ರಾಜ್ಯದ ಹಣಕಾಸು ಬಿಕ್ಕಟ್ಟು, ಜನಕಲ್ಯಾಣವೇ ದೌರ್ಬಲ್ಯ
ಉಚಿತಗಳಿಗೆ ವೆಚ್ಚ ಮಾಡಿದ ಸಂಪನ್ಮೂಲವನ್ನು ಉದ್ಯೋಗ ಸೃಷ್ಟಿಗೆ ವಿನಿಯೋಗ ಮಾಡಿದ್ದರೆ ರಾಜ್ಯದಲ್ಲಿ ಲಕ್ಷಾಂತರ ಉದ್ಯೋಗಗಳು ಸೃಷ್ಟಿಯಾಗುತ್ತಿದ್ದವು ಎಂದು ಬಲ್ಲವರು ಹೇಳುವ ಮಾತು.
ಅಲವಾದರಲವೆನ್ನಿ * ಬಿವಿಸೀ
ರಾಜ್ಯದ ಪ್ರಜ್ಞಾವಂತ ಜನರ ನಡುವೆ - ನಿವೃತ್ತ ಅಧಿಕಾರಿಗಳಿಂದ ಹಿಡಿದು ವಾಣಿಜ್ಯೋದ್ಯಮಿಗಳವರೆಗೆ - ರಾಜ್ಯ ಸರ್ಕಾರ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳು, ದುಬಾರಿ ಬೆಲೆ ತೆರಬೇಕಾಗಿರುವಂಥದ್ದು ಎಂಬ ಆಲೋಚನೆ ಗಂಭೀರವಾಗಿ ನೆಲೆಯೂರುತ್ತಿದೆ. ಉದಾತ್ತ ಉದ್ದೇಶ ಮತ್ತು ರಾಜಕೀಯ ಉತ್ಸಾಹದೊಂದಿಗೆ ಜಾರಿಗೊಳಿಸಲಾದ ಈ ಯೋಜನೆಗಳು, ಉಚಿತ ವಿದ್ಯುತ್, ಉಚಿತ ಅಕ್ಕಿ, ಮಹಿಳೆಯರಿಗೆ ನೇರ ನಗದು ಪಾವತಿ, ಉಚಿತ ಬಸ್‍ಪ್ರಯಾಣ ಮತ್ತು ನಿರುದ್ಯೋಗ ಭತ್ಯೆ, ಇವೆಲ್ಲವೂ ಸೇರಿ ಸರ್ಕಾರಕ್ಕೆ ವರ್ಷಕ್ಕೆ 75 ಸಾವಿರ ಕೋಟಿ ರೂ ಹೊರೆಯಾಗುತ್ತಿದೆ. ಇದು ರಾಜ್ಯದ ಆದಾಯ ವೆಚ್ಚದ ಮೂರನೇ ಒಂದು ಭಾಗದಷ್ಟಾಗುತ್ತದೆ.
ಒಂದು ಸಮಯದಲ್ಲಿ ಒಳಗೊಳ್ಳುವ (ಇನ್‍ಕ್ಲೂಸಿವ್) ಆಳ್ವಿಕೆಯ ಮಾದರಿ ಎಂದು ಹೆಸರಾಗಿದ್ದ ಈ ಯೋಜನೆಗಳು, ರಾಜ್ಯದ ಹಣಕಾಸು ಪರಿಸ್ಥಿತಿ ಬಿಗಡಾಯಿಸುವಂತೆ ಮಾಡುತ್ತಿದೆ. ಸಾರ್ವಜನಿಕ ಕಾಮಗಾರಿಗಳು, ಆರೋಗ್ಯ, ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಹೀಗೆ ಎಲ್ಲ ಇಲಾಖೆಗಳೂ ಸಹ ಹಣಕಾಸು ಕೊರತೆ ಇರುವುದನ್ನು ವರದಿ ಮಾಡುತ್ತಿವೆ. ಗುತ್ತಿಗೆದಾರರು ತಮಗೆ ಬಿಲ್‍ಗಳ ಪಾವತಿಯಾಗುತ್ತಿಲ್ಲ ಎಂದು ಆರೋಪಿಸಿ ಸರಕಾರಕ್ಕೆ ಗಡುವು ನೀಡುತ್ತಿದ್ದಾರೆ, ಮೂಲ ಸೌಕರ್ಯಗಳ ನಿತ್ಯ ನಿರ್ವಹಣೆಯನ್ನು ನಿರ್ಲಕ್ಷಿಸಲಾಗಿದೆ. ನಗರ ಪ್ರದೇಶಗಳ ನಾಗರಿಕ ಸಂಸ್ಥೆಗಳೂ ಸಹ - ನಗರಸಭೆ, ಪುರಸಭೆಗಳು ಮುಂತಾದ ಸಂಸ್ಥೆಗಳು - ಅವಶ್ಯ ಕಾಮಗಾರಿಗಳನ್ನು ಮುಂದುವರೆಸಲು ಪರದಾಡುತ್ತಿವೆ. ಆಡಳಿತವು ಅಕ್ಷರಶಃ ಕೊರತೆಗಳ ನಡುವೆಯೇ ನಿರ್ವಹಣೆಯಾಗುತ್ತಿದ್ದು, ಕೆಲವೊಮ್ಮೆ ಹಣವೇ ಇಲ್ಲದಂತಾಗುತ್ತಿದೆ.
ವಿಡಂಬನೆ ಎಂದರೆ, ಫಲಾನುಭವಿಗಳೇ ಯೋಜನೆಗಳ ಬಗ್ಗೆ ಸಂತಸದಿಂದಿಲ್ಲ. ಗೃಹ ಲಕ್ಷ್ಮಿ ಮತ್ತು ಯುವ ನಿಧಿ ಯೋಜನೆಗಳಡಿ ಪಾವತಿಯನ್ನು ತಿಂಗಳುಗಟ್ಟಲೆ ವಿಳಂಬ ಮಾಡಲಾಗುತ್ತಿದೆ. ಇದು ರಾಜ್ಯ ಬೊಕ್ಕಸದಲ್ಲಿ ಲಭ್ಯ ಹಣಕಾಸಿನ ಕೊರತೆಯನ್ನು ಸೂಚಿಸುತ್ತದೆ. ಈ ಯೋಜನೆಗಳು ಯಾರ ಸಲುವಾಗಿ ಜಾರಿಯಾಗಿದ್ದವೋ, ಅವರೇ ಈಗ ಅವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ.
ಈ ಟೀಕೆಗಳು ಕೇವಲ ವಿರೋಧ ಪಕ್ಷಗಳಿಂದ ಕೇಳಿಬರುತ್ತಿಲ್ಲ. ಹಿರಿಯ ಕಾಂಗ್ರೆಸ್ ನಾಯಕ ಮತ್ತು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್ ವಿ ದೇಶಪಾಂಡೆ ಅವರೂ ಇತ್ತೀಚೆಗೆ, ಗ್ಯಾರಂಟಿಗಳು ಸರ್ಕಾರದ ಅಭಿವೃದ್ಧಿ ಯೋಜನೆಗಳಿಗೆ ಹಣ ಇಲ್ಲದಂತೆ ಮಾಡಿವೆ ಎಂದು ಹೇಳಿದ್ದರು. ಅವರ ಹೇಳಿಕೆಯು ಸೂಕ್ತ ಆದಾಯದ ಅಪಾಯಗಳಿಲ್ಲದೆ ಜನಕಲ್ಯಾಣ ಯೋಜನೆಗಳು ಅಗತ್ಯವಾದ ಆಳ್ವಿಕೆಗೆ ಭಂಗ ತರುತ್ತದೆ ಎಂಬ ಅಹಿತಕರ ಸತ್ಯವನ್ನು ಎತ್ತಿ ತೋರಿಸುತ್ತಿದೆ.
ಹಿರಿಯ ನಾಗರಿಕರು, ತೆರಿಗೆ ಪಾವತಿಸುವ ವೃತ್ತಿಪರರು ಇದೇ ಕಾಳಜಿಯನ್ನು ತೀಕ್ಷ್ಣವಾಗಿ ವ್ಯಕ್ತಪಡಿಸುತ್ತಾರೆ. ಕೈಗಾರಿಕೆಗಳಿಂದ, ವ್ಯಾಪಾರಿಗಳಿಂದ, ವೇತನ ಪಡೆಯುವ ಮಧ್ಯಮ ವರ್ಗಗಳಿಂದ ಸಂಗ್ರಹಿಸಿದ ತೆರಿಗೆ ಹಣವನ್ನು, ರಾಜಕೀಯ ಚುನಾವಣಾ ಲಾಭಕ್ಕಾಗಿ, ಹೀಗೆ ಪೆÇೀಲು ಮಾಡಲು ಸರ್ಕಾರಕ್ಕೆ ನೈತಿಕ ಅಥವಾ ಆಡಳಿತಾತ್ಮಕ ಹಕ್ಕು ಇಲ್ಲ ಎಂದೇ ಹೇಳುತ್ತಿದ್ದಾರೆ. ಸರ್ಕಾರವು ಸಾರ್ವಜನಿಕರ ಹಣದ ರಕ್ಷಕರಾಗಿದ್ದು ಹಾವು ಹೊಡೆದು ಹದ್ದಿಗೆ ಹಾಕುವ (ಒಬ್ಬರನ್ನು ಸುಲಿಗೆ ಮಾಡಿ ಮತ್ತೊಬ್ಬರಿಗೆ ನೀಡುವುದು) ಮೂಲಕ ಅಲ್ಪಕಾಲಿಕ ರಾಜಕೀಯ ಲಾಭ ಪಡೆಯಲು ಅನುಕೂಲ ಮಾಡಬಹುದಾದರೂ, ಅದು ಆಳ್ವಿಕೆಯ ನೈತಿಕತೆಯನ್ನೇ ಭಂಗಗೊಳಿಸುತ್ತದೆ, ಉತ್ಪಾದಕೀಯ ವರ್ಗಗಳ ವಿಶ್ವಾಸಕ್ಕೆ ಧಕ್ಕೆ ಉಂಟುಮಾಡುತ್ತದೆ ಎಂದು ಹೇಳುತ್ತಾರೆ. ಉಚಿತಗಳು ಜನರನ್ನು ಸೋಮಾರಿಗಳನ್ನಾಗಿ ಮಾಡುತ್ತಿವೆ ಎಂದೂ ಹೇಳಲಾಗುತ್ತಿದೆ. ಉಚಿತಗಳಿಗೆ ವೆಚ್ಚ ಮಾಡಿದ ಸಂಪನ್ಮೂಲವನ್ನು ಉದ್ಯೋಗ ಸೃಷ್ಟಿಗೆ ವಿನಿಯೋಗ ಮಾಡಿದ್ದರೆ ರಾಜ್ಯದಲ್ಲಿ ಲಕ್ಷಾಂತರ ಉದ್ಯೋಗಳು ಸೃಷ್ಟಿಯಾಗುತ್ತಿದ್ದವು ಎಂದು ಬಲ್ಲವರು ಹೇಳುವ ಮಾತು.
ಸರ್ಕಾರದ ಸಮರ್ಥನೆಗೆ ಒಡ್ಡಿರುವ ತರ್ಕ, ಆಧಾರವೆಂದರೆ, ಗ್ಯಾರಂಟಿ ಯೋಜನೆಗಳು ಜನರ ಸಬಲೀಕರಣಕ್ಕೆ ನೆರವಾಗುತ್ತಿದೆ ಎಂಬುದು. ವಿಶೇಷವಾಗಿ, ನೇರವಾಗಿ ಅವರಿಗೇ ಹಣವನ್ನು ನೀಡುವುದರಿಂದ, ಮಹಿಳೆಯರು ಮತ್ತು ನಿರುದ್ಯೋಗಿಗಳಿಗೆ ನೆರವಾಗುತ್ತಿದೆ ಎಂದು ಸರ್ಕಾರ ಹೇಳುತ್ತದೆ. ಇದು ಭಾಗಶಃ ನಿಜ ಇರಬಹುದು, ಆದರೆ ಸಬಲೀಕರಣ ನಗದು ಪಾವತಿಯಲ್ಲೇ ಕೊನೆಗೊಂಡು, ಪರ್ಯಾಯ ಹೂಡಿಕೆಗಳು, ಮೂಲ ಸೌಕರ್ಯಗಳಲ್ಲಿ, ಉದ್ಯೋಗ ಸೃಷ್ಟಿಯಲ್ಲಿ, ಉತ್ಪಾದಕೀಯ ವಲಯದಲ್ಲಿ ಇಲ್ಲದೆ ಹೋದರೆ, ಇದು ಪರಾವಲಂಬನೆಯಾಗಿ ಪರಿಣಮಿಸುತ್ತದೆ. ಅಭಿವೃದ್ಧಿ ಎಂದರೆ ತೆರಿಗೆದಾರರ ಹಣವನ್ನು ವಿತರಣೆ ಮಾಡುವುದಲ್ಲ; ಬದಲಾಗಿ, ಅವಕಾಶಗಳನ್ನು ವಿಸ್ತರಿಸುವುದು ಎಂದರ್ಥ.
ಒಂದು ಆರೋಗ್ಯಕರ ಪ್ರಜಾಪ್ರಭುತ್ವಕ್ಕೆ ಅಗತ್ಯವಾದ ನೀತಿಗಳು, ಅದರ ವ್ಯಾಪ್ತಿ ಮತ್ತು ಪರಿಣಾಮವನ್ನು ಸ್ವತಂತ್ರ ಪರಾಮರ್ಶೆ ಮಾಡುವುದರಲ್ಲಿ ಕಾಣಬೇಕಾಗಿದೆ. ಎರಡೂವರೆ ವರ್ಷಗಳ ಗ್ಯಾರಂಟಿ ಯೋಜನೆಗಳ ನಂತರ ರಾಜ್ಯ ಸರ್ಕಾರವು ಇದರ ಪ್ರಭಾವವನ್ನು, ಪರಿಣಾಮವನ್ನು ಅರಿಯುವ ಸಮೀಕ್ಷೆಯನ್ನು ನಡೆಸಬೇಕಿದೆ. ಈ ನಿಟ್ಟಿನಲ್ಲಿ ವಿಶ್ವಾಸಾರ್ಹ ಸಂಸ್ಥೆಗಳನ್ನು ಬಳಸಿಕೊಳ್ಳಬಹುದು. ಈ ರೀತಿಯ ಅಧ್ಯಯನವು ಯೋಜನೆಗಳ ದಕ್ಷತೆಯನ್ನು ಅಳೆಯುವುದಷ್ಟೇ ಅಲ್ಲದೆ, ಅವುಗಳ ವ್ಯಾಪಕ ಆರ್ಥಿಕ ಪರಿಣಾಮ ಮತ್ತು ಧೋರಣೆಗಳನ್ನೂ ಅಳೆಯಲು ನೆರವಾಗುತ್ತದೆ.
ಕರ್ನಾಟಕವನ್ನು ಬಹಳ ಕಾಲದಿಂದ ಸಮತೋಲನದ ಹಣಕಾಸು ನಿರ್ವಹಣೆ ಮತ್ತು ನಾವೀನ್ಯತೆಯ ಸಾರ್ವಜನಿಕ ನೀತಿಗಳಿಗಾಗಿ ಪ್ರಶಂಸಿಸಲಾಗುತ್ತಿತ್ತು. ಈಗ ಜನಪ್ರಿಯತೆಯ ಸಲುವಾಗಿ ಈ ಗೌರವವನ್ನು ಹಾಳು ಮಾಡುವುದು ದುರಂತವಾಗುತ್ತದೆ. ಕಲ್ಯಾಣ ಯೋಜನೆಗಳೇ ಪ್ರಧಾನವಾದರೆ, ಆಳ್ವಿಕೆ ಸಮತೋಲನ ಕಳೆದುಕೊಳ್ಳುತ್ತದೆ. ರಾಜ್ಯವು ಈ ಸಮತೋಲನವನ್ನು ಮರಳಿ ಪಡೆಯುವುದು ಅತ್ಯವಶ್ಯವಾಗಿದೆ. ಪ್ರಾಮಾಣಿಕವಾಗಿ, ದತ್ತಾಂಶಗಳೊಂದಿಗೆ, ದಿಟ್ಟ ನಿರ್ಧಾರದೊಂದಿಗೆ ಪರಿಸ್ಥಿತಿಯನ್ನು ಸರಿಪಡಿಸುವ ತುರ್ತು ಎದುರಾಗಿದೆ.
Comments
Post a Comment