ಆರೆಸ್ಸೆಸ್ ದಂಡ ರಾಷ್ಟ್ರಪ್ರೇಮವೇ? ಅಥವಾ ಭಯ ಹುಟ್ಟಿಸುವ ಸಂಕೇತವೇೀ?

 ಜನರ ಧೈರ್ಯಕ್ಕೆ ಭಯದ ದಂಡದ ನೆರಳು ಅಗತ್ಯವಿಲ್ಲ - ಜನರ ವಿಶ್ವಾಸದ ಬೆಳಕು ಸಾಕು.

............

ಖುಲ್ಲಂ ಖುಲ್ಲಾ * ಬಿವಿಸೀ

ಭಾರತದ ಜನತಾಂತ್ರಿಕ ಪರಿಧಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರೆಸ್ಸೆಸ್) ಎಂದಿಗೂ ವಿವಾದದ ಕೇಂದ್ರವಾಗಿಯೇ ಉಳಿದಿದೆ. ಇತ್ತೀಚೆಗೆ ಸುಪ್ರೀಂ ಕೋರ್ಟ್‍ನ ಮಾಜಿ ನ್ಯಾಯಮೂರ್ತಿ ಹಾಗೂ ರಾಜ್ಯದ ಮಾಜಿ ಲೋಕಾಯುಕ್ತ ಸಂತೋಷ ಹೆಗ್ಡೆ ಅವರು ಕೇಳಿದ ಒಂದು ಸರಳವಾದ ಆದರೆ ತೀಕ್ಷ್ಣವಾದ ಪ್ರಶ್ನೆ: “ಸಂಘದ ಕಾರ್ಯಕರ್ತರು ಮೆರವಣಿಗೆಯ ವೇಳೆ ಕೈಯಲ್ಲಿ ದಂಡ ಹಿಡಿದು ಬೀದಿಗಿಳಿಯುವುದೇಕೆÉ?” ಮತ್ತೆ ದೇಶವ್ಯಾಪಿ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.

ಆರೆಸ್ಸೆಸ್ ಈ ದಂಡವನ್ನು “ಶಾಖಾ ಶಿಸ್ತು”ವಿನ ಭಾಗವೆಂದು ಹೇಳಿಕೊಂಡರೂ, ನೂರಾರು ಕಾರ್ಯಕರ್ತರು ಖಾಕಿ ಪ್ಯಾಂಟ್, ಕಪ್ಪು ಟೋಪಿ ಧರಿಸಿ ಉದ್ದನೆಯ ದಂಡ ಹೆಗಲಿಗೇರಿಸಿ ಸಾಲು ಸಾಲಾಗಿ ನಡೆದು ಬಂದಾಗ ಅದು ಜನರಿಗೆ ಅರೆಸೈನಿಕ ಪರಾಕ್ರಮದ ಪ್ರದರ್ಶನದಂತಾಗುತ್ತದೆ. ಇದು ಪ್ರಜಾಸತ್ತಾತ್ಮಕ ರಾಷ್ಟ್ರದಲ್ಲಿ ಆತ್ಮವಿಶ್ವಾಸಕ್ಕಿಂತ ಭಯವನ್ನು ಮೂಡಿಸುವ ದೇಖಾವೆ.

ಸಂಘದ ಉಡುಪು, ಡ್ರಿಲ್, ಮೆರವಣಿಗೆಗಳು ಮತ್ತು ಶಿಸ್ತಿನ ವ್ಯಾಯಾಮಗಳು ಯೂರೋಪಿನ 20ನೇ ಶತಮಾನದ ಫಾಸಿಸ್ಟ್ ಚಳವಳಿಗಳ ಮಾದರಿಯನ್ನು ನೆನಪಿಸುತ್ತವೆ. ಹಿಟ್ಲರ್ ಮತ್ತು ಮುಸ್ಸೋಲಿನಿ ಕಾಲದ “ರಾಷ್ಟ್ರಶಕ್ತಿ ಪ್ರದರ್ಶನ”ದಂತಿರುವ ಈ ದೃಶ್ಯಗಳು ಭಾರತದಂಥ ಕೋಮು ಸೂಕ್ಷ್ಮವಾಗಿರುವ ದೇಶದ ಜನರಲ್ಲಿ ಭಯ-ಭೀತಿ ಹುಟ್ಟಿಸುತ್ತವೆ.

ಆರೆಸ್ಸೆಸ್ ಭಾರತದಲ್ಲಿ ಯಾವುದೇ ನೋಂದಣಿಯಿಲ್ಲದ ಸಂಘಟನೆಯಾಗಿದ್ದು, ಅದು ಎನ್‍ಜಿಒ ಅಥವಾ ರಾಜಕೀಯ ಪಕ್ಷಗಳಂತೆ ಕಾನೂನಿನ ನಿಯಂತ್ರಣಕ್ಕೊಳಪಟ್ಟಿಲ್ಲ. ಆದರೆ ಅದರ ಪ್ರಭಾವವು ಅಷ್ಟೊಂದು ದೊಡ್ಡದು -ಶಾಲೆಗಳಿಂದ ಪತ್ರಿಕೆಗಳವರೆಗೆ, ರಾಜಕೀಯ ಪಕ್ಷಗಳವರೆಗೆ - ಎಲ್ಲೆಡೆ ಅದರ ಅಸ್ತಿತ್ವವಿದೆ. ವಿದೇಶಗಳಲ್ಲಿ ತನ್ನ ಶಾಖೆಗಳು ಕಾನೂನುಬದ್ಧವಾಗಿ ನೋಂದಾಯಿತವಾಗಿದ್ದರೂ, ಭಾರತದಲ್ಲಿ ಮಾತ್ರ ಅದು ಕಾನೂನುಬದ್ಧ ಗುರುತಿಲ್ಲದೆ ಕಾರ್ಯನಿರ್ವಹಿಸುತ್ತಿರುವುದು ಅಚ್ಚರಿ.

ಕಲ್ಲಡ್ಕ ಭಟ್, ಜಗದೀಶ ಕರಂತ್ ಮುಂತಾದ ಸಂಘದ ನಾಯಕರಿಂದ ಆಗಾಗ್ಗೆ ಕೇಳಿಬರುವ ಕೋಮು ಪ್ರಚೋದನಾತ್ಮಕ ಭಾಷಣಗಳು ಸಂಘದ ನಿಜ ಉದ್ದೇಶಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸುತ್ತವೆ. ಇದಕ್ಕೆ ಸೇರ್ಪಡೆಯಾದಂತೆ, ಸಂಘವು ಸಂವಿಧಾನದ ಮೌಲ್ಯಗಳನ್ನು ಸಂಪೂರ್ಣವಾಗಿ ಅಳವಡಿಸಿಕೊಳ್ಳದಿರುವುದು, ತ್ರಿವರ್ಣ ಧ್ವಜವನ್ನು ರಾಷ್ಟ್ರೀಯ ಧ್ವಜವೆಂದು ಗೌರವಿಸದಿರುವ ಇತಿಹಾಸ, ಮತ್ತು ರಾಷ್ಟ್ರೀಯ ಗೀತೆಯ ಬದಲಿಗೆ ತನ್ನದೇ “ರಾಷ್ಟ್ರಧರ್ಮ ಗೀತ”ವನ್ನು ಹಾಡುವ ಪದ್ಧತಿ - ಇವೆಲ್ಲವೂ ಅದರ ವಿಭಜನಾ ಚಿಂತನೆಗೆ ಸಾಕ್ಷಿ.

ಮಹಿಳೆಯರ ಪಾತ್ರವೂ ಇಲ್ಲಿ ತೀರ ಅಪ್ರಮುಖ. ಸಂಘದ ಮುಖ್ಯವಾಹಿನಿಯಲ್ಲಿ ಮಹಿಳೆಯರು ಕಾಣದಿರುವುದು, ಹಾಗೂ ಮಹಿಳೆಯರ ವಿರುದ್ಧ ನಡೆಯುವ ಹಿಂಸಾಚಾರಗಳ ವಿರುದ್ಧ ಸ್ಪಷ್ಟ ನಿಲುವಿಲ್ಲದಿರುವುದು, ಅದರ ಪಿತೃತ್ವ ಮನೋಭಾವವನ್ನು ಬಯಲಿಗೆಳೆಯುತ್ತದೆ.

ಸಂತೋಷ ಹೆಗ್ಡೆ ಅವರ ಪ್ರಶ್ನೆ ಕೇವಲ ದಂಡದ ಕುರಿತಲ್ಲ; ಅದು ಪ್ರಜಾಸತ್ತಾತ್ಮಕ ಭಾರತದಲ್ಲಿ ಸಂಘದ ಸ್ಥಾನಮಾನವನ್ನು ಪ್ರಶ್ನಿಸುವ ಮೂಲ ವಿಚಾರ. ಆರೆಸ್ಸೆಸ್ ನಿಜವಾದ ರಾಷ್ಟ್ರಪ್ರೇಮಿ ಸಂಸ್ಥೆಯಾದರೆ, ಅದು ಸಂವಿಧಾನದ ಮೌಲ್ಯಗಳತ್ತ, ಸಾರ್ವಜನಿಕ ಉತ್ತರದಾಯಿತ್ವದತ್ತ ಮತ್ತು ಪಾರದರ್ಶಕತೆಯತ್ತ ಹೆಜ್ಜೆ ಇಡಬೇಕು. ದಂಡದ ಪ್ರದರ್ಶನಕ್ಕಿಂತ ನೈತಿಕ ಸ್ಪಷ್ಟತೆ ಮುಖ್ಯ.

ಇನ್ನು ಒಂದು ಅಂಶ ಗಮನಾರ್ಹ - ಸಂಘದ ಆಂತರಿಕ ಕಾರ್ಯಪದ್ಧತಿ ಸಂಪೂರ್ಣ ಗುಪ್ತಸ್ವರೂಪದ್ದಾಗಿದೆ. ಅದು ಸಾರ್ವಜನಿಕ ಸದಸ್ಯತ್ವ ಅಥವಾ ಹಣಕಾಸಿನ ವಿವರಗಳನ್ನು ಬಹಿರಂಗಪಡಿಸುವುದಿಲ್ಲ. ಇದು ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಅನುಮಾನ ಹುಟ್ಟಿಸುವ ವಿಷಯ. ತಾನು ರಾಷ್ಟ್ರಪ್ರೇಮದ ಪ್ರತೀಕವೆಂದು ಹೇಳಿಕೊಳ್ಳುವ ಸಂಘವೇ ಜನರ ಪ್ರಶ್ನೆಗಳಿಗೆ ಉತ್ತರ ಕೊಡದಿದ್ದರೆ, ಅದರ ನಿಷ್ಠೆ ಎಲ್ಲಿ ಅಡಗಿದೆ ಎಂಬುದು ಜನರಿಗೆ ಸ್ಪಷ್ಟವಾಗಬೇಕು.

ಆರೆಸ್ಸೆಸ್ ದೇಶದೊಳಗಿನ ವಿಭಜನೆಗೆ ಕಾರಣವಾಗದಿರಬೇಕೆಂದರೆ, ಅದು ಸಂವಾದ, ಸಮಾನತೆ ಮತ್ತು ಸಂವಿಧಾನದ ನಿಷ್ಠೆಯ ಮಾರ್ಗವನ್ನೇ ಅಳವಡಿಸಿಕೊಳ್ಳಬೇಕು. ಜನರ ಧೈರ್ಯಕ್ಕೆ ಭಯದ ದಂಡದ ನೆರಳು ಅಗತ್ಯವಿಲ್ಲ - ಜನರ ವಿಶ್ವಾಸದ ಬೆಳಕು ಸಾಕು.

Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

When Prestige Is Gifted, Not Earned: The Padma Vibhushan Controversy Of Veerendra Heggade

Why I Will Never Fly Air India Again