರಿಕೆ ತೆಗೆದುಕೊಂಡು ಹೋಗುವುದಿಲ್ಲ; ತಮ್ಮ ಕನಸುಗಳ ಅಂತ್ಯಕ್ರಿಯೆಗೆ ಸಾಕ್ಷಿಯಾಗಲು ಹೋಗುವ ದುಃಸ್ಥಿತಿ ಎದುರಾಗುತ್ತದೆ.

Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

When Prestige Is Gifted, Not Earned: The Padma Vibhushan Controversy Of Veerendra Heggade

ಧರ್ಮಸ್ಥಳದ ಪ್ರಕರಣಗಳಲ್ಲಿ ಸತ್ಯ ಸಾಯುವುದಿಲ್ಲ