ಕೇಂದ್ರ ಸರಕಾರ ಅಧೀನದ ಒಎನ್‍ಜಿಸಿ ಕಂಪೆನಿಯ 668 ಕೋಟಿ ರೂ ದೇಣಿಗೆ ಆರೆಸ್ಸೆಸ್ ಸಂಸ್ಥೆಗಳಿಗೆ
ನವದೆಹಲಿ: ಕೇಂದ್ರ ಸರ್ಕಾರದ ಸ್ವಾಮ್ಯದ ತೈಲ ಮತ್ತು ಅನಿಲ ಮಹಾ ಸಂಸ್ಥೆ ಒಎನ್‍ಜಿಸಿ (ಇದು ಮಂಗೂಳೂರಿನಲ್ಲಿ ಎಂಆರ್‍ಪಿಎಲ್ ತೈಲ ಉತ್ಪಾದನಾ ಘಟಕವನ್ನು ನಡೆಸುತ್ತಿದೆ) ಕಳೆದ ಹತ್ತು ವರ್ಷಗಳಲ್ಲಿ ತನ್ನ ಕಾಪೆರ್Çರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್‍ಆರ್) ನಿಧಿಯಿಂದ ರಾಷ್ಟ್ರೀಯ ಸ್ವಯಂಸೇವಕ ಸಂಘದೊಂದಿಗೆ ಸಂಬಂಧ ಹೊಂದಿವೆ ಎಂದು ಹೇಳಲಾಗಿರುವ 20 ಸಂಸ್ಥೆಗಳಿಗೆ ಒಟ್ಟು 668.01 ಕೋಟಿ ರೂಪಾಯಿಗಳನ್ನು ನೀಡಿದೆ ಎಂಬ ಆರೋಪ ಹೊಸ ರಾಜಕೀಯ ಮತ್ತು ಸಾರ್ವಜನಿಕ ಚರ್ಚೆಗೆ ಕಾರಣವಾಗಿದೆ. ಈ ಕುರಿತು ಪ್ರಕಟವಾದ ತನಿಖಾ ವರದಿ ಹುಬ್ಬೇರಿಸಿದೆ.
ವರದಿಯ ಪ್ರಕಾರ, 2015ರಿಂದ 2025ರ ಅವಧಿಯಲ್ಲಿ ಒಎನ್‍ಜಿಸಿ ತನ್ನ ಸಿಎಸ್‍ಆರ್ ಕಾರ್ಯಕ್ರಮಗಳಡಿ ಸುಮಾರು 4,531 ಕೋಟಿ ರೂಪಾಯಿಗಳನ್ನು ಎರಡು ಸಾವಿರಕ್ಕೂ ಹೆಚ್ಚು ಯೋಜನೆಗಳು ಮತ್ತು ಸಂಸ್ಥೆಗಳಿಗೆ ಹಂಚಿಕೆ ಮಾಡಿದೆ. ಈ ಪೈಕಿ ಸುಮಾರು 14.7 ಶೇಕಡಾ, ಅಂದರೆ 668.01 ಕೋಟಿ ರೂಪಾಯಿಗಳು ರಾಷ್ಟ್ರೀಯ ಸ್ವಯಂಸೇವಕ ಸಂಘದೊಂದಿಗೆ ನಂಟು ಹೊಂದಿವೆ ಎಂದು ಹೇಳಲಾಗಿರುವ 20 ಸಂಸ್ಥೆಗಳಿಗೆ ಸಂದಿವೆ ಎಂಬುದು ತನಿಖೆಯ ಪ್ರಮುಖ ಅಂಶವಾಗಿದೆ.
ಪಟ್ಟಿಯಲ್ಲಿ ಶಿಕ್ಷಣ, ಆರೋಗ್ಯ, ಗ್ರಾಮೀಣಾಭಿವೃದ್ಧಿ, ಸೇವಾ ಚಟುವಟಿಕೆಗಳು, ಆದಿವಾಸಿ ಕಲ್ಯಾಣ ಮತ್ತು ಸಾಮಾಜಿಕ ಅಭಿವೃದ್ಧಿ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹಲವು ಟ್ರಸ್ಟ್‍ಗಳು ಮತ್ತು ಸಂಘಟನೆಗಳ ಹೆಸರುಗಳಿವೆ. ಇವುಗಳು ಪ್ರತ್ಯೇಕವಾಗಿ ನೋಂದಾಯಿತ ಸಂಸ್ಥೆಗಳಾಗಿದ್ದರೂ, ಅವುಗಳ ನಿರ್ವಹಣೆ ಅಥವಾ ಸೈದ್ಧಾಂತಿಕ ಸಂಬಂಧ ರಾಷ್ಟ್ರೀಯ ಸ್ವಯಂಸೇವಕ ಸಂಘದೊಂದಿಗೆ ಇದೆ ಎಂದು ವರದಿ ಪ್ರತಿಪಾದಿಸಿದೆ.
ಈ ಬೆಳವಣಿಗೆ ಕೇವಲ ಹಣದ ಮೊತ್ತದ ಪ್ರಶ್ನೆಯಾಗಿ ಉಳಿದಿಲ್ಲ. ``ಸಾರ್ವಜನಿಕ ವಲಯದ ಸಂಸ್ಥೆಗಳ ಸಿಎಸ್‍ಆರ್ ನಿಧಿಯನ್ನು ಯಾವ ಮಾನದಂಡಗಳ ಆಧಾರದಲ್ಲಿ ಹಂಚಿಕೆ ಮಾಡಲಾಗುತ್ತದೆ? ಫಲಾನುಭವಿಗಳನ್ನು ಹೇಗೆ ಆಯ್ಕೆ ಮಾಡಲಾಗುತ್ತದೆ? ರಾಜಕೀಯ ಅಥವಾ ಸೈದ್ಧಾಂತಿಕ ಸಂಬಂಧ ಹೊಂದಿರುವ ಸಂಸ್ಥೆಗಳಿಗೆ ಸಾರ್ವಜನಿಕ ವಲಯದ ಕಂಪನಿಗಳು ದೊಡ್ಡ ಪ್ರಮಾಣದಲ್ಲಿ ನೆರವು ನೀಡುವುದು ಸಮಂಜಸವೇ?'' ಎಂಬ ಪ್ರಶ್ನೆಗಳು ಚರ್ಚೆಗೆ ಬಂದಿವೆ.
ಸಿಎಸ್‍ಆರ್ ನಿಧಿಯ ಉದ್ದೇಶ ಸಮಾಜದ ಕಲ್ಯಾಣಕ್ಕೆ ಪೂರಕವಾಗುವ ಯೋಜನೆಗಳನ್ನು ಬೆಂಬಲಿಸುವುದಾಗಿದೆ. ಕಂಪನಿಗಳ ಕಾಯ್ದೆಯಡಿ ಅರ್ಹತೆ ಹೊಂದಿರುವ ಯಾವುದೇ ಸಂಸ್ಥೆಗೆ ಕಾನೂನುಬದ್ಧವಾಗಿ ನೆರವು ನೀಡಬಹುದು. ಆದರೆ ಸಾರ್ವಜನಿಕರ ಹಣದಿಂದ ನಡೆಯುವ ಸರ್ಕಾರಿ ಕಂಪನಿಗಳು ಸಂಪೂರ್ಣ ಪಾರದರ್ಶಕತೆ, ಸಮಾನತೆ ಮತ್ತು ರಾಜಕೀಯ ತಾಟಸ್ಥ್ಯವನ್ನು ಪಾಲಿಸಬೇಕೆಂಬ ಅಭಿಪ್ರಾಯವನ್ನು ಹಲವರು ವ್ಯಕ್ತಪಡಿಸುತ್ತಿದ್ದಾರೆ.
ಇನ್ನೊಂದೆಡೆ, ನೆರವು ಪಡೆದಿರುವ ಸಂಸ್ಥೆಗಳು ಕಾನೂನುಬದ್ಧವಾಗಿ ನೋಂದಾಯಿತವಾಗಿದ್ದು, ಶಿಕ್ಷಣ, ಆರೋಗ್ಯ ಮತ್ತು ಗ್ರಾಮೀಣಾಭಿವೃದ್ಧಿ ಸೇರಿದಂತೆ ಸಿಎಸ್‍ಆರ್‍ಗೆ ಅನುಮತಿಸಲಾದ ಕ್ಷೇತ್ರಗಳಲ್ಲೇ ಕಾರ್ಯನಿರ್ವಹಿಸುತ್ತಿದ್ದರೆ, ಅವರಿಗೆ ಅನುದಾನ ನೀಡುವುದರಲ್ಲಿ ಕಾನೂನುಬಾಹಿರತೆ ಇಲ್ಲ ಎಂಬ ವಾದವೂ ಕೇಳಿಬರುತ್ತಿದೆ. ಈವರೆಗೆ ಯಾವುದೇ ನ್ಯಾಯಾಲಯ ಅಥವಾ ಸರ್ಕಾರಿ ತನಿಖಾ ಸಂಸ್ಥೆ ಈ ಸಿಎಸ್‍ಆರ್ ವೆಚ್ಚವನ್ನು ಕಾನೂನುಬಾಹಿರ ಎಂದು ಘೋಷಿಸಿಲ್ಲ ಎಂಬ ಅಂಶವೂ ಗಮನಾರ್ಹವಾಗಿದೆ.
ಈ ಪ್ರಕರಣವು ಸಾರ್ವಜನಿಕ ವಲಯದ ಸಂಸ್ಥೆಗಳ ಸಿಎಸ್‍ಆರ್ ವೆಚ್ಚದ ಪಾರದರ್ಶಕತೆ, ಫಲಾನುಭವಿಗಳ ಆಯ್ಕೆ ವಿಧಾನ ಮತ್ತು ಸಾರ್ವಜನಿಕ ಹಣದ ಬಳಕೆಯ ಕುರಿತು ದೇಶವ್ಯಾಪಿ ಚರ್ಚೆಗೆ ನಾಂದಿ ಹಾಡಿದೆ. ಮುಂದಿನ ದಿನಗಳಲ್ಲಿ ಒಎನ್‍ಜಿಸಿ, ಸಂಬಂಧಿತ ಸಂಸ್ಥೆಗಳು ಹಾಗೂ ಕೇಂದ್ರ ಸರ್ಕಾರ ನೀಡುವ ಅಧಿಕೃತ ಸ್ಪಷ್ಟೀಕರಣಗಳು ಈ ವಿವಾದದ ದಿಕ್ಕನ್ನು ನಿರ್ಧರಿಸುವ ಸಾಧ್ಯತೆ ಇದೆ.
Comments
Post a Comment