ಚೀನಾದಿಂದ ಭಾರತದ ಬೌದ್ಧ ಪರಂಪರೆಗೆ ಸವಾಲು
* ವಿಶ್ಲೇಷಣೆ
ಹದಿನಾಲ್ಕನೇ ದಲೈಲಾಮಾ ಅವರ ಉತ್ತರಾಧಿಕಾರದ ಪ್ರಶ್ನೆ ಹತ್ತಿರ ಬರುತ್ತಿದ್ದಂತೆ ಹಿಮಾಲಯದ ಸುತ್ತಲಿನ ಆಧ್ಯಾತ್ಮಿಕ ಮತ್ತು ರಾಜಕೀಯ ಕಣವು ತೀವ್ರಗೊಳ್ಳುತ್ತಿದೆ. ಇದೀಗ ಭೂಪ್ರದೇಶದ ಜಗಳದ ಜೊತೆಗೆ ಧರ್ಮವನ್ನು ಕೂಡ ಒಂದು ಶಕ್ತಿಯ ಆಯುಧವಾಗಿ ಚೀನಾ ಮತ್ತು ಭಾರತ ಬಳಸುತ್ತಿವೆ. ಬೌದ್ಧ ಧರ್ಮದ ಮೂಲ ಭಾರತದಲ್ಲಿದ್ದರೂ, ಜಾಗತಿಕವಾಗಿ ಬೌದ್ಧ ಪರಂಪರೆಯ ಮುಂಚೂಣಿ ನಾಯಕತ್ವವನ್ನು ತಾನೇ ವಹಿಸಿಕೊಳ್ಳಲು ಚೀನಾ ದೊಡ್ಡ ಪ್ರಯತ್ನ ನಡೆಸುತ್ತಿದೆ.
ಕಳೆದ ಕೆಲವು ವರ್ಷಗಳಿಂದ ಬೀಜಿಂಗ್ ತನ್ನನ್ನು ಬೌದ್ಧ ಧರ್ಮದ ರಕ್ಷಕ ಮತ್ತು ಪ್ರವರ್ತಕ ಎಂದು ಬಿಂಬಿಸಲು ಶತಕೋಟಿ ಡಾಲರ್ ಖರ್ಚು ಮಾಡುತ್ತಿದೆ. ನೇಪಾಳದ ಲುಂಬಿನಿಯಲ್ಲಿ ಬುದ್ಧನ ಜನ್ಮಸ್ಥಳದ ಸುತ್ತಲೂ ಎರಡು ಬಿಲಿಯನ್ ಡಾಲರ್ ವೆಚ್ಚದ ಲುಂಬಿನಿ ಬೌದ್ಧ ವಿಶ್ವವಿದ್ಯಾಲಯದ ವಿಸ್ತರಣೆಗೆ ಹಣ ನೀಡುವುದು, ಥೈಲ್ಯಾಂಡ್, ಶ್ರೀಲಂಕಾ, ಮ್ಯಾನ್ಮಾರ್‍ನಲ್ಲಿ ದೇವಾಲಯ ಪುನರ್ನಿರ್ಮಾಣ ಮತ್ತು ಸರ್ಕಾರಿ ಅನುದಾನಿತ ಯಾತ್ರೆಗಳನ್ನು ಆಯೋಜಿಸುವುದು ಇದರ ಭಾಗವಾಗಿದೆ. ಟಿಬೆಟ್‍ನಲ್ಲಿ ಬೌದ್ಧ ಮಠಗಳ ಮೇಲೆ ನಿಗಾ, ಮರುಜನ್ಮ ಪಡೆದ ಲಾಮಾಗಳ ಅಧಿಕೃತ ದಾಖಲೆ ನಿರ್ವಹಣೆ ಮತ್ತು ಧಾರ್ಮಿಕ ಚಟುವಟಿಕೆಗಳ ಕಟ್ಟುನಿಟ್ಟಿನ ನಿಯಂತ್ರಣದ ಮೂಲಕ ಟಿಬೆಟ್‍ನ ರಾಷ್ಟ್ರೀಯತೆಯನ್ನು ದುರ್ಬಲಗೊಳಿಸುವ ಗುರಿಯೂ ಇದಕ್ಕಿದೆ. ಚೀನಾ ಬೌದ್ಧ ಧರ್ಮವನ್ನು ಭಾರತದಿಂದ ಬೇರ್ಪಡಿಸಿ ಅದನ್ನು ಚೀನೀ ನಾಗರಿಕತೆಯ ವಿಸ್ತರಣೆಯಾಗಿ ಮರುನಿರೂಪಿಸಲು ಪ್ರಯತ್ನಿಸುತ್ತಿದೆ. 2017ರಿಂದ ಚೀನೀ ಬೌದ್ಧ ಸಂಘವು ಟಿಯಾಂಝು ಫೆÇೀಜಿಯಾವೊ ಅಂದರೆ ಭಾರತೀಯ ಬೌದ್ಧ ಧರ್ಮ ಮತ್ತು ಝೋಂಗ್ಗುವೋ ಫೆÇೀಜಿಯಾವೊ ಅಂದರೆ ಚೀನೀ ಬೌದ್ಧ ಧರ್ಮ ಎಂದು ಪ್ರತ್ಯೇಕವಾಗಿ ಬಿಂಬಿಸುತ್ತಿದೆ.
ಈ ಹೋರಾಟದಲ್ಲಿ ಅತಿ ದೊಡ್ಡ ಚರ್ಚೆಯ ವಿಷಯವೆಂದರೆ ಮುಂದಿನ ದಲೈಲಾಮಾ ಯಾರು ಎಂಬುದು. ತಾನು ಮರುಜನ್ಮ ಪಡೆಯುವುದು ಚೀನಾದ ಹೊರಗೆ, ಹೆಚ್ಚಾಗಿ ಭಾರತದಲ್ಲಿ ಎಂದು 14ನೇ ದಲೈಲಾಮಾ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಅವರ ಅಧಿಕೃತ ಉತ್ತರಾಧಿಕಾರಿಯನ್ನು ಗುರುತಿಸುವ ಹಕ್ಕು ಭಾರತದಲ್ಲಿರುವ ಗಾಡೆನ್ ಫೆÇೀಡ್ರಾಂಗ್ ಟ್ರಸ್ಟ್‍ಗೆ ಮಾತ್ರ ಇದೆ ಎಂದೂ ಅವರು ಹೇಳಿದ್ದಾರೆ. ಆದರೆ ಚೀನಾ ಶತಮಾನಗಳ ಹಳೆಯ ಚಿನ್ನದ ಪಾತ್ರೆ ವಿಧಾನದ ಮೂಲಕ ತಾನೇ ಮುಂದಿನ ದಲೈಲಾಮಾವನ್ನು ನೇಮಿಸುವುದಾಗಿ ಘೋಷಿಸಿದೆ. ಇದರಿಂದಾಗಿ ಜಾಗತಿಕ ಬೌದ್ಧ ಸಮುದಾಯವು ಒಪ್ಪುವ ಒಬ್ಬ ದಲೈಲಾಮಾ ಮತ್ತು ಬೀಜಿಂಗ್ ಬೆಂಬಲಿತ ಮತ್ತೊಬ್ಬ ದಲೈಲಾಮಾ ಎಂಬ ಇಬ್ಬರು ನಾಯಕರ ಸ್ಥಿತಿ ನಿರ್ಮಾಣವಾಗುವ ಸಾಧ್ಯತೆಯಿದೆ. ಈ ವಿಭಜನೆಯು ಲಡಾಖ್, ಸಿಕ್ಕಿಂ, ಅರುಣಾಚಲ ಪ್ರದೇಶ, ನೇಪಾಳ ಮತ್ತು ಭೂತಾನ್‍ನಂತಹ ಹಿಮಾಲಯದ ಪ್ರದೇಶಗಳ ರಾಜಕೀಯ ನಿಷ್ಠೆಯನ್ನೂ ನಿರ್ಧರಿಸಬಹುದು.
ಭಾರತ ಈವರೆಗೆ ಈ ವಿಷಯದಲ್ಲಿ ಹೆಚ್ಚು ಹಿಂದೆ ಇತ್ತು. 1959ರಿಂದ ದಲೈಲಾಮಾ ಮತ್ತು ಟಿಬೆಟ್ ಗಡೀಪಾರು ಸರ್ಕಾರಕ್ಕೆ ಆಶ್ರಯ ನೀಡಿ ನೈತಿಕ ಶಕ್ತಿ ಪಡೆದಿದ್ದರೂ ಕಾರ್ಯತಂತ್ರದ ಮಟ್ಟದಲ್ಲಿ ಬಹಳ ಕಡಿಮೆ ಮಾಡಿತ್ತು. ಆದರೆ ಕಳೆದ ಒಂದು ದಶಕದಲ್ಲಿ ನವದೆಹಲಿ ಬೌದ್ಧ ಧರ್ಮವನ್ನು ಸಾಂಸ್ಕøತಿಕ ರಾಜತಾಂತ್ರಿಕತೆಯ ಸಾಧನವಾಗಿ ಬಳಸಲು ಆರಂಭಿಸಿದೆ. ಬುದ್ಧನ ಜನ್ಮಸ್ಥಳ ಭಾರತ ಎಂಬ ನಿರೂಪಣೆಯನ್ನು ಜಾಗತಿಕವಾಗಿ ಮುಂದಿಡುವುದು, ಬೋಧಗಯಾ, ಸಾರನಾಥ, ಕುಶಿನಗರ ಮತ್ತು ಪುನರುಜ್ಜೀವನಗೊಂಡ ನಾಳಂದ ವಿಶ್ವವಿದ್ಯಾಲಯವನ್ನು ಅಭಿವೃದ್ಧಿಪಡಿಸುವುದು, ಬೌದ್ಧ ರಾಷ್ಟ್ರಗಳಿಗೆ ಪವಿತ್ರ ಅವಶೇಷಗಳನ್ನು ಕಳುಹಿಸುವುದು, ಅಂತಾರಾಷ್ಟ್ರೀಯ ಬೌದ್ಧ ಸಮ್ಮೇಳನಗಳನ್ನು ಆಯೋಜಿಸುವುದು ಮತ್ತು ಗಣರಾಜ್ಯೋತ್ಸವಕ್ಕೆ ಪೂರ್ವ ಏಷ್ಯಾದ ಬೌದ್ಧ ದೇಶಗಳ ನಾಯಕರನ್ನು ಆಹ್ವಾನಿಸುವುದು ಭಾರತದ ಕ್ರಮಗಳಾಗಿವೆ. ಇತ್ತೀಚೆಗೆ ಪಿಪ್ರಾವಾ ಅವಶೇಷಗಳ ಹರಾಜನ್ನು ನಿಲ್ಲಿಸಲು ಭಾರತ ನೀಡಿದ ಒತ್ತಡವೂ ಇದೇ ಕಾರ್ಯತಂತ್ರದ ಭಾಗವಾಗಿದೆ. ಭಾರತದ ವಿಧಾನವು ಆಹ್ವಾನಾತ್ಮಕ ಮತ್ತು ಬಲಪ್ರಯೋಗವಿಲ್ಲದ್ದು. ಪ್ರವಾಸ, ಭಕ್ತಿ ಮತ್ತು ಸಾಂಸ್ಕೃತಿಕ ವಿನಿಮಯದ ಮೂಲಕ ಪ್ರಭಾವ ಬೀರುವುದು ಇದರ ಉದ್ದೇಶ.
ತಜ್ಞರ ಪ್ರಕಾರ ಚೀನಾ ಆರ್ಥಿಕ ಮತ್ತು ರಾಜತಾಂತ್ರಿಕ ಗುರಿಗಳಿಗಾಗಿ ಬೌದ್ಧ ಧರ್ಮವನ್ನು ಬಳಸುತ್ತಿದೆ. ಇದನ್ನು ಎದುರಿಸಲು ಭಾರತವು ಅಶೋಕ ಮಾದರಿಯನ್ನು ಮುಂದಿಡಬೇಕು ಎಂದು ಕೆಲವು ವಿದ್ವಾಂಸರು ಸಲಹೆ ನೀಡುತ್ತಾರೆ. ಅಂದರೆ ಸಂಘರ್ಷ ಬಿಟ್ಟು ಸಹಕಾರ, ಕರುಣೆ ಮತ್ತು ಶಾಂತಿಯ ಮೂಲಕ ನಾಯಕತ್ವ. ಬೌದ್ಧ ಧರ್ಮದ ಮೂಲ ಭಾರತದಲ್ಲಿದೆ ಎಂಬ ಐತಿಹಾಸಿಕ ಸತ್ಯವನ್ನು ಜಗತ್ತಿನ ಮುಂದೆ ದೃಢವಾಗಿ ಇಡುವುದರ ಜೊತೆಗೆ ಹಿಮಾಲಯದ ಪ್ರದೇಶಗಳಲ್ಲಿ ಮೂಲಸೌಕರ್ಯ ಮತ್ತು ಧಾರ್ಮಿಕ ಸಂಪರ್ಕವನ್ನು ಬಲಪಡಿಸುವುದು ಈಗ ಭಾರತದ ಮುಂದಿರುವ ದೊಡ್ಡ ಸವಾಲಾಗಿದೆ.
Comments
Post a Comment