ಗೋಮಾತೆ ಹೆಸರಿನ ಬಿಜೆಪಿ ರಾಜಕೀಯ: ಆಗ ಒಂದು ಮಾತು, ಇಂದು ಇನ್ನೊಂದು ಮಾತೇ?

 ಪ್ರಚಲಿತ * ಬಿವಿಸೀ

ರಾಜಕೀಯದಲ್ಲಿ ಭಿನ್ನಾಭಿಪ್ರಾಯಗಳು ಸಹಜ. ನೀತಿಗಳು ಬದಲಾಗಬಹುದು. ಪರಿಸ್ಥಿತಿಗೆ ಅನುಗುಣವಾಗಿ ಸರ್ಕಾರಗಳು ತಮ್ಮ ನಿಲುವುಗಳನ್ನು ಪರಿಷ್ಕರಿಸಬಹುದು. ಆದರೆ ಜನರಿಗೆ ನೀಡಿದ ಭರವಸೆ, ಚುನಾವಣೆ ವೇಳೆ ಮಾಡಿದ ಆರೋಪ ಮತ್ತು ಅಧಿಕಾರಕ್ಕೆ ಬಂದ ನಂತರದ ನಡೆ ಇವುಗಳ ನಡುವೆ ತಾಳಮೇಳ ಇಲ್ಲದಿದ್ದರೆ, ಅದನ್ನು ಪ್ರಶ್ನಿಸುವ ಹಕ್ಕು ಪ್ರಜಾಪ್ರಭುತ್ವದಲ್ಲಿ ಜನರಿಗಿದೆ. ಗೋಮಾಂಸ ರಫ್ತಿನ ವಿಚಾರದಲ್ಲಿ ಬಿಜೆಪಿಯ ಇಂದಿನ ಮತ್ತು ಹಿಂದಿನ ನಿಲುವುಗಳು ಇಂತಹ ಪ್ರಶ್ನೆಯನ್ನೇ ಎತ್ತಿವೆ.

2013-14ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಆಗಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು, ಭಾರತ ವಿಶ್ವದ ಅತಿದೊಡ್ಡ ಗೋಮಾಂಸ ರಫ್ತುದಾರ ರಾಷ್ಟ್ರವಾಗಿರುವುದನ್ನು ಯುಪಿಎ ಸರ್ಕಾರದ ವೈಫಲ್ಯದ ಮತ್ತು ದೇಶದ್ರೋಹಿ ನೀತಿಯ ಸಂಕೇತವಾಗಿ ಬಿಂಬಿಸಿದ್ದರು. ಗೋಮಾತೆಯ ರಕ್ಷಣೆಯ ಹೆಸರಿನಲ್ಲಿ ದೇಶದಾದ್ಯಂತ ಭಾವನಾತ್ಮಕ ವಾತಾವರಣ ನಿರ್ಮಿಸಲಾಗಿತ್ತು. ಗೋವನ್ನು ಭಾರತೀಯ ಸಂಸ್ಕøತಿಯ ಪ್ರತೀಕವಾಗಿ ಪ್ರತಿಪಾದಿಸುತ್ತಾ, ಗೋಮಾಂಸ ರಫ್ತನ್ನು ರಾಷ್ಟ್ರೀಯ ಮೌಲ್ಯಗಳಿಗೆ ವಿರುದ್ಧವಾದ ಸಂಗತಿಯೆಂದು ಬಿಂಬಿಸಲಾಗಿತ್ತು. ಈ ವಿಚಾರವೇ ಚುನಾವಣಾ ಪ್ರಚಾರದ ಪ್ರಮುಖ ರಾಜಕೀಯ ಅಸ್ತ್ರಗಳಲ್ಲಿ ಒಂದಾಗಿತ್ತು.

ಆದರೆ 2026ರಲ್ಲಿ ಚಿತ್ರಣ ಬದಲಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೇ ಭಾರತ ಇನ್ನೂ ವಿಶ್ವದ ಅತಿದೊಡ್ಡ ಗೋಮಾಂಸ ರಫ್ತುದಾರ ರಾಷ್ಟ್ರಗಳಲ್ಲಿ ಒಂದಾಗಿದೆ ಎಂದು ಹೇಳಿರುವುದು ಸಹಜವಾಗಿಯೇ ಹೊಸ ಚರ್ಚೆಗೆ ಕಾರಣವಾಗಿದೆ. ಇದೇ ವಿಚಾರವನ್ನು ಒಮ್ಮೆ ದೇಶದ ಗೌರವದ ಪ್ರಶ್ನೆಯನ್ನಾಗಿ ಮಾಡಿದ್ದವರು, ಇಂದು ಅದೇ ಸ್ಥಿತಿಯನ್ನು ಸಹಜ ಸಂಗತಿಯಂತೆ ಉಲ್ಲೇಖಿಸುತ್ತಿರುವುದು ಏಕೆ ಎಂಬ ಪ್ರಶ್ನೆಯನ್ನು ವಿರೋಧ ಪಕ್ಷಗಳು ಮಾತ್ರವಲ್ಲ, ಸಾಮಾನ್ಯ ನಾಗರಿಕರೂ ಕೇಳುತ್ತಿದ್ದಾರೆ.

ವಿವಾದದ ಮೂಲ ಅಂಶ ಅಂಕಿಅಂಶಗಳಲ್ಲ, ರಾಜಕೀಯದ ಸ್ಥಿರತೆಯಲ್ಲಿದೆ. ಪ್ರತಿಪಕ್ಷದಲ್ಲಿದ್ದಾಗ ಇದೇ ವಿಚಾರವನ್ನು ರಾಷ್ಟ್ರೀಯ ಸಂಸ್ಕೃತಿ, ಧಾರ್ಮಿಕ ಭಾವನೆ ಮತ್ತು ಗೋಸಂರಕ್ಷಣೆಯ ಪ್ರಶ್ನೆಯಾಗಿ ಬಿಂಬಿಸಿದ ಬಿಜೆಪಿ, ಅಧಿಕಾರದಲ್ಲಿರುವಾಗ ಅದೇ ವಿಷಯವನ್ನು ವಿಭಿನ್ನ ನೆಲೆಯಲ್ಲಿ ವಿವರಿಸುತ್ತಿರುವುದು ಟೀಕೆಗೆ ಕಾರಣವಾಗಿದೆ. ಒಂದು ವಿಷಯವನ್ನು ಸಂದರ್ಭಕ್ಕೆ ತಕ್ಕಂತೆ ಬೇರೆ ಬೇರೆ ರೀತಿಯಲ್ಲಿ ಮಂಡಿಸುವುದು ರಾಜಕೀಯ ತಂತ್ರವಾಗಿರಬಹುದು. ಆದರೆ ಜನರು ಕೇಳುವುದು ಒಂದೇ ಪ್ರಶ್ನೆ - ಅಂದು ತಪ್ಪು ಎಂದು ಹೇಳಿದ್ದು ಇಂದು ಹೇಗೆ ಸರಿ ಆಯಿತು? ಇದೇ ಪ್ರಶ್ನೆಗೆ ಸ್ಪಷ್ಟ ಮತ್ತು ವಿಶ್ವಾಸಾರ್ಹ ಉತ್ತರ ನೀಡಬೇಕಾದ ಹೊಣೆ ಆಡಳಿತ ಪಕ್ಷದ ಮೇಲಿದೆ.

ಪ್ರಜಾಪ್ರಭುತ್ವದಲ್ಲಿ ಯಾವುದೇ ಪಕ್ಷ ತನ್ನ ನಿಲುವು ಬದಲಿಸಬಹುದು. ಆದರೆ ಆ ಬದಲಾವಣೆಗೆ ಕಾರಣಗಳನ್ನು ಜನರ ಮುಂದೆ ಪ್ರಾಮಾಣಿಕವಾಗಿ ವಿವರಿಸಬೇಕು. ಅಧಿಕಾರದಲ್ಲಿದ್ದಾಗ ಒಂದು ಭಾಷೆ, ವಿರೋಧ ಪಕ್ಷದಲ್ಲಿದ್ದಾಗ ಇನ್ನೊಂದು ಭಾಷೆ ಮಾತನಾಡುವುದು ರಾಜಕೀಯ ಅವಕಾಶವಾದಿತನದ ಲಕ್ಷಣ ಎಂಬ ಟೀಕೆ ಬಂದರೆ ಅದನ್ನು ತಳ್ಳಿಹಾಕುವುದು ಸುಲಭವಲ್ಲ.

ಬಿಜೆಪಿ ತನ್ನನ್ನು ತಾನು ಮೌಲ್ಯಾಧಾರಿತ ರಾಜಕೀಯದ ಪ್ರತಿನಿಧಿಯೆಂದು ಹೇಳಿಕೊಳ್ಳುತ್ತದೆ. ಹಾಗಿದ್ದರೆ ಅದರ ಮಾತು ಮತ್ತು ಕೃತ್ಯಗಳ ನಡುವೆ ಹೊಂದಾಣಿಕೆ ಇರಬೇಕಲ್ಲವೇ? ಚುನಾವಣೆ ಗೆಲ್ಲುವಾಗ ಜನರ ಭಾವನೆಗಳನ್ನು ಕೆರಳಿಸಲು ಬಳಸಿದ ವಿಷಯವನ್ನೇ ಅಧಿಕಾರಕ್ಕೆ ಬಂದ ನಂತರ ಬೇರೆ ದೃಷ್ಟಿಯಿಂದ ಸಮರ್ಥಿಸಿಕೊಳ್ಳುವುದು ರಾಜಕೀಯ ವಿಶ್ವಾಸಾರ್ಹತೆಗೆ ಧಕ್ಕೆ ತರುತ್ತದೆ. ಜನರು ಕೇವಲ ಘೋಷಣೆಗಳನ್ನು ನೆನಪಿಟ್ಟುಕೊಳ್ಳುವುದಿಲ್ಲ; ಆ ಘೋಷಣೆಗಳಿಗೆ ಅಧಿಕಾರದಲ್ಲಿ ಇದ್ದಾಗ ಎಷ್ಟು ನಿಷ್ಠೆ ತೋರಿಸಲಾಯಿತು ಎಂಬುದನ್ನೂ ಅಳೆಯುತ್ತಾರೆ. ಗೋಮಾಂಸ ರಫ್ತಿನ ವಿವಾದವು ಅಂತಿಮವಾಗಿ ಎತ್ತುತ್ತಿರುವ ಪ್ರಶ್ನೆ ಒಂದೇ - ಬದಲಾದದ್ದು ದೇಶದ ನೀತಿಯೇ, ಅಥವಾ ಬಿಜೆಪಿಯ ರಾಜಕೀಯ ಅನುಕೂಲವೇ?

Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

ಧರ್ಮಸ್ಥಳದ ಪ್ರಕರಣಗಳಲ್ಲಿ ಸತ್ಯ ಸಾಯುವುದಿಲ್ಲ

WHEN COMMUNAL POLITICS POISONS TRADITION: A WARNING FROM UDUPI