ರಾಷ್ಟ್ರೀಯವಾದದ ಅಪಕಲ್ಪನೆ ಭಾರತಕ್ಕೆ ದುಬಾರಿಯಾಗುತ್ತಿದೆ
ರಾಷ್ಟ್ರೀಯವಾದವು ಆತ್ಮವಿಶ್ವಾಸವನ್ನು ಬೆಳೆಸಬೇಕೇ ಹೊರತು ಅಭದ್ರತೆಯನ್ನಲ್ಲ
.........
ಅಹುದಾದರಹುದೆನ್ನಿ * ಬಿವಿಸೀ
ಕಳೆದ ಒಂದು ದಶಕದಲ್ಲಿ ಭಾರತ ಉಗಮಿಸುತ್ತಿರುವ ಜಾಗತಿಕ ಶಕ್ತಿ ಎಂದೇ ಸ್ವತಃ ಬಿಂಬಿಸಿಕೊಳ್ಳುತ್ತಿದೆ. ಸೇನಾ ಸಾಮಥ್ರ್ಯದಿಂದ ಬಾಹ್ಯಾಕಾಶದವರೆಗೆ, ಸ್ಪಷ್ಟ ಸಂದೇಶವನ್ನು ರವಾನಿಸಿದ್ದು, ಭಾರತವನ್ನು ಇನ್ನು ಮುಂದೆ ನಿರ್ಲಕ್ಷಿಸಲಾಗುವುದಿಲ್ಲ ಎಂದು ಜಗತ್ತಿಗೆ ಸಾರಿ ಹೇಳುತ್ತಿದೆ. ಆದರೆ ಈ ಆತ್ಮವಿಶ್ವಾಸದ ಹಿಂದೆ ಬೆಳೆಯುತ್ತಿರುವ ಸಮಸ್ಯೆಯೂ ಅಡಗಿದೆ. ರಾಷ್ಟ್ರೀಯವಾದವು ಸಾಮಾನ್ಯವಾಗಿ ರಕ್ಷಣಾತ್ಮಕವಾಗಿ, ಭಾವನಾತ್ಮಕವಾಗಿ, ಸಮೀಪ ದೃಷ್ಟಿಯ ಮೂಲಕ ವ್ಯಕ್ತವಾಗುತ್ತದೆ. ಈ ಹೆಮ್ಮೆಯ ಅಪಕಲ್ಪನೆಯು ಜಾಗತಿಕ ಮಟ್ಟದಲ್ಲಿ ಭಾರತದ ರಾಜತಾಂತ್ರಿಕ ಪ್ರಭಾವಕ್ಕೆ ಧಕ್ಕೆ ಉಂಟುಮಾಡುತ್ತಿದೆ.
ನಮ್ಮ ದೇಶದ ಬಗ್ಗೆ ಹೆಮ್ಮೆಪಡುವುದು ತಪ್ಪಲ್ಲ. ಪ್ರತಿಯೊಂದು ದೇಶವೂ ಸಹ ತನ್ನ ಸಾಧನೆಗಳನ್ನು ಸಂಭ್ರಮಿಸಲು ಮತ್ತು ತನ್ನ ಹಿತಾಸಕ್ತಿಗಳನ್ನು ರಕ್ಷಿಸಲು ಹಕ್ಕು ಪಡೆದಿರುತ್ತದೆ. ಆದರೆ ಸಮಸ್ಯೆ ಎದುರಾಗುವುದು ದೇಶಪ್ರೇಮವು ಹಗೆತನವಾಗಿ ಪರಿಣಮಿಸಿದಾಗ. ಪ್ರತಿಯೊಂದು ಜಾಗತಿಕ ಟೀಕೆಯನ್ನೂ ಸಹ ದೇಶದ ಮೇಲಿನ ದಾಳಿ ಎಂದು ಭಾವಿಸುವುದು, ತನ್ನ ನಿಲುವುಗಳನ್ನು ಒಪ್ಪದಿರುವುದನ್ನೇ ದೇಶದ್ರೋಹ ಎಂದು ಪರಿಗಣಿಸುವುದು ಸಾಮಾನ್ಯವಾಗಿಬಿಡುತ್ತದೆ. ಈ ಧೋರಣೆಯೇ ಭಾರತವನ್ನು, ಆತ್ಮವಿಶ್ವಾಸದಿಂದ ಇರಬೇಕಾದ ಸಮಯದಲ್ಲಿ ಅಸುರಕ್ಷಿತ ಎಂದು ಭಾವಿಸುವಂತಾಗಿದೆ.
ಭಾರತದ ವಿದೇಶಾಂಗ ಸಂಬಂಧಗಳನ್ನೇ ಗಮನಿಸಿದರೆ, ಒಂದು ಕಾಲದಲ್ಲಿ ತನ್ನ ನೈತಿಕ ನಾಯಕತ್ವ ಮತ್ತು ರಾಜತಾಂತ್ರಿಕ ಸಮತೋಲನಕ್ಕಾಗಿ ಹೆಸರುವಾಸಿಯಾಗಿದ್ದ ಭಾರತ ಈಗ ಮತ್ತೊಬ್ಬರ ಮಾತನ್ನು ಕೇಳಲು ಅಥವಾ ರಾಜಿಯಾಗಲು ಸಿದ್ಧವಾಗಿಲ್ಲ. ಪಶ್ಚಿಮದ ಮಿತ್ರ ರಾಷ್ಟ್ರಗಳು ಮತ್ತು ನೆರೆ ದೇಶಗಳು ನವದೆಹಲಿಯನ್ನು ತಾವು ನೀಡುವ ಪ್ರತಿಕ್ರಿಯೆಗಳಿಗೆ ಅಸೂಕ್ಷ್ಮ ಎಂದೇ ಭಾವಿಸುತ್ತವೆ. ವಿಶೇಷವಾಗಿ ಮಾನವ ಹಕ್ಕುಗಳು, ಪ್ರಜಾಪ್ರಭುತ್ವ ಮತ್ತು ಧಾರ್ಮಿಕ ಸ್ವಾತಂತ್ರ್ಯದ ವಿಚಾರದಲ್ಲಿ ಇದನ್ನು ಕಾಣಬಹುದು. ಈ ಸಮಸ್ಯೆಗಳನ್ನು, ಕಾಳಜಿಗಳನ್ನು ಪ್ರಬುದ್ಧತೆಯಿಂದ ನಿರ್ವಹಿಸುವ ಬದಲು ಭಾರತ ಸರ್ಕಾರದ ಅಧಿಕೃತ ಪ್ರತಿಕ್ರಿಯೆ ರಕ್ಷಣಾತ್ಮಕವಾಗಿದ್ದು `ಇದು ನಮ್ಮ ಆಂತರಿಕ ವಿಷಯ; ನಿಮಗೇನು?' ಎಂದು ಹೇಳಲಾಗುತ್ತಿದೆ. ಈ ರೀತಿಯ ಹೇಳಿಕೆಗಳು ದೇಶದ ಒಳಗೆ ಪ್ರಬಲ ಎಂದು ಕಾಣಬಹುದು, ಆದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಂತರಗಳನ್ನು ಸೃಷ್ಟಿಸುತ್ತದೆ.
ವ್ಯಾಪಾರ ಮತ್ತು ತಂತ್ರಜ್ಞಾನದ ಸಹಭಾಗಿತ್ವದಲ್ಲೂ ಸಹ ರಾಷ್ಟ್ರೀಯವಾದವು ಅನೇಕ ಬಾರಿ ವಾಸ್ತವಿಕ ನಿರ್ಧಾರಗಳಲ್ಲಿ ಹಸ್ತಕ್ಷೇಪ ಮಾಡುತ್ತದೆ. ಸ್ವಾವಲಂಬನೆಗಾಗಿ ಅಥವಾ ಆತ್ಮನಿರ್ಭರ ಭಾರತಕ್ಕಾಗಿ ಭಾರತದ ಬದ್ಧತೆ ತಾತ್ವಿಕವಾಗಿ ಒಳ್ಳೆಯ ಚಿಂತನೆಯೇ ಹೌದು, ಆದರೆ ಅದು ರಕ್ಷಣಾತ್ಮಕ ನಿಲುವಿಗೆ ಒಂದು ನೆಪವಾದಾಗ ಜಾಗತಿಕ ಹೂಡಿಕೆದಾರರನ್ನು ದೂರ ಮಾಡುತ್ತದೆ. ಹಾಗೆಯೇ ರಾಜಕೀಯ ವಿವಾದಗಳಿಗಾಗಿ ವಿದೇಶಿ ಬ್ರ್ಯಾಂಡ್‍ಗಳನ್ನು, ಸಿನಿಮಾಗಳನ್ನು ನಿಷೇಧಿಸುವ ಆಕ್ರಮಣಕಾರಿ ನೀತಿಗಳು, ಭಾರತವನ್ನು ಅನಿಶ್ಚಿತತೆಯತ್ತ ದೂಡುತ್ತದೆ. ಜಾಗತಿಕ ಬಂಡವಾಳ ಮತ್ತು ಪ್ರವಾಸೋದ್ಯಮವನ್ನು ಆಕರ್ಷಿಸುವ ಉದ್ದೇಶ ಹೊಂದಿರುವ ದೇಶದ ಈ ರೀತಿಯ ವರ್ತನೆ ತಪ್ಪು ಸಂದೇಶವನ್ನು ರವಾನಿಸುತ್ತದೆ.
ಮತ್ತೊಂದು ಸಮಸ್ಯೆ ಎಂದರೆ ರಾಷ್ಟ್ರೀಯವಾದವನ್ನು ಆಂತರಿಕ ರಾಜಕಾರಣದಲ್ಲಿ ಬಳಸುವುದು. ರಾಜಕೀಯ ನಾಯಕರು ಸರ್ಕಾರದ ಆರ್ಥಿಕ ವೈಫಲ್ಯ ಮತ್ತು ಆಳ್ವಿಕೆಯ ಹಿನ್ನಡೆಗಳನ್ನು ಮರೆಮಾಚಿ, ಜನರ ಗಮನ ಬೇರೆಡೆ ಸೆಳೆಯುವ ಸಲುವಾಗಿ ರಾಷ್ಟ್ರದ ಹೆಮ್ಮೆಯ ನೆಪದಲ್ಲಿ ಭಾವನಾತ್ಮಕ ಪ್ರತಿಕ್ರಿಯೆಗಳನ್ನು ನೀಡುವುದು ಸಾಮಾನ್ಯವಾಗಿದೆ. ಇದು ಮತಗಳಿಕೆಗೆ ನೆರವಾಗಬಹುದು, ಆದರೆ ಭಾರತದ ಪ್ರಜಾಸತ್ತಾತ್ಮಕ್ಕ ವರ್ಚಸ್ಸಿಗೆ ಧಕ್ಕೆ ಉಂಟುಮಾಡುತ್ತದೆ. ಭಾರತದ ಮೃದು ಶಕ್ತಿಗೆ ಇದೇ ಆಧಾರವಾಗಿರುವುದನ್ನು ಗಮನಿಸಬೇಕಿದೆ. ಪತ್ರಕರ್ತರನ್ನು ಬಂಧಿಸುವ, ಪ್ರತಿರೋಧವನ್ನು ಶಿಕ್ಷಿಸುವ ಅಥವಾ ಅಲ್ಪಸಂಖ್ಯಾತರನ್ನು ಗುರಿಯಾಗಿಸುವ ವಿದ್ಯಮಾನಗಳನ್ನು ಗಮನಿಸಿದಾಗ ಜಾಗತಿಕ ವಲಯದಲ್ಲಿ ಭಾರತ ನೈತಿಕ ಅಧಿಕಾರವನ್ನು ಸ್ಥಾಪಿಸಲು ಸಾಧ್ಯವಾಗುವುದಿಲ್ಲ.
ರಾಷ್ಟ್ರೀಯವಾದವು ಆತ್ಮವಿಶ್ವಾಸವನ್ನು ಬೆಳೆಸಬೇಕೇ ಹೊರತು ಅಭದ್ರತೆಯನ್ನಲ್ಲ. ನೈಜ ಬಲಿಷ್ಠ ರಾಷ್ಟ್ರ ಎಂದರೆ ಅದು ಟೀಕೆಗಳನ್ನು ಸಹಿಸಿಕೊಳ್ಳಬೇಕು, ಮುಕ್ತವಾಗಿ ಚರ್ಚೆ ನಡೆಸಬೇಕು ಮತ್ತು ತನ್ನ ತಪ್ಪುಗಳನ್ನು ಸರಿಪಡಿಸಿಕೊಳ್ಳಬೇಕು. ಭಾರತದಲ್ಲಿ ಪ್ರತಿಭೆ ಇದೆ, ಯುವ ಜನಾಂಗ ಹೆಚ್ಚಾಗಿದೆ, ಪ್ರಜಾಪ್ರಭುತ್ವೀಯ ಸಂಸ್ಥೆಗಳು ದೇಶವನ್ನು ಜಾಗತಿಕ ನೆಲೆಯಲ್ಲಿ ಮುನ್ನಡೆಸಲು ಶಕ್ಯವಾಗಿವೆ. ಆದರೆ ಇದು ಸಾಧ್ಯವಾಗಬೇಕಾದರೆ, ನಿರಾಕರಿಸುವುದನ್ನೇ ದೇಶದ ಗೌರವ ಮತ್ತು ಹೆಮ್ಮೆ ಎಂದು ಭಾವಿಸಕೂಡದು.
ಭಾರತವು ಜಾಗತಿಕ ಮಟ್ಟದಲ್ಲಿ ಅವಕಾಶಗಳನ್ನು ಕಾಪಾಡಿಕೊಳ್ಳಬೇಕಾದರೆ ಅದು ಪರಸ್ಪರ ಹೊಂದಾಣಿಕೆಯ ಮೂಲಕ ಅನ್ಯ ದೇಶಗಳೊಡನೆ ಸಹಕರಿಸುವ ಸೌಜನ್ಯ ಹೊಂದಿರಬೇಕು. ಈ ಹಿಂದೆ ಭಾರತದ ರಾಜತಾಂತ್ರಿಕ ಸಂಬಂಧಗಳು ಹೀಗೆಯೇ ವೃದ್ಧಿಯಾಗಿತ್ತು. ಗಟ್ಟಿಯಾಗಿ ಅರಚಾಡುವುದರಿಂದ ಶಕ್ತಿ ಪ್ರದರ್ಶಿಸಲಾಗುವುದಿಲ್ಲ, ಬದಲಾಗಿ ಕಿವಿಗೊಟ್ಟು ಕೇಳುವುದರಿಂದ ಸಾಧ್ಯವಾಗುತ್ತದೆ. ಭಾರತದ ಸಾಮಥ್ರ್ಯವನ್ನು ವಿಶ್ವ ಸಮುದಾಯವು ಗೌರವಿಸಬೇಕಾದಲ್ಲಿ, ಅದು ತನ್ನ ಮೌಲ್ಯಗಳನ್ನೂ ಸ್ವತಃ ಗೌರವಿಸಲು ಕಲಿಯಬೇಕು.
Comments
Post a Comment