ಮೈಸೂರು ದಸರಾದಲ್ಲಿ ಕಂಬಳ: ಯಾರ ಹಠ, ಯಾರ ಹಿತ?
ಜನದನಿ * ಬಿವಿಸೀ
ಮೈಸೂರು ದಸರಾ ರಾಜ್ಯದ ಸಾಂಸ್ಕøತಿಕ ಪರಂಪರೆಯ ಪ್ರತೀಕ. ಕರಾವಳಿಯ ಕಂಬಳವೂ ತನ್ನದೇ ಆದ ಇತಿಹಾಸ, ಕೃಷಿ ಮತ್ತು ಜನಜೀವನದೊಂದಿಗೆ ಬೆಸೆದುಕೊಂಡಿರುವ ವಿಶಿಷ್ಟ ಜಾನಪದ ಕ್ರೀಡೆ. ಎರಡಕ್ಕೂ ಗೌರವವಿದೆ. ಆದರೆ ಒಂದರ ಸ್ವರೂಪವನ್ನು ಮತ್ತೊಂದರ ಮೇಲೆ ಹೇರುವ ಪ್ರಯತ್ನವನ್ನು ಸಂಸ್ಕೃತಿ ವಿಸ್ತರಣೆ ಎಂದು ಕರೆಯಬೇಕೋ, ರಾಜಕೀಯ ಹಠ ಎಂದು ಕರೆಯಬೇಕೋ ಎಂಬ ಪ್ರಶ್ನೆ ಈಗ ಮೈಸೂರಿನಲ್ಲಿ ಎದ್ದಿದೆ.
ಕಂಬಳವನ್ನು ಮೈಸೂರು ದಸರಾದ ಅಂಗವಾಗಿಸಬೇಕು ಎಂಬ ಪ್ರಸ್ತಾವನೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರದಲ್ಲಿದ್ದಾಗಲೇ ಒಪ್ಪಿಗೆ ಸೂಚಿಸಿದ್ದರು. ಈಗ ಜಿಲ್ಲಾ ಉಸ್ತುವಾರಿ ಸಚಿವ ಯತೀಂದ್ರ ಸಿದ್ದರಾಮಯ್ಯ ಈ ಯೋಜನೆಯ ಪರವಾಗಿ ಬಹಿರಂಗವಾಗಿ ನಿಂತಿರುವುದು ಕೇವಲ ಕಂಬಳದ ಮೇಲಿನ ಅಭಿಮಾನವೇ, ಅಥವಾ ತಂದೆಯ ಅವಧಿಯಲ್ಲಿ ತೆಗೆದುಕೊಂಡ ನಿರ್ಧಾರವನ್ನು ಯಾವುದೇ ಕಾರಣಕ್ಕೂ ಜಾರಿಗೊಳಿಸಬೇಕೆಂಬ ರಾಜಕೀಯ ಬದ್ಧತೆಯೇ ಎಂಬ ಪ್ರಶ್ನೆ ಸಹಜವಾಗಿ ಉದ್ಭವಿಸುತ್ತದೆ. ಜನಾಭಿಪ್ರಾಯ ಬದಲಾಗಿದ್ದರೂ ಸರ್ಕಾರ ತನ್ನ ನಿಲುವು ಬದಲಿಸದಿರುವುದು ಇದೇ ಅನುಮಾನಕ್ಕೆ ಬಲ ನೀಡುತ್ತದೆ.
ಈಗಿನ ಮುಖ್ಯಮಂತ್ರಿ ಶಿವಕುಮಾರ್ ಕರಾವಳಿಯಲ್ಲಿ ಕಂಬಳ ಕಾರ್ಯಕ್ರಮವೊಂದರಲ್ಲಿ ಮೈಸೂರು ದಸರಾದಲ್ಲಿ ಕಂಬಳ ಏರ್ಪಡಿಸುವ ಪ್ರಸ್ತಾಪಕ್ಕೆ ಒತ್ತಾಸೆ ನೀಡಿದ್ದರು. ಆದರೆ ಕರಾವಳಿಯ ಪ್ರತಿನಿಧಿಯಾಗಿರುವ ಅಶೋಕ್ ರೈ ಅವರಿಗೆ ಮೈಸೂರಿನಲ್ಲಿ ಕಂಬಳ ನಡೆಸುವ ಬಗ್ಗೆ ಇಷ್ಟೊಂದು ಉತ್ಸಾಹ ಏಕೆ? ಅದರ ಹಿಂದೆ ಕೇವಲ ಸಾಂಸ್ಕೃತಿಕ ಆಸಕ್ತಿಯೇ, ಅಥವಾ ಬೇರೆ ಕಾರಣಗಳಿವೆಯೇ? ಈ ಪ್ರಶ್ನೆಗಳಿಗೆ ಉತ್ತರ ಸಿಗುವುದು ಅಗತ್ಯವಾಗಿದೆ.
ಇದೇ ರೀತಿ, ದೇವಿಪ್ರಸಾದ್ ಶೆಟ್ಟಿ ಮತ್ತು ಗುಣಪಾಲ ಕಡಂಬ ಅವರು ಮೈಸೂರು ಕಂಬಳದ ಪರವಾಗಿ ನಿರಂತರವಾಗಿ ಧ್ವನಿಯೆತ್ತುತ್ತಿರುವುದಕ್ಕೂ ಸ್ಪಷ್ಟವಾದ ಸಾರ್ವಜನಿಕ ವಿವರಣೆ ಬೇಕಾಗಿದೆ. ಸಾರ್ವಜನಿಕ ಕಾರ್ಯಕ್ರಮಗಳಿಗೆ ಬೆಂಬಲ ನೀಡುವುದು ತಪ್ಪಲ್ಲ. ಆದರೆ ಸ್ಥಳೀಯ ನಾಗರಿಕ ಸಂಘಟನೆಗಳು, ಪರಿಸರವಾದಿಗಳು ಮತ್ತು ಮೈಸೂರಿನ ಜನಸಾಮಾನ್ಯರು ವಿರೋಧ ವ್ಯಕ್ತಪಡಿಸುತ್ತಿರುವ ಸಂದರ್ಭದಲ್ಲಿ, ಈ ಪ್ರಸ್ತಾವನೆಗೆ ಅವರು ನೀಡುತ್ತಿರುವ ಒತ್ತಾಸೆಯ ಉದ್ದೇಶವೇನು ಎಂಬ ಪ್ರಶ್ನೆಗಳನ್ನು ಸಾರ್ವಜನಿಕರು ಕೇಳುವುದು ಸಹಜ.
ಕರಾವಳಿಯಲ್ಲಿ ಕಂಬಳವು ಕೃಷಿ ಸಂಸ್ಕೃತಿಯ ಭಾಗ. ನೀರಿನಿಂದ ತುಂಬಿದ ಗದ್ದೆ, ಅಲ್ಲಿನ ಭೌಗೋಳಿಕ ಪರಿಸ್ಥಿತಿ ಮತ್ತು ರೈತರ ಬದುಕು ಅದರ ಹಿನ್ನೆಲೆ. ಆದರೆ ಕುಡಿಯುವ ನೀರಿಗೂ ಹಾಹಾಕಾರ ಎದುರಿಸುತ್ತಿರುವ ಮೈಸೂರಿನಲ್ಲಿ ಇದೇ ಮಾದರಿಯ ಕಾರ್ಯಕ್ರಮ ನಡೆಸುವುದು ಪರಿಸರದ ದೃಷ್ಟಿಯಿಂದಲೂ ವಿವೇಕಪೂರ್ಣ ನಿರ್ಧಾರವೆಂದು ಹೇಳಲಾಗದು ಎಂದು ಅನೇಕ ಪರಿಸರ ಸಂಘಟನೆಗಳು ಅಭಿಪ್ರಾಯಪಟ್ಟಿವೆ.
ಅತ್ಯಂತ ಗಂಭೀರ ಪ್ರಶ್ನೆ ವೆಚ್ಚದದ್ದು. ಕರಾವಳಿಯಲ್ಲಿ ಹಲವು ಕಂಬಳಗಳು ಕೆಲವೇ ಲಕ್ಷ ರೂಪಾಯಿಗಳಲ್ಲಿ ಯಶಸ್ವಿಯಾಗಿ ನಡೆಯುವಾಗ, ಮೈಸೂರು ಕಂಬಳಕ್ಕಾಗಿ ಸುಮಾರು ಹತ್ತು ಕೋಟಿ ರೂಪಾಯಿ ಮೀಸಲಿಡುವ ಪ್ರಸ್ತಾವನೆ ಏಕೆ? ಈ ಹಣದ ಅಗತ್ಯವೇನು? ಅದರ ಲೆಕ್ಕಾಚಾರವೇನು? ತೆರಿಗೆದಾರರ ಹಣ ಬಳಸುವಾಗ ಸರ್ಕಾರ ಉತ್ತರದಾಯಿತ್ವದಿಂದ ವರ್ತಿಸಲೇಬೇಕು.
ಸಂಸ್ಕೃತಿಯ ಹೆಸರಿನಲ್ಲಿ ಜನಾಭಿಪ್ರಾಯವನ್ನು ನಿರ್ಲಕ್ಷಿಸುವುದು ಸರಿಯಲ್ಲ. ಮೈಸೂರಿನ ಜನರು ಬೇಡವೆನ್ನುತ್ತಿರುವಾಗ, ಪರಿಸರದ ಪ್ರಶ್ನೆಗಳು ಉತ್ತರಿಸದೆ ಉಳಿದಿರುವಾಗ ಮತ್ತು ವೆಚ್ಚದ ಬಗ್ಗೆ ಪಾರದರ್ಶಕತೆ ಇಲ್ಲದಿರುವಾಗ ಕಂಬಳವನ್ನು ಮೈಸೂರು ದಸರಾದ ಮೇಲೆ ಹೇರುವುದು ಸಮರ್ಥನೀಯವಾಗುವುದಿಲ್ಲ. ಜನರ ಧ್ವನಿಯನ್ನು ಕೇಳುವುದು ಸರ್ಕಾರದ ಕರ್ತವ್ಯ. ಈ ಪ್ರಸ್ತಾವನೆಯನ್ನು ಮರುಪರಿಶೀಲಿಸಿ, ಮೈಸೂರು ದಸರಾವನ್ನು ಅನಗತ್ಯ ವಿವಾದಗಳಿಂದ ದೂರವಿಡುವುದು ಸರ್ಕಾರದ ಪ್ರಬುದ್ಧತೆಯ ಸಂಕೇತವಾಗಲಿದೆ.
Comments
Post a Comment