ಧಾರ್ಮಿಕ ಮುಖ್ಯಸ್ಥರು ಲಾಬಿಕೋರರಾದ ಧರ್ಮಸ್ಥಳದ ಸಮಾವೇಶ

 ಸರ್ಕಾರದ ಮೇಲೆ ಒತ್ತಡ ಹೇರುವ ಸ್ಪಷ್ಟ ಉದ್ದೇಶದೊಂದಿಗೆ ಧರ್ಮಸ್ಥಳದಲ್ಲಿ ಮೊನ್ನೆ ಸಮಾವೇಶದಲ್ಲಿ ನೆರೆದಿದ್ದ ಜೈನ ಧಾರ್ಮಿಕ ಮುಖಂಡರು ಯಾವುದೇ ಅನುಮಾನವಿಲ್ಲದಂತಹ ಗಾಬರಿಯಾಗುವ ಸಂದೇಶವನ್ನು ರವಾನಿಸಿದ್ದು, ಧರ್ಮಸ್ಥಳದ ಪೀಠಾಧಿಕಾರಿ ವೀರೇಂದ್ರ ಹೆಗ್ಗಡೆ ಅವರೊಡನೆ ಐಕ್ಯಮತ ಪ್ರದರ್ಶಿಸಿದ್ದಾರೆ. ಪ್ರಕರಣದಲ್ಲಿ ತಮ್ಮದೇ ಧರ್ಮದ ಹೆಗ್ಗಡೆಗೆ ನ್ಯಾಯ ಒದಗಿಸಬೇಕು (ಅಂದರೆ ಅವರನ್ನು ಬಚಾಯಿಸಬೇಕು), ಇಲ್ಲದಿದ್ದರೆ ತಾವು ಸುಮ್ಮನೆ ಕೂರುವುದಿಲ್ಲ ಎಂಬ ಸ್ಪಷ್ಟ ಎಚ್ಚರಿಕೆಯನ್ನೂ ಸರ್ಕಾರಕ್ಕೆ ನೀಡಿದ್ದಾರೆ. ``ಜೈನರು ಯಾರಿಗೂ ತೊಂದರೆ ಕೊಡುವುದಿಲ್ಲ, ತೊಂದರೆ ಕೊಟ್ಟವರನ್ನು ಬಿಡುವುದೂ ಇಲ್ಲ'', ``ಧರ್ಮಸ್ಥಳ ಕೇಸುಗಳಲ್ಲಿ ಹೆಗ್ಗಡೆಯವರಿಗೆ ನ್ಯಾಯ ಸಿಗದಿದ್ದರೆ, ವಿಧಾನಸೌಧದ ಎದುರು `ಉಗ್ರ' ಹೋರಾಟ ನಡೆಸಲಾಗುವುದು'' ಎಂಬ ನಿಖರ ಎಚ್ಚರಿಕೆ ಜೈನ ಸ್ವಾಮಿಗಳ ಸಮಾವೇಶದಿಂದ ಹೊರಟಿದೆ. ಈ ಮಾತುಗಳು ಏನನ್ನು ಧ್ವನಿಸುತ್ತದೆ? ಇದರಲ್ಲಿ ಖಂಡಿತವಾಗಿಯೂ ಬೆದರಿಕೆ ಮತ್ತು ಸಂಘರ್ಷದ ಧ್ವನಿ ಇದೆ.

ಈ ಸಮಾವೇಶವು ಹಲವು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಯಾರೂ ಊಹಿಸಲಾಗದಂತಹ ಭೀಕರ ಅಪರಾಧಗಳ ಬಗ್ಗೆ, ಧರ್ಮಸ್ಥಳದಲ್ಲೇ ಹಲವು ದಶಕಗಳಲ್ಲಿ ನಡೆದಿರುವ ಭೀಕರ ಅತ್ಯಾಚಾರ, ಹತ್ಯೆಗಳ ಬಗ್ಗೆ ವಿಶೇಷ ತನಿಖಾ ದಳ (ಎಸ್‍ಐಟಿ) ತನಿಖೆ ನಡೆಸುತ್ತಿರುವಾಗ, ಜೈನ ಮಠಾಧೀಶರು ರಂಗ ಪ್ರವೇಶಿಸಿರುವುದು ಖಂಡಿತವಾಗಿಯೂ ಅನುಮಾನಗಳಿಗೆ ಎಡೆಮಾಡಿಕೊಡುತ್ತದೆ. ಎಸ್‍ಐಟಿ ರಚನೆಯಾಗಿದ್ದು ಸತ್ಯವನ್ನು ಕಂಡುಹಿಡಿಯಲು ಮತ್ತು ನ್ಯಾಯ ಒದಗಿಸಲು. ವಿವೇಕ ಮತ್ತು ತಾಳ್ಮೆಗೆ ಹೆಸರಾಗಿರುವ ಜೈನ ಮಠಾಧೀಶರು ಅಖಾಡ ಪ್ರವೇಶಿಸಿ, ತನಿಖೆ ಮುಗಿಯುವ ಮುನ್ನವೇ ಹೀಗೆ ಸರ್ಕಾರದ ಮೇಲೆ ಬೆದರಿಕೆ ಮೂಲಕ ಒತ್ತಡ ಹೇರುವುದು ಅವರ ಘನತೆ-ಗೌರವಕ್ಕೆ ತಕ್ಕ ನಡವಳಿಕೆ ಎನಿಸುವುದಿಲ್ಲ.

ಸಾಂಪ್ರದಾಯಿಕವಾಗಿ, ಜೈನ ಮುನಿಗಳು ಸಂಯಮ ಹೊಂದಿದವರೆಂದು ಭಾವಿಸಲಾಗುತ್ತದೆ. ಆದರೆ ಈ ಪ್ರಕರಣದಲ್ಲಿ ಈ ಸದ್ಗುಣವನ್ನೇ ತೊರೆದಿದ್ದಾರೆ. ಅವರ `ಉಗ್ರ' ಅಸಹನೆ ಮತ್ತು ದುರಾಗ್ರಹ ಯಾರಿಗಾಗಿ ಎಂಬ ಪ್ರಶ್ನೆ ಹುಟ್ಟುಹಾಕುತ್ತದೆ. ಅವರಲ್ಲಿ ಒಬ್ಬರನ್ನು ರಕ್ಷಿಸುವ ಸಲುವಾಗಿಯೇ? ತಮ್ಮ ಸಮಾಜದ ಹೆಸರಾಂತ ವ್ಯಕ್ತಿಯ ಅಪರಾಧಗಳು ಒಂದಾದ ಮೇಲೊಂದರಂತೆ ಪ್ರಕಟವಾಗುತ್ತಿರುವುದರಿಂದಲೇ? ಹಾಗಾದಲ್ಲಿ ಈ ಸಮಾವೇಶವು ಆಧ್ಯಾತ್ಮಿಕ ಮಾರ್ಗದರ್ಶನಕ್ಕಿಂತಲೂ ಹೆಚ್ಚಾಗಿ, ಸಮುದಾಯ ರಕ್ಷಣೆಯ ಒಂದು ಸ್ವಾರ್ಥಪೂರಿತ ನಡೆಯಾಗಿ ಕಾಣುತ್ತದೆ. 

ಈ ಸಮಾವೇಶದ ದೃಶ್ಯಗಳು ಈ ಭಾವನೆಯನ್ನು ಗಟ್ಟಿಗೊಳಿಸುತ್ತವೆ. ವೀರೇಂದ್ರ ಹೆಗ್ಗಡೆ ಸ್ವತಃ ಸಭೆಯಲ್ಲಿ ಹಾಜರಿದ್ದರು. ಅವರೂ ಮಠಾಧೀಶರ ಮಾತಿಗೆ ದನಿ ಸೇರಿಸಿದರು. ಅವರೊಂದಿಗೆ ಕನ್ನಡ ಸಾಹಿತ್ಯ ವಲಯದಲ್ಲಿ ಖ್ಯಾತನಾಮರಾಗಿರುವ ಹಂಪ ನಾಗರಾಜಯ್ಯ ಸಹ ಇದ್ದರು. ಇಬ್ಬರೂ ಸಹ ಇಲ್ಲಿ ಭಾಗವಹಿಸುವ ಮೂಲಕ ಹಿತಾಸಕ್ತಿ ಸಂಘರ್ಷ ಇರುವುದನ್ನು ಎತ್ತಿತೋರಿದ್ದಾರೆ. ಅವರು ಹಾಜರಿದ್ದುದು ತಮ್ಮ ಸಮುದಾಯದ ಹಿತಾಸಕ್ತಿ ಮತ್ತು ವೈಯುಕ್ತಿಕ ಲಾಭಕ್ಕಾಗಿ ಎನ್ನುವುದು ಸ್ಪಷ್ಟ.

ಸಾರ್ವಜನಿಕರು ಈ ಸಮಾವೇಶವನ್ನು `ಆಧ್ಯಾತ್ಮಿಕ ಸಭೆ' ಎಂದು ಭಾವಿಸುವುದಕ್ಕಿಂತಲೂ ಹೆಚ್ಚಾಗಿ ಸರ್ಕಾರಕ್ಕೆ ಲಾಬಿ ಮಾಡುವ, ಬೆದರಿಕೆ ಒಡ್ಡುವ ಸಮಾವೇಶ ಎಂದೇ ಪರಿಗಣಿಸುತ್ತಾರೆ. ಇಲ್ಲಿ ಸ್ಪಷ್ಟವಾದ ಸಂದೇಶ ಎಂದರೆ ``ಧರ್ಮಸ್ಥಳದ ಹೆಗ್ಗಡೆ ತಂಟೆಗೆ ಬರಬೇಡಿ, ಬಂದರೆ ಪ್ರಭಾವಶಾಲಿ ಜೈನರ ಪ್ರತೀಕಾರಕ್ಕೆ ಸಿದ್ಧರಾಗಿ'' ಎಂಬ ಸಂದೇಶವನ್ನು ನೀಡಲಾಗಿದೆ. ಈ ತಂತ್ರಗಾರಿಕೆಗಳು ಜೈನ ಸ್ವಾಮಿಗಳು ಹೊಂದಿರಬೇಕಾದ ನೈತಿಕತೆಗೆ ಚ್ಯುತಿ ತರುವಂತಹುದಾಗಿದೆ.

ಜೈನ ಸ್ವಾಮಿಗಳು ಈ ಪರಿಸ್ಥಿತಿಯಲ್ಲಿ ಕೆಲ ಕಾಲ ಕಾಯಬೇಕಿತ್ತು - ಎಸ್‍ಐಟಿ ತನಿಖೆ ಪೂರ್ತಿಯಾಗುವವರೆಗೆ ಮತ್ತು  ಸತ್ಯಾಂಶಗಳು ಸಾಬೀತಾಗುವವರೆಗೆ. ಅನಂತರ ತನಿಖೆಯ ಫಲಿತಾಂಶಗಳು ಧರ್ಮಾಧಿಕಾರಿಗೆ ವ್ಯತಿರಿಕ್ತವಾಗಿದ್ದಲ್ಲಿ, ಸಮುದಾಯದ ಘನತೆಯನ್ನು ಕಾಪಾಡುವ ಮಾರ್ಗವನ್ನು, ಸತ್ಯ ಮತ್ತು ನ್ಯಾಯಕ್ಕೆ ಬದ್ಧವಾಗಿ ಯೋಚಿಸಬಹುದಾಗಿತ್ತು. ಅದರ ಬದಲು ತನಿಖೆಗೆ ಮುನ್ನವೇ ಮಧ್ಯಪ್ರವೇಶಿಸಿ ಒತ್ತಡ ಹೇರುವ ಮೂಲಕ ಜೈನ ಸ್ವಾಮಿಗಳ ಮಧ್ಯಪ್ರವೇಶ ಮತ್ತು ಮತ್ತು ಸರಕಾರಕ್ಕೆ ಬೆದರಿಕೆ ಅವರ ಉದ್ದೇಶಗಳ ಬಗ್ಗೆ ಅನುಮಾನ ಹುಟ್ಟುಹಾಕಿರುವುದಷ್ಟೇ ಅಲ್ಲದೆ, ಅವರು ಪ್ರತಿನಿಧಿಸುವ ಮೌಲ್ಯಗಳನ್ನೂ ಅನುಮಾನಾಸ್ಪದವಾಗಿಸಿದೆ.

ಧರ್ಮಸ್ಥಳ ಪ್ರಕರಣ ಈಗ ಒಬ್ಬ ವ್ಯಕ್ತಿಯ ಗೌರವಕ್ಕೆ ಸಂಬಂಧಿಸಿಲ್ಲ. ಇದು ಪ್ರಬಲ ವ್ಯಕ್ತಿಗಳು ಹೇಗೆ ಧಾರ್ಮಿಕ ಅಧಿಕಾರ ಮತ್ತು ಸಾಮಾಜಿಕ ಪ್ರಭಾವವನ್ನು ಬಳಸಿಕೊಂಡು ಮನುಷ್ಯವಿರೋಧಿ ಅಪರಾಧಗಳ ಬಗ್ಗೆ ಉತ್ತರದಾಯಿತ್ವದಿಂದ ತಪ್ಪಿಸಿಕೊಳ್ಳಬಹುದು ಎಂದು ನಿರೂಪಿಸುವ ಪ್ರಕರಣವಾಗಿದೆ. ಮೊನ್ನೆಯ ಜೈನ ಸಮಾವೇಶವು ಹಿತಾಸಕ್ತಿ ಸತ್ಯವನ್ನು ಮೀರಿದೆ ಎಂಬ ಸಂದೇಶ ನೀಡಿದೆ. ಆದರೆ ಎಸ್‍ಐಟಿ ಈ ಕಾರಣಕ್ಕಾಗಿಯೇ ತನಿಖೆ ನಡೆಸಬೇಕಿದೆ. ಯಾವುದೇ ಭೀತಿ ಇಲ್ಲದೆ ಕಾರ್ಯನಿರ್ವಹಿಸಬೇಕಿದೆ.

Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

When Prestige Is Gifted, Not Earned: The Padma Vibhushan Controversy Of Veerendra Heggade

Why I Will Never Fly Air India Again