ಡೊನಾಲ್ಡ್ ಟ್ರಂಪ್ ಅಮೆರಿಕದ ಭಸ್ಮಾಸುರ

 


ಟ್ರಂಪ್ ಆಳ್ವಿಕೆಯಲ್ಲಿ ಅಮೆರಿಕದ ವಿದೇಶಾಂಗ ನೀತಿಯು ದಿಕ್ಕು ದೆಸೆ ಇಲ್ಲದಂತಾಗಿದೆ. ಮಿತ್ರರನ್ನು ಸ್ಪರ್ಧಿಗಳಂತೆ ಭಾವಿಸಲಾಗುತ್ತಿದ್ದು, ವಂಚನೆ, ಮೋಸ, ದಗಲಬಾಜಿತನದ ವೈಯಕ್ತಿಕ ಪೈಪೆÇೀಟಿಯಾಗಿ ಕಾಣಲಾಗುತ್ತಿದೆ

ವಿನಾಶ ಕಾಲೇ......* ಬಿವಿಸೀ

ಡೋನಾಲ್ಡ್ ಟ್ರಂಪ್ ನೆನಪಾದ ಕೂಡಲೇ ಭಾರತದ ಪುರಾಣಗಳಲ್ಲಿನ ಒಬ್ಬ ವ್ಯಕ್ತಿಯ ಚಿತ್ರ ಕಣ್ಮುಂದೆ ಬರುತ್ತದೆ. ಅದು ಅಧಿಕಾರದ ಅಮಲಿನಲ್ಲಿ ಸರ್ವಶಕ್ತನಾಗುವ ಹಂಬಲ ಹೊತ್ತು ಕೊನೆಗೆ ತನ್ನನ್ನೇ ನಾಶಪಡಿಸಿಕೊಂಡ ಭಸ್ಮಾಸುರ. ಟ್ರಂಪ್‍ನ ರಾಜಕೀಯ ಪಯಣವು ಈ ಪುರಾಣ ಕಥನವನ್ನು ಹಲವು ರೀತಿಗಳಲ್ಲಿ ಬಿಂಬಿಸುತ್ತದೆ. ಭಸ್ಮಾಸುರನ ಹಾಗೆಯೇ ಟ್ರಂಪ್ ವೈಯಕ್ತಿಕ ಆತ್ಮತೃಪ್ತಿ ಮತ್ತು ಪ್ರಾಬಲ್ಯ ಸಾಧಿಸುವ ಹಾದಿಯಲ್ಲಿ ಸಾಗಿದ್ದು, ತನ್ನ ದೇಶದ ಮೇಲೆ ಆಗುವ ಪರಿಣಾಮಗಳನ್ನೂ ಲೆಕ್ಕಿಸದೆ ಮುಂದುವರೆದಿದ್ದಾರೆ. ವಿಶ್ವದ ಅತಿ ಪ್ರಬಲ ಪ್ರಜಾಪ್ರಭುತ್ವ ದೇಶದ ನಾಯಕನಾಗಿದ್ದರೂ, ಟ್ರಂಪ್ ಮೂರ್ಖರ ಸ್ವರ್ಗದಲ್ಲಿರುವವರ ಹಾಗೆ ವರ್ತಿಸುವುದು ಸಾಮಾನ್ಯವಾಗಿದ್ದು, ಅವರ ಅಹಂಕಾರದ ನಡವಳಿಕೆಗಳು, ಆ ಕ್ಷಣದ ತೀರ್ಮಾನಗಳು ರಾಷ್ಟ್ರದ ಹಿತಾಸಕ್ತಿಯನ್ನು ಕಾಪಾಡುತ್ತವೆ ಎಂಬ ನಂಬಿಕೆಯಿಂದ ನಡೆಯುತ್ತಾರೆ. ಆದರೆ ವಾಸ್ತವ ಭಿನ್ನವಾಗಿದ್ದು, ಅಮೆರಿಕಾಗೆ ಅಷ್ಟೇ ಅಲ್ಲದೆ ಇಡೀ ವಿಶ್ವಕ್ಕೇ ಅಪಾಯ ಎದುರಾಗಿದೆ.

ಟ್ರಂಪ್ ಅವರ ಅಧಿಕಾರಾವಧಿ ಅಮೆರಿಕದ ಸಂವಿಧಾನದಲ್ಲಿ ಅಳವಡಿಸಲಾಗಿರುವ ಚೆಕ್ಸ್ ಎಂಡ್ ಬ್ಯಾಲೆನ್ಸೆಸ್ ಕ್ರಮಗಳ ದೌರ್ಬಲ್ಯಗಳನ್ನು ಎತ್ತಿ ತೋರಿಸುತ್ತವೆ. ಅಮೆರಿಕವು ಒಂದು ಕ್ರಿಯಾಶೀಲ ಪ್ರಜಾಸತ್ತಾತ್ಮಕ ಸಂಸ್ಥೆಗಳ ದೇಶ ಎಂದು ಹೇಳಿಕೊಂಡರೂ, ಇವರ ಅವಧಿಯಲ್ಲಿನ ಆಳ್ವಿಕೆಯು, ಈ ಸಂಸ್ಥೆಗಳನ್ನು ಕೆಲವೊಮ್ಮೆ ಉಲ್ಲಂಘಿಸಬಹುದು, ನಿರ್ಲಕ್ಷಿಸಬಹುದು ಎಂಬುದನ್ನು ನಿರೂಪಿಸಿದೆ. ನ್ಯಾಯಾಂಗದ ಮೇಲೆ ದಾಳಿ ನಡೆಸುವುದು, ಮಾಧ್ಯಮಗಳನ್ನು ಅವಹೇಳನ ಮಾಡುವುದು, ಅಪಮಾನಗೊಳಿಸುವುದು, ಚುನಾವಣೆಗಳ ಔಚಿತ್ಯವನ್ನೇ ಪ್ರಶ್ನಿಸುವುದು, ಟ್ರಂಪ್ ಅವರ ಉತ್ತರದಾಯಿತ್ವವನ್ನೇ ನಾಶಪಡಿಸಿದೆ. ಅಮೆರಿಕದ ಪ್ರಜೆಗಳು ಟ್ರಂಪ್‍ನನ್ನು ದಿಕ್ಕು ದೆಸೆ ಇಲ್ಲದ, ದಕ್ಷತೆ ಇಲ್ಲದ ನಾಯಕನ ಹಾಗೆ ನೋಡುತ್ತಾರೆ. ಆದಾಗ್ಯೂ ಸಾಂಸ್ಥಿಕ ಕ್ರಮಗಳು ಅವರನ್ನು ನಿಯಂತ್ರಿಸಲು ವಿಫಲವಾಗಿವೆ.

ಇತಿಹಾಸವು ಸ್ಪಷ್ಟವಾದ ಎಚ್ಚರಿಕೆಯನ್ನು ನೀಡುತ್ತದೆ. ಜರ್ಮನಿಯ ಅಡೋಲ್ಫ್ ಹಿಟ್ಲರ್ ಪ್ರಜಾಪ್ರಭುತ್ವದ ಮೂಲಕವೇ ಅಧಿಕಾರ ಗಳಿಸಿದ್ದರೂ ಅದನ್ನು ಒಂದು ಅಸ್ತ್ರವನ್ನಾಗಿ ಬಳಸಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬುಡಮೇಲು ಮಾಡಿದ್ದ. ಇದರ ಪರಿಣಾಮ ವಿನಾಶಕಾರಿಯಾಗಿದ್ದು, ಅಹಮಿಕೆಯ ಮಹತ್ವಾಕಾಂಕ್ಷೆಯ ಹೊತ್ತ ಹಿಟ್ಲರ್ ಜರ್ಮನಿಯನ್ನು ನಾಶಪಡಿಸಿದ್ದೇ ಅಲ್ಲದೆ, ಇಡೀ ವಿಶ್ವವನ್ನು ಯುದ್ದದೆಡೆಗೆ ಸೆಳೆದಿದ್ದ. ಟ್ರಂಪ್ ಇದೇ ಅಪಾಯದ ಮುನ್ಸೂಚನೆಯನ್ನು ನೀಡುತ್ತಿದ್ದಾರೆ. ಅಷ್ಟೇ ವಿನಾಶಕಾರಿಯಾಗದಿದ್ದರೂ, ಅನುಸರಿಸುವ ವಿಧಾನ ಅದೇ ಆಗಲಿದೆ. ತಮ್ಮ ವೈಯಕ್ತಿಕ ವೈಭವೀಕರಣದ ಸಲುವಾಗಿ ಪ್ರಜಾಸತ್ತಾತ್ಮಕ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ, ಸಂಸ್ಥೆಗಳನ್ನು ನಿರ್ಲಕ್ಷಿಸಿ, ತತ್ವಗಳನ್ನೂ ಮೀರಿದ ನಿಷ್ಠೆಯನ್ನು ಅಪೇಕ್ಷಿಸುವ ಮೂಲಕ ಟ್ರಂಪ್ ತಾನು ಎತ್ತಿಹಿಡಿಯುವುದಾಗಿ ಘೋಷಿಸಿದ್ದ ರಾಜಕೀಯ ವ್ಯವಸ್ಥೆಯನ್ನೇ ಬುಡಮೇಲು ಮಾಡುತ್ತಿದ್ದಾರೆ.

ಸರ್ವಾಧಿಕಾರಿ ನಾಯಕರ ಬಗ್ಗೆ ಟ್ರಂಪ್ ಪ್ರಶಂಸನೀಯ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿರುವುದು ಈ ಅಪಾಯವನ್ನು ಉಲ್ಬಣಿಸುವಂತೆ ಮಾಡಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯ ಮುಂದಾಳತ್ವ ವಹಿಸಿರುವಾಗ ಟ್ರಂಪ್ ಸತತವಾಗಿ, ಮಾನವ ಹಕ್ಕುಗಳನ್ನು ಉಲ್ಲಂಘಿಸುವ ತಮ್ಮ ಅಧಿಕಾರ ಉಳಿಸಿಕೊಳ್ಳಲು ಎಲ್ಲ ವಾಮ ಮಾರ್ಗಗಳನ್ನೂ ಅನುಸರಿಸುವ ಸರ್ವಾಧಿಕಾರಿಗಳ ಬೆನ್ನು ತಟ್ಟುತ್ತಿರುವುದು ಅಪಾಯಕಾರಿ ನಡೆಯಾಗಿದೆ. ಟ್ರಂಪ್‍ನ ಜನಾಂಗೀಯ ತಾರತಮ್ಯ ನೀತಿಗಳು, ಪ್ರತ್ಯೇಕತೆಯ ರಾಷ್ಟ್ರೀಯತಾವಾದ ಮತ್ತು ಜಾಗತಿನ ನಿಯಮಗಳ ಬಗ್ಗೆ ಇರುವ ಅಸಡ್ಡೆ ಅವರ ನಾಯಕತ್ವವನ್ನು ಅಪಾಯಕಾರಿಯಾಗಿಸಿದ್ದು, ಇದು ಆಂತರಿಕವಾಗಿ ಹಾಗೂ ಅಂತಾರಾಷ್ಟ್ರೀಯ ನೆಲೆಯಲ್ಲಿ ವಿನಾಶಕಾರಿಯಾಗಲಿದೆ.

ಟ್ರಂಪ್ ಆಳ್ವಿಕೆಯಲ್ಲಿ ಅಮೆರಿಕದ ವಿದೇಶಾಂಗ ನೀತಿಯು ದಿಕ್ಕು ದೆಸೆ ಇಲ್ಲದಂತಾಗಿದೆ. ಮಿತ್ರರನ್ನು ಸ್ಪರ್ಧಿಗಳಂತೆ ಭಾವಿಸಲಾಗುತ್ತಿದ್ದು, ವಂಚನೆ, ಮೋಸ, ದಗಲಬಾಜಿತನದ ವೈಯಕ್ತಿಕ ಪೈಪೆÇೀಟಿಯಾಗಿ ಕಾಣಲಾಗುತ್ತಿದೆ. ತಮ್ಮ ಸ್ವಂತ ಅಹಮಿಕೆಗೆ ಸೂಕ್ತ ಎನಿಸದಿರುವ ಕಾರಣ ದಶಕಗಳ ಕಾಲದ ಪರಿಶ್ರಮದಿಂದ ರೂಪಿಸಿದ ಮೈತ್ರಿಗಳು, ಸಹಭಾಗಿತ್ವಗಳು ಭಗ್ನವಾಗುತ್ತಿದೆ. ಉದಾಹರಣೆಗೆ, ಭಾರತ ಅಮೆರಿಕದೊಡನೆ ತಂತ್ರಜ್ಞಾನ ಮತ್ತು ಭದ್ರತಾ ವಲಯದಲ್ಲಿ ಉತ್ತಮ ಸಹಕಾರ ಹೊಂದಿದ್ದರೂ ಸಹ, ರಾಜತಾಂತ್ರಿಕ ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ವ್ಯಾಪಾರ ಕದನ, ದಿಕ್ಕು ದೆಸೆ ಇಲ್ಲದ ರಾಜತಾಂತ್ರಿಕತೆ, ಮನಸ್ಸಿಗೆ ತೋಚಿದಂತೆ ತಕ್ಷಣದ ಘೋಷಣೆಗಳು ಅಮೆರಿಕದ ಜಾಗತಿಕ ಪ್ರಭಾವವನ್ನು ಕುಗ್ಗಿಸಿದೆ. ಅಮೆರಿಕದ ಜತೆ ಭಾರತ, ಯುರೋಪು, ಕೆನಡಾ, ಆಸ್ಟ್ರೇಲಿಯಾ, ಲ್ಯಾಟಿನ್ ಅಮೆರಿಕಾಗಳ ಜತೆ ಟ್ರಂಪ್ ನೀತಿಯನ್ನು ಈ ನೆಲೆಯಲ್ಲಿ ಪರಾಮರ್ಶಿಸಬಹುದು.

ಪರಿಸರ ಮತ್ತು ಭೌಗೋಳಿಕ ನೆಲೆಯಲ್ಲಿ ಟ್ರಂಪ್ ನಿರ್ಧಾರಗಳು ಉಂಟುಮಾಡುವ ದುಷ್ಪರಿಣಾಮಗಳು ಅಪಾಯಕಾರಿಯಾಗಿ ಕಾಣುತ್ತಿವೆ. ಅಂತಾರಾಷ್ಟ್ರೀಯ ಹವಾಮಾನ ಒಪ್ಪಂದಗಳಿಂದ ಹಿಂದೆ ಸರಿದಿರುವುದು, ವೈಜ್ಞಾನಿಕ ತಜ್ಞರ ಕ್ಷಮತೆಯನ್ನೇ ಅನುಮಾನಿಸುವುದು, ಟ್ರಂಪ್ ನೀತಿಯಾಗಿದ್ದು, ಇದು ಅವರ ದೇಶಕ್ಕೆ ಮಾತ್ರವೇ ಅಲ್ಲದೆ, ಜಗತ್ತಿನ ಭವಿಷ್ಯದ ದೃಷ್ಟಿಯಿಂದಲೂ ಆತಂಕಕಾರಿಯಾಗಿದೆ. ಅವರ ತಕ್ಷಣದ ಮನಸೋಯಿಚ್ಚೆಯ ನೀತಿಗಳು ಸರಿಪಡಿಸಲಾಗದ ಹಾನಿ ಮಾಡುವಂತಿದ್ದು, ಇವೆಲ್ಲವೂ ಟ್ರಂಪ್ ತಮ್ಮ ವೈಯಕ್ತಿಕ ವರ್ಚಸ್ಸನ್ನು ಬೆಳೆಸಿಕೊಳ್ಳಲು ಅನುಸರಿಸುತ್ತಿದ್ದಾರೆಯೇ ಹೊರತು, ಸಾಮೂಹಿಕ ಹಿತಾಸಕ್ತಿಗಾಗಿ ಅಲ್ಲ.

ಪೌರಾಣಿಕ ನೆಲೆಯಲ್ಲಿ ನೋಡಿದಾಗ ಟ್ರಂಪ್ ಆಧುನಿಕ ಭಸ್ಮಾಸುರನಾಗಿ ಕಾಣುತ್ತಾರೆ. ತನ್ನ ಅಹಂಕಾರದ ವರ್ತನೆಯಿಂದ ತಮ್ಮನ್ನು ತಾವೇ ನಾಶಪಡಿಸಕೊಳ್ಳಲಿದ್ದಾರೆ. ಹಿಟ್ಲರನ ಚಾರಿತ್ರಿಕ ನಿದರ್ಶನದ ಹಿನ್ನೆಲೆಯಲ್ಲಿ, ಟ್ರಂಪ್ ಅಧಿಕಾರಾವಧಿಯು ಅನಿರ್ಬಂಧಿತ ಪ್ರಜಾಸತ್ತಾತ್ಮಕ ಅಧಿಕಾರವನ್ನು ಬೇಕಾಬಿಟ್ಟಿ ಬಳಸಿದರೆ, ಇದು ದೇಶ ಮತ್ತು ಜಗತ್ತನ್ನು ಒಮ್ಮೆಲೆ ನಾಶಪಡಿಸುತ್ತದೆ ಎಂಬ ವಾಸ್ತವವನ್ನು ಟ್ರಂಪ್ ಗ್ರಹಿಸಬೇಕಿದೆ. ಅಮೆರಿಕ ಮತ್ತು ಜಗತ್ತಿಗೆ ಸವಾಲು ಇರುವುದು ತಮ್ಮ ಉತ್ತರದಾಯಿತ್ವವನ್ನೂ ನಾಶಪಡಿಸುವ ಅಹಂಕಾರ ಮತ್ತು ಮಹತ್ವಾಕಾಂಕ್ಷೆಗಳಿಂದ ಹೊರಬರುವುದು. ಏಕೆಂದರೆ ಇಲ್ಲಿ ವಿಫಲವಾಗುವುದರಿಂದ, ಸ್ವಯಂ ನಾಶವಾಗುವುದು ಖಚಿತ.

Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

When Prestige Is Gifted, Not Earned: The Padma Vibhushan Controversy Of Veerendra Heggade

Why I Will Never Fly Air India Again