`ಭಾರತದಲ್ಲಿ ಪತ್ರಕರ್ತರು ಹಿಂದೆಂದಿಗಿಂತಲೂ ಹೆಚ್ಚು ಪ್ರಮಾಣದಲ್ಲಿ ಮಾರಾಟವಾಗುತ್ತಿದ್ದಾರೆ'

 ಹಿರಿಯ ಪತ್ರಕರ್ತೆ ಮೃಣಾಲ್ ಪಾಂಡೆ ಉವಾಚ

* ಬಿವಿಸೀ

ಭಾರತೀಯ ಪತ್ರಿಕೋದ್ಯಮ ಇಂದು ಎದುರಿಸುತ್ತಿರುವ ದೊಡ್ಡ ಸವಾಲುಗಳಲ್ಲಿ ಒಂದು ಅದರ ವಾಣಿಜ್ಯೀಕರಣ. ``ಭಾರತದಲ್ಲಿ ಪತ್ರಕರ್ತರು ಹಿಂದೆಂದಿಗಿಂತಲೂ ಹೆಚ್ಚು ಪ್ರಮಾಣದಲ್ಲಿ ಮಾರಾಟವಾಗುತ್ತಿದ್ದಾರೆ'' ಎಂಬ ಪ್ರಸಾರ ಭಾರತಿ ಮಾಜಿ ಅಧ್ಯಕ್ಷೆ ಮತ್ತು ಹಿರಿಯ ಹಿಂದೀ ಪತ್ರಕರ್ತೆ ಮೃಣಾಲ್ ಪಾಂಡೆ ಅವರ ಹೇಳಿಕೆ ಕೇವಲ ಭಾವನಾತ್ಮಕ ಪ್ರತಿಕ್ರಿಯೆಯಲ್ಲ; ಅದು ದೇಶದ ಮಾಧ್ಯಮ ವ್ಯವಸ್ಥೆಯ ಬಗ್ಗೆ ವ್ಯಕ್ತವಾಗುತ್ತಿರುವ ಆತಂಕದ ಪ್ರತಿಬಿಂಬವಾಗಿದೆ. ಈ ಹೇಳಿಕೆಯು ವೈಯಕ್ತಿಕ ಪತ್ರಕರ್ತರನ್ನು ಗುರಿಯಾಗಿಸದೆ, ಮಾಧ್ಯಮದ ಸ್ವಾತಂತ್ರ್ಯವನ್ನು ಮಾರುಕಟ್ಟೆ, ರಾಜಕೀಯ ಮತ್ತು ಕಾಪೆರ್Çರೇಟ್ ಹಿತಾಸಕ್ತಿಗಳು ಹೇಗೆ ಆಕ್ರಮಿಸುತ್ತಿವೆ ಎಂಬ ವಿಶಾಲ ಸಮಸ್ಯೆಯನ್ನು ಸೂಚಿಸುತ್ತದೆ.

ಪತ್ರಿಕೋದ್ಯಮದ ಮೂಲ ಉದ್ದೇಶ ವ್ಯವಸ್ಥೆಯಲ್ಲಿರುವ ಹುಳುಕುಗಳನ್ನು ಬಹಿರಂಗಗೊಳಿಸುವುದು, ಪ್ರಭುತ್ವವನ್ನು ಪ್ರಶ್ನಿಸುವುದು, ಜನರ ಧ್ವನಿಯಾಗುವುದು ಮತ್ತು ಸತ್ಯವನ್ನು ನಿರ್ಭೀತಿಯಿಂದ ಪ್ರಕಟಿಸುವುದು. ಆದರೆ ಇತ್ತೀಚಿನ ವರ್ಷಗಳಲ್ಲಿ ಈ ಆದರ್ಶಗಳು ಹಲವು ಕಡೆಗಳಲ್ಲಿ ದುರ್ಬಲವಾಗುತ್ತಿರುವ ಚಿತ್ರಣ ಕಾಣಿಸುತ್ತಿದೆ. ಕೆಲವು ಮಾಧ್ಯಮ ಸಂಸ್ಥೆಗಳು ಜಾಹೀರಾತುದಾರರ ಒತ್ತಡ, ರಾಜಕೀಯ ನಂಟುಗಳು ಮತ್ತು ಕಾಪೆರ್Çರೇಟ್ ಮಾಲೀಕತ್ವದ ಪರಿಣಾಮ ಸಂಪಾದಕೀಯ ಸ್ವಾತಂತ್ರ್ಯವನ್ನು ಕಳೆದುಕೊಳ್ಳುತ್ತಿವೆ ಎಂಬ ಟೀಕೆಗಳು ನಿರಂತರವಾಗಿ ಕೇಳಿಬರುತ್ತಿವೆ.

`ಪೇಯ್ಡ್ ನ್ಯೂಸ್' ಎಂಬ ಅನಾರೋಗ್ಯಕರ ಪ್ರವೃತ್ತಿ, ರಾಜಕೀಯ ಮತ್ತು ಉದ್ಯಮಪತಿಗಳ (ಧರ್ಮೋದ್ಯಮಿಗಳೂ ಸೇರಿ) ಪ್ರಚಾರವನ್ನು ಸುದ್ದಿಯ ರೂಪದಲ್ಲಿ ಪ್ರಕಟಿಸುವುದು, ಸಾಮಾಜಿಕ ಮಾಧ್ಯಮದ ಮೂಲಕ ಹರಡುವ ತಪ್ಪು ಮಾಹಿತಿಯನ್ನು ಪರಿಶೀಲಿಸದೆ ಪ್ರಸಾರ ಮಾಡುವುದು ಮತ್ತು ನಿರ್ದಿಷ್ಟ ಹಿತಾಸಕ್ತಿಗಳಿಗೆ ಅನುಗುಣವಾಗಿ ಸುದ್ದಿಯ ಆದ್ಯತೆಯನ್ನು ಬದಲಾಯಿಸುವುದು ಪತ್ರಿಕೋದ್ಯಮದ ವಿಶ್ವಾಸಾರ್ಹತೆಗೆ ದೊಡ್ಡ ಹೊಡೆತ ನೀಡಿವೆ. ಕೆಲವೇ ಕೆಲವು ಪತ್ರಕರ್ತರ ವರ್ತನೆಯಿಂದ ಇಡೀ ವೃತ್ತಿಯ ಮೇಲೆಯೇ ಅನುಮಾನ ಮೂಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಆದಾಗ್ಯೂ, ಭಾರತದ ಪತ್ರಿಕೋದ್ಯಮದ ಇನ್ನೊಂದು ಮುಖವೂ ಇದೆ. ಅನೇಕ ಪತ್ರಕರ್ತರು ಜೀವದ ಹಂಗು ತೊರೆದು ಭ್ರಷ್ಟಾಚಾರ, ಪರಿಸರ ಹಾನಿ, ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಸಂಘಟಿತ ಅಪರಾಧಗಳ ಕುರಿತು ತನಿಖಾ ವರದಿಗಳನ್ನು ಪ್ರಕಟಿಸುತ್ತಿದ್ದಾರೆ. ಅನೇಕರು ಬೆದರಿಕೆ, ಮೊಕದ್ದಮೆ, ಬಂಧನ ಮತ್ತು ಆರ್ಥಿಕ ಒತ್ತಡಗಳನ್ನು ಎದುರಿಸುತ್ತಿದ್ದರೂ ವೃತ್ತಿ ನಿಷ್ಠೆಯನ್ನು ಕೈಬಿಟ್ಟಿಲ್ಲ. ಹೀಗಾಗಿ, ಇಡೀ ಪತ್ರಿಕೋದ್ಯಮವನ್ನೇ ಒಂದೇ ತಕ್ಕಡಿಯಲ್ಲಿ ಅಳೆಯುವುದು ನ್ಯಾಯಸಮ್ಮತವಾಗುವುದಿಲ್ಲ.

ಮೃಣಾಲ್ ಪಾಂಡೆ ಅವರ ಎಚ್ಚರಿಕೆ ಮಾಧ್ಯಮ ಕ್ಷೇತ್ರವು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅಗತ್ಯವನ್ನು ಒತ್ತಿ ಹೇಳುತ್ತದೆ. ಪತ್ರಕರ್ತರ ಸ್ವಾತಂತ್ರ್ಯ, ಮಾಧ್ಯಮ ಸಂಸ್ಥೆಗಳ ಸಂಪಾದಕೀಯ ಸ್ವಾಯತ್ತತೆ, ಮಾಲೀಕತ್ವದ ಪಾರದರ್ಶಕತೆ ಮತ್ತು ನೈತಿಕ ಮೌಲ್ಯಗಳ ಬದ್ಧತೆ ಬಲವಾಗದಿದ್ದರೆ, ಪ್ರಜಾಪ್ರಭುತ್ವದ ನಾಲ್ಕನೇ ಅಂಗವೆಂಬ ಮಾಧ್ಯಮದ ಸ್ಥಾನಮಾನವೇ ಪ್ರಶ್ನೆಗೆ ಒಳಗಾಗಬಹುದು. ಜನರ ವಿಶ್ವಾಸವೇ ಪತ್ರಿಕೋದ್ಯಮದ ನಿಜವಾದ ಬಂಡವಾಳ; ಅದನ್ನು ಕಳೆದುಕೊಂಡರೆ ಯಾವುದೇ ತಂತ್ರಜ್ಞಾನ ಅಥವಾ ಆರ್ಥಿಕ ಶಕ್ತಿಯೂ ಆ ನಷ್ಟವನ್ನು ತುಂಬಲು ಸಾಧ್ಯವಿಲ್ಲ.


Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

ಧರ್ಮಸ್ಥಳದ ಪ್ರಕರಣಗಳಲ್ಲಿ ಸತ್ಯ ಸಾಯುವುದಿಲ್ಲ

WHEN COMMUNAL POLITICS POISONS TRADITION: A WARNING FROM UDUPI