ಸೌಜನ್ಯ ಪ್ರಕರಣ - ನ್ಯಾಯಕ್ಕೆ ತಡೆಯೊಡ್ಡಲು ಬೆದರಿಕೆಯ ತಂತ್ರ?
ಬಲಾಢ್ಯ ಹಿತಾಸಕ್ತಿಗಳನ್ನು ಹೆಸರಿಸುವ ಮೂಲಕ ಚಿನ್ನಯ್ಯ ಮೊದಲು ಏಕೆ ತನ್ನನ್ನು ಅಪಾಯಕ್ಕೆ ಒಡ್ಡಿಕೊಂಡಿದ್ದ, ತನಿಖಾಧಿಕಾರಿಗಳಿಗೆ ಜಾಗ ತೋರಿಸಲು ಕರೆದೊಯ್ದಿದ್ದ, ನಂತರ ಹಠಾತ್ತನೆ ಮೌನವಾದ?
ಸೌಜನ್ಯ ಪ್ರಕರಣದ ಕರಾಳ ಮೋಡಗಳು ಕರ್ನಾಟಕದ ಸಾರ್ವಜನಿಕ ಪ್ರಜ್ಞೆಯನ್ನು ಆವರಿಸುತ್ತಿರುವಂತೆಯೇ, ಒಂದು ಘಟನೆ ಇಡೀ ಚರ್ಚೆಯ ಕೇಂದ್ರವಾಗಿ ಕಾಣುತ್ತಿದೆ. ಭೀಮ ಎಂದು ಕರೆಯಲ್ಪಡುವ ಚಿನ್ನಯ್ಯನ ಯೂ-ಟರ್ನ್ ಆತನ ಹಿಂದಿನ ಹೇಳಿಕೆಗಳನ್ನು ತಲೆಕೆಳಗು ಮಾಡಿದೆ. ``ಧರ್ಮಸ್ಥಳದಲ್ಲಿ ನಡೆದಿರುವ ಅನೇಕ ಅತ್ಯಾಚಾರ ಮತ್ತು ಹತ್ಯೆಗಳ ಬಗ್ಗೆ ಸತ್ಯ ಹೇಳುತ್ತೇನೆ, ನೂರಾರು ಹೆಣಗಳನ್ನು ಹೂತ ಜಾಗಗಳನ್ನು ತೋರಿಸುತ್ತೇನೆ'' ಎಂದು ಹೇಳಿದ್ದ ಚಿನ್ನಯ್ಯ ಈಗ ಉಲ್ಟಾ ಹೊಡೆದಿದ್ದಾನೆ. ತನಿಖಾಧಿಕಾರಿಗಳನ್ನು ಹೂತು ಹಾಕಲಾದ ಶವಗಳ ಅಸ್ಥಿಪಂಜರಗಳ ಕಡೆಗೆ ಕರೆದೊಯ್ಯಬೇಕಾಗಿದ್ದ ಚಿನ್ನಯ್ಯ, ತನ್ಮೂಲಕ ಹುಗಿದು ಹೋದ ಕರಾಳ ಸತ್ಯವನ್ನು ಹೊರಗೆಡಹುವ ನಿರೀಕ್ಷೆ ಇತ್ತು. ಆದರೆ ಈ ಎಲ್ಲವೂ ತಿರುವು ಮುರುವಾಗಿದೆ. ಎಸ್‍ಐಟಿ ಎದುರು ನಿಂತ ಚಿನ್ನಯ್ಯ ನುಣಚಿಕೊಳ್ಳುತ್ತಿದ್ದು ನ್ಯಾಯದ ಹಾದಿಯನ್ನು ದುರ್ಬಲಗೊಳಿಸಿದ್ದಾನೆ.
ಸಂತ್ರಸ್ತರ ಕುಟುಂಬಗಳಿಗೆ ಮತ್ತು ಸೌಜನ್ಯಾಗೆ ನ್ಯಾಯ ಚಳುವಳಿಗೆ ಇದು ದೊಡ್ಡ ಹಿನ್ನಡೆಯಾಗಿದ್ದು, ವಿಶ್ವಾಸದ್ರೋಹವೂ ಆಗಿದೆ. ಚಳುವಳಿಯ ದಿಕ್ಕುತಪ್ಪಿಸುವವರು, ವಿಶೇಷವಾಗಿ ಧರ್ಮಸ್ಥಳದ ಆಡಳಿತಕ್ಕೆ ನಿಕಟವಾದವರು ಚಿನ್ನಯ್ಯನ ಈ ಹೇಳಿಕೆಗಳನ್ನೇ ಬಳಸಿಕೊಳ್ಳುತ್ತಿದ್ದಾರೆ. ಈ ಪ್ರಕರಣವು ಪೆÇಳ್ಳಾಗಿದ್ದು, ಆರೋಪಗಳೆಲ್ಲವೂ ನಿರಾಧಾರವಾದುದು, ಪ್ರತಿಭಟನೆಗಳು ದಾರಿ ತಪ್ಪಿವೆ ಎಂದು ಅವರೀಗ ಹೇಳಲು ಇದು ಅವಕಾಶವೊದಗಿಸಿದೆ. ಆದರೆ ತತ್ಕಾಲಕ್ಕೆ ಈ ಅನುಕೂಲಕರ ನಿರೂಪಣೆಯು ಅವರಿಗೇ ಇನ್ನೂ ತೊಂದರೆಯಾಗುವ ಸಾಧ್ಯತೆಗಳನ್ನು ನಿರ್ಲಕ್ಷಿಸುತ್ತದೆ. ಚಿನ್ನಯ್ಯ ತನ್ನ ವ್ಯತಿರಿಕ್ತ ಹೇಳಿಕೆಗಳನ್ನು ಸ್ವಪ್ರೇರಣೆಯಿಂದ ನೀಡಿಲ್ಲ, ಅವನ ಮೇಲೆ ಒತ್ತಡ ಹೇರಲಾಗಿದೆ ಎಂಬುದು ಪರದೆ ಹಿಂದಿನ ಸತ್ಯ.
ದಾರಿ ತಪ್ಪಿಸುವವರ ಆಪಾದನೆ
ಜಸ್ಟಿಸ್ ಫಾರ್ ಸೌಜನ್ಯ ಚಳುವಳಿಯ ಬಗ್ಗೆ ಗಂಭೀರ ಆಕ್ಷೇಪಿಸುವವರು ಚಿನ್ನಯ್ಯ ತನ್ನ ಹೇಳಿಕೆಗಳಿಂದ ಹಿಂದೆ ಸರಿದಿರುವುದು ಆತನನ್ನು ನಂಬಲರ್ಹ ಸಾಕ್ಷಿಯಲ್ಲ ಎನ್ನುವುದನ್ನು ಸಾಬೀತುಪಡಿಸಿದೆ ಎಂದು ಹೇಳುತ್ತಿದ್ದಾರೆ. ಅವರ ಪ್ರಕಾರ ಹೂತು ಹೋದ ಶವಗಳು, ರಹಸ್ಯ ಸಮಾಧಿಗಳು ಮುಂತಾದ ಕತೆಗಳೆಲ್ಲವೂ ನಾಟಕೀಯವಾಗಿದ್ದು, ಗಮನ ಸೆಳೆಯುವ ಸಲುವಾಗಿ ನೀಡಲಾಗಿದ್ದು ಅದನ್ನು ಸಾಬೀತುಪಡಿಸುವುದು ಅಸಾಧ್ಯ. ಎಸ್‍ಐಟಿ ಮುಂದೆ ಹಾಜರಾದಾಗ ಅವನು ತನ್ನ ಮಾತುಗಳಿಗೆ ಬದ್ಧನಾಗಿರಲು ಸಾಧ್ಯವಾಗಲಿಲ್ಲ, ಏಕೆಂದರೆ ಅದರಲ್ಲಿ ಸತ್ಯಾಂಶ ಇರಲಿಲ್ಲ ಎಂದು ಹೇಳುತ್ತಿದ್ದಾರೆ. ಈ ಟೀಕಾಕಾರರಿಗೆ ಚಿನ್ನಯ್ಯನ ಸಾಕ್ಷ್ಯಗಳು ಟೊಳ್ಳು ಎಂದಾಗುತ್ತಿರುವುದು ಅವರು ಹೇಳಿಕೊಂಡು ಬಂದಿರುವ ನಿರೂಪಣೆಯನ್ನು ಪ್ರಮಾಣೀಕರಿಸುತ್ತದೆ. ಧರ್ಮಸ್ಥಳದ ವಿರುದ್ಧ ಮಾಡಲಾಗಿರುವ ಆರೋಪಗಳೆಲ್ಲವೂ ರಾಜಕೀಯ ಉದ್ದೇಶದಿಂದ ಕೂಡಿದೆ, ಪಟ್ಟಭದ್ರ ಹಿತಾಸಕ್ತಿಗಳಿಂದ ಪ್ರಚೋದಿಸಲ್ಪಟ್ಟಿದೆ, ಯಾವುದೇ ಭದ್ರವಾದ ಬುನಾದಿ ಇಲ್ಲವಾಗಿವೆ ಎಂದು ಅವರು ಹೇಳುತ್ತಲೇ ಬಂದಿದ್ದಾರೆ.
ಈ ನಿರೂಪಣೆ ಏಕೆ ವಿಫಲವಾಗುತ್ತದೆ?
ಈ ತರ್ಕದ ಆಧಾರ ನೆಲೆಯೇ ದುರ್ಬಲವಾಗಿದೆ. ಚಿನ್ನಯ್ಯ ಕೇವಲ ತನ್ನ ಕತೆಗಳನ್ನು ಊಹಿಸಿಕೊಳ್ಳುತ್ತಿದ್ದಲ್ಲಿ, ವಿಠ್ಠಲ್ ಗೌಡ ಅವರ ಮೂಲಕ ಹೇಗೆ ಚಿನ್ನಯ ಹೇಳಬೇಕಾಗಿದ್ದ ಸಾಕ್ಷ್ಯಾಧಾರಗಳು ದೊರೆತವು? ಇವರು ಸ್ವತಂತ್ರವಾಗಿಯೇ ಅದೇ ಸಮಾಧಿಗಳನ್ನು ತೋರಿಸಿದ್ದರಲ್ಲವೇ? ಬಲಾಢ್ಯ ಹಿತಾಸಕ್ತಿಗಳನ್ನು ಹೆಸರಿಸುವ ಮೂಲಕ ಚಿನ್ನಯ್ಯ ಮೊದಲು ಏಕೆ ತನ್ನನ್ನು ಅಪಾಯಕ್ಕೆ ಒಡ್ಡಿಕೊಂಡಿದ್ದ, ತನಿಖಾಧಿಕಾರಿಗಳಿಗೆ ಜಾಗ ತೋರಿಸಲು ಕರೆದೊಯ್ದಿದ್ದ, ನಂತರ ಹಠಾತ್ತನೆ ಮೌನವಾದ? ಇದಕ್ಕೆ ಸರಳವಾದ ಉತ್ತರ ಎಂದರೆ, ಅವನು ಸುಳ್ಳು ಹೇಳಿದ್ದ ಎನ್ನುವುದಲ್ಲ, ಬದಲಾಗಿ ಅವನನ್ನು ಬಾಯಿಮುಚ್ಚಿಸಿ ಹೇಳಿಕೆ ಹಿಂಪಡೆಯುವಂತೆ ಮಾಡಲಾಯಿತು. ಈ ಪ್ರಶ್ನೆಯನ್ನು ಪರಿಗಣಿಸದ ಚಳುವಳಿಯ ಟೀಕಾಕಾರರಿಗೆ, ಅವನ ಹೇಳಿಕೆಗಳು ರಕ್ಷಣೆ ಪಡೆದಿರುವ ಪ್ರಬಲ ವ್ಯಕ್ತಿಗಳನ್ನು, ಅವರ ಜಾಲವನ್ನು ಬಯಲು ಮಾಡುತ್ತದೆ ಎಂಬ ಆತಂಕ ಕಾಡುತ್ತಿದೆ.
ಚಿನ್ನಯ್ಯನಿಗೆ ಬೆದರಿಕೆ ಹಾಕಲಾಗಿದೆ ಎಂಬ ವರದಿಗಳೂ ಹರಿದಾಡುತ್ತಿವೆ. ಕೆಲವರು ಆರೋಪಿಸುವಂತೆ, ಎಸ್‍ಐಟಿ ಅಧಿಕಾರಿಗಳೇ, ಒತ್ತಡಕ್ಕೆ ಸಿಲುಕಿ ಅಥವಾ ಪ್ರಭಾವಕ್ಕೊಳಪಟ್ಟು ಆತನನ್ನು ಮಾತನಾಡದಂತೆ ತಡೆಹಿಡಿದಿದ್ದಾರೆ. ಚಿನ್ನಯ್ಯನನ್ನು ಬೆದರಿಸಿ, ಹೆದರಿಸಿ, ಭೀತಿಗೊಳಪಡಿಸಿ ಶಕ್ತಿಹೀನನನ್ನಾಗಿ ಮಾಡಲಾಗಿದೆ. ಇಲ್ಲಿ ಉದ್ಭವಿಸುವ ಪ್ರಶ್ನೆ ಎಂದರೆ, ಎಸ್‍ಐಟಿ ಮುಖ್ಯಸ್ಥರು ಏಕೆ ಮುಂಜಾಗ್ರತೆಯಿಂದ ಕಾರ್ಯನಿರ್ವಹಿಸಲಿಲ್ಲ. ಈ ಸಾಕ್ಷಿಯು ನಿರ್ಣಾಯಕ ಮಾಹಿತಿ ಹೊಂದಿದ್ದಾನೆ ಎಂದು ತಿಳಿದಿದ್ದರೂ ಏಕೆ ಆತನನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ? ಆತನ ಸುರಕ್ಷತೆ ಮತ್ತು ಮಾನಸಿಕ ರಕ್ಷಣೆಯನ್ನು ಏಕೆ ಖಚಿತಪಡಿಸಲಿಲ್ಲ?
ಮುಂದಿನ ಹಾದಿ
ಚಿನ್ನಯ್ಯನ ವಿರೋಧಿಗಳಿಗೆ ಬಲವಾದ ನಿರಾಕರಣೆ ವ್ಯಕ್ತವಾಗುವುದು, ಆತ ಹಿಂದೆ ಸರಿದ ನಂತರ ದೊರೆತ ಸಾಕ್ಷ್ಯಾಧಾರಗಳಿಂದ. ವಿಠ್ಠಲ್ ಗೌಡ ಅವರ ಸಾಕ್ಷ್ಯ ಈ ಹೂತು ಹಾಕಲಾದ ಪ್ರಸಂಗಗಳು ಸುಳ್ಳಲ್ಲ ಎನ್ನುವುದನ್ನು ನಿರೂಪಿಸುತ್ತವೆ. ಚಿನ್ನಯ್ಯ ತಪ್ಪು ಮಾಡಿದ್ದರೆ, ಅದು ವಂಚಿಸುವ ಉದ್ದೇಶದಿಂದಲ್ಲ, ಬದಲಾಗಿ ಭಯದಿಂದ. ಈ ಭಯವನ್ನು ಸೃಷ್ಟಿಸಿದ ಶಕ್ತಿಗಳನ್ನು ಈಗ ಬಯಲು ಮಾಡಬೇಕಿದೆ.
ಕ್ರಿಯೆಗಾಗಿ ಕರೆ
ಕರ್ನಾಟಕ ಸರ್ಕಾರವು ಚಿನ್ನಯ್ಯನ ವ್ಯತಿರಿಕ್ತ ಹೇಳಿಕೆಗಳನ್ನು, ಹಿಮ್ಮೆಟ್ಟುವಿಕೆಯನ್ನು ಕೊನೆಯ ಮಾತು ಎಂದು ಪರಿಗಣಿಸಕೂಡದು. ಬೆದರಿಕೆಗಳೇ ಆತನನ್ನು ತೆಪ್ಪಗಾಗಿಸಿದ್ದರೆ, ಅದಕ್ಕೆ ಕಾರಣರಾದವರನ್ನು ಮೂಲ ಅಪರಾಧಗಳನ್ನು ಎಸಗಿದವರಂತೆಯೇ ಅಪರಾಧಿಗಳು ಎಂದು ಪರಿಗಣಿಸಬೇಕಾಗುತ್ತದೆ. ಎಸ್‍ಐಟಿ ತಂಡಕ್ಕೆ ಈ ಆಯಾಮದಲ್ಲಿ ಮುಂದುವರೆಯಲು ಅನುಮತಿ ನೀಡಿ ಗಂಭೀರ ತನಿಖೆ ಮುಂದುವರೆಸಿ, ಒತ್ತಡಕ್ಕೆ ಕಾರಣರಾದವರ ಮೂಲವನ್ನು ಕಂಡುಹಿಡಿದು, ತನ್ನ ತನಿಖಾ ಪ್ರಕ್ರಿಯೆಯ ವಿಶ್ವಾಸಾರ್ಹತೆಯನ್ನು ಕಾಪಾಡಿಕೊಳ್ಳಬೇಕಿದೆ. ಚಿನ್ನಯ್ಯ ಮತ್ತು ವಿಠ್ಠಲ್ ಗೌಡ ಅವರಂತಹ ಸಾಕ್ಷಿಗಳಿಗೆ ಪೂರ್ಣ ರಕ್ಷಣೆ ನೀಡಬೇಕಿದೆ, ನಿರ್ಲಕ್ಷಿಸುವಂತಿಲ್ಲ. ಸರ್ಕಾರವು ಭೀತಿಗೊಳಗಾಗಿ ಬಾಯಿ ಮುಚ್ಚಿಸುವ ತಂತ್ರಗಳಿಗೆ ಮಣಿದರೆ, ಅದು ಸುರಕ್ಷಿತ ಅಧಿಕಾರದ ಮುಂದೆ ಸತ್ಯ ಉಳಿಯವುದು ಅಸಾಧ್ಯ ಎಂಬ ಅಪಾಯಕಾರಿ ಸಂದೇಶವನ್ನು ರವಾನಿಸುತ್ತದೆ. ಸೌಜನ್ಯಳಿಗೆ ಮತ್ತು ಇನ್ನಿತರ ಅನೇಕ ಸಂತ್ರಸ್ತರಿಗೆ ನ್ಯಾಯ ಒದಗಿಸುವುದು ಸರ್ಕಾರದ, ರಾಜಿ ಮಾಡಿಕೊಳ್ಳದ, ದಿಟ್ಟ ಕ್ರಮಗಳನ್ನು ಅವಲಂಬಿಸಿರುತ್ತದೆ.
Comments
Post a Comment