ರಾಮಮಂದಿರ ದೇಣಿಗೆ ಲೂಟಿ: ಅಲುಗಾಡುತ್ತಿರುವ ಬಿಜೆಪಿ ಬೇರು

 ಸಮಕಾಲೀನ * ಬಿವಿಸೀ

ಲಕ್ನೋ: ಅಯೋಧ್ಯೆ ರಾಮಮಂದಿರದ ದೇಣಿಗೆ ಹಣದ ದುರುಪಯೋಗದ ವಿವಾದವು ಉತ್ತರ ಪ್ರದೇಶದ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಮುಂಬರುವ ವಿಧಾನಸಭಾ ಚುನಾವಣೆಯ ಹೊತ್ತಿಗೆ ಈ ಹಗರಣವು ಆಡಳಿತಾರೂಢ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ದೊಡ್ಡ ಸವಾಲಾಗಿ ಪರಿಣಮಿಸಿದೆ.

ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‍ನ ದೇಣಿಗೆ ಪೆಟ್ಟಿಗೆಯಿಂದ ಹಣ ಎಣಿಕೆ ಮಾಡುವ ಸಂದರ್ಭದಲ್ಲಿ ಸುಮಾರು 70 ಬಾರಿ ಕಳ್ಳತನ ನಡೆದಿರುವುದು ಸಿಸಿಟಿವಿ ದೃಶ್ಯಾವಳಿಗಳಿಂದ ಪತ್ತೆಯಾಗಿದೆ. ಈ ಕುರಿತು ವಿಶೇಷ ತನಿಖಾ ತಂಡವು ಪ್ರಾಥಮಿಕ ವರದಿಯನ್ನು ಸಲ್ಲಿಸಿದ ಬೆನ್ನಲ್ಲೇ, ವಿವಾದಕ್ಕೆ ಸಿಲುಕಿದ ಟ್ರಸ್ಟ್‍ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮತ್ತು ಟ್ರಸ್ಟಿ ಅನಿಲ್ ಮಿಶ್ರಾ ಅವರ ರಾಜೀನಾಮೆಗಳನ್ನು ಅಂಗೀಕರಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಎಂಟು ಜನರನ್ನು ಬಂಧಿಸಲಾಗಿದೆ. ಕೋಟ್ಯಂತರ ಭಕ್ತರ ಆರಾಧ್ಯ ದೈವದ ಹೆಸರಿನಲ್ಲಿ ನಡೆದ ಈ ವ್ಯವಸ್ಥಿತ ವಂಚನೆಯು ಧಾರ್ಮಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಟ್ರಸ್ಟ್‍ನ ಪಾರದರ್ಶಕತೆಯನ್ನು ಸಂಪೂರ್ಣವಾಗಿ ಪ್ರಶ್ನಿಸುವಂತೆ ಮಾಡಿದೆ.

ರಾಮಮಂದಿರದ ಹೆಸರಿನಲ್ಲಿ ನಡೆದಿದೆ ಎನ್ನಲಾದ ಈ ಹಗರಣವು ಕೇವಲ ರಾಜಕೀಯ ವಿರೋಧಿಗಳಿಗೆ ಅಸ್ತ್ರವಾಗಿಲ್ಲ, ಬದಲಿಗೆ ಬಿಜೆಪಿ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರೆಸ್ಸೆಸ್) ಆಂತರಿಕ ವಲಯದಲ್ಲೂ ತೀವ್ರ ಕಳವಳಕ್ಕೆ ಕಾರಣವಾಗಿದೆ. ಹಿಂದುತ್ವದ ಪ್ರಮುಖ ಸಂಕೇತವಾಗಿರುವ ರಾಮಮಂದಿರದ ಭ್ರಷ್ಟಾಚಾರದ ಆರೋಪವು ಮಧ್ಯಮ ವರ್ಗದ ಭಕ್ತರಲ್ಲಿ ಭ್ರಮನಿರಸನ ಉಂಟುಮಾಡಬಹುದು ಎಂಬ ಭೀತಿ ಸಂಘ ಪರಿವಾರವನ್ನು ಕಾಡುತ್ತಿದೆ. ಆಡಳಿತಾರೂಢ ಪಕ್ಷದ ಮತ್ತು ಪರಿವಾರದ ಸೈದ್ಧಾಂತಿಕ ಬದ್ಧತೆಯನ್ನೇ ಜನಸಾಮಾನ್ಯರು ಶಂಕಿಸುವಂತಾಗಿದ್ದು, ನೈತಿಕತೆಯ ನೆಲಗಟ್ಟಿನ ಮೇಲೆಯೇ ಪ್ರಹಾರ ನಡೆದಂತಾಗಿದೆ. ಮುಂದಿನ ಎಂಟು ತಿಂಗಳಲ್ಲಿ ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪರಿಸ್ಥಿತಿಯನ್ನು ನಿಭಾಯಿಸಲು ಹಾಗೂ ಡ್ಯಾಮೇಜ್ ಕಂಟ್ರೋಲ್ ಮಾಡಲು ತಕ್ಷಣವೇ ಕಠಿಣ ತನಿಖೆಗೆ ಆದೇಶಿಸಿದ್ದಾರೆ.

ಮತ್ತೊಂದೆಡೆ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಸೇರಿದಂತೆ ಪ್ರಮುಖ ವಿರೋಧ ಪಕ್ಷಗಳು ಈ ವಿಷಯವನ್ನು ಸರ್ಕಾರದ ವಿರುದ್ಧ ತೀವ್ರ ರಾಜಕೀಯ ಅಸ್ತ್ರವನ್ನಾಗಿ ಬಳಸುತ್ತಿವೆ. ಭಕ್ತರ ಪವಿತ್ರ ದೇಣಿಗೆಯನ್ನು ಲೂಟಿ ಮಾಡಲಾಗಿದೆ ಎಂದು ಆರೋಪಿಸಿರುವ ವಿಪಕ್ಷಗಳು, ಲೂಟಿ ಮಾಡಿದ ಹಣವನ್ನು ವಾಪಸ್ ಪಡೆಯಬೇಕೆಂದು ಆಗ್ರಹಿಸಿವೆ. ಅಯೋಧ್ಯೆಯ ನೈತಿಕ ಅಧಿಪತ್ಯದ ಮೇಲೆಯೇ ಈ ಹಗರಣವು ಕರಿನೆರಳು ಚಾಚಿದೆ. ಮುಂಬರುವ 2027ರ ಉತ್ತರ ಪ್ರದೇಶ ಚುನಾವಣೆ ಮತ್ತು 2029ರ ಲೋಕಸಭಾ ಚುನಾವಣೆಯ ದೃಷ್ಟಿಯಿಂದ ಈ ವಿವಾದವು ಪಕ್ಷದ ವರ್ಚಸ್ಸಿಗೆ ಧಕ್ಕೆ ತಾರದಂತೆ ಎಚ್ಚರಿಕೆ ವಹಿಸಲು ಬಿಜೆಪಿಯ ಕೇಂದ್ರ ನಾಯಕತ್ವವು ರಾಜ್ಯದ ನಾಯಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಈ ರಾಜಕೀಯ ಬಿಕ್ಕಟ್ಟು ಉತ್ತರ ಪ್ರದೇಶದ ಚುನಾವಣಾ ಚಿತ್ರಣವನ್ನು ಬದಲಿಸುವ ಮುನ್ಸೂಚನೆ ನೀಡುತ್ತಿದೆ.

Comments

Popular posts from this blog

ಕರಾವಳಿಯ ನೆಮ್ಮದಿಗೆ ಕೊಲೆಗಳ ಕರಿನೆರಳು

ಮಾತಿನ ಸಂಸ್ಕøತಿ ಕಳೆದುಕೊಳ್ಳುತ್ತಿರುವ ರಾಜಕೀಯ

WHEN COMMUNAL POLITICS POISONS TRADITION: A WARNING FROM UDUPI