ಬರದ ನಾಡಿಗೆ ದಸರಾ ವೈಭವವೇ? ಸರ್ಕಾರ ಮರುಚಿಂತನೆ ಮಾಡಲಿ

 ಕೇವಿಯಟ್ * ಬಿವಿಸೀ

ಮೈಸೂರು ದಸರಾ ಕರ್ನಾಟಕದ ಸಾಂಸ್ಕøತಿಕ ಪರಂಪರೆಯ ಒಂದು ಭಾಗ ಎನ್ನುವುದರಲ್ಲಿ ವಿವಾದವಿಲ್ಲ. ಆದರೆ ಪರಂಪರೆ ಎನ್ನುವ ಒಂದೇ ಕಾರಣಕ್ಕೆ ಪ್ರತಿವರ್ಷವೂ ಸಾರ್ವಜನಿಕ ಹಣದ ನೂರಾರು ಕೋಟಿ ರೂ ಭಾರೀ ವೆಚ್ಚದಲ್ಲಿ ಅದನ್ನು ಅದೇ ವೈಭವದಲ್ಲಿ ನಡೆಸಬೇಕೇ ಎಂಬ ಪ್ರಶ್ನೆ ಇಂದು ಹಿಂದೆಂದಿಗಿಂತಲೂ ಹೆಚ್ಚು ಪ್ರಸ್ತುತವಾಗಿದೆ.

ರಾಜ್ಯದ ಹಲವು ಭಾಗಗಳು ತೀವ್ರ ಕುಡಿಯುವ ನೀರಿನ ಸಮಸ್ಯೆ, ಮಳೆ ಕೊರತೆ ಮತ್ತು ಬರದ ಆತಂಕವನ್ನು ಎದುರಿಸುತ್ತಿವೆ. ಇಂತಹ ಸಂದರ್ಭದಲ್ಲಿ ಜನರ ಒಂದು ವರ್ಗ ಈ ಬಾರಿ ದಸರಾವನ್ನು ಸರಳವಾಗಿ ಆಚರಿಸಿ, ಉಳಿಯುವ ಹಣವನ್ನು ಜನೋಪಯೋಗಿ ಕಾರ್ಯಗಳಿಗೆ ಮೀಸಲಿಡಬೇಕೆಂದು ಆಗ್ರಹಿಸುತ್ತಿದೆ. ಆದರೂ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ದಸರಾವನ್ನು ನಿಗದಿಯಂತೆ ನಡೆಸುವುದಾಗಿ ಸ್ಪಷ್ಟಪಡಿಸಿದ್ದಾರೆ. ಅವರ ವಾದವೆಂದರೆ, ದಸರಾ ಕೇವಲ ಹಬ್ಬವಲ್ಲ; ಅದು ಕರ್ನಾಟಕದ ಸಾಂಸ್ಕೃತಿಕ ಗುರುತು, ಪ್ರವಾಸೋದ್ಯಮದ ಪ್ರಮುಖ ಆಕರ್ಷಣೆ, ಸಾವಿರಾರು ಮಂದಿಗೆ ಉದ್ಯೋಗ ಮತ್ತು ವ್ಯಾಪಾರ ಅವಕಾಶ ಕಲ್ಪಿಸುವ ಆರ್ಥಿಕ ಚಟುವಟಿಕೆ. ರಾಜ್ಯದ ಪ್ರತಿಷ್ಠೆಯನ್ನು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶಿಸುವ ವೇದಿಕೆಯೂ ಹೌದು ಎನ್ನುವುದು ಅವರ ಸಮರ್ಥನೆ.

ಈ ವಾದಕ್ಕೆ ತನ್ನದೇ ಆದ ತೂಕವಿದ್ದರೂ, ಇಂದಿನ ಆರ್ಥಿಕ ವಾಸ್ತವಿಕತೆಯ ಎದುರು ಅದು ಸಾಕಷ್ಟು ಸಮರ್ಥನೆಯಾಗುತ್ತದೆಯೇ ಎಂಬುದು ಮುಖ್ಯ ಪ್ರಶ್ನೆ. ನೌಕರರಿಗೆ ಪ್ರತಿ ತಿಂಗಳೂ ಸಮಯಕ್ಕೆ ವೇತನ ನೀಡಲು ಸರ್ಕಾರ ಪರದಾಡುತ್ತಿರುವ ಸುದ್ದಿ ಕೇಳಿಬರುತ್ತಿದೆ. ಮೂಲಸೌಕರ್ಯಗಳ ನಿರ್ವಹಣೆ, ರಸ್ತೆ ದುರಸ್ತಿ, ಸರ್ಕಾರಿ ಆಸ್ಪತ್ರೆಗಳು, ಶಾಲೆಗಳು ಮತ್ತು ಕಾಲೇಜುಗಳ ಅಭಿವೃದ್ಧಿಗೆ ಹಣದ ಕೊರತೆ ಇದೆ ಎನ್ನುವುದು ಸರ್ಕಾರವೇ ಒಪ್ಪಿಕೊಳ್ಳುವ ಸಂಗತಿ. ಇಂತಹ ಸಂದರ್ಭದಲ್ಲಿ ಕೋಟ್ಯಂತರ ರೂಪಾಯಿಗಳ ಸಾರ್ವಜನಿಕ ಹಣವನ್ನು ವೈಭವದ ಆಚರಣೆಗೆ ವಿನಿಯೋಗಿಸುವುದು ಹೇಗೆ ಸಮರ್ಥನೀಯ?

ದಸರಾ ಇನ್ನೊಂದು ಅಂಶದಿಂದಲೂ ಮರುಪರಿಶೀಲನೆಗೆ ಅರ್ಹವಾಗಿದೆ. ಇದು ರಾಜಪ್ರಭುತ್ವದ ಕಾಲದ ವೈಭವದ ಪ್ರತೀಕ. ಆ ಸಂಸ್ಥಾನ ವ್ಯವಸ್ಥೆ ಅರ್ಧ ಶತಮಾನಕ್ಕೂ ಹಿಂದೆ ಇತಿಹಾಸವಾಗಿದೆ. ಸಮಾನತೆಯ ಮೌಲ್ಯಗಳನ್ನು ಪ್ರತಿಪಾದಿಸುವ ಪ್ರಜಾಪ್ರಭುತ್ವದ ಭಾರತದಲ್ಲಿ, ರಾಜಮನೆತನದ ವೈಭವವನ್ನು ಸರ್ಕಾರಿ ವೆಚ್ಚದಲ್ಲಿ ಪ್ರತಿವರ್ಷ ಮರುಸೃಷ್ಟಿ ಮಾಡುವ ಅಗತ್ಯವಿದೆಯೇ ಎಂಬ ಪ್ರಶ್ನೆಗೆ ಸರ್ಕಾರ ಸ್ಪಷ್ಟ ಉತ್ತರ ನೀಡಬೇಕು.

ಪ್ರತಿ ವರ್ಷ ದಸರಾ ವೆಚ್ಚ, ಗುತ್ತಿಗೆಗಳು, ಹಣದ ದುರುಪಯೋಗದ ಆರೋಪಗಳು ಮತ್ತು ಉದ್ಘಾಟಕರ ಆಯ್ಕೆ ಕುರಿತ ವಿವಾದಗಳು ಸುದ್ದಿಯಾಗುತ್ತವೆ. ಹಬ್ಬದ ಸಾಂಸ್ಕೃತಿಕ ಅರ್ಥಕ್ಕಿಂತ ವಿವಾದಗಳೇ ಹೆಚ್ಚು ಚರ್ಚೆಯಾಗುತ್ತಿರುವುದು ಅದರ ಹಿಂದಿನ ಕಳೆ ಮಸುಕಾಗಿರುವುದನ್ನು ತೋರಿಸುತ್ತದೆ. ಈಗ ಇದಕ್ಕೆ ಮತ್ತೊಂದು ಸೇರ್ಪಡೆ ಎಂದರೆ, ಕರಾವಳಿಯ ಕಂಬಳವನ್ನು ಸುಮಾರು ಹತ್ತು ಕೋಟಿ ರೂಪಾಯಿ ವೆಚ್ಚದಲ್ಲಿ ಮೈಸೂರಿಗೆ ಕರೆತರುವ ಪ್ರಸ್ತಾಪ. ಒಂದು ಪ್ರದೇಶದ ಜನಪದ ಕ್ರೀಡೆಯನ್ನು ಅದರ ಸಹಜ ನೆಲೆಯಿಂದ ಬೇರ್ಪಡಿಸಿ, ಮತ್ತೊಂದು ವೈಭವದ ಉತ್ಸವದ ಅಂಗವನ್ನಾಗಿ ಮಾಡುವುದರಿಂದ ಅದರ ಮೂಲ ಸ್ವರೂಪಕ್ಕೂ ಧಕ್ಕೆಯಾಗುವ ಅಪಾಯವಿದೆ.

ಸರ್ಕಾರ ನಿಜವಾಗಿಯೂ ಜನರ ಭವಿಷ್ಯವನ್ನು ಆದ್ಯತೆಯಾಗಿ ಪರಿಗಣಿಸುತ್ತಿದ್ದರೆ, ಈ ಹಣವನ್ನು ಸರ್ಕಾರಿ ವಿಶ್ವವಿದ್ಯಾಲಯಗಳ ಗುಣಮಟ್ಟ ಹೆಚ್ಚಿಸಲು, ಕಾಲೇಜುಗಳ ಪ್ರಯೋಗಾಲಯಗಳು ಮತ್ತು ಗ್ರಂಥಾಲಯಗಳನ್ನು ಸುಧಾರಿಸಲು, ಶೌಚಾಲಯವೂ ಇಲ್ಲದ ಸಾವಿರಾರು ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಮೂಲ ಸೌಲಭ್ಯ ಕಲ್ಪಿಸಲು ಬಳಸಬಹುದು. ಕುಡಿಯುವ ನೀರಿನ ಯೋಜನೆಗಳು, ಗ್ರಾಮೀಣ ರಸ್ತೆಗಳು ಮತ್ತು ಆಸ್ಪತ್ರೆಗಳ ಬಲವರ್ಧನೆಗೆ ಹೂಡಿಕೆ ಮಾಡಿದರೆ ಅದರ ಲಾಭ ಲಕ್ಷಾಂತರ ಜನರಿಗೆ ತಲುಪುತ್ತದೆ.

ಪರಂಪರೆಯನ್ನು ಉಳಿಸಬೇಕು; ಆದರೆ ಅದು ಜನರ ಸಂಕಷ್ಟವನ್ನು ಮರೆಮಾಚುವ ಬೆಲೆಯಲ್ಲ. ಈ ವರ್ಷ ದಸರಾವನ್ನು ಸರಳವಾಗಿ ಆಚರಿಸಿ, ಉಳಿಯುವ ಸಾರ್ವಜನಿಕ ಹಣವನ್ನು ಜನಜೀವನ ಸುಧಾರಣೆಗೆ ಮೀಸಲಿಡುವುದು ಸರ್ಕಾರದ ಸಂವೇದನಾಶೀಲತೆ ಮತ್ತು ದೂರದೃಷ್ಟಿಯ ಸಂಕೇತವಾಗುತ್ತದೆ. ವೈಭವಕ್ಕಿಂತ ಜನಹಿತ ದೊಡ್ಡದು ಎಂಬ ಸಂದೇಶವನ್ನು ಸರ್ಕಾರ ನೀಡಬೇಕಾದ ಸಮಯ ಈಗ ಬಂದಿದೆ.

Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

When Prestige Is Gifted, Not Earned: The Padma Vibhushan Controversy Of Veerendra Heggade

ಧರ್ಮಸ್ಥಳದ ಪ್ರಕರಣಗಳಲ್ಲಿ ಸತ್ಯ ಸಾಯುವುದಿಲ್ಲ