ಮಾಧ್ಯಮ ಸಲಹೆಗಾರರ ಹೊಣೆ ಮತ್ತು ವಾರ್ತಾ ಇಲಾಖೆಯ ಸುಧಾರಣೆ
* ಬಿವಿಸೀ
ಕರ್ನಾಟಕದ ಮುಖ್ಯಮಂತ್ರಿ ಮೂವರು ಮಾಧ್ಯಮ ಸಲಹೆಗಾರರನ್ನು ನೇಮಿಸಿಕೊಂಡ ಬೆನ್ನಲ್ಲೇ ಅವರಲ್ಲೊಬ್ಬರನ್ನು ಹಳೆಯ ಸಾಮಾಜಿಕ ಜಾಲತಾಣದ ಪೆÇೀಸ್ಟ್ ಒಂದರ ಕಾರಣಕ್ಕೆ ಹುದ್ದೆಯಿಂದ ಮುಕ್ತಗೊಳಿಸಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಪ್ರಸ್ತುತ ಇಬ್ಬರು ಮಾಧ್ಯಮ ಸಲಹೆಗಾರರು ಕಾರ್ಯನಿರ್ವಹಿಸುತ್ತಿದ್ದರೂ, ಸಾರ್ವಜನಿಕ ವಲಯದಲ್ಲಿ ಮುಖ್ಯಮಂತ್ರಿಗಳ ಈ ಕ್ರಮವು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಕೆಲವು ಮುಖ್ಯಮಂತ್ರಿಗಳಿಗೆ ಮಾಧ್ಯಮ ಸಲಹೆಗಾರರೇ ಇದ್ದಿರಲಿಲ್ಲ. ಇನ್ನು ಕೆಲವರಿಗೆ ಕೇವಲ ಒಬ್ಬರೇ ಇದ್ದರು. ಆದರೆ ಇಬ್ಬರು ಸಲಹೆಗಾರರಿದ್ದರೂ ಅವರ ಅಧಿಕಾರ ಮತ್ತು ಜವಾಬ್ದಾರಿಗಳ ವ್ಯಾಪ್ತಿ ಏನು ಎಂಬುದು ಜನರಿಗಾಗಲಿ ಅಥವಾ ಮಾಧ್ಯಮ ರಂಗದವರಿಗಾಗಲಿ ಸ್ಪಷ್ಟವಾಗಿಲ್ಲ. ಈ ಇಬ್ಬರಲ್ಲಿ ಯಾರು ಯಾವ ಜವಾಬ್ದಾರಿಯನ್ನು ಹೊರಲಿದ್ದಾರೆ ಎಂಬ ಅಧಿಕೃತ ಮಾಹಿತಿಯನ್ನು ಮುಖ್ಯಮಂತ್ರಿಗಳೂ ನೀಡಿಲ್ಲ. ಈ ನಿಗೂಢತೆ ಮತ್ತು ಅಸ್ಪಷ್ಟತೆಯು ಅನಗತ್ಯ ಗೊಂದಲಗಳಿಗೆ ಕಾರಣವಾಗಿದೆ.
ಸರ್ಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು (ಡಿಐಪಿ) ಸದ್ಯ ಐಪಿಎಸ್ ಶ್ರೇಣಿಯ ಆಯುಕ್ತರು ಮತ್ತು ಐಎಎಸ್ ದರ್ಜೆಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಇಷ್ಟೊಂದು ದೊಡ್ಡ ವ್ಯವಸ್ಥೆಯನ್ನು ಹೊಂದಿದ್ದರೂ, ಅದರ ಕಾರ್ಯವೈಖರಿ ಮಾತ್ರ ಅಪೇಕ್ಷಿತವೆನಿಸಿದೆ. ಈ ಇಲಾಖೆಯು ಮಾಧ್ಯಮಸ್ನೇಹಿಯಾಗಿ ಕೆಲಸ ಮಾಡುತ್ತಿಲ್ಲ ಎಂಬುದು ಮಾಧ್ಯಮ ಮಂದಿ ಹೇಳುವ ಮಾತು. ಮಾಧ್ಯಮ ಪ್ರತಿನಿಧಿಗಳು ಅಥವಾ ಸಾರ್ವಜನಿಕರು ನೀಡುವ ಸದ್ಭಾವನೆಯ ಸಲಹೆಗಳನ್ನು ಇಲ್ಲಿನ ಅಧಿಕಾರಿಗಳು ಸಕಾರಾತ್ಮಕವಾಗಿ ಸ್ವೀಕರಿಸುತ್ತಿಲ್ಲ ಎನ್ನಲಾಗುತ್ತಿದೆ. ತಮಗೆಲ್ಲವೂ ತಿಳಿದಿದೆ ಎನ್ನುವ ಧೋರಣೆ ಇಲಾಖೆಯ ಅಧಿಕಾರಿಗಳಲ್ಲಿದೆ. ಇಂತಹ ಪರಿಸ್ಥಿತಿಯಲ್ಲಿ ಪ್ರಸ್ತುತ ಇರುವ ಇಬ್ಬರು ಮಾಧ್ಯಮ ಸಲಹೆಗಾರರು ತಕ್ಷಣವೇ ಮಧ್ಯಪ್ರವೇಶಿಸಿ, ಇಲಾಖೆಯ ಕಾರ್ಯವೈಖರಿಯನ್ನು ಪರಾಮರ್ಶಿಸಬೇಕಾಗಿದೆ. ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಲು ನಿಖರ ಮಾಹಿತಿ ನೀಡಲು ಮಾಧ್ಯಮದವರಿಗೆ ಸುಲಭವಾಗಿ ಲಭ್ಯರಿರುವ ಒಬ್ಬ ಜವಾಬ್ದಾರಿಯುತ ಅಧಿಕಾರಿಯನ್ನು ಇಲಾಖೆಯಲ್ಲಿ ನಿಯೋಜಿಸುವ ಅಗತ್ಯವಿದೆ.
ಮತ್ತೊಂದು ಪ್ರಮುಖ ಆಯಾಮವೆಂದರೆ ಸರ್ಕಾರದ ಜಾಹೀರಾತುಗಳ ಹಂಚಿಕೆ ನೀತಿ. ಹಿಂದಿನ ಸಿದ್ದರಾಮಯ್ಯನವರ ಸರ್ಕಾರದ ಅವಧಿಯಲ್ಲಿ ವಾರ್ತಾ ಇಲಾಖೆಯು ಕೇವಲ ದೊಡ್ಡ ಮಾಧ್ಯಮ ಸಂಸ್ಥೆಗಳಿಗೆ ಮಾತ್ರ ಸವಲತ್ತುಗಳನ್ನು ನೀಡಿ, ಸಣ್ಣ ಮತ್ತು ಮಧ್ಯಮ ಗಾತ್ರದ ಪತ್ರಿಕೆಗಳನ್ನು ಸಂಪೂರ್ಣವಾಗಿ ಕಡೆಗಣಿಸಿತ್ತು ಎಂಬ ಆರೋಪವಿದೆ. ವಿಕೇಂದ್ರೀಕರಣದ ಬಗ್ಗೆ ಕೇವಲ ಭಾಷಣಗಳಲ್ಲಿ ಮಾತನಾಡಿದರೇ ಹೊರತು ಯಾವುದೇ ಪ್ರಾಯೋಗಿಕ ಕ್ರಮಗಳು ಕಂಡುಬರಲಿಲ್ಲ. ಇಲಾಖೆಯ ನಿರ್ಧಾರಗಳಲ್ಲಿ ಜಾತಿ ತಾರತಮ್ಯವೂ ಎದ್ದುಕಾಣುತ್ತಿತ್ತು. ಈ ತಾರತಮ್ಯ ನೀತಿಯಿಂದಾಗಿ ಸಣ್ಣ ಮತ್ತು ಪ್ರಾದೇಶಿಕ ಮಾಧ್ಯಮಗಳು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದವು.
ಈ ಎಲ್ಲಾ ಗೊಂದಲ ಮತ್ತು ತಾರತಮ್ಯಗಳನ್ನು ನಿವಾರಿಸಲು ಮುಖ್ಯಮಂತ್ರಿಗಳ ಇಬ್ಬರು ಮಾಧ್ಯಮ ಸಲಹೆಗಾರರು ತಕ್ಷಣವೇ ಕಾರ್ಯಪ್ರವೃತ್ತರಾಗಬೇಕು. ಅವರು ರಾಜ್ಯದ ಸಣ್ಣ, ಮಧ್ಯಮ ಮತ್ತು ದೊಡ್ಡ ಮಾಧ್ಯಮಗಳ ಸಂಪಾದಕರು ಹಾಗೂ ಪ್ರಕಾಶಕರ ತುರ್ತು ಸಭೆಯನ್ನು ಕರೆಯಬೇಕು. ಮಾಧ್ಯಮ ರಂಗದವರು ಇಲಾಖೆಯ ಕಾರ್ಯವೈಖರಿಯಲ್ಲಿ ಬಯಸುವ ತುರ್ತು ಬದಲಾವಣೆಗಳು ಮತ್ತು ಸುಧಾರಣೆಗಳೇನು ಎಂಬುದನ್ನು ಮೊದಲು ಮುಕ್ತವಾಗಿ ಚರ್ಚಿಸಿ ತಿಳಿದುಕೊಳ್ಳಬೇಕು. ಜಾಹೀರಾತು ಹಂಚಿಕೆಯಲ್ಲಿ ಸಮಾನತೆ ತರುವುದು ಮತ್ತು ಇಲಾಖೆಯನ್ನು ಭ್ರಷ್ಟಾಚಾರ ಮುಕ್ತ ಹಾಗೂ ಪಾರದರ್ಶಕಗೊಳಿಸುವುದು ಈ ಸಭೆಯ ಮುಖ್ಯ ಉದ್ದೇಶವಾಗಬೇಕು. ಮಾಧ್ಯಮ ಸಲಹೆಗಾರರು ಕೇವಲ ಹೆಸರಿಗಷ್ಟೇ ಸೀಮಿತವಾಗದೆ, ವ್ಯವಸ್ಥೆಯನ್ನು ಸರಿಪಡಿಸುವ ನಿಟ್ಟಿನಲ್ಲಿ ಇಂತಹ ಕಾಂಕ್ರೀಟ್ ಕ್ರಮಗಳನ್ನು ಕೈಗೊಂಡಾಗ ಮಾತ್ರ ಅವರ ನೇಮಕಾತಿಗೆ ನಿಜವಾದ ಅರ್ಥ ಬರಲು ಸಾಧ್ಯ
Comments
Post a Comment