ಸುಜಾತಾ ಭಟ್ ನಾಟಕೀಯತೆ ಹಿಂದೆ ಏನಿದೆ?
ಸುಜಾತ ಅವರನ್ನು ಸಮಗ್ರ ನ್ಯೂರೊ ಮಾನಸಿಕ ತಪಾಸಣೆಗೆ ಒಳಪಡಿಸಬೇಕಿದೆ
.............
ಚಿತ್ರವಿಚಿತ್ರ * ಬಿವಿಸೀ
ಧರ್ಮಸ್ಥಳದಲ್ಲಿ ಕಣ್ಮರೆಯಾಗಿರುವ ಮಹಿಳೆಯರ ಪ್ರಕರಣಗಳು ಕರ್ನಾಟಕದ ಅತ್ಯಂತ ಕರಾಳ, ಪ್ರಕ್ಷುಬ್ಧ ಹಾಗೂ ಬಗೆಹರಿಯದ ನಿಗೂಢವಾಗಿದ್ದು, ಮೌನ, ಭೀತಿ, ರಾಜಕೀಯ ಹಸ್ತಕ್ಷೇಪಗಳಿಂದ ಮತ್ತಷ್ಟು ಗೊಂದಲಮಯವಾಗಿದೆ. ಧೈರ್ಯವಾಗಿ ಮಾತನಾಡಲು ಮುಂದೆ ಬಂದ ಕೆಲವೇ ವ್ಯಕ್ತಿಗಳ ಪೈಕಿ ಸುಜಾತ ಭಟ್ ಕೇಂದ್ರ ಬಿಂದುವಾಗಿದ್ದು, ಇನ್ನೂ ಗೊಂದಲಮಯ ವ್ಯಕ್ತಿಯಾಗಿ ಕಾಣುತ್ತಿದ್ದಾರೆ. ಒಂದು ಸಮಯದಲ್ಲಿ ತನ್ನ ಕಣ್ಮರೆಯಾದ ಮಗಳಿಗೆ ನ್ಯಾಯ ನೀಡುವಂತೆ ಧೈರ್ಯದಿಂದ ಆಗ್ರಹಿಸಿದ್ದ ಮಹಿಳೆ ಸುಜಾತ ಭಟ್ ಹಠಾತ್ತನೆ ವೈರುಧ್ಯಗಳ ಅನಿಶ್ಚಿತತೆಗಳ ಗೂಡಾಗಿದ್ದು, ಅವರ ಬದಲಾಗುತ್ತಿರುವ ಹೇಳಿಕೆಗಳು ತನಿಖೆಯ ಮೇಲೆ ಮತ್ತು ಸಾರ್ವಜನಿಕ ವಿಶ್ವಾಸದ ಮೇಲೆ ಕರಾಳ ಛಾಯೆ ಹೊದಿಸಿದೆ.
ಸುಜಾತ ಅವರ ಕತೆ ಆರಂಭವಾಗಿದ್ದೇ ಅತ್ಯಂತ ಭೀಕರವಾದ ಆರೋಪದೊಂದಿಗೆ. ತನ್ನ ಮಗಳು, ಮಣಿಪಾಲದ ವೈದ್ಯಕೀಯ ವಿದ್ಯಾರ್ಥಿನಿಯಾಗಿದ್ದು, ಧರ್ಮಸ್ಥಳಕ್ಕೆ ಭೇಟಿ ನೀಡಿದ್ದಾಗ, ಸುಳಿವೇ ಇಲ್ಲದೆ ಕಣ್ಮರೆಯಾಗಿದ್ದಳು ಎಂದು ಸುಜಾತಾ ಆರೋಪಿಸಿದ್ದರು. ಅವರ ಹಿಂದಿನ ಹೇಳಿಕೆಗಳು ಪ್ರಬಲ ಸ್ಥಳೀಯ ಸಂಸ್ಥೆಗಳೇ ಮಗಳನ್ನು ಅಪಹರಿಸಿ, ಹತ್ಯೆಗೈಯ್ಯಲು ಕಾರಣವಾಗಿವೆ ಎಂದು ನಂಬಲು ಕಾರಣವಾಗಿತ್ತು. ಇದೇ ಪ್ರದೇಶದಲ್ಲಿ ಕಣ್ಮರೆಯಾಗಿರುವ ಇತರ ಹೆಣ್ಣು ಮಕ್ಕಳ, ಮಹಿಳೆಯರ ಪ್ರಕರಣಗಳಿಗೂ ಇದಕ್ಕೂ ಸಂಬಂಧ ಇರುವುದಾಗಿ ಆರೋಪಿಸಿದ್ದರು. ತಮ್ಮನ್ನೂ ಅಪಹರಿಸಲಾಗಿತ್ತು ಮತ್ತು ಸುಮ್ಮನಿರಿಸಲು ಎಚ್ಚರ ತಪ್ಪುವವರೆಗೆ ಚಿತ್ರಹಿಂಸೆ ಕೊಡಲಾಗಿತ್ತು ಎಂದು ಆರೋಪಿಸಿದ್ದರು. ಈ ಪುರಾವೆಗಳು ಸ್ಫೋಟಕವಾಗಿದ್ದು, ಎಸ್‍ಐಟಿ ತನಿಖೆಯನ್ನು ನಡೆಸುವ ತುರ್ತನ್ನು ಖಚಿತಪಡಿಸಿದ್ದವು.
ಆದರೆ ತದನಂತರ ಕೇಳಿಬಂದಿದ್ದು ಎಲ್ಲವೂ ಅದಲುಬದಲು. ಸುಜಾತ ತಮ್ಮ ಮೊದಲಿನ ಹೇಳಿಕೆಗಳಿಗೆ ವಿರುದ್ಧವಾದ ಹೇಳಿಕೆ ನೀಡಲಾರಂಭಿಸಿದ್ದು, ಅವರ ಮಗಳು ಜೀವಂತವಾಗಿದ್ದಾಳೆ ಎಂದೂ ಕೆಲವೊಮ್ಮೆ ಧರ್ಮಸ್ಥಳದ ವಿರುದ್ಧ ಮಾತನಾಡಿದ್ದಕ್ಕೆ ಪಶ್ಚಾತ್ತಾಪವಾಗುತ್ತಿದೆ ಎಂದೂ ಹೇಳಲಾರಂಭಿಸಿದರು. ಅವರ ತೀರ ಇತ್ತೀಚಿನ ಹೇಳಿಕೆ, ಹೆಗ್ಗಡೆಯವರ ಮುಂದೆ ಸಾಷ್ಟಾಂಗ ವಂದಿಸುತ್ತೇನೆ ಎಂದು ಹೇಳಿರುವುದು, ಸಂಪೂರ್ಣ ಶರಣಾಗತಿಯಾಗಿ ಕಾಣುತ್ತಿದೆ. ಇದು ಸಾರ್ವಜನಿಕರಲ್ಲಿ ಗೊಂದಲ ಮೂಡಿಸಿದ್ದು ಎಸ್‍ಐಟಿ ತನಿಖೆಗೆ ಸಂಕಟ ತಂದಿಟ್ಟಿದೆ. ಆರೋಪ ಮತ್ತು ಕ್ಷಮೆಯ ನಡುವೆ ಹೊಯ್ದಾಡುತ್ತಿರುವ ಸುಜಾತ ಭಟ್ ಅಪಹಾಸ್ಯಕ್ಕೀಡಾಗಿದ್ದು, ಚದುರಂಗದಾಟದ ಕಾಯಿಯಂತೆ ಆಗಿದ್ದಾರೆ.
ಸುಜಾತ ಭಟ್ ಏಕೆ ತಮ್ಮ ನಿಲುವನ್ನು ಪದೇಪದೇ ಬದಲಾಯಿಸುತ್ತಿದ್ದಾರೆ? ಇಲ್ಲಿ ಮುಖ್ಯವಾಗಿ ಕಾಣುವುದು ಮಾನಸಿಕ ಆಘಾತ ಮತ್ತು ಬಾಹ್ಯ ಒತ್ತಡಗಳ ಸಂಕೀರ್ಣ ಸನ್ನಿವೇಶಗಳು. ಅನುಮಾನಾಸ್ಪದ ಸನ್ನಿವೇಶಗಳಲ್ಲಿ ಮಗಳನ್ನು ಕಳೆದುಕೊಂಡಿರುವ ಆಘಾತ ಅತಿ ಬಲವಾದ ಮನಸ್ಸನ್ನೂ ಸಹ ನುಚ್ಚುನೂರು ಮಾಡಬಲ್ಲದು. ಇಂತಹ ನೋವು ಅನುಭವಿಸುವ ಸಂತ್ರಸ್ತರು ಸಾಮಾನ್ಯವಾಗಿ ಆಕ್ರೋಶ ಮತ್ತು ಶರಣಾಗತಿಯ ನಡುವೆ ಹೊಯ್ದಾಡುತ್ತಾರೆ. ಅದರಲ್ಲೂ ನಿಕಟ ತಲುಪಲಾಗದ ಸಂಸ್ಥೆಗಳನ್ನು ಎದುರಿಸುವಾಗ ಇದು ಹೆಚ್ಚಾಗುತ್ತದೆ. ಅದೇ ವೇಳೆ, ಒತ್ತಡದ ತಂತ್ರಗಳು, ಬೆದರಿಕೆ, ಆಮಿಷಗಳು ಸಹ ತಮ್ಮದೇ ಆದ ರೀತಿಯಲ್ಲಿ ಪ್ರಭಾವಿಸಿರುತ್ತವೆ. ಆಕೆಯನ್ನು ಗೊಂದಲದಲ್ಲಿ ಸಿಲುಕಿಸಲು ಈ ತಂತ್ರಗಳನ್ನೂ ಬಳಸಲಾಗಿದೆ ಎಂಬ ಅನಿಸಿಕೆ ಕೂಡ ಇದೆ. ಇಂತಹ ಉನ್ನತ ಮಟ್ಟದ ಪ್ರಕರಣಗಳಲ್ಲಿ, ಗೌರವ, ಘನತೆ, ಸಂಪತ್ತು, ರಾಜಕೀಯ ಪ್ರಭಾವ ಒಳಗೊಂಡಿರುವಾಗ ದುರ್ಬಲ ಸಾಕ್ಷಿಯನ್ನು ದುರ್ಬಳಕೆ ಮಾಡುವುದು ಕಷ್ಟವೇನಲ್ಲ.
ದುರದೃಷ್ಟವಶಾತ್, ಸುಜಾತ ಅವರ ಪ್ರತಿಯೊಂದು ವಿರೋಧಾಭಾಸದ ಹೇಳಿಕೆಯೂ, ಇಡೀ ತನಿಖೆಯನ್ನೇ ನಿರಾಧಾರ ಎಂದು ಅಲ್ಲಗಳೆಯುತ್ತಿರುವವರಿಗೆ ಪ್ರಬಲ ಅಸ್ತ್ರವಾಗಿ ಪರಿಣಮಿಸುತ್ತದೆ. ಅನಿಶ್ಚಿತತೆಯು ಬಲಾಢ್ಯರಿಗೆ ರಕ್ಷಾ ಕವಚವಾಗಿ, ಇಡೀ ಪ್ರಕರಣವು ಅಪರಾಧಗಳ ಕಡೆಯಿಂದ ಅಪರಾಧಿಗಳ ಪರ ವಿಶ್ವಾಸಾರ್ಹತೆಯ ಕಡೆಗೆ ವಾಲುತ್ತದೆ. ಆದಾಗ್ಯೂ ಅವರನ್ನು ಅಸ್ಥಿರ ಎಂದು ನಿರಾಕರಿಸುವುದು, ತನಿಖೆಯ ದೃಷ್ಟಿಯಿಂದ ಇನ್ನೂ ಅಪಾಯಕಾರಿಯಾಗುತ್ತದೆ. ಇದು ಸತ್ಯವನ್ನು ಮುಚ್ಚಿಹಾಕಲು ಯತ್ನಿಸುತ್ತಿರುವವರಿಗೆ ಸಹಾಯ ಮಾಡುತ್ತದೆ.
ಎಸ್‍ಐಟಿ ಮಟ್ಟಿಗೆ ಮುಂದಿನ ಹೆಜ್ಜೆ ಸೂಕ್ಷ್ಮವಾಗಿದ್ದು, ಸ್ಪಷ್ಟವೂ ಆಗಿ ಕಾಣುತ್ತದೆ. ತನಿಖೆಯಲ್ಲಿ ಸುಜಾತ ಅವರನ್ನು ಸಮಗ್ರ ನ್ಯೂರೊ ಮಾನಸಿಕ ತಪಾಸಣೆಗೆ ಒಳಪಡಿಸಬೇಕಿದೆ. ನಿಮ್ಹಾನ್ಸ್‍ನಂತಹ ಸ್ವತಂತ್ರ ಸಂಸ್ಥೆಗಳಿಗೆ ಇದನ್ನು ವಹಿಸಬೇಕಿದೆ. ಆಗ ಆಕೆಯ ಹಿಮ್ಮೆಟ್ಟುವಿಕೆಯು ಆಘಾತದಿಂದಲೋ, ಬೆದರಿಕೆಯಿಂದಲೋ ಅಥವಾ ಮಾನಸಿಕ ದೌರ್ಬಲ್ಯದಿಂದಲೋ ಎಂದು ತಿಳಿಯುತ್ತದೆ. ಬಹುಮುಖ್ಯವಾಗಿ, ಎಸ್‍ಐಟಿ ತಂಡವು ಆಕೆಯನ್ನು ಸುತ್ತುವರೆದಿರುವ ಶಕ್ತಿಗಳನ್ನು ಪರಿಶೀಲಿಸಬೇಕಿದೆ. ಇವರನ್ನು ಆಕೆ ಭೇಟಿಯಾಗುತ್ತಿರುವುದರಿಂದ ಆಕೆಯ ಹೇಳಿಕೆಗಳನ್ನು ಪ್ರಭಾವಿಸಿರುವ ಸಾಧ್ಯತೆಗಳಿದ್ದು, ಆಕೆಯ ಸಾರ್ವಜನಿಕ ಆಕ್ರೋಶಕ್ಕೆ ಕಾರಣಗಳನ್ನು ತಿಳಿದುಕೊಳ್ಳಬಹುದಾಗಿದೆ.
ಕೊನೆಯದಾಗಿ, ಸುಜಾತ ಭಟ್ ನಂಬಲರ್ಹವಾದ ಸಾಕ್ಷಿ ಅಲ್ಲ. ಆಕೆ ಬೆದರಿಕೆ ಮತ್ತು ಮಾನಸಿಕ ಕದನದ ಜೀವಂತ ಸಾಕ್ಷಿಯಾಗಿದ್ದಾರೆ. ಇದು ಇತರ ಹಲವು ಪ್ರಕರಣಗಳಲ್ಲೂ ಕಂಡುಬರುತ್ತದೆ. ಏಕೆಂದರೆ ಇಲ್ಲಿ ಧರ್ಮ, ಹಣ ಮತ್ತು ಅಧಿಕಾರದ ಸಮ್ಮಿಲನವಿದೆ. ಆಕೆಯ ವೈರುಧ್ಯಮಯ ಹೇಳಿಕೆಗಳು ಸತ್ಯವನ್ನು ಮರೆಮಾಚಕೂಡದು. ಸತ್ಯವನ್ನು ಹೇಳಲು ಧೈರ್ಯ ಮಾಡಿದವರನ್ನು ಶಿಕ್ಷಿಸುವ ಸಮಾಜದಲ್ಲಿ ಸತ್ಯ ನುಡಿಯುವುದು ಎಷ್ಟು ಕಷ್ಟ ಎನ್ನಲು ಆಕೆ ಜೀವಂತ ನಿದರ್ಶನವಾಗುತ್ತಾರೆ. ನ್ಯಾಯ ಸಾಧಿಸುವ ಸಲುವಾಗಿ, ಕಣ್ಮರೆಯಾದ ಮಹಿಳೆಯರಿಗಾಗಿ, ಎಸ್‍ಐಟಿ ಈಗ ದಿಕ್ಕು ಬದಲಿಸದೆ ಮುಂದುವರೆಯಬೇಕಿದೆ.
Comments
Post a Comment