ನಿಗಮ, ಮಂಡಳಿಗಳು ಯಾವ ಪುರುಷಾರ್ಥಕ್ಕೆ?

 ರಾಜ್ಯ ಸರ್ಕಾರವು ತನ್ನ ನಿಷ್ಠಾವಂತರನ್ನು ಸಂತೃಪ್ತಿಪಡಿಸುವ ಸಲುವಾಗಿ ಆಲಂಕಾರಿಕ ಹುದ್ದೆಗಳನ್ನು ಸೃಷ್ಟಿಸುತ್ತಿದೆ ಆದರೆ ರಾಜ್ಯದ ಬೊಕ್ಕಸ ಬರಿದಾಗುತ್ತಿದೆ.

........................

ಖುಲ್ಲಂಖುಲ್ಲಾ * ಬಿವಿಸೀ

ಆಳ್ವಿಕೆಯ ಯಾವುದೇ ಮಾನದಂಡದಲ್ಲಿ ನೋಡಿದರೂ ಕರ್ನಾಟಕದ ಇತ್ತೀಚಿನ ನಿಗಮ ಮಂಡಲಿಗಳ ನೇಮಕಾತಿ ಪ್ರಕ್ರಿಯೆಯನ್ನು ಸಮರ್ಥಿಸಲಾಗುವುದಿಲ್ಲ. ಈ ಸಂಸ್ಥೆಗಳು ವಿವಿಧ ವಿಭಾಗಗಳಲ್ಲಿ ಹರಡಿ ನೂರಾರು ಸಂಖ್ಯೆಯಲ್ಲಿದ್ದು, ಮೂಲತಃ ಅಧಿಕಾರಶಾಹಿಯ ಪಳೆಯುಳಿಕೆಗಳಾಗಿವೆ, ಅನುದಾನ ಇಲ್ಲದೆ, ನಿಷ್ಕ್ರಿಯವಾಗಿ ಬಹುಮಟ್ಟಿಗೆ ಅಪ್ರಸ್ತುತವಾಗಿಬಿಟ್ಟಿವೆ. ಆದರೂ ಸರ್ಕಾರ ಈ ಸಂಸ್ಥೆಗಳನ್ನು ಜೀವಂತವಾಗಿರಿಸಲು ಪರದಾಡುತ್ತಿದ್ದು, ಇದು ಅವಶ್ಯಕತೆಗಿಂತಲೂ ರಾಜಕೀಯ ಅನುಕೂಲಕ್ಕಾಗಿ ಕೈಗೊಳ್ಳುವ ಕ್ರಮವಾಗಿದೆ.

ಈ ನೇಮಕಗಳಿಗೆ ಪ್ರಾತಿನಿಧ್ಯ ಎನ್ನುವುದು ನೆಪಮಾತ್ರವಾಗಿದ್ದು ಮೂಲತಃ ಇದು ತುಷ್ಟೀಕರಣದ ಕ್ರಮವಾಗಿದೆ. ಈ ಅಧ್ಯಕ್ಷಗಿರಿಗಳು ಮತ್ತು ಸದಸ್ಯತ್ವಗಳು ಪಕ್ಷದ ನಿಷ್ಠಾವಂತರಿಗೆ, ಸಚಿವ ಸಂಪುಟದಲ್ಲಿ ಸ್ಥಾನ ದೊರೆಯದಿದ್ದವರಿಗೆ ನೀಡುವ ಸಮಾಧಾನಕರ ಬಹುಮಾನದಂತಾಗಿವೆ. ಒಮ್ಮೆ ಪಟ್ಟಿಯನ್ನು ಪ್ರಕಟಿಸಿದರೆ, ನೇಮಕಗೊಂಡವರು ತಮ್ಮ ಭಾವಚಿತ್ರಗಳನ್ನು ಮಾಧ್ಯಮಗಳಲ್ಲಿ ಪ್ರಕಟಿಸಲಾರಂಭಿಸುತ್ತಾರೆ ಆದರೆ ಕ್ರಮೇಣ ಅಪ್ರಸ್ತುತವಾಗಿಬಿಡುತ್ತಾರೆ. ಒಂದು ಸಭೆ ನಡೆಸಲೂ ಸಹ ಹಣಕಾಸು ಸೌಲಭ್ಯ ಇಲ್ಲದಿರುವಾಗ ಈ ಸಂಸ್ಥೆಗಳು ಆಳ್ವಿಕೆಗೂ ನೆರವಾಗುವುದಿಲ್ಲ ಅಥವಾ ಸಾರ್ವಜನಿಕ ಹಿತಾಸಕ್ತಿಯನ್ನೂ ಕಾಪಾಡುವುದಿಲ್ಲ.

ವಿಡಂಬನೆ ಎಂದರೆ ಈ ಕಸರತ್ತುಗಳು ಹಾಸ್ಯಾಸ್ಪದವಾಗಿ ಕಾಣತೊಡಗಿವೆ. ಸರ್ಕಾರವು ಈ ಆಲಂಕಾರಿಕ ಹುದ್ದೆಗಳನ್ನು ಭರ್ತಿ ಮಾಡುತ್ತಿರುವಂತೆಯೇ ರಾಜ್ಯದ ಆಡಳಿತಾತ್ಮಕ ಸುಧಾರಣಾ ಆಯೋಗವು ಇಂತಹ ನಿಗಮಗಳನ್ನು ಅದಕ್ಷತೆ ಮತ್ತು ಆರ್ಥಿಕ ಕೊರತೆಯ ಕಾರಣಕ್ಕಾಗಿ ಮುಚ್ಚುವಂತೆ ಶಿಫಾರಸು ಮಾಡಿದೆ. ಆಯೋಗದ ವಾದವನ್ನು ಅಲ್ಲಗಳೆಯಲಾಗುವುದಿಲ್ಲ. ಈ ನಿಗಮ ಮಂಡಲಿಗಳು ಯಾವುದೇ ಉದ್ದೇಶವನ್ನು ಈಡೇರಿಸುವುದಿಲ್ಲ, ಬದಲಾಗಿ ಬೊಕ್ಕಸವನ್ನು ಬರಿದು ಮಾಡುತ್ತವೆ.

ಸರ್ಕಾರವೊಂದು ತನ್ನ ನೌಕರರಿಗೆ ಸಮಯಕ್ಕೆ ಸರಿಯಾಗಿ ವೇತನ ಪಾವತಿ ಮಾಡದಿದ್ದಾಗ, ನೌಕರರು ಹತಾಶೆಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವಾಗ ನೂರಾರು ನಿಷ್ಕ್ರಿಯ ಸಂಸ್ಥೆಗಳನ್ನು ನಿರ್ವಹಿಸುವುದು ವ್ಯರ್ಥವಷ್ಟೇ ಅಲ್ಲದೆ ನಿರರ್ಥಕವೂ ಆಗುತ್ತದೆ. ಸರ್ಕಾರಕ್ಕೆ ತನ್ನ ಅಗತ್ಯವಾದ ಬಾಧ್ಯತೆಗಳನ್ನು ಈಡೇರಿಸಲಾಗದಿದ್ದರೆ ಇಂತಹ ರಾಜಕೀಯ ದುಂದುವೆಚ್ಚದಲ್ಲಿ ತೊಡಗುವ ನೈತಿಕ ಅಧಿಕಾರವನ್ನು ಕಳೆದುಕೊಳ್ಳುತ್ತದೆ. ಆಳ್ವಿಕೆ ಎಂದರೆ ನಾಟಕ ಅಲ್ಲ. ಆದರೂ ಕರ್ನಾಟಕದಲ್ಲಿ ರಾಜಕೀಯ ಎನ್ನುವುದು ಕೇವಲ ಪ್ರದರ್ಶನ ಕಲೆಯಾಗಿದೆ. ಫಲಿತಾಂಶಗಳಿಲ್ಲದ ಘೋಷಣೆಗಳು, ಅಧಿಕಾರವಿಲ್ಲದ ಹುದ್ದೆಗಳು, ಉದ್ದೇಶವಿಲ್ಲದ ಭರವಸೆಗಳು ಸಾಮಾನ್ಯವಾಗಿವೆ.

ರಾಜಕಾರಣಿಗಳಿಗೆ ತೋರ್ಪಡಿಕೆಯೇ ಒಂದು ದಿಗ್ವಿಜಯದಂತೆ. ವೃತ್ತ ಪತ್ರಿಕೆಯಲ್ಲಿ ಬರುವ ಒಂದು ಭಾವಚಿತ್ರ, ಮೇಜಿನ ಮೇಲಿರುವ ಕಡತಗಳಿಗಿಂತಲೂ ಪ್ರಾಮುಖ್ಯತೆ ಪಡೆದುಕೊಳ್ಳುತ್ತವೆ. ಸಾಧನೆಯನ್ನೂ ಕಡೆಗಣಿಸುವ ಈ ಪ್ರದರ್ಶನದ ಗೀಳು ಆಳ್ವಿಕೆಯನ್ನು ಪಲ್ಲಟಗೊಳಿಸುತ್ತದೆ. ಇಲ್ಲಿ ಉಳಿಯುವುದು ಪೆÇಳ್ಳು ವ್ಯವಸ್ಥೆ ಮತ್ತು ಅದು ಪೆÇೀಷಿಸುವ ವ್ಯಕ್ತಿಗತ ಅಹಮಿಕೆಗಳು. ಇತ್ತ ಸಂಸ್ಥೆಗಳು ಬಡಕಲಾಗುತ್ತಿರುತ್ತವೆ.

ಸರ್ಕಾರವು ಸುಧಾರಣೆಗಳ ಬಗ್ಗೆ ಗಂಭೀರವಾಗಿ ಯೋಚಿಸುವುದೇ ಆದರೆ ಈ ದುಬಾರಿ ನಿಗಮ-ಮಂಡಲಿಗಳನ್ನು, ಅಕಾಡೆಮಿಗಳನ್ನು ವಿಸರ್ಜಿಸಬೇಕು.  ಇನ್ನೂ ಜೀವಂತಿಕೆ ಹೊಂದಿರುವ ಕೆಲವನ್ನು ಕಾರ್ಯೋನ್ಮುಖವಾಗಿರುವ ವಿಭಾಗಗಳಲ್ಲಿ ವಿಲೀನಗೊಳಿಸಬೇಕು ಮತ್ತು ಉಳಿದವನ್ನು ಘನತೆಯಿಂದ ವಿಸರ್ಜಿಸಬೇಕು. ಇಲ್ಲಿ ಉಳಿತಾಯವಾಗುವ ಹಣವನ್ನು ಶಿಕ್ಷಕರಿಲ್ಲದೆ ಬಣಗುಟ್ಟುತ್ತಿರುವ ಶಾಲೆಗಳಲ್ಲಿ, ವೈದ್ಯರಿಲ್ಲದ ಆಸ್ಪತ್ರೆಗಳಲ್ಲಿ, ಮೂಲ ಸೌಕರ್ಯಗಳಿಲ್ಲದ ಗ್ರಾಮಗಳಲ್ಲಿ ಹೂಡಿಕೆ ಮಾಡಬೇಕು.

ಕರ್ನಾಟಕ ತನ್ನ ಭ್ರಮೆಗಳಿಂದ ಹೊರಬರಬೇಕಿದೆ. ಈ ನೇಮಕಗಳು ಒಳಗೊಳ್ಳುವ ಪ್ರಕ್ರಿಯೆಯ ಸಂಕೇತ ಅಲ್ಲ ಬದಲಾಗಿ ಅವಸಾನದ ಸೂಚಕಗಳು. ಘೋಷಣೆ ಮತ್ತು ಸೆಲ್ಫಿ ರಾಜಕಾರಣವನ್ನೂ ಮೀರಿದ ಉತ್ತಮ ಆಳ್ವಿಕೆಗೆ ಕರ್ನಾಟಕ ಅರ್ಹತೆ ಪಡೆದಿದೆ.

Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

When Prestige Is Gifted, Not Earned: The Padma Vibhushan Controversy Of Veerendra Heggade

Why I Will Never Fly Air India Again