ಶಿವಕುಮಾರ್: ಅಧಿಕಾರದ ಅಹಂಕಾರದ ಧ್ವನಿ ಮತ್ತು ರಾಜಕೀಯ ಸಂಸ್ಕಾರಹೀನತೆ
* ಸಂಪಾದಕೀಯ ಬೆಂಗಳೂರು ಸುರಂಗ ರಸ್ತೆ ಯೋಜನೆ ಕುರಿತ ವಿವಾದ ಇದೀಗ ಕೇವಲ ಮೂಲಸೌಕರ್ಯ ಯೋಜನೆಯ ಮಿತಿಯನ್ನು ಮೀರಿ, ರಾಜ್ಯದ ರಾಜಕೀಯ ಸಂಸ್ಕಾರದ ಮಟ್ಟವನ್ನೇ ಪ್ರಶ್ನಿಸುವ ಹಂತಕ್ಕೇರಿದೆ. ಈ ವಿವಾದದ ಕೇಂದ್ರಬಿಂದುವಿನಲ್ಲಿ ಇಬ್ಬರು ಪ್ರಮುಖ ನಾಯಕರು - ಉಪ ಮುಖ್ಯಮಂತ್ರಿ ಹಾಗೂ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ ಕೆ ಶಿವಕುಮಾರ್ ಮತ್ತು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ. ನಗರದ ಹೃದಯಭಾಗದಲ್ಲಿ ಸುರಂಗ ರಸ್ತೆ ನಿರ್ಮಾಣ ಮಾಡುವ ಭಾರೀ ಯೋಜನೆ, ಅದರ ಅಸಾಧಾರಣ ವೆಚ್ಚ ಮತ್ತು ತಾಂತ್ರಿಕ ಯೋಗ್ಯತೆ ಕುರಿತು ಹಲವು ವಾದ-ಪ್ರತಿವಾದಗಳು ನಡೆಯುತ್ತಿವೆ. ಯೋಜನೆಗೆ ವಿರುದ್ಧವಾಗಿ ತೇಜಸ್ವಿ ಸೂರ್ಯ ಅವರು ಧ್ವನಿಯೆತ್ತಿದ್ದಾರೆ. ಅವರು ಮಂಡಿಸಿರುವ ಪ್ರಶ್ನೆಗಳು ತಾರ್ಕಿಕವೂ, ಸಾರ್ವಜನಿಕ ಹಿತಾಸಕ್ತಿಯ ಆಧಾರದ ಮೇಲೂ ನಿಂತಿವೆ. ಬೆಂಗಳೂರು ನಗರದಲ್ಲಿನ ವಾಯುಮಾಲಿನ್ಯ, ವಾಹನ ದಟ್ಟಣೆ, ಸಾರ್ವಜನಿಕ ಸಾರಿಗೆ ವೃದ್ಧಿ ಇವುಗಳ ಮಧ್ಯೆ, ಭೂಮಿಯೊಳಗಿನ ಸುರಂಗ ಮಾರ್ಗಕ್ಕೆ ಸಾವಿರಾರು ಕೋಟಿ ರೂಪಾಯಿ ವ್ಯಯಿಸುವ ಅಗತ್ಯವಿದೆಯೇ ಎಂಬುದು ಅವರ ಮೂಲ ಪ್ರಶ್ನೆ. ಆದರೆ ಈ ತಾರ್ಕಿಕ ಪ್ರಶ್ನೆಗೆ ತಾರ್ಕಿಕ ಹಾಗೂ ಸಮಂಜಸ ಉತ್ತರ ನೀಡುವುದರ ಬದಲು, ಉಪ ಮುಖ್ಯಮಂತ್ರಿ ಶಿವಕುಮಾರ್ ಅವರು ಬಾಯಿಗೆ ಬಂದಂತೆ ಹೇಳಿಕೆ ನೀಡಿರುವುದು ವಿಷಾದನೀಯ. `ಈತ ಯಾರು?', `ಹುಡುಗ', `ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾನೆ' ಎಂಬ ಶಬ್ದಗಳು ಕೇವಲ ರಾಜಕೀಯ ಅಸಭ್ಯತೆಯಲ್ಲ, ಜನಪ್ರತ...