ಶಿವಕುಮಾರ್: ಅಧಿಕಾರದ ಅಹಂಕಾರದ ಧ್ವನಿ ಮತ್ತು ರಾಜಕೀಯ ಸಂಸ್ಕಾರಹೀನತೆ
* ಸಂಪಾದಕೀಯ
ಬೆಂಗಳೂರು ಸುರಂಗ ರಸ್ತೆ ಯೋಜನೆ ಕುರಿತ ವಿವಾದ ಇದೀಗ ಕೇವಲ ಮೂಲಸೌಕರ್ಯ ಯೋಜನೆಯ ಮಿತಿಯನ್ನು ಮೀರಿ, ರಾಜ್ಯದ ರಾಜಕೀಯ ಸಂಸ್ಕಾರದ ಮಟ್ಟವನ್ನೇ ಪ್ರಶ್ನಿಸುವ ಹಂತಕ್ಕೇರಿದೆ. ಈ ವಿವಾದದ ಕೇಂದ್ರಬಿಂದುವಿನಲ್ಲಿ ಇಬ್ಬರು ಪ್ರಮುಖ ನಾಯಕರು - ಉಪ ಮುಖ್ಯಮಂತ್ರಿ ಹಾಗೂ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ ಕೆ ಶಿವಕುಮಾರ್ ಮತ್ತು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ.
ನಗರದ ಹೃದಯಭಾಗದಲ್ಲಿ ಸುರಂಗ ರಸ್ತೆ ನಿರ್ಮಾಣ ಮಾಡುವ ಭಾರೀ ಯೋಜನೆ, ಅದರ ಅಸಾಧಾರಣ ವೆಚ್ಚ ಮತ್ತು ತಾಂತ್ರಿಕ ಯೋಗ್ಯತೆ ಕುರಿತು ಹಲವು ವಾದ-ಪ್ರತಿವಾದಗಳು ನಡೆಯುತ್ತಿವೆ. ಯೋಜನೆಗೆ ವಿರುದ್ಧವಾಗಿ ತೇಜಸ್ವಿ ಸೂರ್ಯ ಅವರು ಧ್ವನಿಯೆತ್ತಿದ್ದಾರೆ. ಅವರು ಮಂಡಿಸಿರುವ ಪ್ರಶ್ನೆಗಳು ತಾರ್ಕಿಕವೂ, ಸಾರ್ವಜನಿಕ ಹಿತಾಸಕ್ತಿಯ ಆಧಾರದ ಮೇಲೂ ನಿಂತಿವೆ. ಬೆಂಗಳೂರು ನಗರದಲ್ಲಿನ ವಾಯುಮಾಲಿನ್ಯ, ವಾಹನ ದಟ್ಟಣೆ, ಸಾರ್ವಜನಿಕ ಸಾರಿಗೆ ವೃದ್ಧಿ ಇವುಗಳ ಮಧ್ಯೆ, ಭೂಮಿಯೊಳಗಿನ ಸುರಂಗ ಮಾರ್ಗಕ್ಕೆ ಸಾವಿರಾರು ಕೋಟಿ ರೂಪಾಯಿ ವ್ಯಯಿಸುವ ಅಗತ್ಯವಿದೆಯೇ ಎಂಬುದು ಅವರ ಮೂಲ ಪ್ರಶ್ನೆ.
ಆದರೆ ಈ ತಾರ್ಕಿಕ ಪ್ರಶ್ನೆಗೆ ತಾರ್ಕಿಕ ಹಾಗೂ ಸಮಂಜಸ ಉತ್ತರ ನೀಡುವುದರ ಬದಲು, ಉಪ ಮುಖ್ಯಮಂತ್ರಿ ಶಿವಕುಮಾರ್ ಅವರು ಬಾಯಿಗೆ ಬಂದಂತೆ ಹೇಳಿಕೆ ನೀಡಿರುವುದು ವಿಷಾದನೀಯ. `ಈತ ಯಾರು?', `ಹುಡುಗ', `ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾನೆ' ಎಂಬ ಶಬ್ದಗಳು ಕೇವಲ ರಾಜಕೀಯ ಅಸಭ್ಯತೆಯಲ್ಲ, ಜನಪ್ರತಿನಿಧಿಗಳ ಪರಸ್ಪರ ಗೌರವದ ಮೇಲಿನ ನೇರ ಹಲ್ಲೆಯಾಗಿದೆ.
ತೇಜಸ್ವಿ ಸೂರ್ಯ ಅವರು ಕೇವಲ ಯುವ ರಾಜಕಾರಣಿಯಲ್ಲ - ಅವರು ಎರಡನೇ ಬಾರಿ ಸಂಸದರಾಗಿರುವ, ಶಿಕ್ಷಣ ಮತ್ತು ಭಾಷಣದ ಸಾಮಥ್ರ್ಯದಲ್ಲಿ ಮೆಚ್ಚುಗೆ ಪಡೆದಿರುವ ಜನಪ್ರತಿನಿಧಿ. ಸಾರ್ವಜನಿಕ ವ್ಯವಹಾರಗಳಲ್ಲಿ ಅವರ ನಿಲುವು ಸ್ಪಷ್ಟ: ಯೋಜನೆಗಳ ಕುರಿತು ಪಾರದರ್ಶಕತೆ ಇರಬೇಕು, ಜನರ ಹಣದ ವಿನಿಯೋಗ ಜವಾಬ್ದಾರಿಯುತವಾಗಿರಬೇಕು. ಇಂತಹ ನಿಲುವು ಒಬ್ಬ ಸಂಸದನ ಕರ್ತವ್ಯವೂ ಹೌದು. ಸ್ವತಃ ಅವರು ಪ್ರಾಮಾಣಿಕರೂ ಹೌದು.
ಇದಕ್ಕೆ ವಿರುದ್ಧವಾಗಿ ಶಿವಕುಮಾರ್ ಅವರ ಪ್ರತಿಕ್ರಿಯೆ, ಯೋಜನೆಯ ಸಮರ್ಥನೆ ಅಥವಾ ತಾಂತ್ರಿಕ ವಿವರಗಳ ಮೇಲೆ ಬೆಳಕು ಚೆಲ್ಲದೆಯೇ, ವೈಯಕ್ತಿಕ ನಿಂದನೆಗೆ ಜಾರಿದೆ. ಇದು ಅಧಿಕಾರದ ಅಹಂಕಾರವು ವಾದವಿವಾದದ ಸ್ಥಳದಲ್ಲಿ ತಾರ್ಕಿಕತೆಯನ್ನು ನುಂಗುವ ದೃಶ್ಯ. `ನಾನು ಅಧಿಕಾರದಲ್ಲಿದ್ದೇನೆ, ಆದ್ದರಿಂದ ನನ್ನ ಮಾತು ಅಂತಿಮ' ಎಂಬ ಮನೋಭಾವವು ಪ್ರಜಾಪ್ರಭುತ್ವದ ಚೈತನ್ಯಕ್ಕೆ ಧಕ್ಕೆ ತರುತ್ತದೆ.
ಶಿವಕುಮಾರ್ ಅವರು ಬೆಂಗಳೂರಿನ ಅಭಿವೃದ್ಧಿ ಇಲಾಖೆಯನ್ನು ನೋಡಿಕೊಳ್ಳುವವರು. ಈ ಸುರಂಗ ರಸ್ತೆ ಯೋಜನೆ ಅವರ ಪ್ರಮುಖ `ಪೆಟ್ ಪ್ರಾಜೆಕ್ಟ್'. ಸಹಜವಾಗಿಯೇ, ಅದರಲ್ಲಿ ಅವರ ರಾಜಕೀಯ ಮತ್ತು ಹಣಕಾಸು ಹಿತಾಸಕ್ತಿ ಇದೆ ಎಂಬ ಶಂಕೆ ವಿರೋಧ ಪಕ್ಷ ಹಾಗೂ ವೀಕ್ಷಕರಲ್ಲಿ ಮೂಡಿದೆ. ಈ ಹಿನ್ನೆಲೆಯಲ್ಲಿ ತೇಜಸ್ವಿ ಸೂರ್ಯ ಅವರ ವಿರೋಧವನ್ನು `ವೈಯಕ್ತಿಕ ದ್ವೇಷ'ವಾಗಿ ಚಿತ್ರಿಸಲು ಪ್ರಯತ್ನಿಸುವುದು ನಿಜವನ್ನು ಮುಚ್ಚುವ ಕೃತ್ಯ.
ಅಧಿಕಾರದ ಶೈಲಿಯೂ ಇಲ್ಲಿ ಗಮನಾರ್ಹ. ಒಬ್ಬ ಸಚಿವ ಅಥವಾ ಉಪ ಮುಖ್ಯಮಂತ್ರಿ ತಮ್ಮ ರಾಜಕೀಯ ವಿರೋಧಿಯ ಕುರಿತು ಹೀಗೆ ಮಾತನಾಡುವುದು ಸಾರ್ವಜನಿಕ ಬದುಕಿನ ಶಿಸ್ತಿಗೆ ಧಕ್ಕೆ. `ಹುಡುಗ', `ಈತ ಯಾರು?' ಎಂಬ ಪ್ರಶ್ನೆಗಳು ತೇಜಸ್ವಿ ಸೂರ್ಯನಿಗಷ್ಟೇ ಅಲ್ಲ, ಅವರ ಹಿಂದೆ ನಿಂತಿರುವ 25 ಲಕ್ಷ ಮತದಾರರಿಗೂ ಅವಮಾನ. ಜನರು ಆಯ್ಕೆಮಾಡಿದ ಪ್ರತಿನಿಧಿಯ ಗೌರವವನ್ನು ನಿರಾಕರಿಸುವುದು ಜನರ ತೀರ್ಮಾನವನ್ನು ನಿರ್ಲಕ್ಷಿಸುವಂತಾಗಿದೆ.
ಸಾರ್ವಜನಿಕವಾಗಿ ಮಾತನಾಡುವ ನಾಯಕರಿಗೆ ಶಬ್ದಗಳೂ ಶಸ್ತ್ರಗಳೇ. ಅವು ಸತ್ಯವನ್ನು ಬೆಳಗಬಹುದು ಅಥವಾ ದ್ವೇಷವನ್ನು ಹರಡಬಹುದು. ಡಿ ಕೆ ಶಿವಕುಮಾರ್ ಅವರ ಶಬ್ದಗಳು ಈ ಬಾರಿ ದ್ವೇಷವನ್ನು ಆರಿಸಿಕೊಂಡಿವೆ. ರಾಜಕೀಯದಲ್ಲಿ ಭಿನ್ನಾಭಿಪ್ರಾಯಗಳು ಸಹಜ. ಆದರೆ ಅದನ್ನು ಶಿಸ್ತಿನಿಂದ, ವಿವೇಕದಿಂದ ವ್ಯಕ್ತಪಡಿಸುವುದು ನಾಯಕತ್ವದ ಲಕ್ಷಣ. ಶಿವಕುಮಾರ್ ಅವರ ಹೇಳಿಕೆಗಳಲ್ಲಿ ಆ ಸಂಯಮದ ಅಳಿವು ಸ್ಪಷ್ಟವಾಗಿ ಗೋಚರಿಸಿದೆ.
ರಾಜ್ಯ ಕಾಂಗ್ರೆಸ್ ನಾಯಕತ್ವವು, ಕಳೆದ ಕೆಲವು ತಿಂಗಳಲ್ಲಿ ಅನೇಕ ಬಾರಿ ಈ ರೀತಿಯ ಅಸಭ್ಯ ಭಾಷಣಗಳಿಂದ ವಿವಾದಕ್ಕೆ ಗುರಿಯಾಗಿದೆ. ಇದು ಒಂದು ವ್ಯಕ್ತಿಯ ತಪ್ಪು ಮಾತ್ರವಲ್ಲ; ಅದು ಪಕ್ಷದ ಒಳಗಿನ ಸಂಸ್ಕಾರ ಮತ್ತು ಶಿಸ್ತು ಕುಸಿತದ ಸೂಚಕವೂ ಆಗಿದೆ. ಸಾರ್ವಜನಿಕ ಬದುಕಿನಲ್ಲಿ ಶಿಷ್ಟಾಚಾರ ಕೇವಲ ನೈತಿಕ ಬಾಧ್ಯತೆ ಅಲ್ಲ - ಅದು ಪ್ರಜಾಪ್ರಭುತ್ವದ ಅಡಿಪಾಯ.
ತೇಜಸ್ವಿ ಸೂರ್ಯ ಅವರು ತಮ್ಮ ನಿಲುವಿನಲ್ಲಿ ಅಚ್ಚುಕಟ್ಟಾಗಿ, ಸ್ಥಿರವಾಗಿ ಮತ್ತು ಜನಪರವಾಗಿ ನಿಂತಿದ್ದಾರೆ. ಪ್ರಜಾಸತ್ತಾತ್ಮಕ ರೀತಿಯಲ್ಲಿ, ನಗರದ ಹಿತದೃಷ್ಟಿಯಿಂದ ಯೋಜನೆಗೆ ವಿರೋಧ ವ್ಯಕ್ತಪಡಿಸುವುದು ಅವರ ಹಕ್ಕು. ಲಂಚ, ಲಾಭ ಅಥವಾ ಖಾಸಗಿ ಒಪ್ಪಂದಗಳ ಅನುಮಾನಗಳ ನೆರಳಲ್ಲಿ ನಿಂತ ಯೋಜನೆಗೆ ಅವರು ನಿಲುಕದೆ ನಿಂತಿರುವುದು, ಅವರ ಸ್ವಚ್ಛ ಚಾರಿತ್ರ್ಯಕ್ಕೆ ಮತ್ತೊಂದು ದೃಢತೆ ನೀಡುತ್ತದೆ.
ಈ ಘಟನೆ ಒಂದು ಮಹತ್ವದ ಪಾಠ ನೀಡುತ್ತದೆ - ಅಧಿಕಾರವು ಸಂಸ್ಕಾರಕ್ಕೆ ಪರ್ಯಾಯವಲ್ಲ. ಸ್ಥಾನ ಎತ್ತರವಾದಷ್ಟು ಮಾತಿನ ತೂಕವೂ ಹೆಚ್ಚಾಗಬೇಕು. ಉಪ ಮುಖ್ಯಮಂತ್ರಿ ಶಿವಕುಮಾರ್ ಅವರ ಭಾಷೆ ಮತ್ತು ಧೋರಣೆ, ಈ ಮೂಲಭೂತ ತತ್ವವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಅದು ಅವರ ವೈಯಕ್ತಿಕ ಸ್ವಭಾವಕ್ಕಿಂತಲೂ ರಾಜ್ಯದ ರಾಜಕೀಯ ಶೈಲಿಯ ಮೇಲೆಯೇ ಕಪ್ಪುಚುಕ್ಕೆ ಮೂಡಿಸುತ್ತಿದೆ.
ಬೆಂಗಳೂರಿನ ಜನತೆ ಈಗ ಒಂದೇ ಪ್ರಶ್ನೆ ಕೇಳುತ್ತಿದ್ದಾರೆ: ಅಭಿವೃದ್ಧಿ ಯೋಜನೆಗಳು ಎಷ್ಟೇ ದೊಡ್ಡದಾಗಿರಲಿ, ಅದನ್ನು ಸಮರ್ಥಿಸುವವರ ಮನಸ್ಸು ಎಷ್ಟು ಸಣ್ಣದಾಗಿರಬಹುದು? ಪ್ರಜಾಪ್ರಭುತ್ವದಲ್ಲಿ ನಿಜವಾದ ಅಭಿವೃದ್ಧಿ ಅಂದ್ರೆ ಕೇವಲ ಸುರಂಗವಲ್ಲ - ಅದು ಸಂಸ್ಕಾರದ ಬೆಳಕು.
Comments
Post a Comment