ಜಾತಿ ರಾಜಕಾರಣಕ್ಕೆ ಯೋಗಿ ಸರಕಾರದ ಬ್ರೇಕ್
ಕರ್ನಾಟಕದ ಹಾಗೆ ಭಾರತದ ಯಾವುದೇ ರಾಜ್ಯವೂ ಸಹ ಜಾತಿಯನ್ನು ಇಷ್ಟು ಪ್ರಧಾನವಾಗಿ ಅನುಸರಿಸುವುದಿಲ್ಲ
ಜಾತಿಯ ಬಗ್ಗೆ ಇರುವ ವ್ಯಾಮೋಹ ಸಮಾಜವನ್ನು ದುರ್ಬಲಗೊಳಿಸುತ್ತದೆ, ಸಮುದಾಯಗಳನ್ನು ವಿಭಜಿಸುತ್ತದೆ, ಪೌರತ್ವದ ಪರಿಕಲ್ಪನೆಯನ್ನು ನಾಶ ಮಾಡುತ್ತದೆ
...............
ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ಒಂದು ದಿಟ್ಟವಾದ, ಕ್ರಾಂತಿಕಾರಿ ನಿರ್ಧಾರವನ್ನು ಕೈಗೊಂಡಿದ್ದು, ಇದು ದೇಶವ್ಯಾಪಿಯಾಗಿ ಗಮನ ಸೆಳೆಯಬೇಕಿದೆ. ಜಾತಿ ಸೂಚಕ ಚಿಹ್ನಾ ಫಲಕಗಳನ್ನು ತೆಗೆದುಹಾಕುವ, ಜಾತಿ ಆಧಾರಿತ ಸಾರ್ವಜನಿಕ ಮೆರವಣಿಗೆ, ಸಮಾವೇಶಗಳನ್ನು ನಿಷೇಧಿಸುವ, ಸಾರ್ವಜನಿಕ ದಾಖಲೆಗಳಲ್ಲಿ ಜಾತಿ ಸೂಚಕ ಅಂಶಗಳನ್ನು ತೆಗೆದುಹಾಕುವ ಮೂಲಕ ಭಾರತೀಯ ಸಮಾಜವನ್ನು ಶತಮಾನಗಳಿಂದ ಕಾಡುತ್ತಿರುವ ಜಾತಿ ವ್ಯವಸ್ಥೆಯ ಪಿಡುಗನ್ನು ಹಿಮ್ಮೆಟ್ಟಿಸುವ ದೃಢ ನಿರ್ಧಾರ ತಳೆದಿದ್ದಾರೆ ಯೋಗಿ. ಈ ಬೆಳವಣಿಗೆಯು ಅಲಹಾಬಾದ್ ಹೈಕೋರ್ಟ್ ಅಭಿಪ್ರಾಯಗಳಿಂದ ಪ್ರೇರಿತವಾಗಿದ್ದು, ಇದರಿಂದ ರಾತ್ರೋರಾತ್ರಿ ಜಾತಿ ವಿನಾಶ ಆಗುವುದಿಲ್ಲವಾದರೂ, ಸಾರ್ವಜನಿಕರ ದೃಷ್ಟಿಯಲ್ಲಿ ಜಾತಿ ವಿಭಜನೆಗಳು ನಿರಂತರವಾಗಿ ಬಾಧಿಸುವುದನ್ನು ನಿಯಂತ್ರಿಸುತ್ತದೆ. ಸರ್ಕಾರಗಳು ಜಾತಿ ಅಸ್ಮಿತೆಗಳನ್ನು ಹೆಚ್ಚಿಸಕೂಡದು, ಬದಲಾಗಿ ಸಮಾಜವನ್ನು ಅದರಿಂದಾಚೆಗೆ ಕೊಂಡೊಯ್ಯಬೇಕು ಎಂಬ ಸಂದೇಶವನ್ನು ರವಾನಿಸುತ್ತದೆ.
ದುರದೃಷ್ಟವಶಾತ್ ಕರ್ನಾಟಕದಲ್ಲಿ ತದ್ವಿರುದ್ಧವಾದ ಪರಿಸ್ಥಿತಿ ಇದೆ. ಇಲ್ಲಿ ಜಾತಿ ಕೇವಲ ಸಾಮಾಜಿಕ ಸೂಚಕ ಮಾತ್ರವೇ ಅಲ್ಲದೆ, ರಾಜಕೀಯ ಸಂಕಥನದ ಕೇಂದ್ರ ಬಿಂದು ಆಗಿದೆ. ಕರ್ನಾಟಕದ ಹಾಗೆ ಭಾರತದ ಯಾವುದೇ ರಾಜ್ಯವೂ ಸಹ ಜಾತಿಯನ್ನು ಇಷ್ಟು ಪ್ರಧಾನವಾಗಿ ಅನುಸರಿಸುವುದಿಲ್ಲ. ಪ್ರತಿಯೊಂದು ಪ್ರತಿಭಟನೆ, ರ್ಯಾಲಿ, ಪ್ರತಿಯೊಂದು ಚರ್ಚೆ-ಸಂವಾದ, ಚುನಾವಣಾ ಲೆಕ್ಕಾಚಾರ, ಪ್ರತಿಯೊಂದು ಸರ್ಕಾರದ ಆಯೋಗಗಳು ಜಾತಿ ಮತ್ತು ಉಪಜಾತಿಗಳ ನೆಲೆಯಲ್ಲೇ ನಡೆಯುತ್ತವೆ. ಜನರನ್ನು ಕನ್ನಡಿಗರಾಗಿ ಕ್ರೋಢೀಕರಿಸುವ ಬದಲು, ಅಥವಾ ಭಾರತೀಯರಾಗಿ ಕಾಣುವ ಬದಲು ನಮ್ಮ ನಾಯಕರು ಸಮಾಜವನ್ನು ಸಾವಿರ ಹೋಳುಗಳನ್ನಾಗಿ ಮಾಡಲು ಬಯಸುತ್ತಾರೆ. ತತ್ಪರಿಣಾಮವಾಗಿ ರಾಜಕೀಯ ಸಂಸ್ಕøತಿಯಲ್ಲಿ ಯಾರೊಬ್ಬರೂ ಸಹ ವ್ಯಕ್ತಿಯಾಗಿ ಗುರುತಿಸಿಕೊಳ್ಳಲು ಬಯಸುವುದಿಲ್ಲ, ಜಾತಿ ಗುಂಪಿನ ಸದಸ್ಯರಾಗಿ ಗುರುತಿಸಿಕೊಳ್ಳುತ್ತಾರೆ.
ಇದರ ಕೆಟ್ಟ ಪರಿಣಾಮ ಎಂದರೆ, ಸಾಮಾಜಿಕ ನ್ಯಾಯದ ಪರಿಕಲ್ಪನೆಯೂ ಸಹ ರಾಜಕೀಯ ಅವಕಾಶವಾದದ ಕವಚವಾಗಿ ಪರಿಣಮಿಸಿದೆ. ಸರ್ಕಾರಗಳು ಜಾತಿ-ವರ್ಗಗಳನ್ನು ಶಾಶ್ವತಗೊಳಿಸುವ ಮೂಲಕ ಹಿಂದುಳಿದ ವರ್ಗಗಳ ಸರ್ವತೋಮುಖ ಅಭಿವೃದ್ಧಿಯನ್ನು ಸಾಧಿಸಲು ಬಯಸುತ್ತವೆ. ಆದರೂ ಉದ್ಯೋಗ ಮತ್ತು ಶಿಕ್ಷಣದಲ್ಲಿ ವಾಸ್ತವವಾಗಿ ಯಾವ ಅವಕಾಶಗಳು ಇವೆ? ಸಾರ್ವಜನಿಕ ಉದ್ಯೋಗ ಕುಸಿಯುತ್ತಿದೆ, ಗುಣಮಟ್ಟದ ಶಿಕ್ಷಣ ಇಲ್ಲವಾಗುತ್ತಿದೆ. ಸರಕಾರದ ಕ್ರಮ ಮತಬ್ಯಾಂಕ್ ದುರ್ಬಳಕೆ ಮಾಡುವ ಒಂದು ಸಿನಿಕತನದ ಮಾದರಿಯಾಗಿದ್ದು, ಜಾತಿ ಕೋಟಾಗಳನ್ನು ಮತ್ತು ಅಸ್ಮಿತೆಗಳನ್ನು ಚುನಾವಣಾ ಲಾಭಕ್ಕಾಗಿ ಬಳಸಿಕೊಳ್ಳುವ ತಂತ್ರವಾಗಿದೆ. ಆದರೆ ಜನರಿಗೆ ಅವಕಾಶಗಳನ್ನು ಹೆಚ್ಚಿಸುವ ಯಾವುದೇ ಪ್ರಯತ್ನಗಳನ್ನು ಮಾಡುತ್ತಿಲ್ಲ.
ಇದು ಕರ್ನಾಟಕದ ಒಂದು ವೈಶಿಷ್ಯ. ಜಾತಿ ಮತ್ತು ಕೋಮು ಸಾರ್ವಜನಿಕ ಸಂಕಥನದ ಏಕೈಕ ವಿಷಯವಾಗಿದೆ. ಎಲ್ಲ ರಾಜಕೀಯ ಪಕ್ಷಗಳೂ ಇದರಲ್ಲಿ ಭಾಗಿಯಾಗಿವೆ. ಈ ವಿಭಜನೆಗಳನ್ನು ದಾಟಿ ಹೋಗದೆ, ಅದನ್ನು ಇನ್ನೂ ಹೆಚ್ಚು ಮಾಡುತ್ತಿದ್ದು, ಪ್ರತಿಯೊಂದು ಹೊಸ ನೀತಿಯನ್ನೂ ಸಹ ಒಂದು ಜಾತಿಯನ್ನು ಹಿಂದಿಕ್ಕಿ ಮತ್ತೊಂದು ಜಾತಿಯನ್ನು ಮುನ್ನಲೆಗೆ ತರುವ ರೀತಿಯಲ್ಲೇ ರೂಪಿಸಲಾಗುತ್ತಿದೆ. ಒಂದು ಕಾಲದಲ್ಲಿ ಬಸವಣ್ಣ ಮತ್ತು ನಾರಾಯಣ ಗುರು ಅವರಂತಹ ಜಾತಿ ವ್ಯವಸ್ಥೆಯ ವಿರುದ್ಧ ಹೋರಾಡಿದ ಸುಧಾರಕರನ್ನು ನೀಡಿದ ರಾಜ್ಯ, ಈಗ ಜಾತಿ ಲೆಕ್ಕಾಚಾರಗಳ ಸಂಕೋಲೆಯಲ್ಲಿ ಬಂಧಿಯಾಗಿದ್ದು, ಅದನ್ನೇ ರಾಜಕೀಯ ಪರಿಭಾಷೆಯಾಗಿ ಬಳಸುತ್ತಿದೆ.
ಉತ್ತರ ಪ್ರದೇಶದ ನಿದರ್ಶನವನ್ನು ಎಚ್ಚರಿಕೆಯ ಸಂದೇಶವನ್ನಾಗಿ ನೋಡಬೇಕಿದೆ. ಜಾತಿ ಸೂಚಕಗಳನ್ನು ಅಲ್ಲಿ ತೆಗೆದುಹಾಕಬಹುದಾದರೆ, ಇಲ್ಲೇಕೆ ಆಗಬಾರದು? ಸಾರ್ವಜನಿಕ ಮೆರವಣಿಗೆಗಳು, ಫಲಕಗಳು ಜಾತಿಯನ್ನು ಸೂಚಿಸುವ ಕಾರಣಕ್ಕೆ ನಿಷೇಧ ಮಾಡಬಹುದಾದರೆ, ಇಲ್ಲೇಕೆ ಮಾಡಬಾರದು? ಕರ್ನಾಟಕಕ್ಕೆ ದಿಟ್ಟ ನಿರ್ಧಾರ, ದೃಢ ದೃಷ್ಟಿಕೋನದ ಅವಶ್ಯಕತೆ ಇದೆ. ನ್ಯಾಯದ ಹೆಸರಿನಲ್ಲಿ ಜಾತಿಯನ್ನು ಶಾಶ್ವತಗೊಳಿಸುವ ಬದಲು, ಶಿಕ್ಷಣ, ಉದ್ಯೋಗ ಮತ್ತು ಸಾಮಾಜಿಕ ಚಲನೆಯಲ್ಲಿ ನೈಜ ಅವಕಾಶಗಳನ್ನು ಕಲ್ಪಿಸಬೇಕಿದೆ. ಈ ಕ್ರಮಗಳನ್ನು ಕೈಗೊಳ್ಳದೆ ಹೋದರೆ, ರಾಜ್ಯವು ಜಾತಿ ರಾಜಕಾರಣದ ಸಂಕೋಲೆಗಳಲ್ಲಿ ಬಂಧಿಯಾಗುತ್ತದೆ. ಜನರು ಸಮಗ್ರವಾಗಿ ತಮ್ಮನ್ನು ನೋಡದೆ ವಿಭಜನೆಯಾದ ತುಣುಕುಗಳಾಗಿ ನೋಡಲಾರಂಭಿಸುತ್ತಾರೆ.
ಇಲ್ಲಿ ಸ್ಪಷ್ಟವಾದ ಸಂದೇಶವನ್ನು ಕಾಣಬಹುದಾದರೆ, ಜಾತಿಯ ಬಗ್ಗೆ ಇರುವ ವ್ಯಾಮೋಹ ಸಮಾಜವನ್ನು ದುರ್ಬಲಗೊಳಿಸುತ್ತದೆ, ಸಮುದಾಯಗಳನ್ನು ವಿಭಜಿಸುತ್ತದೆ, ಪೌರತ್ವದ ಪರಿಕಲ್ಪನೆಯನ್ನು ನಾಶ ಮಾಡುತ್ತದೆ. ಕರ್ನಾಟಕ ಈ ಬಲೆಯಿಂದ ಪಾರಾಗಬೇಕಿದೆ. ಇಲ್ಲವಾದರೆ ಶಾಶ್ವತವಾಗಿ ಹಿಂದುಳಿಯಬೇಕಾಗುತ್ತದೆ, ಅನ್ಯ ರಾಜ್ಯಗಳು ಮುನ್ನಡೆ ಸಾಧಿಸುತ್ತಲೇ ಇರುತ್ತವೆ
Comments
Post a Comment