ಮಾಧ್ಯಮ ಸಾಮ್ರಾಜ್ಯದ ಭವಿಷ್ಯ: ವಿಶ್ವಾಸಾರ್ಹತೆಯ ಬಿಕ್ಕಟ್ಟು
* ಬಿವಿಸೀ
ಕಳೆದ ಒಂದು ದಶಕದಲ್ಲಿ ವಿದ್ಯುನ್ಮಾನ ದೃಶ್ಯ ಮಾಧ್ಯಮಗಳು ಮಾತ್ರವಲ್ಲದೆ, ಧನಿಕರ ಹಾಗೂ ಬಂಡವಾಳಶಾಹಿಗಳ ಒಡೆತನದಲ್ಲಿರುವ ಪತ್ರಿಕಾರಂಗವೂ ತನ್ನ ನಿಷ್ಪಕ್ಷಪಾತ ಧೋರಣೆಯನ್ನು ತೊರೆದು ಆಡಳಿತಾರೂಢ ಅಧಿಕಾರ ವರ್ಗದ ಪರವಾಗಿ ಕೆಲಸ ಮಾಡುತ್ತಿದೆ ಎಂಬ ಗಂಭೀರ ಆರೋಪಗಳನ್ನು ಎದುರಿಸುತ್ತಿದೆ. ಸಾರ್ವಜನಿಕ ಚರ್ಚೆಯಲ್ಲಿ ಇವುಗಳನ್ನು ಗೋದಿ ಮೀಡಿಯಾ ಎಂದು ಕರೆಯಲಾಗುತ್ತಿದ್ದು, ಇತ್ತೀಚಿನ ನವಪೀಳಿಗೆಯ ಯುವಜನರ ದಂಗೆ ಹಾಗೂ ತೀವ್ರ ಪ್ರತಿಭಟನೆಗಳ ಸಮಯದಲ್ಲಿ ಈ ಮಾಧ್ಯಮ ಸಂಸ್ಥೆಗಳ ನೈಜ ಮುಖ ಮತ್ತೊಮ್ಮೆ ಜಗಜ್ಜಾಹೀರಾಗಿದೆ. ಯುವಜನರು ಬೀದಿಗಿಳಿದು ನಡೆಸಿದ ಚಳವಳಿಗಳನ್ನು ಮತ್ತು ಸತ್ಯಸಂಗತಿಗಳನ್ನು ಮರೆಮಾಚಿ, ಸುಳ್ಳು ವರದಿಗಳನ್ನು ಪ್ರಕಟಿಸಿದ ಮಾಧ್ಯಮಗಳ ವೈಖರಿಯು ಯುವ ಪೀಳಿಗೆಯ ತೀವ್ರ ಆಕ್ರೋಶಕ್ಕೆ ಕಾರಣವಾಯಿತು. ಈ ಬೆಳವಣಿಗೆಯು 'ಈ ರೀತಿಯ ಮಾಧ್ಯಮಗಳು ಭವಿಷ್ಯದಲ್ಲಿ ಉಳಿಯಲು ಸಾಧ್ಯವೇ?' ಎಂಬ ದೊಡ್ಡ ಪ್ರಶ್ನೆಯನ್ನು ಸಮಾಜದ ಮುಂದೆ ತಂದುಕೊಟ್ಟಿದೆ.
ಕಳೆದ ದಶಕದಿಂದ ಸಾಂಪ್ರದಾಯಿಕ ಮುದ್ರಣ ಮತ್ತು ದೃಶ್ಯ ಮಾಧ್ಯಮಗಳು ಸಾರ್ವಜನಿಕರ ಹಿತಾಸಕ್ತಿಯನ್ನು ಬಲಿಕೊಟ್ಟು, ಕೇವಲ ಬಂಡವಾಳಶಾಹಿಗಳ ಹಿತಾಸಕ್ತಿ ಹಾಗೂ ರಾಜಕೀಯ ಪ್ರಚಾರದ ಸಾಧನಗಳಾಗಿ ಮಾರ್ಪಟ್ಟಿವೆ. ತಾವು ಬಿತ್ತರಿಸಿದ್ದೇ ಸುದ್ದಿ, ತಾವು ತೋರಿಸಿದ್ದೇ ಅಂತಿಮ ಸತ್ಯ ಎಂಬ ಅಹಂಕಾರ ಮತ್ತು ಭ್ರಮೆಯಲ್ಲಿ ಈ ಮಾಧ್ಯಮಗಳು ಮೆರೆಯುತ್ತಿದ್ದ ಕಾಲ ಈಗ ಸಂಪೂರ್ಣವಾಗಿ ಮುಗಿದುಹೋಗಿದೆ. ನಿರುದ್ಯೋಗ, ಬೆಲೆ ಏರಿಕೆ, ಶಿಕ್ಷಣ ಸಂಸ್ಥೆಗಳ ಬಿಕ್ಕಟ್ಟು ಮತ್ತು ಸಾಂವಿಧಾನಿಕ ಮೌಲ್ಯಗಳ ಕುಸಿತದಂತಹ ನೈಜ ಸಮಸ್ಯೆಗಳನ್ನು ಚರ್ಚಿಸುವ ಬದಲು, ಸಮಾಜದಲ್ಲಿ ದ್ವೇಷವನ್ನು ಬಿತ್ತುವ ಹಾಗೂ ಭಾವನಾತ್ಮಕ ವಿಷಯಗಳನ್ನು ವೈಭವೀಕರಿಸುವ ಕೆಲಸವನ್ನು ಇವು ನಿರಂತರವಾಗಿ ಮಾಡಿದವು. ಆದರೆ ಇಂದಿನ ಸತ್ಯದ ಹಸಿವುಳ್ಳ ಜನರಿಗೆ ಮತ್ತು ನವಪೀಳಿಗೆಗೆ ಮಾಹಿತಿ ಪಡೆಯಲು ಪರ್ಯಾಯ ಮಾರ್ಗಗಳು ತೆರೆದುಕೊಂಡಿವೆ.
ಇಂದಿನ ಕಾಲದಲ್ಲಿ ಸಾಮಾಜಿಕ ಜಾಲತಾಣಗಳು ಮಾಹಿತಿ ಹಸಿವಿನಿಂದ ಕಾಯುತ್ತಿರುವ ಸಾರ್ವಜನಿಕರ ಕೈಯಲ್ಲಿ ಅತ್ಯಂತ ಶಕ್ತಿಶಾಲಿ ಹಾಗೂ ಪರಿಣಾಮಕಾರಿ ಅಸ್ತ್ರವಾಗಿ ರೂಪುಗೊಂಡಿವೆ. ಪ್ರತಿಯೊಬ್ಬರ ಕೈಯಲ್ಲೂ ಇರುವ ತಂತ್ರಜ್ಞಾನ ಮತ್ತು ಅಂತರಜಾಲ ವೇದಿಕೆಗಳು ನೈಜ ಘಟನೆಗಳನ್ನು ಕ್ಷಣಾರ್ಧದಲ್ಲಿ ಜಗತ್ತಿಗೆ ತಲುಪಿಸುತ್ತಿವೆ. ಹೀಗಾಗಿ ಮುಖ್ಯವಾಹಿನಿ ಮಾಧ್ಯಮಗಳ ಸುಳ್ಳು ಪ್ರಚಾರಗಳು ಮತ್ತು ಮುಚ್ಚಿಡುವ ಯತ್ನಗಳು ತಕ್ಷಣದಲ್ಲೇ ಬಯಲಾಗುತ್ತಿವೆ. ಯುವ ಪೀಳಿಗೆ ಹಾಗೂ ಜಾಗೃತ ನಾಗರಿಕರು ಇಂತಹ ಪಟ್ಟಭದ್ರ ಹಿತಾಸಕ್ತಿಯ ಮುದ್ರಣ ಪತ್ರಿಕೆಗಳನ್ನು ಮತ್ತು ವಾಹಿನಿಗಳನ್ನು ಸಂಪೂರ್ಣವಾಗಿ ಬಹಿಷ್ಕರಿಸುತ್ತಿದ್ದು, ಸ್ವತಂತ್ರ ಪತ್ರಕರ್ತರು, ಸಾಮಾಜಿಕ ಮಾಧ್ಯಮಗಳ ನೇರ ವರದಿಗಳು ಮತ್ತು ಪರ್ಯಾಯ ಮಾಹಿತಿ ವೇದಿಕೆಗಳತ್ತ ಧಾವಿಸುತ್ತಿದ್ದಾರೆ. ಜಿಲ್ಲೆಗಳಲ್ಲಿ ಜನರಿಗೆ ಹತ್ತಿರವಾಗಿ ಕಾರ್ಯಾಚರಿಸುವ ಸ್ಥಳೀಯ ಪತ್ರಿಕೆಗಳೂ ಇನ್ನೂ ವಿಶ್ವಾಸಾರ್ಹತೆ ಉಳಿಸಿಕೊಂಡಿವೆ.
ಮಾಧ್ಯಮಗಳು ಹಣಕಾಸಿನ ಬಲ, ಬಂಡವಾಳಶಾಹಿಗಳ ಬೆಂಬಲ ಮತ್ತು ಅಧಿಕಾರ ವರ್ಗದ ನೆರಳಿನಲ್ಲಿ ತತ್ಕಾಲಕ್ಕೆ ಆರ್ಥಿಕವಾಗಿ ಅಥವಾ ಸಾಂಸ್ಥಿಕವಾಗಿ ಉಳಿದುಕೊಳ್ಳಲು ಸಾಧ್ಯವಾಗಬಹುದು. ಬೃಹತ್ ಪ್ರಚಾರ ಫಲಕಗಳು, ಜಾಹೀರಾತುಗಳು ಮತ್ತು ಉದ್ಯಮಿಗಳ ಹೂಡಿಕೆಗಳು ಇವುಗಳ ಜೀವನಾಡಿಯಾಗಿ ಕಾರ್ಯನಿರ್ವಹಿಸುತ್ತಿರಬಹುದು. ಆದರೆ ಮಾಧ್ಯಮ ರಂಗದ ಅತ್ಯಂತ ಮೂಲಭೂತ ಆಸ್ತಿಯಾದ 'ವಿಶ್ವಾಸಾರ್ಹತೆ'ಯನ್ನು ಇವು ಸಂಪೂರ್ಣವಾಗಿ ಕಳೆದುಕೊಂಡಿವೆ. ಪರ್ಯಾಯ ಮಾಹಿತಿ ಮಾರ್ಗಗಳು ಬಲಗೊಳ್ಳುತ್ತಿರುವುದು ಸಾಂಪ್ರದಾಯಿಕ ಮಾಧ್ಯಮ ಸಾಮ್ರಾಜ್ಯದ ಅಡಿಪಾಯವನ್ನು ಸಂಪೂರ್ಣವಾಗಿ ಅಲುಗಾಡಿಸಿದೆ.
ದೀರ್ಘಾವಧಿಯ ದೃಷ್ಟಿಯಿಂದ ನೋಡಿದರೆ, ವಿಶ್ವಾಸಾರ್ಹತೆಯನ್ನು ಕಳೆದುಕೊಂಡ ಯಾವುದೇ ಮಾಧ್ಯಮವು ಸಾರ್ವಜನಿಕ ವಲಯದಲ್ಲಿ ಶಾಶ್ವತವಾಗಿ ಪ್ರಭಾವಶಾಲಿಯಾಗಿ ಉಳಿಯಲು ಸಾಧ್ಯವಿಲ್ಲ. ಜಾಹೀರಾತುದಾರರು ಕೂಡ ಯುವ ಗ್ರಾಹಕರ ಅಭಿರುಚಿ ಮತ್ತು ಅವರು ವೀಕ್ಷಿಸುವ ಪರ್ಯಾಯ ವೇದಿಕೆಗಳನ್ನು ಗಮನಿಸಿ ತಮ್ಮ ನಿರ್ಧಾರಗಳನ್ನು ಬದಲಾಯಿಸಬೇಕಾಗುತ್ತದೆ. ಬಂಡವಾಳಶಾಹಿ ಮಾಧ್ಯಮಗಳು ತಮ್ಮ ತಪ್ಪುಗಳನ್ನು ತಿದ್ದುಕೊಂಡು ಪತ್ರಿಕೋದ್ಯಮದ ಮೂಲ ಧರ್ಮಕ್ಕೆ ಹಿಂತಿರುಗದಿದ್ದರೆ, ಮುಂಬರುವ ದಿನಗಳಲ್ಲಿ ನೈತಿಕವಾಗಿ ಮಾತ್ರವಲ್ಲದೆ ಸಾಂಸ್ಥಿಕವಾಗಿಯೂ ನಶಿಸಿಹೋಗುವುದು ಅನಿವಾರ್ಯ. ಸತ್ಯ ಮತ್ತು ಜನಪರ ನಿಲುವು ಮಾತ್ರ ಮಾಧ್ಯಮಗಳ ಜೀವಂತಿಕೆಯನ್ನು ಕಾಯ್ದುಕೊಳ್ಳಬಲ್ಲದು.
Comments
Post a Comment