ರಾಜ್ಯ ಸಚಿವ ಸಂಪುಟ ಪುನಾರಚನೆ - ನಾಟಕೀಯ ಪ್ರಹಸನ

 ಉಪಮುಖ್ಯಮಂತ್ರಿ ಡಿಕೆಶಿ ಸಂಪುಟ ಪುನಾರಚನೆಯ ಸುತ್ತಲಿನ ಚರ್ಚೆಯನ್ನೇ ನಿರಾಕರಿಸಿದ್ದು, ಇದು ಕೇವಲ ಊಹಾಪೋಹಗಳಷ್ಟೇ ಎಂದು ಹೇಳಿರುವುದು ಕುತೂಹಲ ಮೂಡಿಸಿದೆ.

ಪ್ರಚಲಿತ * ಬಿವಿಸೀ

ಈ ವೇಳೆಗಾಗಲೇ ಕರ್ನಾಟಕದಲ್ಲಿ ಸಚಿವ ಸಂಪುಟ ಪುನಾರಚನೆಯ ಸುದ್ದಿ ರಾಜಕೀಯ ಮನರಂಜನೆಯ ರೂಪದಲ್ಲಿ ಕಾಣುತ್ತಿದ್ದು, ಪ್ರತಿ ದಿನವೂ ಮಾಹಿತಿ ಸೋರಿಕೆ, ನಿರಾಕರಣೆ ಮತ್ತು ಪ್ರತಿವಾದಗಳ ಮೂಲಕ ಜನರ ನಡುವೆ ಚಾಲನೆಯಲ್ಲಿದೆ. ಸುದ್ದಿವಾಹಿನಿಗಳು ಇದನ್ನು ಎಡೆಬಿಡದ ಊಹೆಯ ಆಟದಂತೆ ಪರಿಗಣಿಸಿದ್ದು, ರಾಜ್ಯವು ಎದುರಿಸುತ್ತಿರುವ ಆರ್ಥಿಕ ಸವಾಲುಗಳು ಮತ್ತು ಆಳ್ವಿಕೆಯ ಸಮಸ್ಯೆಗಳಿಗಿಂತಲೂ ಸಚಿವ ಸಂಪುಟ ಪುನಾರಚನೆಯೇ ಮುಖ್ಯ ಎನ್ನುವಂತೆ ಬಿಂಬಿಸುತ್ತಿವೆ. ಆದಾಗ್ಯೂ ಈ ನಾಟಕೀಯ ಪ್ರಹಸನಗಳ ಪರದೆಯ ಹಿಂದೆ ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ ನಿಯಂತ್ರಣದ ಕಸರತ್ತುಗಳು ನಡೆಯುತ್ತಿರುವುದು ನಿರ್ವಿವಾದ ಸತ್ಯ.

ಮುಖ್ಯಮಂತ್ರಿ ಸಿದ್ದರಾಮಯ್ಯ ಬಣವು ನವೆಂಬರ್ ಸಂಪುಟ ಪುನಾರಚನೆಯ ಸುದ್ದಿಗೆ ಪ್ರಾಥಮಿಕ ಚಾಲನೆ ನೀಡಿದೆ. ಅವರ ನಿಷ್ಠಾವಂತ ಬೆಂಬಲಿಗರು ನವೆಂಬರ್ ತಿಂಗಳನ್ನು `ಕ್ರಾಂತಿಯ ಸಮಯ' ಎಂದೇ ಬಣ್ಣಿಸುತ್ತಿದ್ದು, ಮಂತ್ರಿಗಳ ಸಾಧನೆಯನ್ನು ಸಮ್ಮಾನಿಸಿ, ಪ್ರತಿರೋಧವನ್ನು ಶಿಸ್ತುಕ್ರಮಕ್ಕೆ ಒಳಪಡಿಸುವ ನಿರ್ಣಾಯಕ ಬದಲಾವಣೆಗಳು ಆಗಲಿರುವುದನ್ನು ಸೂಚಿಸುತ್ತಿವೆ. ಈ ಚಿಂತನೆ ಎರಡು ಉದ್ದೇಶಗಳನ್ನು ಈಡೇರಿಸುತ್ತದೆ. ಮೊದಲನೆಯದಾಗಿ, ಮುಖ್ಯಮಂತ್ರಿಯನ್ನು ಯಾವುದೇ ಕ್ರಮ ಕೈಗೊಳ್ಳುವ ಸಮರ್ಥ ನಾಯಕ ಎಂದು ಬಿಂಬಿಸುತ್ತದೆ, ಅದೇ ವೇಳೆ ಅವರ ಆಂತರಿಕ ವೈರಿಗಳನ್ನು, ವಿಶೇಷವಾಗಿ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರನ್ನು, ಜಾಗ್ರತವಾಗಿರಿಸುತ್ತದೆ. ಮಾಧ್ಯಮಗಳಿಗೆ ಈ ನಿರೂಪಣೆಯನ್ನು ನೀಡುವ ಮೂಲಕ ಸಿದ್ದರಾಮಯ್ಯ ಬೆಂಬಲಿಗರು ಇಡೀ ಚರ್ಚೆಯಲ್ಲಿ ಪ್ರಧಾನ ಪಾತ್ರ ವಹಿಸಿದ್ದು, ಕಾರ್ಯಸೂಚಿಯನ್ನೂ ರೂಪಿಸಿದ್ದಾರೆ.

ಆದರೆ ಶಿವಕುಮಾರ್ ಸುಮ್ಮನೆ ಇರುವವರಲ್ಲ. ಅವರ ಇತ್ತೀಚಿನ ಸಾರ್ವಜನಿಕ ಹೇಳಿಕೆಯಲ್ಲಿ ಸಂಪುಟ ಪುನಾರಚನೆಯ ಸುತ್ತಲಿನ ಚರ್ಚೆಯನ್ನೇ ನಿರಾಕರಿಸಿದ್ದು, ಇದು ಕೇವಲ ಊಹಾಪೆÇೀಹಗಳಷ್ಟೇ ಎಂದು ಹೇಳಿರುವುದು ಕುತೂಹಲ ಮೂಡಿಸಿದೆ. ಇದು ರಾಜಕೀಯ ಸಂದೇಶವಾಗಿದ್ದು, ತಮ್ಮ ವರ್ಚಸ್ಸನ್ನು ಉಳಿಸಿಕೊಳ್ಳುವ ಪ್ರಯತ್ನವಾಗಿದೆ. ಶಿವಕುಮಾರ್ ಕೇವಲ ಉಪಮುಖ್ಯಮಂತ್ರಿ ಮಾತ್ರ ಅಲ್ಲದೆ, ಆಡಳಿತ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರೂ ಆಗಿದ್ದಾರೆ. ಯಾವುದೇ ಪುನಾರಚನೆಯ ಸಾಧ್ಯತೆಗಳಿಲ್ಲ ಎಂದು ಹೇಳುವ ಮೂಲಕ ಶಿವಕುಮಾರ್, ತಮ್ಮನ್ನು ಸಂಪರ್ಕಿಸದೆ ಯಾವುದೇ ಕ್ರಮವನ್ನು ಕೈಗೊಳ್ಳಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದು ಯಾವ ನಿರ್ಣಯಗಳೂ ತಮ್ಮ ಗಮನಕ್ಕೆ ಬಾರದೆ ಸಾಧ್ಯವಾಗುವುದಿಲ್ಲ ಎಂದು ಹೇಳಿದಂತಾಗಿದೆ. ಕರ್ನಾಟಕದ ಕಾಂಗ್ರೆಸ್‍ನಲ್ಲಿ ಅಂತಿಮ ಅಧಿಕಾರ ಏಕಪಕ್ಷೀಯವಲ್ಲ ಎಂಬ ಸಂದೇಶವನ್ನೂ ಇಲ್ಲಿ ಗುರುತಿಸಬಹುದು.

ಇಬ್ಬರು ದಿಗ್ಗಜರ ನಡುವೆ ಸಿಲುಕಿರುವ ಕಾಂಗ್ರೆಸ್ ಹೈಕಮಾಂಡ್ ಈಗ ಮೌನಕ್ಕೆ ಶರಣಾಗಿದೆ. ಈ ಮೌನವೇ ಕಾರ್ಯತಂತ್ರದ ಭಾಗವಾಗಿದ್ದು, ಎರಡೂ ಬಣಗಳು ಕಿತ್ತಾಡಿ, ಮಾತುಕತೆಗಳನ್ನಾಡಿ, ನಿಷ್ಠೆಯನ್ನು ಪರಿಕ್ಷಿಸುವ ಅವಕಾಶವನ್ನು ಒದಗಿಸುತ್ತದೆ. ಈ ಪ್ರಕ್ರಿಯೆಯಲ್ಲಿ ಮುಂಚಿತವಾಗಿಯೇ ಹೈಕಮಾಂಡ್ ಹಸ್ತಕ್ಷೇಪ ಇರುವುದಿಲ್ಲ ಎಂದೂ ಸೂಚಿಸುತ್ತದೆ. ಏತನ್ಮಧ್ಯೆ, ಪ್ರತಿಯೊಂದು ಹೇಳಿಕೆಯೂ, ಸೋರಿಕೆಯೂ ಮಾಧ್ಯಮಗಳಲ್ಲಿ ರೋಚಕ ಚರ್ಚೆಗಳಿಗೆ ಎಡೆಮಾಡಿಕೊಡುತ್ತಿದ್ದು, ಪ್ರಭಾವಿಗಳ ರಾಜಕೀಯ ನಾಟಕದ ಭ್ರಮೆಯನ್ನು ಜೀವಂತವಾಗಿರಿಸಿದಂತಾಗಿದೆ.

ದುರಂತ ಎಂದರೆ, ಈ ನಾಟಕೀಯ ಬೆಳವಣಿಗೆಗಳು ಆಳ್ವಿಕೆಯಿಂದ ಗಮನ ಬೇರೆಡೆ ಹರಿಸುವಂತೆ ಮಾಡುತ್ತವೆ. ಕರ್ನಾಟಕವು ಜಟಿಲ ಸಮಸ್ಯೆಗಳನ್ನು ಎದುರಿಸುತ್ತಿದೆ. ಕೃಷಿ ಗ್ರಾಮೀಣ ಬಿಕ್ಕಟ್ಟು, ನೀರಿನ ವಿವಾದಗಳು, ಹಣದುಬ್ಬರದ ಹೆಚ್ಚಳ ಮತ್ತು ನಿರುದ್ಯೋಗ ಹೆಚ್ಚಳದ ಬಗ್ಗೆ ಮಧ್ಯಮ ವರ್ಗಗಳ ಅಸಹನೆ ಇವೆಲ್ಲವೂ ಕಾಡುತ್ತಿವೆ. ಆದಾಗ್ಯೂ ರಾಜಕೀಯ ಗಣ್ಯರು ತಮ್ಮ ಸಚಿವ ಹುದ್ದೆಗಳ ಬಗ್ಗೆಯೇ ಕಾಳಜಿ ವಹಿಸುತ್ತಿರುವರೇ ಹೊರತು, ಸರಕಾರದ ಸಾಧನೆಯನ್ನು ಗಮನಿಸುತ್ತಿಲ್ಲ.

ಸಚಿವ ಸಂಪುಟ ಪುನಾರಚನೆ ಏನಾದರೂ ಆದಲ್ಲಿ ಅದು ಕೆಲವರು ಹೇಳುತ್ತಿರುವಂತೆ `ಕ್ರಾಂತಿ' ಎನಿಸಿಕೊಳ್ಳುವುದಿಲ್ಲ, ಬದಲಾಗಿ, ಅಧಿಕಾರ ಸಮೀಕರಣದ ಮತ್ತೊಂದು ಕಸರತ್ತು ಆಗುತ್ತದೆ. ಅಲ್ಲಿಯವರೆಗೂ ಕರ್ನಾಟಕದ ಕಾಂಗ್ರೆಸ್ ಪಕ್ಷವು ಅಮಾನತಿನಲ್ಲಿರುವ ಘಟಕವಾಗಿಯೇ ಕಾಣುತ್ತದೆ, ಇದರ ನಡುವೆ ಆಳ್ವಿಕೆಯ ಸಮಸ್ಯೆಗಳು ತೆರೆಮರೆಯಲ್ಲಿರುವಂತೆಯೆ ತನ್ನದೇ ಆದ ಸಂಘರ್ಷಗಳನ್ನು ರೂಪಿಸುವುದರಲ್ಲಿ ನಿರತವಾಗಿರುತ್ತದೆ.

Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

When Prestige Is Gifted, Not Earned: The Padma Vibhushan Controversy Of Veerendra Heggade

Why I Will Never Fly Air India Again