ಆರೆಸ್ಸೆಸ್ `ದ್ವಿಮುಖ ನೀತಿ': ಜನರ ಕಣ್ಣಿಗೆ ಮಣ್ಣೆರಚುವ ಕಸರತ್ತು
ಖುಲ್ಲಂಖುಲ್ಲಾ * ಬಿವಿಸೀ
ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರೆಸ್ಸೆಸ್) ತನ್ನ ಸ್ಥಾಪನೆಯ ದಿನದಿಂದಲೂ ಅನುಸರಿಸಿಕೊಂಡು ಬಂದಿರುವ ರಾಜಕೀಯ ತಂತ್ರಗಾರಿಕೆಯೆಂದರೆ ಅದು `ದ್ವಿಮುಖ ನೀತಿ'. ಒಬ್ಬ ನಾಯಕ ಒಂದು ರೀತಿಯಲ್ಲಿ ಮಾತನಾಡಿದರೆ, ಮತ್ತೊಬ್ಬ ನಾಯಕ ಸಂಪೂರ್ಣ ಬೇರೆಯೇ ಆದ ಧ್ವನಿ ಮತ್ತು ನೀತಿ ವ್ಯಕ್ತಪಡಿಸುವ ಹೇಳಿಕೆ ನೀಡುವ ಮೂಲಕ ಸಾರ್ವಜನಿಕರಲ್ಲಿ ಗೊಂದಲ ಮೂಡಿಸುವುದು ಸಂಘದ ಹಳೆಯ ತಂತ್ರ. ದೇಶದ ಜನರ ಕಣ್ಣಿಗೆ ಮಣ್ಣೆರಚಿ, ತನ್ನ ನೈಜ ನಿಲುವನ್ನು ಮುಚ್ಚಿಡುವ ಈ ತಂತ್ರಗಾರಿಕೆ ಈಗ ಜೆನ್ ಝಿ ಯುವಜನತೆಯ ಪ್ರತಿಭಟನೆ ಮತ್ತು ಪಾಕಿಸ್ತಾನದೊಂದಿಗಿನ ರಾಜತಾಂತ್ರಿಕ ವಿಚಾರಗಳಲ್ಲಿ ಮತ್ತೊಮ್ಮೆ ಬಹಿರಂಗಗೊಂಡಿದೆ.
ಇತ್ತೀಚೆಗೆ ದೆಹಲಿಯ ಜಂತರ್ ಮಂತರ್‍ನಲ್ಲಿ ತಮ್ಮ ಉದ್ಯೋಗ ಮತ್ತು ಭವಿಷ್ಯಕ್ಕಾಗಿ ಧರಣಿ ನಡೆಸಿದ ಯುವಕರ ಮೇಲೆ ಕೇಂದ್ರ ಸರ್ಕಾರದ ಪೆÇಲೀಸರು ನಡೆಸಿದ ಕ್ರೂರ ಲಾಠಿ ಪ್ರಹಾರ ಮತ್ತು ದೌರ್ಜನ್ಯ ಇಡೀ ದೇಶವೇ ಬೆಚ್ಚಿಬೀಳುವಂತೆ ಮಾಡಿತ್ತು. ಈ ಪ್ರತಿಭಟನೆಯಲ್ಲಿ ಪಾಲ್ಗೊಂಡ ಯುವಕರನ್ನು ಸಂಘದ ಹಿರಿಯ ನಾಯಕ ಇಂದ್ರೇಶ್ ಕುಮಾರ್ `ದೇಶದ್ರೋಹಿಗಳು' ಎಂದು ಸಾರಿದ್ದರು. ಆದರೆ, ಅದರ ಕಾವು ಆರುವ ಮುನ್ನವೇ ಜಾಡು ಬದಲಾಯಿಸಿದ ಆರೆಸ್ಸೆಸ್ ಸರಸಂಘಚಾಲಕ ಮೋಹನ್ ಭಾಗವತ್, ಯುವಜನೋತ್ಸವ ಕಾರ್ಯಕ್ರಮವೊಂದರಲ್ಲಿ ಮಾತನಾಡಿ ``ಜೆನ್ ಝಿ ಯುವಕರ ದೇಶಭಕ್ತಿಯನ್ನು ಪ್ರಶ್ನಿಸಬಾರದು, ಅವರೊಂದಿಗೆ ಸಂವಾದ ನಡೆಸಬೇಕು'' ಎಂದು ಮೃದು ಧೋರಣೆ ತಳೆದಿದ್ದಾರೆ. ಭಾಗವತ್ ಅವರ ಈ ಮಾತಿಗೆ ನಿಜವಾದ ಬದ್ಧತೆಯಿದ್ದರೆ, ತಮ್ಮದೇ ಸರ್ಕಾರ ಯುವಕರ ಮೇಲೆ ನಡೆಸಿದ ಪೈಶಾಚಿಕ ದೌರ್ಜನ್ಯಕ್ಕಾಗಿ ಮತ್ತು ಆಡಳಿತಾರೂಢ ನಾಯಕರು ಬಳಸಿದ ತುಚ್ಛ ಪದಗಳಿಗಾಗಿ ದೇಶದ ಯುವಜನತೆಯ ಕ್ಷಮೆಯಾಚಿಸಬೇಕಿತ್ತು. ಇಂದಿಗೂ ಆರೆಸ್ಸೆಸ್ ನಡೆಸುವ ಪತ್ರಿಕೆಗಳು ಹೋರಾಟಗಾರರನ್ನು ದ್ರೋಹಿಗಳು ಎಂದೇ ಚಿತ್ರಿಸುತ್ತಿವೆ. ಪತ್ರಿಕೆಯ ವಕ್ರಬುದ್ಧಿಯ ಅಂಕಣಗಾರರು ಜೆನ್ ಝೀ ಯುವಕ-ಯುವತಿಯರನ್ನು ದಿಕ್ಕೆಟ್ಟವರು ಎಂದೇ ಬಣ್ಣಿಸುತ್ತಾರೆ. ಅಧಿಕಾರದ ಬಲದಿಂದ ಯುವಕರನ್ನು ಬೀದಿಯಲ್ಲಿ ಹೊಸಕಿ ಹಾಕಿ, ವೇದಿಕೆಗಳಲ್ಲಿ ಅನುಕಂಪದ ನಾಟಕವಾಡುವುದು ಸಂಘದ ದ್ವಿಮುಖ ಧೋರಣೆಯಲ್ಲದೆ ಮತ್ತೇನು?
ಇನ್ನು ವಿದೇಶಾಂಗ ನೀತಿಯ ವಿಷಯದಲ್ಲೂ ಸಂಘ ಪರಿವಾರ ಇದೇ ತರಹದ ನಾಟಕೀಯ ಸನ್ನಿವೇಶ ಸೃಷ್ಟಿಸಿದೆ. ಆರೆಸ್ಸೆಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರು ``ಪಾಕಿಸ್ತಾನದೊಂದಿಗೆ ಮಾತುಕತೆಯ ಬಾಗಿಲು ಮುಚ್ಚಬಾರದು'' ಎಂದು ಶಾಂತಿ ಮಂತ್ರ ಪಠಿಸಿದರು. ಆದರೆ, ``ಗಡಿಯಾಚೆಯಿಂದ ಹಿಂಸೆ ಮತ್ತು ಮಾತುಕತೆ ಜೊತೆಯಾಗಿ ಹೋಗಲು ಸಾಧ್ಯವಿಲ್ಲ'' ಎಂಬ ಕಠಿಣ ನಿಲುವನ್ನು ಹೊಂದಿರುವ ನರೇಂದ್ರ ಮೋದಿ ್ರ ಸರ್ಕಾರ ಈ ಪ್ರಸ್ತಾಪವನ್ನು ಕಸದ ಬುಟ್ಟಿಗೆ ಎಸೆದಿದೆ. ಮಿಲಿಟೆಂಟ್ ಹಿಂದುತ್ವದ ಪ್ರತಿಪಾದಕಆಗಿರುವ ಸಂಘ ಪರಿವಾರ, ಒಂದೆಡೆ ಸಾರ್ವಜನಿಕವಾಗಿ ಸಾಫ್ಟ್ ಇಮೇಜ್ ತರಲು ಯತ್ನಿಸುತ್ತಾ, ಇನ್ನೊಂದೆಡೆ ತನ್ನದೇ ಸರ್ಕಾರದ ಮೂಲಕ ಕಠಿಣ ಧೋರಣೆ ಮುಂದುವರಿಸುವ ಮೂಲಕ ಜನಸಾಮಾನ್ಯರನ್ನು ದಾರಿ ತಪ್ಪಿಸುತ್ತಿದೆ.
ಇತಿಹಾಸದುದ್ದಕ್ಕೂ ಸಂಘವು ಇಂತಹವೇ ಹಲವು ವೇಷ ಮರೆಸುವ ತಂತ್ರಗಳನ್ನು ಪ್ರದರ್ಶಿಸಿದೆ. ಜನರಿಗೆ ಗೊಂದಲ ಮೂಡಿಸಿ, ತನಗೆ ಬೇಕಾದ ರಾಜಕೀಯ ಲಾಭವನ್ನು ಹಿಂಬಾಗಿಲಿನಿಂದ ಪಡೆದುಕೊಳ್ಳುವ ಈ ಆರ್ವೆಲಿಯನ್ ಮಾದರಿಯ ದ್ವಿಮುಖ ನೀತಿ(ಡಬ್ಬಲ್ ಸ್ಪೀಕ್)ಯನ್ನು ದೇಶದ ಯುವಜನತೆ ಮತ್ತು ಪ್ರಜ್ಞಾವಂತ ಸಮಾಜ ಈಗ ಸಂಪೂರ್ಣವಾಗಿ ಅರ್ಥಮಾಡಿಕೊಂಡಿದೆ. ಇಂತಹ ಬೂಟಾಟಿಕೆಯ ಮಾತುಗಳಿಂದ ಜನರ ಕಣ್ಣಿಗೆ ಮಣ್ಣೆರಚಲು ಇನ್ನು ಸಾಧ್ಯವಿಲ್ಲ.
Comments
Post a Comment