ಕುಮಾರಸ್ವಾಮಿ ಮುಖ್ಯಮಂತ್ರಿ?: ನೈತಿಕವಾಗಿ ದಿವಾಳಿಯಾದ ಬಿಜೆಪಿ
ಪಕ್ಷದ ತಳಪಾಯವನ್ನು ಮರಳಿ ಕಟ್ಟುವ ಬದಲು, ಅಪರಿಮಿತ ಸ್ವಾರ್ಥ, ಭೂ ಕಬಳಿಕೆ ಮತ್ತು ಸ್ವಜನ ಪಕ್ಷಪಾತದ ಆರೋಪಗಳನ್ನು ಎದುರಿಸುತ್ತಿರುವ ಹಸಿವೇ ಇಂಗದ ಜೆಡಿಎಸ್ ನಾಯಕನಿಗೆ ಮರುಜೀವ ಕೊಡುವ ಬಿಜೆಪಿ ನಿರ್ಧಾರ ಅಸಂಬದ್ಧ ಎನಿಸುತ್ತದೆ.
............................
ಅಹುದಾದರಹುದೆನ್ನಿ * ಬಿವಿಸೀ
ಕರ್ನಾಟಕದ ರಾಜಕಾರಣದಲ್ಲಿ ಅಚ್ಚರಿಗಳಿಗೇನೂ ಕೊರತೆ ಇಲ್ಲ ಆದರೆ ಇತ್ತೀಚೆಗೆ ದೆಹಲಿಯ ರಾಜಕೀಯ ವಲಯದಿಂದ ಕೇಳಿಬರುತ್ತಿರುವ ಒಂದು ಗುಸು ಗುಸು ಸುದ್ದಿ ನಿಜಕ್ಕೂ ಅಸಂಬದ್ಧ ಎನಿಸುತ್ತದೆ. ಬಿಜೆಪಿ ಕರ್ನಾಟಕದಲ್ಲಿ ಜೆಡಿಎಸ್ ನಾಯಕ ಹಾಗೂ ಹಾಲಿ ಕೇಂದ್ರ ಸಚಿವ ಎಚ್ ಡಿ ಕುಮಾರ ಸ್ವಾಮಿ ಅವರನ್ನು ರಾಜ್ಯದ ಮುಖ್ಯಮಂತ್ರಿಯಾಗಿ ಬಿಂಬಿಸುವ ಈ ನಿರ್ಧಾರ ಅಪ್ರಬುದ್ಧ ನಿರ್ಣಯ ಎನಿಸುತ್ತದೆ. ಚುನಾವಣೆಗಳು ಇನ್ನೂ ಎರಡು ವರ್ಷ ದೂರ ಇದ್ದು, ಈ ಆಲೋಚನೆಯೇ ಎರಡೂ ಪಕ್ಷಗಳಲ್ಲಿ ಸಂಚಲನ ಉಂಟುಮಾಡಿರುವುದಲ್ಲದೆ, ಬಿಜೆಪಿಯ ಕಾರ್ಯಕರ್ತರಲ್ಲಿ ಅಚ್ಚರಿ ಮೂಡಿಸಿದೆ.
ಈ ಸುದ್ದಿಯಲ್ಲಿ ಸತ್ಯಾಂಶವೇನಾದರೂ ಇದ್ದರೆ, ಇದು ಹತಾಶೆಯ ಸಂಕೇತವಾಗಿ ಕಾಣುವುದೇ ಹೊರತು, ಕಾರ್ಯತಂತ್ರವಾಗಿ ಅಲ್ಲ. ಕರ್ನಾಟಕದಲ್ಲಿ ಬಿಜೆಪಿ ಈಗಾಗಲೇ ಆಂತರಿಕ ಬಿರುಕುಗಳಿಂದ ದಿಕ್ಕೆಟ್ಟಿದ್ದು ನಾಯಕತ್ವದ ಕೊರತೆ, ಕುಸಿಯುತ್ತಿರುವ ಸಾರ್ವಜನಿಕ ವಿಶ್ವಾಸದಿಂದ ತತ್ತರಿಸುತ್ತಿದೆ. ಪಕ್ಷದ ತಳಪಾಯವನ್ನು ಮರಳಿ ಕಟ್ಟುವ ಬದಲು, ಅಪರಿಮಿತ ಸ್ವಾರ್ಥ, ಭೂ ಕಬಳಿಕೆ ಮತ್ತು ಸ್ವಜನ ಪಕ್ಷಪಾತದ ಆರೋಪಗಳನ್ನು ಎದುರಿಸುತ್ತಿರುವ ಜೆಡಿಎಸ್ ನಾಯಕನಿಗೆ ಮರುಜೀವ ಕೊಡುವ ಬಿಜೆಪಿ ನಿರ್ಧಾರ ಅಸಂಬದ್ಧ ಎನಿಸುತ್ತದೆ. ಕುಮಾರಸ್ವಾಮಿ ಒಂದು ಕಾಲದಲ್ಲಿ ಬಿಜೆಪಿ ವಿರೋಧಿಸುತ್ತಿದ್ದ ವಂಶಾಡಳಿತ, ಭ್ರಷ್ಟಾಚಾರ, ಅವಕಾಶವಾದ ಎಲ್ಲವನ್ನೂ ಸ್ವತಃ ಪ್ರತಿನಿಧಿಸುತ್ತಾರೆ.
ಇನ್ನೂ ದುರಂತ ಎಂದರೆ, ಈ ರೀತಿಯ ನಿರ್ಧಾರವು ಬಿಜೆಪಿಯಲ್ಲಿ ವಿಶ್ವಾಸಾರ್ಹತೆ ಪಡೆದಿರುವಂತಹ ನಾಯಕರು ಮುಖ್ಯಮಂತ್ರಿ ಅಭ್ಯರ್ಥಿಯಾಗಲು ಲಭ್ಯವಿಲ್ಲ ಎಂಬ ಕಳವಳಕಾರಿ ಸಂದೇಶವನ್ನು ರವಾನಿಸುತ್ತದೆ. ಇದು ರಾಜಕೀಯವಾಗಿ ದಿವಾಳಿಯಾದ ಪಕ್ಷದ ಚಿತ್ರಣವನ್ನು ಬಿಂಬಿಸುತ್ತದೆ. ಹಾಗೆಯೆ ಪಕ್ಷದ ನಾಯಕತ್ವ ವಹಿಸುವವರ ಪಟ್ಟಿ ಬರಿದಾಗಿದ್ದು, ಬೇರೆ ಪಕ್ಷದವರನ್ನು ನಾಯಕನಾಗಿ ಆಯ್ಕೆ ಮಾಡುವ ದುರ್ಗತಿಯನ್ನು ಸೂಚಿಸುತ್ತದೆ. ಇದು ಬಿಜೆಪಿಯನ್ನು, ಪ್ರಜಾಸತ್ತಾತ್ಮಕ ಚುನಾವಣೆಗಳ ಮೂಲಕವಾಗಲೀ, ಇತರ ಕಸರತ್ತುಗಳ ಮೂಲಕವಾಗಲೀ, ಸರ್ಕಾರ ರಚಿಸಲಾಗದ, ಒಂದು ದುರ್ಬಲವಾದ, ಗೊಂದಲಗಳಿಂದ ಕೂಡಿದ, ಆತ್ಮವಿಶ್ವಾಸ ಇಲ್ಲದ, ಸರ್ಕಾರವನ್ನು ನಡೆಸುವ ವಿಶ್ವಾಸ ಇಲ್ಲದ ಪಕ್ಷದಂತೆ ಬಿಂಬಿಸುತ್ತದೆ.
ಹಲವು ದಶಕಗಳ ಕಾಲ ಕೇಸರಿ ಪಕ್ಷವು ತನ್ನ ರಾಜಕೀಯ ಅಡಿಪಾಯವನ್ನು ಕಟ್ಟುವ ಪ್ರಕ್ರಿಯೆಯಲ್ಲಿ, ಕುಮಾರಸ್ವಾಮಿ ಪ್ರತಿನಿಧಿಸುವಂತಹ ರಾಜಕೀಯ ಮಾರ್ಗವನ್ನು ವಿರೋಧಿಸುತ್ತಲೇ ಬಂದಿದೆ. ಸ್ವಂತಕ್ಕೆ ಆಡಳಿತವನ್ನು ಬಳಸುವುದನ್ನು ಬಿಟ್ಟರೆ ಬೇರೇನೂ ಅಜೆಂಡಾ ಇಲ್ಲದ ಗೌಡರ ಕುಟುಂಬದೊಡನೆ ಮೈತ್ರಿ ಸಾಧಿಸುವುದರಿಂದ ಈಗಾಗಲೇ ಬಿಜೆಪಿ ನಷ್ಟ ಅನುಭವಿಸಿದೆ. ಚುನಾವಣೆಗಳಲ್ಲಿ ಇದರಿಂದ ಯಾವುದೇ ಲಾಭ ಗಳಿಸಲಾಗಿಲ್ಲ; ಬದಲಾಗಿ ತನ್ನ ಸೈದ್ಧಾಂತಿಕ ನೆಲೆಗಳನ್ನು ಕಳೆದುಕೊಂಡಿದೆ. ಈಗ ಇನ್ನೂ ಮುಂದುವರೆದು ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸುವುದು ಪಕ್ಷದ ಮೂಲ ಬೆಂಬಲಿಗರನ್ನು ದೂರ ಮಾಡುವುದೇ ಅಲ್ಲದೆ, ತಳಮಟ್ಟದ ಕಾರ್ಯಕರ್ತರ ನೈತಿಕ ಸ್ಥೈರ್ಯವನ್ನು ಕುಗ್ಗಿಸುತ್ತದೆ. ಪಕ್ಷವು ಜನರಿಂದ ಮತ್ತಷ್ಟು ದೂರ ಹೋಗಲು ಇದು ರಹದಾರಿಯಾಗಬಹುದು. ರಾಜ್ಯವನ್ನು ಮತ್ತಷ್ಟು ಕೊಳ್ಳೆ ಹೊಡೆಯಲು ಗೌಡ ಕುಟುಂಬಕ್ಕೆ ಅವಕಾಶ ಕೊಟ್ಟಂತಾಗಬಹುದು. ಇದು ಬಿಜೆಪಿಯ ಮೂಲನೆಲೆ ಲಿಂಗಾಯತ-ಬ್ರಾಹ್ಮಣ ಮತಬ್ಯಾಂಕ್‍ಗೆ ಧಕ್ಕೆ ಉಂಟುಮಾಡುತ್ತದೆ.
ಹೀಗಿದ್ದರೂ ಸಹ ಈ ರೀತಿಯ ಗಾಳಿ ಮಾತು ಹಬ್ಬಿರುವುದೇಕೆ? ಕೆಲವರು ಇದನ್ನು ಗಮನ ಬೇರೆಡೆ ಹರಿಸುವ ತಂತ್ರಗಾರಿಕೆ ಎಂದು ಹೇಳುತ್ತಿದ್ದಾರೆ. ಅಮಿತ್ ಶಾ ಅವರ ಕಾರ್ಯತಂತ್ರದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಕ್ಷೋಭೆ ಸೃಷ್ಟಿಸಿ ಎರಡೂ ಮೈತ್ರಿಗಳ ಬಗ್ಗೆ ಪರೀಕ್ಷೆ ಮಾಡುವ ತಂತ್ರ ಎನ್ನಲಾಗುತ್ತಿದೆ. ಇತರರು ಈ ಬೆಳವಣಿಗೆಯನ್ನು ಮೇಲ್ಮಟ್ಟದಲ್ಲಿ ಆಗಿರುವ ಕಾರ್ಯತಂತ್ರದ ಬದಲಾವಣೆ ಎಂದು ಹೇಳುತ್ತಿದ್ದಾರೆ.
ಏನೇ ಆದರೂ, ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ, ಕುಮಾರ ಸ್ವಾಮಿಯನ್ನು ರಾಜಕೀಯ ರಕ್ಷಕ ಎಂದು ಭಾವಿಸುವುದು ಮಾರಣಾಂತಿಕ ಪ್ರಮಾದವಾಗುತ್ತದೆ ಎಂಬ ವಾಸ್ತವವನ್ನು ಅರಿಯುವುದು ಒಳಿತು. ಇದು ಪಕ್ಷದ ಎರಡು ದಶಕಗಳ ಬೆಳವಣಿಗೆಯನ್ನು ನಾಶಪಡಿಸಿ, ಬಿಜೆಪಿಯನ್ನು ನೈತಿಕ ಸೈದ್ದಾಂತಿಕ ಹಿಂಚಲನೆಯಲ್ಲಿರುವ ಪಕ್ಷ ಎಂದು ಸೂಚಿಸಿದಂತಾಗುತ್ತದೆ. ಬಿಜೆಪಿ ಇದೇ ಅಪಾಯಕಾರಿ ಹಗಲುಗನಸನ್ನು ಮುಂದುವರೆಸಿದರೆ, ಕರ್ನಾಟಕ ಬಿಜೆಪಿ, ದಕ್ಷಿಣ ಭಾರತದ ಆಕಾಂಕ್ಷೆಗಳ ಸಮಾಧಿಯಾಗಿ ಪರಿಣಮಿಸುತ್ತದೆ.
Comments
Post a Comment