ಎಸ್‍ಐಟಿ ನಾಟಕ ಮತ್ತು ಸಾರ್ವಜನಿಕ ವಿಶ್ವಾಸದ ಕುಸಿತ

 ಸರ್ಕಾರದ ವರ್ತನೆಯೇ ಈ ಅನುಮಾನಗಳನ್ನು ಪುಷ್ಟೀಕರಿಸುವಂತಿದೆ


                                        ಎಸ್‍ಐಟಿ ತಂಡದ ಮುಖ್ಯಸ್ಥ ಮೊಹಂತಿ

ಅಯೋಮಯ * ಬಿವಿಸೀ


ಕರ್ನಾಟಕವನ್ನು ಇಂದು ಕಾಡುತ್ತಿರುವ ಜಟಿಲ ಪ್ರಶ್ನೆ ಅಷ್ಟೇ ಪ್ರಕ್ಷುಬ್ಧವೂ ಆಗಿದೆ. ಎಸ್‍ಐಟಿ ತನಿಖೆಯು ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾಗುವ ಅಸಹಜ ಸಾವುಗಳು, ಸಾಮೂಹಿಕ ಅಂತ್ಯಕ್ರಿಯೆಗಳು ಹಾಗೂ ಸೌಜನ್ಯ ಪ್ರಕರಣವನ್ನು ಶೋಧಿಸಿ ಸತ್ಯವಾದ ವರದಿಯನ್ನು ನೀಡುವುದೇ ಅಥವಾ ಪ್ರಬಲ ವ್ಯಕ್ತಿಗಳ ಹಿತಾಸಕ್ತಿಯನ್ನು ಕಾಪಾಡುವ ಸಲುವಾಗಿ ಸಿದ್ಧ ಪಡಿಸಲಾದ ವರದಿ ನೀಡುವುದೇ ಎಂಬ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ. ವ್ಯವಸ್ಥೆಯಲ್ಲಿ ವಿಶ್ವಾಸವನ್ನು ಹೆಚ್ಚು ಮಾಡುವ ಉದ್ದೇಶದಿಂದ ರಚಿಸಲಾದ ತನಿಖೆಯು ಈಗ ರಾಜಕೀಯ ಪ್ರಹಸನದ ಹಾಗೆ ಕಾಣುತ್ತಿದೆ.

ಎಸ್‍ಐಟಿ ತಂಡವನ್ನು ಪ್ರಣಬ್ ಮೊಹಂತಿ ಅವರ ನೇತೃತ್ವದಲ್ಲಿ ರಚಿಸಿದಾಗ, ಅನೇಕ ನಾಗರಿಕರು, ಸಾಮಾಜಿಕ ಕಾರ್ಯಕರ್ತರು ಅದನ್ನು ಸ್ವಾಗತಿಸಿದ್ದೇ ಅಲ್ಲದೆ, ಯಾವುದೇ ಭೀತಿ ಇಲ್ಲದೆ, ಪಕ್ಷಪಾತ ಇಲ್ಲದೆ ನ್ಯಾಯಯುತ ಮಾರ್ಗವನ್ನು ಅನುಸರಿಸಲಾಗುತ್ತದೆ ಎಂಬ ಭರವಸೆಯಲ್ಲಿದ್ದರು. ಆದರೆ ಈ ಆಶಾಭಾವನೆ ಕ್ರಮೇಣ ಕರಗಿಹೋಗುತ್ತಿದೆ. ಆರಂಭದಲ್ಲಿ ಎಸ್‍ಐಟಿ ಬೆಂಬಲಿಸಿದವರೂ ಸಹ ಈಗ ಮೊಹಂತಿ ಅವರ ಸ್ವಾತಂತ್ರ್ಯ ಮತ್ತು ವಿಶ್ವಾಸಾರ್ಹತೆಯನ್ನು ಅನುಮಾನಿಸುತ್ತಿದ್ದಾರೆ. ಮೊಹಂತಿ ಅವರು ತೀವ್ರವಾದ ಒತ್ತಡದಲ್ಲಿದ್ದು, ಅಂತಿಮ ವರದಿಯು ಅಪರಾಧಿಗಳನ್ನು ಗುರಿ ಮಾಡುವುದಕ್ಕಿಂತಲೂ ಹೆಚ್ಚಾಗಿ, ದೂರುದಾರರನ್ನು, ಮಾಹಿತಿದಾರರನ್ನು ಗುರಿಮಾಡಲಿದೆ ಎಂಬ ಅನುಮಾನ ದಟ್ಟವಾಗುತ್ತಿದೆ. ಈ ನಿರೂಪಣೆಯು ಕಾಂಗ್ರೆಸ್ ಮತ್ತು ಬಿಜೆಪಿಗೆ ಅನುಕೂಲಕರವಾಗಲಿದ್ದು, ಎರಡೂ ಪಕ್ಷಗಳ ಬಹುಕಾಲದ ಧರ್ಮಸ್ಥಳದ ನಂಟು, ಅಲ್ಲಿನ ಬಲಾಢ್ಯ ಕುಟುಂಬದೊಡಗಿನ ಸಂಬಂಧಗಳಿಗೆ ನೆರವಾಗುತ್ತದೆ ಎಂಬ ಗುಮಾನಿ ವ್ಯಕ್ತವಾಗುತ್ತಿದೆ.

ಸರ್ಕಾರದ ವರ್ತನೆಯೇ ಈ ಅನುಮಾನಗಳನ್ನು ಪುಷ್ಟೀಕರಿಸುವಂತಿದೆ. ಹಿರಿಯ ನಾಯಕರ ಹೇಳಿಕೆಗಳು, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮತ್ತು ಇತರ ಸಚಿವರ ಹೇಳಿಕೆಗಳು ಧರ್ಮಸ್ಥಳದ ದೊಡ್ಡವರನ್ನು ರಕ್ಷಿಸುವ ದಿಕ್ಕಿನಲ್ಲೇ ಸಾಗುತ್ತಿವೆ. ಇವರ ಮುಕ್ತ ಘೋಷಣೆಗಳಲ್ಲಿ, ಈ ವ್ಯಕ್ತಿಗಳನ್ನು ಕೈಬಿಡಲಾಗುವುದಿಲ್ಲ ಎಂಬ ಸಂದೇಶ ಸ್ಪಷ್ಟವಾಗಿದ್ದು, ಇದು ಸರ್ಕಾರದ ತಟಸ್ಥತೆಯ ಬಗ್ಗೆ ಇದ್ದ ಭ್ರಮೆಯನ್ನು ಇಲ್ಲವಾಗಿಸಿದೆ. ಎಸ್‍ಐಟಿ ಇಂತಹ ರಾಜಕೀಯ ಮೇಲ್ವಿಚಾರಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇಲ್ಲಿ ಸ್ವಾಯತ್ತತೆ ಎನ್ನುವುದು ಪೆÇಳ್ಳು ಭರವಸೆಯಾಗಿ ಮಾತ್ರ ಕಾಣಲು ಸಾಧ್ಯ.

ಏತನ್ಮಧ್ಯೆ ತನಿಖೆಯೇ ಈಗ ಕಳಂಕಮಯವಾಗಿದೆ. ಮಹೇಶ್‍ಶೆಟ್ಟಿ ತಿಮರೋಡಿಯಂತಹ ಕಾರ್ಯಕರ್ತರು, ಚಿನ್ನಯ್ಯನಂತಹ ಮಾಹಿತಿದಾರರು, ಸೌಜನ್ಯಾಗೆ ನ್ಯಾಯ ಎಂಬ ಪ್ರಚಾರಾಂದೋಲನವನ್ನು ಮುನ್ನಡೆಸಿದವರು, ಈಗ ಸೆರೆವಾಸ ಅನುಭವಿಸುತ್ತಿದ್ದು, ಬೆದರಿಕೆಗಳಿಗೆ ಒಳಗಾಗಿ, ಹಲವು ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸುತ್ತಿದ್ದಾರೆ.  ಇತರ ಕಾರ್ಯಕರ್ತರಾದ ಗಿರೀಶ್ ಮಟ್ಟಣ್ಣನವರ್, ಟಿ ಜಯಂತ್ ಮತ್ತು ವಿಠ್ಠಲ್ ಗೌಡ ಅವರನ್ನು ನಿರಂತರವಾಗಿ ವಿಚಾರಣೆಗೆ ಒಳಪಡಿಸಲಾಗುತ್ತಿದ್ದು, ಬಂಧನದ ಭೀತಿಯನ್ನು ಎದುರಿಸುತ್ತಿದ್ದಾರೆ. ಇದಕ್ಕೆ ವ್ಯತಿರಿಕ್ತವಾಗಿ, ಸೌಜನ್ಯ ಪ್ರಕರಣದಲ್ಲಿ ಅವರ ತಾಯಿ ಕುಸುಮಾವತಿ ಗುರುತಿಸಿರುವ ಪ್ರಮುಖ ಆರೋಪಿಗಳು - ಹೆಗ್ಗಡೆ ಕುಟುಂಬದವರನ್ನೂ ಒಳಗೊಂಡಂತೆ -  ಮುಕ್ತವಾಗಿ ಓಡಾಡಿಕೊಂಡಿದ್ದು, ಯಾವುದೇ ವಿಚಾರಣೆಗೆ ಒಳಪಟ್ಟಿಲ್ಲ. ತಮ್ಮ ಸಂಬಂಧಿಗಳನ್ನು ರಕ್ಷಿಸುತ್ತಿರುವ ಆರೋಪ ಎದುರಿಸುತ್ತಿರುವ ವೀರೇಂದ್ರ ಹೆಗ್ಗಡೆ ಅವರೂ ಸಹ ವಿಚಾರಣೆ ಎದುರಿಸಿಲ್ಲ.

ಈ ಗೊಂದಲಕ್ಕೆ ಸೇರಿದ ಹಾಗೆ ಗೃಹಸಚಿವರು ವಿರೋಧಾಭಾಸದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಒಂದೆಡೆ ಸಚಿವರು ಎಸ್‍ಐಟಿಗೆ ತನಿಖೆ ಮುಗಿಸಲು ಗಡುವು ನಿಗದಿ ಪಡಿಸಲಾಗಿಲ್ಲ ಎಂದು ಹೇಳುತ್ತಿದ್ದು ಮತ್ತೊಂದೆಡೆ ಒಂದು ವಾರದೊಳಗೆ ಅಂತಿಮ ವರದಿ ಸಲ್ಲಿಸಲು ಸೂಚಿಸುತ್ತಿದ್ದಾರೆ. ಈ ರೀತಿಯ ಅನಿಶ್ಚಿತತೆಗಳು ಸರ್ಕಾರವೇ ತನಿಖೆಯನ್ನು ನಿರ್ದೇಶಿಸುತ್ತಿದೆ ಎಂದು ಸೂಚಿಸುವುದೇ ಅಲ್ಲದೆ, ಉದ್ದೇಶಪೂರ್ವಕವಾಗಿ ಮರೆಮಾಚುವುದನ್ನೂ ಸಹ ಸ್ಪಷ್ಟಪಡಿಸುತ್ತದೆ. ಯಾರನ್ನು ದೂಷಿಸಬೇಕು, ಯಾರನ್ನು ರಕ್ಷಿಸಬೇಕು ಎನ್ನುವುದನ್ನು ಸರ್ಕಾರವೇ ನಿರ್ಧರಿಸುವಂತೆ ಕಾಣುತ್ತಿದೆ.

ಒಂದು ವೇಳೆ ಸರ್ಕಾರಕ್ಕೆ ತನ್ನ ನಿಲುವು ಎಸ್‍ಐಟಿ ರಚನೆಗೆ ಮುನ್ನವೇ ಸ್ಪಷ್ಟವಾಗಿದ್ದಿದ್ದರೆ, ಇದನ್ನು ರಚಿಸುವ ಅವಶ್ಯಕತೆಯೇನಿತ್ತು? ರಾಜ್ಯ ಸರ್ಕಾರವೂ ತನ್ನ ಎಲ್ಲ ಸಂಪನ್ಮೂಲಗಳನ್ನೂ ಉಳಿತಾಯ ಮಾಡಬಹುದಿತ್ತು. ಸಾರ್ವಜನಿಕರಿಗೆ ನಿತ್ಯ ನಾಟಕೀಯ ಪ್ರಸಂಗಗಳ, ಹೊಂದಾಣಿಕೆಯ ತನಿಖೆಯ ದೃಶ್ಯಗಳನ್ನು ನೋಡಬೇಕಿರಲಿಲ್ಲ. ಸ್ಪಷ್ಟ ನಿರ್ದೇಶನ ಇಲ್ಲದ ತನಿಖೆಯು ಸತ್ಯವನ್ನು ಅರಸುವ ಬದಲು ಆರೋಪಿಗಳನ್ನು ರಕ್ಷಿಸುವ ಕೈಯ್ಯಲ್ಲಿನ ದಾಳವಾಗಿ ಪರಿಣಮಿಸುತ್ತದೆ. ಎಲ್ಲ ಕಣ್ಕಟ್ಟಿನಂತೆಯೇ ಕಾಣುತ್ತದೆ.

ಇಂದು ಎಸ್‍ಐಟಿ ಮತ್ತು ಅದರ ಅಧಿಕಾರಿಗಳ ವಿಶ್ವಾಸಾರ್ಹತೆ ಅಪಾಯಕಾರಿ ತಳಮಟ್ಟ ತಲುಪಿದೆ. ನಾಗರಿಕರ ನಡುವೆ, ಎಸ್‍ಐಟಿ ಒಂದು ವೇಳೆ ಸತ್ಯಾಂಶವನ್ನು ಶೋಧಿಸಿ ಅಪರಾಧಿಗಳನ್ನು ಹಿಡಿದರೆ, ಅದೊಂದು ಪವಾಡವೇ ಎಂಬ ಅಭಿಪ್ರಾಯ ಸೃಷ್ಟಿಯಾಗಿದೆ. ಕರ್ನಾಟಕದ ಆಡಳಿತದ ಅಂಗಳದಲ್ಲಿ ಪವಾಡಗಳು ಅಪರೂಪವಾಗಿ ಕಾಣಿಸಿಕೊಳ್ಳುತ್ತವೆ.

Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

When Prestige Is Gifted, Not Earned: The Padma Vibhushan Controversy Of Veerendra Heggade

Why I Will Never Fly Air India Again