ಸಿದ್ದರಾಮಯ್ಯ ನುಡಿದಂತೆ ನಡೆಯುವ ಮಹಾನುಭಾವನಾಗಲಿ

 


ಪುತ್ತೂರಿಗೆ ಬೇಕಾದ ಕನಿಷ್ಠ ಮಟ್ಟದ ಅಭಿವೃದ್ಧಿ ಮಂಗಳೂರಿಗೆ, ಉಡುಪಿಗೆ, ಕಾರ್ಕಳಕ್ಕೆ ಬೇಡವೇ?

.............

ಖರೇ ಹೇಳಬೇಕಂದ್ರೆ * ಬಿವಿಸೀ

ಮುಖ್ಯಮಂತ್ರಿ ಸಿದ್ದರಾಮಯ್ಯ ನಿರಂತರವಾಗಿ ನರೇಂದ್ರ ಮೋದಿ ಸರ್ಕಾರದ ಆರ್ಥಿಕ ನೀತಿಗಳನ್ನು ಬಲವಾಗಿ ವಿರೋಧಿಸುತ್ತಲೇ ಬಂದಿದ್ದಾರೆ. ಕೇಂದ್ರ ಸರ್ಕಾರವು ಕೇಂದ್ರ ಹಣಕಾಸು ನಿಧಿಯನ್ನು ಒದಗಿಸುವಲ್ಲಿ ಕರ್ನಾಟಕಕ್ಕೆ ಅನ್ಯಾಯ ಮಾಡಿದೆ, ಜಿಎಸ್‍ಟಿ ತೆರಿಗೆ ಪರಿಹಾರದಲ್ಲಿ ರಾಜ್ಯ ಕೊರತೆ ಎದುರಿಸುತ್ತಿದೆ, ವಿಭಜನಾರ್ಹ ಪರಿಹಾರ ನಿಧಿಯಲ್ಲಿ ಕರ್ನಾಟಕಕ್ಕೆ ಅರ್ಹ ಪಾಲನ್ನು ನೀಡುತ್ತಿಲ್ಲ ಎಂದು ಟೀಕಿಸುತ್ತಲೇ ಬಂದಿದ್ದಾರೆ. ಸಿದ್ದರಾಮಯ್ಯ ಅವರ ಆಕ್ಷೇಪಗಳಲ್ಲಿ ಸತ್ಯಾಂಶವಿದೆ. ದತ್ತಾಂಶಗಳೇ ತೋರುವಂತೆ, ಬಿಜೆಪಿ ಆಳ್ವಿಕೆಯ ರಾಜ್ಯಗಳು ಮತ್ತು ಎನ್‍ಡಿಎ ಮೈತ್ರಿಕೂಟದ ಉಳಿವಿಗೆ ನಿರ್ಣಾಯಕವಾಗುವ ರಾಜ್ಯಗಳಾದ ಬಿಹಾರ ಮತ್ತು ಆಂಧ್ರ ಪ್ರದೇಶಗಳು ಹೆಚ್ಚು ಉದಾರವಾದಿ ಕೇಂದ್ರ ಸರ್ಕಾರದ ಸಂಪನ್ಮೂಲಗಳನ್ನು ಪಡೆದುಕೊಳ್ಳುತ್ತಿವೆ.

ಆದರೆ ನ್ಯಾಯವು ತತ್ವವಾಗಿರಬೇಕೇ ಹೊರತು ಕೇವಲ ಘೋಷಣೆ ಆಗಬಾರದು. ಸಿದ್ದರಾಮಯ್ಯ ಕೇಂದ್ರ ಸರ್ಕಾರದಿಂದ ಅಪೇಕ್ಷಿಸುವಂತಹ ಆರ್ಥಿಕ ಸಮಾನತೆಯ ನೀತಿಯನ್ನು ಸ್ವತಃ ಅನುಸರಿಸುತ್ತಿದ್ದಾರೆಯೇ ಎಂದು ಪ್ರಶ್ನಿಸಲಾಗುತ್ತಿದೆ. ರಾಜ್ಯ ಸರ್ಕಾರವು ಅಭಿವೃದ್ಧಿ ಹಣವನ್ನು ರಾಜ್ಯದ 30 ಜಿಲ್ಲೆಗಳಿಗೆ ಮತ್ತು 224 ಕ್ಷೇತ್ರಗಳಿಗೆ ಇದೇ ರೀತಿಯ ನ್ಯಾಯಯುತ ಮಾದರಿಯಲ್ಲಿ ವಿತರಿಸುತ್ತಿದೆಯೇ? ದುರದೃಷ್ಟವಶಾತ್ ಇದು ನಡೆಯುತ್ತಿರುವಂತೆ ಕಾಣುವುದಿಲ್ಲ.

ಇತ್ತೀಚೆಗೆ ಪುತ್ತೂರಿನಲ್ಲಿ ನಡೆದ ಸಾರ್ವಜನಿಕ ಸಭೆಯೊಂದರಲ್ಲಿ ಸಿದ್ದರಾಮಯ್ಯ, ತಮ್ಮ ಸರ್ಕಾರವು ತನ್ನ ಎರಡೂವರೆ ವರ್ಷದ ಆಳ್ವಿಕೆಯಲ್ಲಿ ಪುತ್ತೂರು ನಗರಾಭಿವೃದ್ಧಿಗಾಗಿ 2000 ಕೋಟಿ ರೂ ವಿತರಿಸಿದೆ ಎಂದು ಹೆಮ್ಮೆಯಿಂದ ಹೇಳಿದ್ದಾರೆ. ಪುತ್ತೂರು ಕಾಂಗ್ರೆಸ್ ಶಾಸಕನನ್ನು ಹೊಂದಿದೆ. ದಕ್ಷಿಣ ಕನ್ನಡದಲ್ಲಿ ಇಷ್ಟೇ ಪ್ರಮಾಣದ ಅನುದಾನ ಪಡೆದಿರುವುದು, ವಿಧಾನಸಭಾ ಅಧ್ಯಕ್ಷ ಯು ಟಿ ಖಾದರ್ ಪ್ರತಿನಿಧಿಸುವ ಉಲ್ಲಾಳ ಕ್ಷೇತ್ರ. ಏತನ್ಮಧ್ಯೆ ಉಡುಪಿ ಮತ್ತು ದಕ್ಷಿಣ ಕನ್ನಡದ ಬಿಜೆಪಿ ಶಾಸಕರು ತಮ್ಮ ಕ್ಷೇತ್ರಗಳಿಗೆ ಅಗತ್ಯವಾದ ಅಭಿವೃದ್ಧಿ ಅನುದಾವನ್ನು ನಿರಾಕರಿಸಲಾಗುತ್ತಿದೆ ಎಂದು ಆರೋಪಿಸುತ್ತಲೇ ಬಂದಿದ್ದಾರೆ. ಪುತ್ತೂರಿಗೆ ಬೇಕಾದ ಕನಿಷ್ಠ ಮಟ್ಟದ ಅಭಿವೃದ್ಧಿ ಮಂಗಳೂರಿಗೆ, ಉಡುಪಿಗೆ, ಕಾರ್ಕಳಕ್ಕೆ ಬೇಡವೇ? ಎಲ್ಲ ಕಡೆ ರಸ್ತೆಗಳು ಸಂಚಾರಕ್ಕೆ ಅನರ್ಹವಾಗಿ ಕೆಟ್ಟು ನಿಂತಿವೆ. ಸಮಸ್ಯೆ ಎಲ್ಲಾ ಕಡೆ ಒಂದೇ.

ಈ ದೂರುಗಳು ಭಾಗಶಃ ನಿಜವಾದರೂ ಸಹ ಮುಖ್ಯಮಂತ್ರಿ ಸಿದ್ದರಾಮಯ್ಯ, ತಾವು ಕೇಂದ್ರ ಸರ್ಕಾರದ ವಿರುದ್ಧ ಆರೋಪಿಸುವ, ಹಣಕಾಸು ನೀತಿಯನ್ನು ರಾಜಕೀಯ ಅಸ್ತ್ರವನ್ನಾಗಿ ಬಳಸುವ ತಪ್ಪನ್ನೇ ಇಲ್ಲಿಯೂ ಮಾಡುತ್ತಿರುವುದು ವಾಸ್ತವ. ಕಾಂಗ್ರೆಸ್ ಪಕ್ಷದ ಶಾಸಕರಿರುವ ಕ್ಷೇತ್ರಗಳಿಗೆ ನೆರವಾಗುವುದು, ವಿರೋಧ ಪಕ್ಷಗಳನ್ನು ಪ್ರತಿನಿಧಿಸುವ ಕ್ಷೇತ್ರಗಳನ್ನು ಸಂಪನ್ಮೂಲಗಳಿಂದ ವಂಚಿತರನ್ನಾಗಿ ಮಾಡುವುದು ಸಮಾನತೆಯ ಆಳ್ವಿಕೆ ನೀತಿಯನ್ನೇ ಅಲ್ಲಗಳೆದಂತಾಗುತ್ತದೆ. ಇದು ಸಿದ್ದರಾಮಯ್ಯನವರ ನೈತಿಕ ಅಧಿಕಾರವನ್ನು ದುರ್ಬಲಗೊಳಿಸುವುದಲ್ಲದೆ, ಕೇಂದ್ರದ ಪಕ್ಷಪಾತ ನೀತಿಯನ್ನು ಪ್ರಶ್ನಿಸುವ ಅವರು ನೈತಿಕತೆಯನ್ನೂ ಕಳೆದುಕೊಂಡಂತಾಗುತ್ತದೆ.

ನ್ನು ಅಳೆಯುವುದು ನಿದರ್ಶನಗಳ ಮೂಲಕವೇ ಹೊರತು ಘೋಷಣೆಗಳಿಂದ ಅಲ್ಲ. ಸಾಮಾಜಿಕ ನ್ಯಾಯಕ್ಕೆ ಬದ್ಧವಾದ ಸರ್ಕಾರವು ಅದನ್ನು ಆಚರಣೆಯಲ್ಲಿ ಅಳವಡಿಸಿಕೊಳ್ಳಬೇಕು. ಸಿದ್ದರಾಮಯ್ಯ ತನ್ನ ಆಡಳಿತ ಯಂತ್ರಗಳಿಗೆ ಪ್ರತಿಯೊಂದು ಕ್ಷೇತ್ರಕ್ಕೆ ಸರ್ಕಾರ ನೀಡಿರುವ ಅಭಿವೃದ್ಧಿ ಅನುದಾನವನ್ನು ಕುರಿತ ಶ್ವೇತ ಪತ್ರವನ್ನು ಹೊರಡಿಸಲಿ. ಈ ದತ್ತಾಂಶಗಳು ಸರ್ಕಾರ ನ್ಯಾಯಯುತವಾಗಿದೆ ಎಂದು ನಿರೂಪಿಸಿದರೆ, ಪಾರದರ್ಶಕತೆಯನ್ನು ಸೂಚಿಸಿದರೆ, ಆಗ ನವದೆಹಲಿಯ ವಿರುದ್ಧ ಆರೋಪ ಮಾಡುವ ಅವಕಾಶವನ್ನು ಬಲಪಡಿಸಿದಂತಾಗುತ್ತದೆ. ಆದರೆ ಇಲ್ಲಿ ರಾಜಕೀಯ ಪಕ್ಷಪಾತ ಕಂಡುಬಂದರೆ, ಅವರ ತಾರತಮ್ಯದ ಆರೋಪಗಳು ಪೆÇಳ್ಳು ಎನಿಸಿಕೊಳ್ಳುತ್ತವೆ. ನಾಟಕೀಯ ಪ್ರಹಸನವಾಗಿ ಕಾಣುತ್ತದೆ.

ಹಣಕಾಸು ನ್ಯಾಯ ಎನ್ನುವುದು ದಾನ ಔದಾರ್ಯಗಳ ಹಾಗೆ ಮನೆಯಿಂದಲೇ ಆರಂಭವಾಗಬೇಕು. ಸಿದ್ದರಾಮಯ್ಯ ಕೇಂದ್ರ ಸರ್ಕಾರದ ವಿರುದ್ಧ ನೈತಿಕವಾಗಿ ಪ್ರಶ್ನಿಸುವುದಾದರೆ, ಕರ್ನಾಟಕ ಸರ್ಕಾರವು ನುಡಿದಂತೆ ನಡೆಯಬೇಕು ಎನ್ನುವುದನ್ನು ಆಚರಣೆಯ ಮೂಲಕ ನಿರೂಪಿಸಬೇಕು.

Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

When Prestige Is Gifted, Not Earned: The Padma Vibhushan Controversy Of Veerendra Heggade

Why I Will Never Fly Air India Again