ಶಿಸ್ತು ಕಳೆದುಕೊಂಡು ಕಳಾಹೀನವಾದ ರಾಜ್ಯ ಕಾಂಗ್ರೆಸ್
ಕರ್ನಾಟಕದ ಕಾಂಗ್ರೆಸ್ ಪಕ್ಷವು ನಿರ್ಣಾಯಕ ಪರೀಕ್ಷೆಯನ್ನು ಎದುರಿಸುತ್ತಿದೆ
ಅಲವಾದರಲವೆನ್ನಿ * ಬಿವಿಸೀ
ಆಡಳಿತಾರೂಢ ಕಾಂಗ್ರೆಸ್ ಪಕ್ಷ ಕರ್ನಾಟಕದಲ್ಲಿ ಸರ್ವರಿಗೂ ಮುಕ್ತವಾದ ಅಖಾಡ ಆದಂತೆ ಕಾಣುತ್ತಿದ್ದು ಇಲ್ಲಿ ಪಕ್ಷದ ನಾಯಕರು ಆಂತರಿಕ ವ್ಯವಹಾರಗಳ ಬಗ್ಗೆ ಮಾತನಾಡುವಾಗ ಕಿಂಚಿತ್ತಾದರೂ ಸಂಯಮ ತೋರುತ್ತಿಲ್ಲ, ಅದರ ಪರಿಣಾಮಗಳ ಕುರಿತು ಯೋಚಿಸುತ್ತಿಲ್ಲ. ಪಕ್ಷದಲ್ಲಿ ಶಿಸ್ತು ಇಲ್ಲವಾಗಿರುವುದು ಸ್ಪಷ್ಟವಾಗಿ ಕಾಣುತ್ತಿದ್ದು, ರಾಜ್ಯದಲ್ಲಿ ಅಧಿಕಾರ ಹೊಂದಿರುವ ಪಕ್ಷವು ಸ್ಥಿರತೆ ಮತ್ತು ಸಹಕಾರವನ್ನು ತೋರುವುದರ ಬದಲು ಅಶಿಸ್ತನ್ನು ಪ್ರದರ್ಶಿಸುತ್ತಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಬಣದ ಕೆ ಎನ್ ರಾಜಣ್ಣ ನಿರ್ಗಮನದೊಂದಿಗೆ ಆರಂಭವಾದ ಈ ಕತೆ ಬರುಬರುತ್ತಾ ಹದಗೆಡುತ್ತಿದೆ. ರಾಜಣ್ಣ ಅವರನ್ನು ಅವರ ಲಂಗುಲಗಾಮಿಲ್ಲದ ಆಕ್ರೋಶಭರಿತ ಮಾತುಗಳು ಮತ್ತು ಸರ್ಕಾರ ಹಾಗೂ ಪಕ್ಷದ ಬಗ್ಗೆ ಅನಗತ್ಯ ಹೇಳಿಕೆಗಳ ಕಾರಣಕ್ಕೆ ಸಚಿವ ಹುದ್ದೆಯಿಂದ ಕೆಳಗಿಳಿಸಲಾಗಿತ್ತು. ಆದಾಗ್ಯೂ ಬೇಕಾಬಿಟ್ಟಿ, ವಿವೇಚನಾರಹಿತ ಹೇಳಿಕೆಗಳು ಮುಂದುವರೆದಿದ್ದು, ರಾಜಣ್ಣ ಅವರ ಸ್ಥಾನವನ್ನು ಈಗ ಮುಖ್ಯಮಂತ್ರಿಗಳ ಮಗ, ಎಂಎಲ್‍ಸಿ ಯತೀಂದ್ರ ಅವರೇ ಆಕ್ರಮಿಸಿದ್ದಾರೆ. ಇವರ ಹೇಳಿಕೆಗಳು ಗೊಂದಲವನ್ನು ಮತ್ತಷ್ಟು ಉಲ್ಬಣಿಸುವಂತೆ ಮಾಡುತ್ತಿವೆ.
ಯತೀಂದ್ರ ಪದೇ ಪದೇ ಸಿದ್ದರಾಮಯ್ಯ ತಮ್ಮ ಐದು ವರ್ಷಗಳ ಅವಧಿಯನ್ನು ಪೂರೈಸಲಿದ್ದಾರೆ ಎಂದು ಹೇಳುತ್ತಲೇ ಬಂದಿದ್ದಾರೆ. ಈ ಹೇಳಿಕೆಗಳ ಹಿಂದಿನ ಸ್ಪಷ್ಟ ಉದ್ದೇಶ ತಿಳಿಯುತ್ತಿಲ್ಲ. ಅವರ ತಂದೆಯ ಅಧಿಕಾರವನ್ನು ಸ್ಥಾಪಿಸುವಲ್ಲಿ ಅಥವಾ ಸರ್ಕಾರದ ಸುಸ್ಥಿರತೆಯನ್ನು ಖಚಿತಪಡಿಸುವ ಸಲುವಾಗಿ, ಪಕ್ಷದೊಳಗಿನ ನಾಯಕತ್ವ ಬದಲಾವಣೆಯ ಅಭಿಪ್ರಾಯಗಳನ್ನು ಬಿಂಬಿಸುವ ಉದ್ದೇಶವೂ ಇರಬಹುದು. ಇದೇ ವೇಳೆ ಎಸ್‍ಸಿ ಕೋಟಾದಡಿ ಚುನಾಯಿತರಾಗಿ ಸಚಿವರಾಗಿದ್ದು, ಈಗ ಲೋಕೋಪಯೋಗಿ ಸಚಿವರಾಗಿರುವ ಸತೀಶ್ ಜಾರಕಿಹೊಳಿ ಅವರನ್ನು ಉತ್ತರಾಧಿಕಾರಿಯಾಗಿ ಸೂಚನೆ ನೀಡುವ ಮೂಲಕ ಯತೀಂದ್ರ ಎಲ್ಲರನ್ನೂ ಚಕಿತಗೊಳಿಸಿದ್ದಾರೆ. ಈ ಎರಡೂ ಹೇಳಿಕೆಗಳು ವೈರುಧ್ಯಮಯವಾಗಿದ್ದು, ಒಂದೆಡೆ ಸಿದ್ದರಾಮಯ್ಯ ಅವರ ಮುಂದುವರಿಕೆಯನ್ನು ಖಚಿತಪಡಿಸಿದರೆ ಮತ್ತೊಂದೆಡೆ ಬದಲಾವಣೆಯ ಸೂಚನೆಯನ್ನೂ ನೀಡುವಂತೆ ಕಾಣುತ್ತದೆ.
ಈ ಸಂಕೀರ್ಣತೆಗೆ ಮತ್ತಷ್ಟು ಉತ್ತೇಜನ ಕೊಡುವ ಹಾಗೆ ಕೆಪಿಸಿಸಿ ಅಧ್ಯಕ್ಷ ಮತ್ತು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ನಿಷ್ಠಾವಂತರು ಪಕ್ಷದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದು, ಅವರೂ ಸಹ ತಮ್ಮ ಬಾಸ್ ಸರ್ಕಾರದ ಮುಂದಾಳತ್ವ ವಹಿಸುವ ಸಮಯ ಬಂದಿದೆ ಎಂದು ವರದಿ ಒಪ್ಪಿಸುತ್ತಿದ್ದಾರೆ. ಆದರೆ ಈ ಕುರ್ಚಿ ಖಾಲಿ ಇಲ್ಲದಿರುವುದು ವಾಸ್ತವ. ಮುಖ್ಯಮಂತ್ರಿಯ ಪುತ್ರನಾಗಿ ಯತೀಂದ್ರ ನ್ಯಾಯವಾಗಿ ಇವುಗಳಿಂದ ದೂರ ಇರಬೇಕಿತ್ತು. ವಿವೇಕಯುತ ವ್ಯಕ್ತಿತ್ವವನ್ನು ರೂಢಿಸಿಕೊಳ್ಳಬೇಕಿತ್ತು. ಬದಲಾಗಿ ಅವರ ಘೋಷಣೆಗಳು ಸ್ವತಃ ಅವರನ್ನು, ಅವರ ತಂದೆಯನ್ನು ಮಾತ್ರ ಮುಜುಗರಕ್ಕೀಡುಮಾಡದೆ, ಇಡೀ ರಾಜಕೀಯ ವಲಯದಲ್ಲಿ ಊಹಾಪೆÇೀಹಗಳನ್ನು ಹುಟ್ಟುಹಾಕಿದೆ.
ಈ ಸನ್ನಿವೇಶವು ಸಿದ್ದರಾಮಯ್ಯ ಅವರ ಕಾರ್ಯತಂತ್ರ ಬಗ್ಗೆಯೇ ಹಲವು ಪ್ರಶ್ನೆಗಳನ್ನು ಹುಟ್ಟುಹಾಕುತ್ತಿದೆ. ಸಿದ್ದರಾಮಯ್ಯ ತಮ್ಮ ಪುತ್ರನ ಮೂಲಕ ಅವರ ಭವಿಷ್ಯತ್ತನ್ನು ತಿಳಿದುಕೊಳ್ಳಲು ಯತ್ನಿಸುತ್ತಿದ್ದು, ಪಕ್ಷದ ಸದಸ್ಯರ ಮತ್ತು ಹೈಕಮಾಂಡ್ ಪ್ರತಿಕ್ರಿಯೆಯನ್ನು ನಿರೀಕ್ಷಿಸುತ್ತಿದ್ದಾರೆಯೇ? ಅಥವಾ ಇದು ಕೇವಲ ರಾಜಕೀಯ ಆಕಾಂಕ್ಷೆಯಿಂದ ಕೂಡಿದ ಯೌವ್ವನದ ಅವಿವೇಕಿತನವೋ? ಹೇಗೇ ಆದರೂ ಯತೀಂದ್ರ ಅವರ ಹೇಳಿಕೆಗಳು ವಿರೋಧಾಭಾಸಗಳನ್ನು ಸೃಷ್ಟಿಸಿದ್ದು, ಪಕ್ಷ ಮತ್ತು ಸಾರ್ವಜನಿಕರಲ್ಲಿ ಗೊಂದಲ ಮೂಡಿಸಿದೆ.
ವರದಿಗಳ ಅನುಸಾರ ಕಾಂಗ್ರೆಸ್ ಹೈಕಮಾಂಡ್ ಈಗಾಗಲೇ ಬೇಸರಗೊಂಡಿದ್ದು, ಯತೀಂದ್ರ ಅವರಿಗೆ ವಿನಾಕಾರಣ ಹೇಳಿಕೆಗಳನ್ನು ವಿವರಿಸಲು ಶೋ ಕಾಸ್ ನೋಟಿಸ್ ಜಾರಿಮಾಡಬಹುದು. ಇದು ಸಾಧ್ಯವಾದರೆ ಅದು ಮುಖ್ಯಮಂತ್ರಿಗಳಿಗೆ ಸಂದಿಗ್ಧ ಪರಿಸ್ಥಿತಿಯನ್ನು ಸೃಷ್ಟಿಸಲಿದ್ದು, ಈಗಿನಂತೆ ಆಂತರಿಕ ಭಿನ್ಮಮತ ಮತ್ತು ಸಾರ್ವಜನಿಕ ಅಭಿಪ್ರಾಯ ಎರಡನ್ನೂ ನಿಭಾಯಿಸುವುದು ಕಷ್ಟವಾಗಬಹುದು.
ಇನ್ನೂ ಗಂಭೀರವಾದ ಸಮಸ್ಯೆ ಎಂದರೆ ಆಳ್ವಿಕೆ, ಆಡಳಿತ ಮತ್ತು ಅಭಿವೃದ್ಧಿಯ ಬಗ್ಗೆ ಯೋಚಿಸದೆ, ಕರ್ನಾಟಕದ ಆಡಳಿತಾರೂಢ ಪಕ್ಷದ ನಾಯಕರು ವೈಯುಕ್ತಿಕ ವೈಷಮ್ಯ ಮತ್ತು ಊಹಾಪೆÇೀಹದ ರಾಜಕಾರಣವನ್ನು ಹೆಚ್ಚಿಸುತ್ತಿದ್ದಾರೆ. ಈ ರೀತಿ ಸಾರ್ವಜನಿಕವಾಗಿ ಅಶಿಸ್ತು ಪ್ರದರ್ಶಿಸುವುದು ನಾಯಕತ್ವವನ್ನು ಮುಜುಗರಕ್ಕೆ ಸಿಲುಕಿಸುವುದೇ ಅಲ್ಲದೆ, ಪಕ್ಷದ ವರ್ಚಸ್ಸಿಗೂ ಧಕ್ಕೆ ಉಂಟುಮಾಡುತ್ತದೆ. ಪರಿಣಾಮಕಾರಿಯಾಗಿ ಆಡಳಿತ ನಿರ್ವಹಿಸುವ ಸಾಮಥ್ರ್ಯದ ಬಗ್ಗೆ ಅನುಮಾನಗಳನ್ನು ಹುಟ್ಟುಹಾಕುತ್ತದೆ.
ಅಂತಿಮವಾಗಿ, ಕರ್ನಾಟಕದ ಕಾಂಗ್ರೆಸ್ ಪಕ್ಷವು ನಿರ್ಣಾಯಕ ಪರೀಕ್ಷೆಯನ್ನು ಎದುರಿಸುತ್ತಿದೆ. ಆಂತರಿಕ ಶಿಸ್ತು ಕಾಪಾಡುವುದು, ಮಾಹಿತಿ ಹಂಚಿಕೆಯಲ್ಲಿ ಸ್ಪಷ್ಟತೆ ತೋರುವುದು, ಗುಮಾನಿಗಳಿಗಿಂತಲೂ ಆಳ್ವಿಕೆಗೆ ಆದ್ಯತೆ ನೀಡುವುದು ಮುಖ್ಯವಾಗುತ್ತದೆ. ಅಲ್ಲಿಯವರೆಗೂ ಪಕ್ಷದ ಸಾರ್ವಜನಿಕ ವರ್ಚಸ್ಸು ಗೊಂದಲಗಳಲ್ಲೇ ಸಿಲುಕಿರುತ್ತದೆ, ಪ್ರತಿಯೊಂದು ವಿರೋಧಾಭಾಸದ ಹೇಳಿಕೆಯೂ ಅಪಹಾಸ್ಯಕ್ಕೀಡಾಗುತ್ತದೆ, ವಿರೋಧ ಪಕ್ಷಗಳಿಂದ ರಾಜಕೀಯ ಅವಕಾಶವಾದ ಎಂಬ ಆರೋಪವನ್ನು ಎದುರಿಸಬೇಕಾಗುತ್ತದೆ.
Comments
Post a Comment