ಹಳ್ಳ ಕೊಳ್ಳಗಳ ನಗರಿ ಬೆಂಗಳೂರು - ನಾಚಿಕೆಗೇಡಿನ ಪರಿಸ್ಥಿತಿ

 ಆಳುವ ಪಕ್ಷಗಳು ಕಲ್ಯಾಣ ಯೋಜನೆಗಳ ಪರಂಪರೆಗಾಗಿ ಬೆನ್ನುತಟ್ಟಿಕೊಳ್ಳಬಹುದು ಆದರೆ ಇತಿಹಾಸ ಅವರನ್ನು ನೆನಪಿನಲ್ಲಿಡುವುದು ಸಿಲಿಕಾನ್ ಕಣಿವೆಯನ್ನು ನಾಶಪಡಿಸಿದ ನಾಯಕರ ರೂಪದಲ್ಲಿ.

-----

ಬೆಂಗಳೂರು ನಗರ ಒಂದು ಕಾಲದಲ್ಲಿ ಜಾಗತಿಕ ಮಟ್ಟದಲ್ಲೂ ಸಹ ಪೌರ್ವಾತ್ಯದ ಸಿಲಿಕಾನ್ ಕಣಿವೆ ಎಂದೇ ಪ್ರಖ್ಯಾತವಾಗಿತ್ತು. ಆದರೆ ಇಂದು ಈ ನಗರ ಹೀನ ಸ್ಥಿತಿ ತಲುಪಿದೆ. ಕುಸಿಯುತ್ತಿರುವ ರಸ್ತೆಗಳು, ಹಳ್ಳಕೊಳ್ಳಗಳು, ದೊಡ್ಡ ಕಂದರಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಅಸ್ತವ್ಯಸ್ತವಾದ ರಸ್ತೆಗಳ ಚಿತ್ರಗಳು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದ್ದು, ಬೆಂಗಳೂರಿನ ನಾಗರಿಕ ಆಡಳಿತ ವ್ಯವಸ್ಥೆ ಮತ್ತು ಕರ್ನಾಟಕ ಸರ್ಕಾರದ ಪಾಲಿಗೆ ಹಾನಿಕಾರಕ ಜಾಹೀರಾತಿನಂತಾಗಿದೆ.

ಈ ದುರವಸ್ಥೆ ಅಕ್ಷಮ್ಯವಾಗಿ ಕಾಣಲು ಕಾರಣ ಎಂದರೆ ಈ ನಗರವು ಜನಸಂಖ್ಯೆಯ ಹೆಚ್ಚಳ ಮತ್ತು ಕೈಗಾರಿಕೆಗಳ ಅಭಿವೃದ್ಧಿಯ ತಾಣವಾಗಿ ಕರ್ನಾಟಕದ ಪಾಲಿಗೆ ಚಿನ್ನದ ಭಂಡಾರವಾಗಿದೆ. ಈ ನಗರದಲ್ಲೇ ರಾಜ್ಯವು ಅತಿ ಹೆಚ್ಚಿನ ಆದಾಯ ಗಳಿಸುತ್ತದೆ. ಕಾಪೆರ್Çೀರೇಟ್ ತೆರಿಗೆ, ವಾಣಿಜ್ಯ ತೆರಿಗೆ, ಐಟಿ ಉದ್ಯಮಗಳ ನಡುವೆ ಸಂಪತ್ತಿನ ವೃದ್ಧಿಯಾಗುತ್ತಿದೆ. ಆದಾಗ್ಯೂ ಸರ್ಕಾರ ಈ ಸಂಪತ್ತನ್ನು ಅವಲಂಬಿಸಿಯೇ ಆಡಳಿತ ನಡೆಸಿದ್ದರೂ, ಮೂಲ ಸೌಕರ್ಯಗಳಾದ ಉತ್ತಮ ವಾಹನ ಸಂಚಾರಕ್ಕೆ ಯೋಗ್ಯವಾದ ರಸ್ತೆಗಳನ್ನಾಗಲೀ, ಶುಚಿಯಾದ ನೀರು ಮತ್ತು ಸ್ವಚ್ಛವಾದ ಪರಿಸರವನ್ನಾಗಲೀ ಒದಗಿಸಲು ಮುಂದಾಗುತ್ತಿಲ್ಲ. ಬದಲಾಗಿ ಜಾತಿವಾರು ಮತ್ತು ಗ್ಯಾರಂಟಿ ಯೋಜನೆಗಳಲ್ಲೇ ಮುಳುಗಿರುವ ಸರ್ಕಾರವು, ಜಾತಿ ಸಮೀಕರಣ ಮತ್ತು ಅಲ್ಪಾವಧಿಯ ಉಚಿತಗಳ ಮೂಲಕ ಮತದಾರರನ್ನು ಆಕರ್ಷಿಸುವುದರಲ್ಲಿ ತೊಡಗಿದೆ, ತನ್ಮೂಲಕ ಭವಿಷ್ಯವನ್ನು ಹಾಳು ಮಾಡುತ್ತಿದೆ.

ರಸ್ತೆಗಳು ಜನರಿಗೆ ಲಕ್ಸುರಿಗಳಲ್ಲ. ಅದು ಮೂಲಭೂತ ಪ್ರಜಾಸತ್ತಾತ್ಮಕ ರೂಪದ ಮೂಲ ಸೌಕರ್ಯವಾಗಿದ್ದು ಕೋಟ್ಯಧಿಪತಿ ಸಿಇಒಗಳ ಹಾಗೆಯೇ ಸಾಧಾರಣ ಗಿಗ್ ಕಾರ್ಮಿಕರೂ ಬಳಸುತ್ತಾರೆ. ಬೆಂಗಳೂರಿನ ರಸ್ತೆಗಳು ಆಳ್ವಿಕೆಯ ನಿಷ್ಕ್ರಿಯತೆಯ ನೇರ ಸಾಕ್ಷ್ಯಗಳಾಗಿ ಕಾಣುತ್ತಿದ್ದು, ಆಳ್ವಿಕೆಯು ತನ್ನ ಮೂಲಭೂತ ಕರ್ತವ್ಯಗಳನ್ನೇ ಮರೆತಿರುವುದನ್ನು ನೆನಪಿಸುತ್ತವೆ. ಪ್ರತಿವರ್ಷ ಸರ್ಕಾರಗಳು ಹೂಡಿಕೆದಾರರ ಸಮಾವೇಶಗಳನ್ನು ಅದ್ಧೂರಿಯಾಗಿ ಆಯೋಜಿಸುತ್ತವೆ, ವಾಣಿಜ್ಯ ಪರ ನೀತಿಗಳನ್ನು ಇಡೀ ಪ್ರಪಂಚಕ್ಕೆ ಸಾರಿ ಹೇಳುತ್ತವೆ. ಆದರೂ ಹೂಡಿಕೆದಾರರು ಏಕೆ ಕರ್ನಾಟಕಕ್ಕೆ ಬರುತ್ತಿಲ್ಲ ಎಂದರೆ, ಒಂದು ಮಳೆ ಬಂದರೆ ರಾಜಧಾನಿಯೇ ಒಂದು ರಣಭೂಮಿಯಂತೆ ಕಾಣುತ್ತದೆ. ಮೂಲ ಸೌಕರ್ಯಗಳ ಬಲವಿಲ್ಲದೆ ಬಂಡವಾಳವನ್ನು ಆಹ್ವಾನಿಸುವುದು ವಂಚಕ ನಡೆಯಾಗುತ್ತದೆ.

ಕೈಗಾರಿಕೆಗಳು ಎಚ್ಚೆತ್ತುಕೊಳ್ಳುತ್ತಿವೆ. ಅತಿ ದೊಡ್ಡ ಐಟಿ ಕಂಪನಿಗಳು, ಒಂದು ಕಾಲದಲ್ಲಿ ಬೆಂಗಳೂರನ್ನು ಆಕರ್ಷಕವಾಗಿ ಕಂಡಿದ್ದವು, ಆದರೆ ಇಂದು ನೆರೆ ರಾಜ್ಯ ಆಂಧ್ರಪ್ರದೇಶಕ್ಕೆ ವರ್ಗಾಯಿಸಲು ಉತ್ಸುಕವಾಗಿವೆ. ಅಲ್ಲಿ ಸರ್ಕಾರವು ವ್ಯಾಪಾರ, ವಾಣಿಜ್ಯವನ್ನು ಆಕರ್ಷಿಸಲು ಮುಂದಾಗಿದ್ದು, ಮೂಲಸೌಕರ್ಯ, ದಕ್ಷತೆ ಮತ್ತು ಮುಂಗಾಣ್ಕೆಯ ಗ್ಯಾರಂಟಿ ನೀಡುತ್ತಿವೆ. ಇಲ್ಲಿ ಸ್ಪಷ್ಟವಾಗುವ ಸಂದೇಶ ಎಂದರೆ, ವಾಹನ ಸಂಚಾರಕ್ಕೆ ಯೋಗ್ಯವಾದ ರಸ್ತೆಯನ್ನೂ ಒದಗಿಸಲು ಸಾಧ್ಯವಾಗದಿದ್ದರೆ, ಜಾಗತಿಕ ಉದ್ದಿಮೆಗಳು ಇಲ್ಲೇಕೆ ಬಂಡವಾಳ ಹೂಡಿ ತಮ್ಮ ಭವಿಷ್ಯದೊಡನೆ ಚೆಲ್ಲಾಟವಾಡುತ್ತವೆ? ಚಿನ್ನದ ಮೊಟ್ಟೆ ಇಡುತ್ತಿದ್ದ ಕೋಳಿಯನ್ನು ಕರ್ನಾಟಕ ಕೊಲ್ಲುತ್ತಲೇ ಬಂದಿದೆ.

ಈ ಬಿಕ್ಕಟ್ಟು ಬೆಂಗಳೂರಿಗೆ ಮಾತ್ರ ಸೀಮಿತವಾಗಿಲ್ಲ. ರಾಜ್ಯಾದ್ಯಂತ, ನಗರಗಳಲ್ಲಿ ಪಟ್ಟಣಗಳಲ್ಲಿ ಮತ್ತು ಗ್ರಾಮೀಣ ಪ್ರದೇಶಗಳಲ್ಲೂ ಸಹ ಇದೇ ದುಃಸ್ಥಿತಿ ಇದೆ. ರಸ್ತೆಗಳು ಕುಸಿದುಹೋಗಿವೆ. ಯೋಜನೆಗಳು ಅಪೂರ್ಣವಾಗಿವೆ, ಹಣಕಾಸು ನಿಧಿಯನ್ನು ಅನ್ಯ ಕಾರ್ಯಗಳಿಗೆ ವಿನಿಯೋಗಿಸಲಾಗುತ್ತಿದೆ, ಉತ್ತರದಾಯಿತ್ವವೇ ಇಲ್ಲವಾಗಿದೆ. ಕರ್ನಾಟಕದಲ್ಲಿ ಅಪಾರ ಸಂಪನ್ಮೂಲಗಳಿವೆ, ಪ್ರತಿಭೆ ಮತ್ತು ಸ್ಥಳಾವಕಾಶ ಇದೆ. ಆದರೆ ಆಳುವ ಪಕ್ಷಗಳ ನಿರ್ಲಕ್ಷ್ಯ ಇದನ್ನು ಹಾಳು ಮಾಡುತ್ತಿದೆ. ಆಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿರಬೇಕಿದ್ದ ರಾಜ್ಯ ಈಗ ಹಿಂದುಳಿಯುತ್ತಿದೆ.

ಈ ದುರಂತ ಪ್ರತ್ಯಕ್ಷವಾಗಿ ಕಾಣುತ್ತಿದೆ, ಮುಂಗಾಣ್ಕೆ ಇಲ್ಲದಿರುವುದು ಎದ್ದು ಕಾಣುತ್ತದೆ. ಕರ್ನಾಟಕದ ರಾಜಕೀಯ ನಾಯಕತ್ವವು ರಾಜಕೀಯ ಪ್ರಹಸನಗಳ ಕಲೆಯನ್ನು ಕಲಿತಿದೆ, ಆಕರ್ಷಕ ಘೋಷಣೆಗಳು ಹೇರಳವಾಗಿವೆ, ಜಾತಿ ಲೆಕ್ಕಾಚಾರಗಳಲ್ಲಿ ಮುಳುಗಿಹೋಗಿದೆ. ಆದರೆ ರಾಜ್ಯಕ್ಕೆ ಬೇಕಿರುವುದು ಯೋಜನೆಗಳು, ಸಾರ್ವಜನಿಕ ಸರಕು ಉತ್ಪಾದನೆಯಲ್ಲಿ ಹೂಡಿಕೆಗಳು, ಮತ್ತು ಬೊಕ್ಕಸಕ್ಕೆ ತೆರಿಗೆ ಸಲ್ಲಿಸುವ ಉದ್ದಿಮೆಗಳಿಗೆ ಗೌರವ. ಇಂದು ಆಳುವ ಪಕ್ಷಗಳು ತೆರಿಗೆದಾರರ ಹಣವನ್ನು  ರಾಜಕೀಯವಾಗಿ ಉಪಯುಕ್ತವಾದ ಯೋಜನೆಗಳಲ್ಲಿ ತೊಡಗಿಸುತ್ತಿದೆ ಮತ್ತೊಂದೆಡೆ ಅಭಿವೃದ್ಧಿಯ ನೈಜ ಶಕ್ತಿಯಾದ ರಸ್ತೆ, ನೀರು, ವಿದ್ಯುಚ್ಛಕ್ತಿಯನ್ನು ನಿರ್ಲಕ್ಷಿಸುತ್ತಿದೆ.

ಜಾಗತಿಕ ದೃಷ್ಟಿಯಲ್ಲಿ ಬೆಂಗಳೂರು ನಗರದ ಚಿತ್ರಣವೇ ಬದಲಾಗಿದೆ. ನಾವೀನ್ಯತೆ ಮತ್ತು ತಂತ್ರಜ್ಞಾನಕ್ಕೆ ಹೆಸರಾಗಿದ್ದ ನಗರ, ಎರಡು ದಶಕಗಳ ಅವಧಿಯಲ್ಲಿ ಈ ಸಾಧನೆ ಮಾಡಿದ ನಗರ ಇಂದು ಗೊಂದಲಗಳ ಗೂಡಾಗಿದ್ದು, ಸರ್ಕಾರಗಳು ಆಳ್ವಿಕೆಗಿಂತಲೂ ಹೆಚ್ಚು ಘೋಷಣೆಗಳಲ್ಲಿ ನಿರತವಾಗಿವೆ. ಕನಸಿನ ನಗರವಾಗಿದ್ದ ಬೆಂಗಳೂರು ಇಂದು ನರಕಸದೃಶವಾಗುತ್ತಿದೆ.

ಕರ್ನಾಟಕದ ಆಳುವ ಪಕ್ಷಗಳು ಇದೇ ಹಾದಿಯಲ್ಲಿ ಮುಂದುವರೆದರೆ, ಮುಂದಿನ ದಿನಗಳಲ್ಲಿ ಬೆಂಗಳೂರು ನಗರವನ್ನು ಐಟಿ ಕ್ರಾಂತಿಗಾಗಿ ನೆನಪಿಸಿಕೊಳ್ಳುವುದಿಲ್ಲ; ಬದಲಾಗಿ ಸಂಕುಚಿತ ದೃಷ್ಟಿಕೋನ, ಭ್ರಷ್ಟಾಚಾರ ಮತ್ತು ನಿರ್ಲಕ್ಷ್ಯದ ತಾಣವಾಗಿ ನೆನಪಿಸಿಕೊಳ್ಳಲಾಗುತ್ತದೆ. ಈ ಸಂದೇಶ ಈಗಾಗಲೇ ಸ್ಪಷ್ಟವಾಗಿ ಕಾಣುತ್ತಿದೆ, ಕೈಗಾರಿಕೆಗಳು, ಉದ್ದಿಮೆಗಳು ಹೆಜ್ಜೆ ಕೀಳುತ್ತಿವೆ, ಜನರು ತಾಳ್ಮೆ ಕಳೆದುಕೊಳ್ಳುತ್ತಿದ್ದಾರೆ.

ಬೆಂಗಳೂರಿನ ಇಂದಿನ ನಾಚಿಕೆಗೇಡಿನ ಪರಿಸ್ಥಿತಿ ನಾಳೆ ಕರ್ನಾಟಕಕ್ಕೂ ಅನ್ವಯಿಸುತ್ತದೆ. ಆಳುವ ಪಕ್ಷಗಳು ಕಲ್ಯಾಣ ಯೋಜನೆಗಳ ಪರಂಪರೆಗಾಗಿ ಬೆನ್ನುತಟ್ಟಿಕೊಳ್ಳಬಹುದು ಆದರೆ ಇತಿಹಾಸ ಅವರನ್ನು ನೆನಪಿನಲ್ಲಿಡುವುದು ಸಿಲಿಕಾನ್ ಕಣಿವೆಯನ್ನು ನಾಶಪಡಿಸಿದ ನಾಯಕರ ರೂಪದಲ್ಲಿ.

Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

When Prestige Is Gifted, Not Earned: The Padma Vibhushan Controversy Of Veerendra Heggade

Why I Will Never Fly Air India Again