`ವೃದ್ಧ ನಾರೀ ಪತಿವ್ರತಾ' ಮಾತು ನೆನಪಿಗೆ ತರುವ ಸಿದ್ದು ವರಸೆ

 ರಾಜಕೀಯದ ಕೊಳಕಿನ ಬಗ್ಗೆ ಕುರುಬ ನಾಯಕನ ಉಪದೇಶ!

ರೆಕ್ಕೆ ಪುಕ್ಕ ಇಲ್ಲದ ಮಾತು * ಬಿವಿಸೀ


ಹಳೆಯ ಮೈಸೂರು ಭಾಗದ ಸಾರ್ವಜನಿಕ ವೇದಿಕೆಯಲ್ಲಿ 2028ರ ವಿಧಾನಸಭೆ ಚುನಾವಣೆಯಲ್ಲಿ ತಾವು ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ``ಇಂದಿನ ರಾಜಕೀಯ ಕೊಳಕಾಗಿದೆ, ಭ್ರಷ್ಟಾಚಾರದಿಂದ ತುಂಬಿದೆ'' ಎಂದು ಹೇಳಿರುವುದು ವಿಚಿತ್ರವೆನಿಸಿದರೂ ಸತ್ಯ ಎನ್ನುವ ವರದಿ. ಈ ಮಾತು ಕೇಳಿದಾಗ ಕನ್ನಡದ ಹಳೆಯ ಗಾದೆಯಾದ `ವೃದ್ಧ ನಾರೀ ಪತಿವ್ರತಾ' ಎಂಬುದು ನೆನಪಾಗುತ್ತದೆ. ಏಕೆಂದರೆ, ಕರ್ನಾಟಕದ ರಾಜಕೀಯದಲ್ಲಿ ಕೊಳಕು ಹೆಚ್ಚಲು ಕಾರಣವಾದ ಪ್ರಮುಖ ವ್ಯಕ್ತಿಗಳಲ್ಲಿ ಅವರೂ ಕಾರಣರು.

ತಮ್ಮನ್ನು ದೇವರಾಜ ಅರಸು ಅವರೊಂದಿಗೆ ಹೋಲಿಸಿಕೊಳ್ಳಲು ಹೆಮ್ಮೆಪಡುವ ಮತ್ತು ಅದನ್ನು ಸಾರಲು ಸರಕಾರದ ಖರ್ಚಿನಲ್ಲಿ ಕೋಟ್ಯಂತರ ರೂ ಜಾಹೀರಾತು ಹಾಕಿಸಿಕೊಂಡ ಸಿದ್ದರಾಮಯ್ಯ, ಹಿಂದುಳಿದವರ ಪರ ಹೋರಾಟ ನಡೆಸಿದ ನಾಯಕನ ಇಮೇಜು ಬೆಳೆಸಿಕೊಳ್ಳಲು ಶ್ರಮಿಸಿದ್ದಾರೆ. ಮಾತೆತ್ತಿದರೆ ಜಾತಿ ಎಂದೇ ಅಣಿಮುತ್ತು ಉದುರಿಸುತ್ತಿದ್ದ ಅವರ ಎರಡು ಅವಧಿಯ ಮುಖ್ಯಮಂತ್ರಿತ್ವದಲ್ಲಿ ಭ್ರಷ್ಟಾಚಾರದ ಹೊಸ ಹೊಸ ಆರೋಪಗಳು ವಾರಕ್ಕೊಮ್ಮೆ ಕೇಳಿಬರುತ್ತಿದ್ದವು. ಮುಡಾ ನಿವೇಶನ ಪ್ರಕರಣದಲ್ಲಿ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಭೂಹಗರಣದ ಆರೋಪ ಅವರ ಮೇಲೆಯೇ ಕೇಳಿಬಂತು. ಜಾರಿ ನಿರ್ದೇಶನಾಲಯ ಮತ್ತು ತನಿಖಾ ಸಂಸ್ಥೆಗಳು ವಿಚಾರಣೆ ನಡೆಸಿದವು. ಆ ಪ್ರಕರಣಗಳು ಇನ್ನೂ ನ್ಯಾಯಾಲಯದ ಮುಂದಿವೆ. ಇಂತಹ ಪರಿಸ್ಥಿತಿಯಲ್ಲಿ ರಾಜಕೀಯದ ನೈತಿಕತೆಯ ಬಗ್ಗೆ ಅವರು ನೀಡುವ ಉಪದೇಶ ವಿಶ್ವಾಸಾರ್ಹವಾಗಿ ಕೇಳಿಸುವುದಿಲ್ಲ.

ಅವರ ಸಂಪುಟದಲ್ಲಿದ್ದ ನಾಗೇಂದ್ರ ಮತ್ತು ತಿಮ್ಮಾಪುರ ಅವರಂತಹ ಸಚಿವರು ಗಂಭೀರ ಆರೋಪಗಳ ಹಿನ್ನೆಲೆಯಲ್ಲಿ ಸಚಿವ ಸ್ಥಾನ ತ್ಯಜಿಸಬೇಕಾಯಿತು. ನಗರಾಭಿವೃದ್ಧಿ ಮತ್ತು ಅಬಕಾರಿ ಇಲಾಖೆಯಂತಹ ಆದಾಯ ತರುವ ಪ್ರಮುಖ ಖಾತೆಗಳನ್ನು ಆಪ್ತರಿಗೆ ಒಪ್ಪಿಸಲಾಯಿತು. ಅವರ ಪುತ್ರ ಯತೀಂದ್ರ ಅವರು ಲಂಚದ ವ್ಯವಹಾರಗಳಿಗೆ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದರು ಎಂಬ ವರದಿಗಳೂ ವ್ಯಾಪಕವಾಗಿ ಹರಿದಾಡಿದವು. ಇವೆಲ್ಲವೂ ಆಡಳಿತದ ಮೇಲೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದವು. ಬೆಕ್ಕು ಕಣ್ಮುಚ್ಚಿ ಹಾಲು ಕುಡಿದರೆ ಜಗತ್ತಿಗೆ ತಿಳಿಯದೇ?

ಮುಖ್ಯಮಂತ್ರಿಯ ಜೊತೆಗೆ ಹಣಕಾಸು ಸಚಿವರೂ ಆಗಿದ್ದ ಸಿದ್ದರಾಮಯ್ಯ, ತಾವು ದೇಶದ ನಂಬರ್ ಒನ್ ಹಣಕಾಸು ಸಚಿವ ಎಂದು ಪದೇಪದೇ ಹೇಳಿಕೊಳ್ಳುತ್ತಿದ್ದರು. ಅನೇಕ ಬಜೆಟ್ ಮಂಡಿಸಿದ ದಾಖಲೆ ತಮ್ಮದು ಎಂದು ಹೆಮ್ಮೆಪಡುತ್ತಿದ್ದರು. ಆದರೆ ಅದೇ ಅವಧಿಯಲ್ಲಿ ಸರ್ಕಾರಿ ನೌಕರರಿಗೆ ಸಂಬಳ ನೀಡುವುದಲ್ಲಿಯೂ ಎಡವಿದರು. ಶಾಲೆಗಳು, ಕಾಲೇಜುಗಳು, ರಸ್ತೆ-ಸೇತುವೆ ರಿಪೇರಿ ಮತ್ತು ಆಸ್ಪತ್ರೆಗಳಿಗೆ ಅಗತ್ಯ ಅನುದಾನ ಸಕಾಲಕ್ಕೆ ಲಭ್ಯವಾಗದೆ ಆಡಳಿತ ಯಂತ್ರ ತತ್ತರಿಸಿತು. ಸರಕಾರ ವಸ್ತುಶಃ ದಿವಾಳಿಯಾಗಿತ್ತು. ದಾಖಲೆ ಸಂಖ್ಯೆಯ ಬಜೆಟ್ ಮಂಡಿಸಿರುವುದಕ್ಕಿಂತ ಪರಿಣಾಮಕಾರಿ ಆಡಳಿತವೇ ಮುಖ್ಯ ಎಂಬುದನ್ನು ಅವರ ಆಡಳಿತವೇ ನೆನಪಿಸಿತು.

ಸಿದ್ದರಾಮಯ್ಯ ಅವರ ರಾಜಕೀಯವು ಅಭಿವೃದ್ಧಿಗಿಂತ ಹೆಚ್ಚಾಗಿ ಜಾತಿ ರಾಜಕಾರಣದ ಸುತ್ತಲೇ ಸೀಮಿತವಾಯಿತು ಎಂಬ ಟೀಕೆ ಹೊಸದೇನಲ್ಲ. ಅಹಿಂದ ನಾಯಕತ್ವವನ್ನು ನಿರಂತರವಾಗಿ ಮುಂದಿಟ್ಟ ಅವರು ಬಸವಣ್ಣ ಮತ್ತು ಅಂಬೇಡ್ಕರ್ ಅವರ ಆದರ್ಶಗಳನ್ನು ಭಾಷಣಗಳಲ್ಲಿ ಉದುರಿಸುತ್ತಿದ್ದರು. ಆದರೆ ಅವುಗಳನ್ನು ಆಡಳಿತದಲ್ಲಿ ಎಷ್ಟರ ಮಟ್ಟಿಗೆ ಅನುಸರಿಸಿದರು ಎಂಬ ಪ್ರಶ್ನೆ ಇಂದಿಗೂ ಉಳಿದಿದೆ. ಹಿಂದುಳಿದ ವರ್ಗಗಳು ಮತ್ತು ಪರಿಶಿಷ್ಟ ಸಮುದಾಯಗಳಿಗೆ ಸೇರಿದ ಮಠಾಧೀಶರಿಗೆ ಮಾತ್ರ ಹೆಚ್ಚಿನ ಆದ್ಯತೆ ನೀಡಿದರು ಎಂಬ ಆರೋಪವೂ ಕೇಳಿಬಂತು. ತಾನು ಆಸ್ತಿಕನೋ ನಾಸ್ತಿಕನೋ ಎಂಬ ಗೊಂದಲದಲ್ಲಿ ತೇಲಾಡಿದರು. ಬೊಕ್ಕಸ ಬರಿದಾಗಿದ್ದರೂ ಆಡಂಬರದ ನೂರಾರು ಕೋಟಿ ರೂ ಯೋಜನೆ ಪ್ರಕಟಿಸಿ ಜನರನ್ನು ತಪ್ಪು ಹಾದಿಗೆಳೆದರು. ಇತರ ಸಮುದಾಯಗಳ ಬಗ್ಗೆ ಅವರ ನಿಲುವು ನಿರ್ಲಕ್ಷ್ಯದ ಧೋರಣೆಯಲ್ಲಿತ್ತು ಎಂಬ ಭಾವನೆ ವ್ಯಾಪಕವಾಗಿ ಬೆಳೆದಿತು.

ಅವರ ಆಡಳಿತ ಶೈಲಿಯೂ ಜನಸ್ನೇಹಿಯಾಗಿರಲಿಲ್ಲ ಎಂಬ ಟೀಕೆಗಳು ಇದ್ದವು. ಸಾರ್ವಜನಿಕರ ಅಹವಾಲುಗಳನ್ನು ನೇರವಾಗಿ ಆಲಿಸುವ ಬದಲು ಆಪ್ತವಲಯದ ಮೂಲಕವೇ ಆಡಳಿತ ನಡೆಸಿದರು ಎನ್ನಲಾಯಿತು. ತಮ್ಮನ್ನು ಭೇಟಿ ಮಾಡುವ ಅವಕಾಶವೂ ಕೆಲವೇ ನಿಷ್ಠಾವಂತರಿಗೆ ಸೀಮಿತವಾಗಿತ್ತು. ತಮ್ಮ ಸುತ್ತ ಬಕೀಟು ಹಿಡಿಯುವವರನ್ನು ಮಾತ್ರ ಬಿಟ್ಟುಕೊಳ್ಳುತ್ತಿದ್ದರು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಇಡೀ ಕರ್ನಾಟಕಕ್ಕಿಂತ ಹಳೆಯ ಮೈಸೂರು ಭಾಗವೇ ರಾಜ್ಯದ ಕೇಂದ್ರ ಎಂಬ ಮನೋಭಾವ ಅವರ ರಾಜಕೀಯದಲ್ಲಿ ಪ್ರತಿಫಲಿಸುತ್ತಿತ್ತು ಎಂಬ ಆರೋಪವೂ ಆಗಾಗ ಕೇಳಿಬಂತು.

ಇಂದು ರಾಜಕೀಯದಲ್ಲಿ ಎಲ್ಲವೂ ಕೆಟ್ಟಿದೆ ಎಂದು ಹೇಳುವ ಸಿದ್ದರಾಮಯ್ಯ, ಮೊದಲು ತಮ್ಮದೇ ಆಡಳಿತದ ಕನ್ನಡಿಯಲ್ಲಿ ತಮ್ಮನ್ನು ತಾವು ನೋಡಿಕೊಳ್ಳಬೇಕಿತ್ತು. ರಾಜ್ಯದ ರಾಜಕೀಯ ಸಂಸ್ಕøತಿಯನ್ನು ಶುದ್ಧೀಕರಿಸುವ ಹೊಣೆ ಹೊತ್ತಿದ್ದ ನಾಯಕನೇ ಅದರ ಅವನತಿಗೆ ಕಾರಣನಾದರೆ, ನಂತರ ನೀಡುವ ನೈತಿಕ ಉಪದೇಶ ಜನರಲ್ಲಿ ವ್ಯಂಗ್ಯವನ್ನಷ್ಟೇ ಹುಟ್ಟಿಸುತ್ತದೆ. ಕೊನೆಗೆ ಅವರನ್ನು ಅಧಿಕಾರದಿಂದ ಕೆಳಗಿಳಿಸಿದ ನಂತರವೇ ರಾಜ್ಯದ ಜನರು ನಿಟ್ಟುಸಿರು ಬಿಟ್ಟರು ಎಂಬ ರಾಜಕೀಯ ವಾದವೂ ಈ ಹಿನ್ನೆಲೆಯಲ್ಲಿ ಮತ್ತೆ ಚರ್ಚೆಗೆ ಬಂದಿದೆ.


Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

When Prestige Is Gifted, Not Earned: The Padma Vibhushan Controversy Of Veerendra Heggade

ಧರ್ಮಸ್ಥಳದ ಪ್ರಕರಣಗಳಲ್ಲಿ ಸತ್ಯ ಸಾಯುವುದಿಲ್ಲ