ಸಿದ್ದರಾಮಯ್ಯ ರಾಜೀನಾಮೆ: ಹೈಕಮಾಂಡ್ ಹುಕುಂ ಎದುರು ಮಣ್ಣಾದ 'ಅಹಿಂದ ಸುಲ್ತಾನ'ನ ಮುಖವಾಡ

 ನೇರಾನೇರ * ಬಿವಿಸೀ


ಮುಖ್ಯಮಂತ್ರಿ ಪೀಠದಿಂದ ಸಿದ್ದರಾಮಯ್ಯನವರು ಅನಿವಾರ್ಯವಾಗಿ ಕೆಳಗಿಳಿದಿರುವುದು, ಹೈಕಮಾಂಡ್‍ನ ದೆಹಲಿ ದರ್ಬಾರ್ ಎದುರು ಪ್ರಾದೇಶಿಕ ನಾಯಕರ ತಂತ್ರಗಾರಿಕೆಗಳು ಹೇಗೆ ಮಣ್ಣುಮುಕ್ಕುತ್ತವೆ ಎಂಬುದಕ್ಕೆ ಜ್ವಲಂತ ಸಾಕ್ಷಿಯಾಗಿದೆ. ಅಧಿಕಾರಾವಧಿಯ ಐದು ವರ್ಷಗಳಲ್ಲಿ ಡಿ ಕೆ ಶಿವಕುಮಾರ್ ಅವರೊಂದಿಗೆ ಅರ್ಧ ಅವಧಿಯನ್ನು ಹಂಚಿಕೊಳ್ಳಬೇಕೆಂಬ ಒಪ್ಪಂದ ಆರಂಭದಲ್ಲೇ ಸ್ಪಷ್ಟವಾಗಿದ್ದರೂ, ಸಿದ್ದರಾಮಯ್ಯನವರ ನಡೆ ಮಾತ್ರ ಅಧಿಕಾರಸ್ಥರ ಹಳೆಯ ಚಾಳಿಯನ್ನೇ ನೆನಪಿಸಿತು. ಅಧಿಕಾರದಲ್ಲಿರುವವರು ಅಷ್ಟು ಸುಲಭವಾಗಿ ಕುರ್ಚಿಯನ್ನು ಬಿಟ್ಟುಕೊಡುವುದಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಯಿತು. ಹೈಕಮಾಂಡ್ ಮಧ್ಯಪ್ರವೇಶಿಸದಿದ್ದರೆ ಸಿದ್ದರಾಮಯ್ಯನವರು ಯಾವುದೇ ಕಾರಣಕ್ಕೂ ಸಿಎಂ ಪೀಠದಿಂದ ಕದಲುತ್ತಿರಲಿಲ್ಲ. ಪಾಳೇಗಾರನ ಶೈಲಿಯಲ್ಲಿ ಆಳಿದ ಸಿದ್ದರಾಮಯ್ಯರನ್ನು ಅವರ ಮಗ ಮತ್ತು ಆಪ್ತ ಸಚಿವರೆಲ್ಲ ಸೇರಿಕೊಂಡು, ಸಿದ್ದರಾಮಯ್ಯನವರ ನಿರ್ಗಮನವನ್ನು ತಡೆಯುವ ಉದ್ದೇಶದಿಂದ ಯಾವುದೇ ಅಧಿಕೃತ ಒಪ್ಪಂದವೇ ಆಗಿಲ್ಲ ಎಂದು ಸಾರ್ವಜನಿಕವಾಗಿ ಸುಳ್ಳಿನ ಕೋಟೆ ಕಟ್ಟುತ್ತಾ ಹೈಕಮಾಂಡ್ ನಡೆಗೆ ಸವಾಲು ಹಾಕಿದ್ದರು.


ಆದರೆ, ಅಧಿಕಾರಾವಧಿ ಮುಗಿದ ಮೇಲೂ ಆರು ತಿಂಗಳಿಗೂ ಹೆಚ್ಚು ಕಾಲ ಕಾಲಹರಣ ಮಾಡಿ, ಕುರ್ಚಿ ಉಳಿಸಿಕೊಳ್ಳಲು ಕೊನೆಕ್ಷಣದವರೆಗೆ ಕಸರತ್ತು ನಡೆಸಿದ ಸಿದ್ದರಾಮಯ್ಯನವರು, ಇತಿಹಾಸದಲ್ಲಿ ಒಬ್ಬ ಮುತ್ಸದ್ದಿ ನಾಯಕನಾಗಿ ಉಳಿಯುವ ಬಂಗಾರದಂತಹ ಅವಕಾಶವನ್ನು ತಾವೇ ಕೈಯಾರೆ ಕಳೆದುಕೊಂಡರು. ಒಂದು ವೇಳೆ ಅವರು ಸರಿಯಾಗಿ ಎರಡುವರೆ ವರ್ಷ ತುಂಬಿದ ತಕ್ಷಣವೇ ಗೌರವಯುತವಾಗಿ ರಾಜೀನಾಮೆ ನೀಡಿದ್ದರೆ, ಅವರ ಪ್ರಾಮಾಣಿಕತೆಗೆ ಇಡೀ ರಾಜ್ಯವೇ ಎದ್ದು ನಿಂತು ಚಪ್ಪಾಳೆ ತಟ್ಟುತ್ತಿತ್ತು. ಆದರೆ, ಇವರ ಈ ಹಠಮಾರಿ ಧೋರಣೆ ಒಂದು ದಶಕದ ಹಿಂದೆ ಎಚ್ ಡಿ ಕುಮಾರಸ್ವಾಮಿಯವರು ಅಧಿಕಾರ ಹಸ್ತಾಂತರ ಮಾಡದೆ ವಿಶ್ವಾಸದ್ರೋಹದ ರಾಜಕಾರಣಿ ಎಂಬ ಹಣೆಪಟ್ಟಿ ಕಟ್ಟಿಕೊಂಡ ಹಳೆಯ ಕಹಿ ಇತಿಹಾಸವನ್ನೇ ನೆನಪಿಸುವಂತೆ ಮಾಡಿತು. ಕೊಟ್ಟ ಮಾತನ್ನು ತಪ್ಪಿದ ಸಿದ್ದರಾಮಯ್ಯನವರನ್ನು ಇತಿಹಾಸ ಎಂದಿಗೂ ಕ್ಷಮಿಸುವುದಿಲ್ಲ.

ಕೊನೆಗೂ ಹೈಕಮಾಂಡ್ ಚಾಟಿ ಬೀಸಿದಾಗ ಸಿದ್ದರಾಮಯ್ಯನವರು ಅಸಹಾಯಕರಾಗಿ ಮೌನವಾಗಿ ಕುರ್ಚಿಯಿಂದ ಕೆಳಗಿಳಿಯಬೇಕಾಯಿತು. ಈ ಮೂಲಕ ತಮ್ಮ ಮಗ ಮತ್ತು ಚೇಲಾಗಳು ಆಡುತ್ತಿದ್ದ ಅಹಮಿಕೆಯ ಮಾತುಗಳಿಗೆ ಅವರೇ ತಮ್ಮ ಮೌನದ ಮೂಲಕ ಕೆಸರೆರೆಚಿಕೊಂಡರು. ತಾವೊಬ್ಬ ದೇವರಾಜ ಅರಸು ಮಟ್ಟದ ನಾಯಕ ಎಂದು ಸಿದ್ದರಾಮಯ್ಯನವರು ಎಷ್ಟೇ ಬಡಾಯಿ ಕೊಚ್ಚಿಕೊಂಡರೂ (ಸೈಜಿನಲ್ಲಿ ಅವರು ಅರಸರನ್ನು ಮೀರಿಸಿದ್ದು ನಿಜವೇ), ಕೊನೆಕ್ಷಣದಲ್ಲಿ ಅಧಿಕಾರಕ್ಕಾಗಿ ಅವರು ನಡೆಸಿದ ಹಪಾಹಪಿ ಅವರು ಕೇವಲ 'ಸ್ತುತಿಯಲ್ಲಿ ಮಾತ್ರ' ಹಾಗಿದ್ದರು ಎಂಬುದನ್ನು ಸಾಬೀತುಪಡಿಸಿತು.

ಅವರ ಆಡಳಿತಾವಧಿಯು ಕೇವಲ 'ಒಬ್ಬರನ್ನು ಲೂಟಿ ಮಾಡಿ ಮತ್ತೊಬ್ಬರಿಗೆ ಕೊಡುವ' ಜನಪ್ರಿಯ ಉಚಿತ ಯೋಜನೆಗಳಿಗಷ್ಟೇ ಸೀಮಿತವಾಗಿತ್ತು. ಇಂತಹ ದಿವಾಳಿಕೋರ ಆರ್ಥಿಕ ನೀತಿಯನ್ನು ಕೇವಲ ಸಿದ್ದರಾಮಯ್ಯನವರ ಭಜನಾ ಮಂಡಳಿ ಹಾಗೂ ಮಾಧ್ಯಮಗಳು ಅಹೋರಾತ್ರಿ ಗುಣಗಾನ ಮಾಡುತ್ತಾ ಅವರ ಸುತ್ತ ಒಂದು ಕೃತಕ ಪ್ರಭಾವಲಯವನ್ನು ಸೃಷ್ಟಿಸಿದ್ದವು. ಸಿದ್ದರಾಮಯ್ಯನವರನ್ನು ಹಿಂದುಳಿದ ವರ್ಗಗಳ ಮಹಾ ನಾಯಕ ಎಂದು ಬಿಂಬಿಸಲಾಯಿತಾದರೂ, ವಾಸ್ತವದಲ್ಲಿ ಅವರು ಕರ್ನಾಟಕದ ಸಮಾಜಕ್ಕೆ ನೀಡಿದ ಕೊಡುಗೆ ಶೂನ್ಯ. ಅಹಿಂದ ಉದ್ಧಾರದ ಹೆಸರಿನಲ್ಲಿ ಅವರು ಸಮಾಜವನ್ನು ಜಾತಿ-ಜಾತಿಗಳಾಗಿ ಒಡೆದು ಆಳುವ ನೀತಿಯನ್ನು ಅನುಸರಿಸಿದರು. ಕೊನೆಗೆ ಮಾಧ್ಯಮಗಳು ಮತ್ತು ಅವರ ಬೆಂಬಲಿಗರು ಸೃಷ್ಟಿಸಿದ ಸುಳ್ಳಿನ ಇಮೇಜು ಹೈಕಮಾಂಡ್‍ನ ಏಟಿಗೆ ನುಚ್ಚುನೂರಾಯಿತು. ಹಿಂದುಳಿದ ವರ್ಗಗಳ ಕಲ್ಯಾಣದ ಹೆಸರಿನಲ್ಲಿ ಸಮಾಜವನ್ನು ಧ್ರುವೀಕರಣಗೊಳಿಸಿದ ಸಿದ್ದರಾಮಯ್ಯನವರ ಪರಂಪರೆ, ಕೇವಲ ಸಾಮಾಜಿಕ ಒಡಕು ಮತ್ತು ಅನಿವಾರ್ಯ ಶರಣಾಗತಿಯ ಇತಿಹಾಸವಾಗಿ ಮಾತ್ರ ಉಳಿಯಲಿದೆ.

Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

When Prestige Is Gifted, Not Earned: The Padma Vibhushan Controversy Of Veerendra Heggade

Why I Will Never Fly Air India Again