ವಾಲ್ಮೀಕಿ ಹಗರಣ ಮುಚ್ಚಿಡಲು ಕಾಂಗ್ರೆಸ್ ಸರ್ಕಾರದ ವಿಫಲ ಯತ್ನ
ಸರ್ಕಾರ ಮಾಡಲಾಗದೆ ಹೋದ ಕರ್ತವ್ಯವನ್ನು ಸಿಬಿಐ ಮಾಡಲಿ. ಕಾನೂನು ಪ್ರಬಲ ವ್ಯಕ್ತಿಗಳನ್ನು, ತಮ್ಮನ್ನು ಏನೂ ಮಾಡಲಾಗುವುದಿಲ್ಲ ಎಂದು ಭಾವಿಸುವುವರನ್ನು ಬೆನ್ನಟ್ಟಿ ಅಂತಿಮ ನ್ಯಾಯ ದೊರಕಿಸಲಿ.
ಕರ್ನಾಟಕ ಸರ್ಕಾರವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ರೀತಿಯಲ್ಲಿ ಹೈಕೋರ್ಟ್ ತನ್ನ ಇತ್ತೀಚಿನ ತೀರ್ಪಿನಲ್ಲಿ ವಾಲ್ಮೀಕಿ ನಿಗಮ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಲು ಆದೇಶಿಸಿದೆ. ಇದು ಸರಕಾರವನ್ನು ನೈತಿಕವಾಗಿ ತರಾಟೆಗೆ ತೆಗೆದುಕೊಂಡಿರುವ ಒಂದು ವಿದ್ಯಮಾನÀ. ಮೂಲತಃ ಈ ಹಗರಣದ ವಿಚಾರದಲ್ಲಿ ಅಪಾರ ಪ್ರಮಾಣದ ಸಾರ್ವಜನಿಕರ ಹಣದ ದುರುಪಯೋಗವಾಗಿದ್ದು ಇದು ಪರಿಶಿಷ್ಟ ಪಂಗಡಗಳ ಏಳಿಗೆಗಾಗಿ ಮೀಸಲಿದ್ದ ನಿಧಿಯಾಗಿತ್ತು. ಒಂದು ಆತ್ಮಹತ್ಯೆಯ ಟಿಪ್ಪಣಿ ಈ ಹಗರಣವನ್ನು ಬಯಲು ಮಾಡಿದ್ದು ಸರ್ಕಾರದ ಆಡಳಿತ ಯಂತ್ರವು ಸತ್ಯವನ್ನು ಬಯಲಿಗೆಳೆಯುವುದರ ಬದಲು ಅದನ್ನು ಮುಚ್ಚಿಡಲು ಪ್ರಯತ್ನಿಸಿರುವುದು ಸ್ಪಷ್ಟವಾಗಿದೆ.
ಈ ಹಗರಣದಲ್ಲಿ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಮಂಡಲಿಯ ವತಿಯಿಂದ ೧೮೭ ಕೋಟಿ ರೂ.ಗಳ ಹಣವನ್ನು ಅನ್ಯ ವೆಚ್ಚಗಳಿಗೆ ಬಳಸಿಕೊಂಡಿದ್ದು, ಇದು ಇಡೀ ರಾಜ್ಯದ ಜನರ ಪ್ರಜ್ಞೆಯನ್ನು ಕದಡಿತ್ತು. ಈ ಹಗರಣದಲ್ಲಿ ಯಾವುದೇ ರಾಜಿಯಾಗದೆ, ಸ್ವತಂತ್ರ ತನಿಖೆಯನ್ನು ಆದೇಶಿಸುವ ಬದಲು ರಾಜ್ಯ ಕಾಂಗ್ರೆಸ್ ಸರ್ಕಾರವು ವಿಶೇಷ ತನಿಖಾ ದಳ (ಎಸ್‌ಐಟಿ)ವನ್ನು ರಚಿಸುವ ಮೂಲಕ ತನ್ನ ಆಡಳಿತದ ನಿಯಂತ್ರಣದಲ್ಲೇ ತನಿಖೆಯನ್ನು ಆದೇಶಿಸಿತ್ತು. ಆರಂಭದಿAದಲೂ ಈ ಸಮಿತಿಯ ತಟಸ್ಥ ನೀತಿ ಅನುಮಾನಾಸ್ಪದವೇ ಆಗಿದ್ದು, ಎಸ್‌ಐಟಿಯ ಸಾಮರ್ಥ್ಯವೂ ಸಹ ಅನುಮಾನಕ್ಕೀಡಾಗಿತ್ತು. ಏಕೆಂದರೆ ಹಿಂಬದಿಯಿAದ ಈ ಹಗರಣದ ಹಿಂದೆ ಪ್ರಭಾವಿ ವ್ಯಕ್ತಿಗಳ ಕೈವಾಡ ಇರುವುದು ಬಯಲಾಗಿತ್ತು. ಇದರಲ್ಲಿ ಕೆಲವು ಶಾಸಕರೂ, ರಾಜಕೀಯ ಸಂಪರ್ಕ ಇರುವ ಬ್ಯಾಂಕ್ ಅಧಿಕಾರಿಗಳೂ ಶಾಮೀಲಾಗಿರುವ ಶಂಕೆ ವ್ಯಕ್ತವಾಗತೊಡಗಿತ್ತು.
ಹೈಕೋರ್ಟ್ನ ಜುಲೈ ೧ರ ತೀರ್ಪು ಒಂದು ಅಂಶವನ್ನು ಸ್ಪಷ್ಟಪಡಿಸುತ್ತದೆ: ನ್ಯಾಯ ಪರಿಪಾಲನೆ ಮತ್ತು ವಿತರಣೆಯನ್ನು ತನ್ನ ಮನಬಂದAತೆ ವರ್ತಿಸುವ ಏಜೆನ್ಸಿಗಳಿಗೆ ವಹಿಸಲಾಗುವುದಿಲ್ಲ. ಎಸ್‌ಐಟಿ ಉತ್ತರದಾಯಿತ್ವ ಇರುವ ಸಂಸ್ಥೆಯಾಗಿರಲಿಲ್ಲ, ಬದಲಾಗಿ ಕೇವಲ ರಕ್ಷಣೆ ಒದಗಿಸುವ ಸಂಸ್ಥೆಯಾಗಿತ್ತು. ಮುಖ್ಯಮಂತ್ರಿಗಳೇ ಖುದ್ದಾಗಿ ನಾಗೇಂದ್ರ ಅವರನ್ನು ಮರಳಿ ಸಚಿವ ಹುದ್ದೆಗೆ ತರುವ ಇಂಗಿತ ವ್ಯಕ್ತಪಡಿಸಿದ್ದು ಇದಕ್ಕೆ ಸಾಕ್ಷಿಯಾಗಿದ್ದು, ಈ ಹಗರಣದಲ್ಲಿ ರಾಜೀನಾಮೆ ನೀಡಿದ್ದ ಈ ಸಚಿವರು ನಿಷ್ಪಕ್ಷಪಾತ ತನಿಖೆಯಿಂದ ನಿರಪರಾಧಿತ್ವ ಸಾಬೀತಾಗುವ ಮುನ್ನವೇ ಈ ತೀರ್ಮಾನ ಕೈಗೊಂಡಿದ್ದು ಹಲವು ಅನುಮಾನಗಳನ್ನು ಮೂಡಿಸಿದ್ದವು. ಮೇಲಾಗಿ ಇಡೀ ಹಗರಣದಲ್ಲಿ ಪಾರದರ್ಶಕತೆಯನ್ನು ಕಾಪಾಡುವ ಯಾವುದೇ ಆಸಕ್ತಿ ಸರ್ಕಾರಕ್ಕೆ ಇಲ್ಲದಿರುವುದು ಸ್ಪಷ್ಟವಾಗಿತ್ತು.
ಇಲ್ಲಿ ಬಿ ನಾಗೇಂದ್ರ ಒಬ್ಬರೇ ಅಪರಾಧಿ ಎಂದು ಹೇಳುತ್ತಿಲ್ಲ. ಈ ಸಮಸ್ಯೆ ಇನ್ನೂ ಆಳವಾಗಿದ್ದು, ವ್ಯಾಪ್ತಿಯೂ ಹೆಚ್ಚಾಗಿರುವುದಲ್ಲದೆ, ರಾಜಕೀಯ ರಕ್ಷಣೆಯ ಒಂದು ಸಂಸ್ಕೃತಿಯನ್ನು ಬಿಂಬಿಸುವAತಿದೆ. ರಾಜ್ಯ ಸರ್ಕಾರವು ಆತನಿಗೆ ಕ್ಲೀನ್ ಚಿಟ್ ನೀಡುವ ಹತಾಶೆಯಲ್ಲಿರುವುದು, ತನಿಖೆಗೆ ಮುನ್ನವೇ ಈ ಕ್ರಮಕ್ಕೆ ಮುಂದಾಗಿರುವುದು ಹೈಕೋರ್ಟ್ ವ್ಯಕ್ತಪಡಿಸಿರುವ ಆತಂಕಗಳನ್ನು ಖಚಿತಪಡಿಸುತ್ತದೆ. ತನಿಖೆಯ ಉದ್ದೇಶ ರಾಜಿ ಸೂತ್ರವಾಗಿರುವುದನ್ನು ಕೋರ್ಟ್ ಎತ್ತಿತೋರಿಸಿದೆ.
ಮೇಲಾಗಿ, ಈ ಹಗರಣವು ಬಯಲಿಗೆ ಬಂದಿದ್ದು ಸರ್ಕಾರಿ ಅಧಿಕಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ನಂತರದಲ್ಲಿ. ಇವರು ಬಿಟ್ಟುಹೋದ ಟಿಪ್ಪಣಿಯಲ್ಲಿ ವಿವರವಾಗಿ ಆರೋಪಗಳನ್ನು ದಾಖಲಿಸಲಾಗಿತ್ತು. ಈ ದುರಂತ ಪ್ರಕರಣವು ಪ್ರಾಮಾಣಿಕವಾದ, ತುರ್ತಾದ ಕ್ರಮದ ಮೂಲಕ ಸತ್ಯವನ್ನು ಹೊರಗೆಳೆಯಲು ಪ್ರೇರಣೆಯಾಗಿತ್ತು. ಆದರೆ ಸರ್ಕಾರ ಈ ಕ್ರಮಕ್ಕೆ ಮುಂದಾಗದೆ ಹಗರಣವನ್ನು ಎದುರಿಸಲು ನಿರಾಕರಿಸಿ ನಿರ್ವಹಿಸಲು ಯತ್ನಿಸಿತ್ತು. ಸಿದ್ದರಾಮಯ್ಯ ಆಡಳಿತಕ್ಕೆ ಒಂದು ಮಾದರಿಯನ್ನು ಜನರ ಮುಂದಿಡುವ ಅವಕಾಶ ಇತ್ತು. ಅಹಿಂದ ರಾಜಕಾರಣವು ಮತ್ತು ಬುಡಕಟ್ಟು ಸಮುದಾಯಗಳ ಸಬಲೀಕರಣ ನೀತಿಗಳು ಎಂದರೆ ಕೇವಲ ಪ್ರಾತಿನಿಧ್ಯದ ಪ್ರಶ್ನೆ ಅಲ್ಲ ಎಂದು ನಿರೂಪಿಸಬಹುದಿತ್ತು. ಆದರೆ ಸರ್ಕಾರ ತನ್ನ ರಕ್ಷಣೆಗೆ ಬದ್ಧವಾಗಿತ್ತು.
ಹೈಕೋರ್ಟ್ ಈಗ ಈ ಪ್ರಕ್ರಿಯೆಯನ್ನು ಸರಿದಾರಿಗೆ ತಂದಿದೆ. ಆದರೂ ಕಳಂಕ ಉಳಿಯುತ್ತದೆ. ನ್ಯಾಯಾಂಗದ ಆದೇಶದ ಅನುಸಾರ ಸಿಬಿಐಗೆ ದಾಖಲೆಗಳು ಮತ್ತು ವರದಿಗಳನ್ನು ಒದಗಿಸಲಾಗುತ್ತದೆ. ಆದರೆ ರಾಜಕೀಯ ವೈಫಲ್ಯವನ್ನಾಗಲೀ, ನೈತಿಕ ವೈಫಲ್ಯವನ್ನಾಗಲೀ ಸರಿಪಡಿಸಲಾಗುವುದಿಲ್ಲ. ಕರ್ನಾಟಕದ ಕಾಂಗ್ರೆಸ್ ಸರ್ಕಾರವು ತನ್ನ ಪ್ರಾಮಾಣಿಕತೆಯ ಅಗ್ನಿಪರೀಕ್ಷೆ ಎದುರಿಸುತ್ತಿದೆ. ರಾಜ್ಯದ ಜನತೆ, ವಿಶೇಷವಾಗಿ ಬುಡಕಟ್ಟು ಸಮುದಾಯಗಳು ಸತ್ಯವನ್ನು ಅಪೇಕ್ಷಿಸುತ್ತಿವೆ. ಅವರಿಗೆ ಸರ್ಕಾರವು ಸ್ವಯಂ ರಕ್ಷಣೆಗಿಂತಲೂ ನ್ಯಾಯದ ಪರ ನಿಲ್ಲುವ ನಿರೀಕ್ಷೆ ಇರುತ್ತದೆ.
ಸರ್ಕಾರ ಮಾಡಲಾಗದೆ ಹೋದ ಕರ್ತವ್ಯವನ್ನು ಸಿಬಿಐ ಮಾಡಲಿ. ಕಾನೂನು ಪ್ರಬಲ ವ್ಯಕ್ತಿಗಳನ್ನು, ತಮ್ಮನ್ನು ಏನೂ ಮಾಡಲಾಗುವುದಿಲ್ಲ ಎಂದು ಭಾವಿಸುವುವರನ್ನು ಬೆನ್ನಟ್ಟಿ ಅಂತಿಮ ನ್ಯಾಯ ದೊರಕಿಸಲಿ.
Comments
Post a Comment