ಕರಾವಳಿ ಕಾಂಗ್ರೆಸ್‍ನಲ್ಲಿ ತಣಿದ ಉತ್ಸಾಹ: ಹರಿಪ್ರಸಾದ್ ಪಟ್ಟಾಭಿಷೇಕಕ್ಕೆ ತಳಮಟ್ಟದ ಕಾರ್ಯಕರ್ತರು ತಟಸ್ಥ!
ಒಂಟಿ ಸಲಗದ ಕೈಗೆ ಸಂಘಟನಾತ್ಮಕ ಕಾಂಗ್ರೆಸ್ಸಿನ ದಾಳ - ಎಂತು, ಏನು?
ಕೇವಿಯಟ್ * ಬಿವಿಸೀ
ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿಗೆ ಸೇರಿದ ಪ್ರಭಾವಿ ಸಮಾಜದ ಹಿರಿಯ ರಾಜಕಾರಣಿ ಬಿ ಕೆ ಹರಿಪ್ರಸಾದ್ ಅವರು ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಸಾರಥ್ಯ ವಹಿಸಿಕೊಂಡಿರುವುದು ಕರಾವಳಿ ಭಾಗದಲ್ಲಿ ಸಂಚಲನ ಮೂಡಿಸಬೇಕಿತ್ತು. ಆದರೆ, ರಾಜಕೀಯವಾಗಿ ಅತ್ಯಂತ ಜಾಗೃತವಾಗಿರುವ ದಕ್ಷಿಣ ಕನ್ನಡ, ಉಡುಪಿ ಹಾಗೂ ಮಲೆನಾಡು ಭಾಗದಲ್ಲಿ ಸದ್ಯಕ್ಕೆ ಯಾವುದೇ ಸಂಭ್ರಮವಿಲ್ಲದ, ನೀರಸ ವಾತಾವರಣ ಕಂಡುಬಂದಿದೆ. ಸ್ವಜಿಲ್ಲೆಯ ನಾಯಕನಿಗೆ ಹೈಕಮಾಂಡ್ ಅತ್ಯುನ್ನತ ಜವಾಬ್ದಾರಿ ನೀಡಿದ್ದರೂ, ಸ್ಥಳೀಯ ಮಟ್ಟದ ಕಾರ್ಯಕರ್ತರಲ್ಲಿ ಹಾಗೂ ಸಾರ್ವಜನಿಕ ವಲಯದಲ್ಲಿ ಇದು ಯಾವುದೇ ರೀತಿಯ ಉತ್ಸಾಹ-ಉಮೇದು ಸೃಷ್ಟಿಸಿಲ್ಲ.
ಈ ಉದಾಸೀನತೆಗೆ ಕರಾವಳಿ ಜಿಲ್ಲೆಗಳ ಕಾಂಗ್ರೆಸ್ ಕಾರ್ಯಕರ್ತರಲ್ಲಿ ದಶಕಗಳಿಂದ ಮನೆಮಾಡಿರುವ ತೀವ್ರ ಅಸಮಾಧಾನ ಮತ್ತು ಕಡೆಗಣನೆಯ ಭಾವನೆಯೇ ಪ್ರಮುಖ ಕಾರಣ. ಪ್ರಭಾವಿ ವಿಧಾನ ಪರಿಷತ್ ಸದಸ್ಯ ಸ್ಥಾನಗಳ ಹಂಚಿಕೆಯಲ್ಲಿ ಕರಾವಳಿಯ ನಿಷ್ಠಾವಂತ ಒಳನಾಡು ನಾಯಕರನ್ನು ಕಡೆಗಣಿಸಿದಾಗಿನಿಂದಲೂ ಇಲ್ಲಿನ ತಳಮಟ್ಟದ ಕಾರ್ಯಕರ್ತರು ತೀವ್ರ ನಿರಾಶೆಗೊಂಡಿದ್ದಾರೆ. ಪಕ್ಷವು ತಮ್ಮನ್ನು ಕೇವಲ ಚುನಾವಣಾ ದಾಳಗಳಾಗಿ "ಬಳಸಿ ಬಿಸಾಡುವ" ರಾಜಕಾರಣ ಮಾಡುತ್ತಿದೆ ಎಂಬ ಸತ್ಯ ಕಾರ್ಯಕರ್ತರಿಗೆ ಮನವರಿಕೆಯಾಗಿದೆ. ಈ ಹತಾಶೆಯ ಹಿನ್ನೆಲೆಯಲ್ಲಿ, ಪಕ್ಷದ ಉನ್ನತ ಚುಕ್ಕಾಣಿ ಯಾರ ಕೈಗೆ ಸಿಕ್ಕರೆ ತಮಗೇನು ಎಂಬ ಅಸಹಾಯಕ ನಿರ್ಲಿಪ್ತತೆ ಅವರಲ್ಲಿ ಆವರಿಸಿದೆ. ಇನ್ನು, ಕೋಟ್ಯಂತರ ರೂಪಾಯಿ ವ್ಯವಹಾರ ನಡೆಸುವ ಸ್ಥಳೀಯ ಮಾಧ್ಯಮಗಳಲ್ಲಾಗಲಿ, ಸಾಮಾಜಿಕ ಜಾಲತಾಣಗಳಲ್ಲಾಗಲಿ ಹರಿಪ್ರಸಾದ್ ಅವರ ನೇಮಕವನ್ನು ಶ್ಲಾಘಿಸಿ ಸ್ಥಳೀಯ ನಾಯಕರು ಹಾರ್ದಿಕ ಸ್ವಾಗತ ಜಾಹೀರಾತುಗಳನ್ನು ನೀಡದೇ ಇರುವುದು ಈ ಆಕ್ರೋಶಕ್ಕೆ ಸಾಕ್ಷಿಯಾಗಿದೆ. ಉತ್ತರ ಕನ್ನಡ ಜಿಲ್ಲೆಯ ಮಾಧ್ಯಮಗಳಲ್ಲಿ ಮಾತ್ರ ಸಾಂಪ್ರದಾಯಿಕ ಸ್ವಾಗತ ಕಂಡುಬಂದಿದೆ.
ಇದಕ್ಕೆ ಹರಿಪ್ರಸಾದ್ ಅವರ ಸ್ವಯಂಕೃತ ರಾಜಕೀಯ ಶೈಲಿಯೂ ಕಾರಣ ಎಂಬುದು ಸಾರ್ವಜನಿಕರ ವಿಶ್ಲೇಷಣೆ. ರಾಷ್ಟ್ರ ರಾಜಕಾರಣದಲ್ಲಿ ದಶಕಗಳ ಕಾಲ ಪ್ರಭಾವಿಯಾಗಿದ್ದರೂ, ಅವರು ಎಂದಿಗೂ ಕರಾವಳಿ ಮತ್ತು ಮಲೆನಾಡು ಭಾಗದ ಜನರ ಪ್ರಾದೇಶಿಕ ಜ್ವಲಂತ ಸಮಸ್ಯೆಗಳೊಂದಿಗೆ ತಮ್ಮನ್ನು ಗುರುತಿಸಿಕೊಳ್ಳಲಿಲ್ಲ, ತೊಡಗಿಸಿಕೊಳ್ಳಲಿಲ್ಲ. ಸ್ಥಳೀಯ ಹೋರಾಟಗಳಿಂದ ಸದಾ ಅಂತರ ಕಾಯ್ದುಕೊಂಡ ಅವರ ನಡೆ, ತಳಮಟ್ಟದ ಜನಸಾಮಾನ್ಯರಿಂದ ಅವರನ್ನು ದೂರವಿಟ್ಟಿತು. ಜೊತೆಗೆ, ಅತಿಯಾದ ನೇರನುಡಿ ಮತ್ತು ವಿವೇಚನೆಯಿಲ್ಲದ ಅವರ ಹಠಮಾರಿ ಸ್ವಭಾವ ಹಲವು ಬಾರಿ ಪಕ್ಷಕ್ಕೆ ಮುಜುಗರ ತಂದಿದೆ. ಈ ಹಿಂದೆ ಸಿದ್ದರಾಮಯ್ಯನವರ ಸಂಪುಟದಲ್ಲಿ ತಮಗೆ ಸಚಿವ ಸ್ಥಾನ ಸಿಗದಿದ್ದಾಗ, ಅವರು ಮುಖ್ಯಮಂತ್ರಿಯವರ ವಿರುದ್ಧವೇ ಬಹಿರಂಗವಾಗಿ ತರಗಾ-ಬರಗಾ ವಾಗ್ದಾಳಿ ನಡೆಸಿ, ತುಡುಗ ಮಠಾಧೀಶರ ಮೂಲಕ ರಾಜಕೀಯ ಒತ್ತಡ ತರಲು ಪ್ರಯತ್ನಿಸಿದ್ದು ಪಕ್ಷಕ್ಕೂ, ವೈಯಕ್ತಿಕವಾಗಿ ಹರಿಪ್ರಸಾದಗೂ ತೀವ್ರ ಹಿನ್ನಡೆ ಉಂಟುಮಾಡಿತ್ತು. ಹಾಗಿದ್ದರೂ, ಅವರೇ ಸ್ವತಃ ಕೆಲವು ಮರ್ಯಾದಸ್ಥ ಮಠಾಧೀಶರನ್ನು ಎಗ್ಗಿಲ್ಲದೇ ಬೈದಾಡಿಕೊಂಡು ತಿರುಗಿದ್ದು ಸಹ `ಇವ ಒಂಟಿ ಸಲಗ' ಎಂಬ ಆತಂಕ ಸೃಷ್ಟಿಸಿತು. ಅವರ ಇಂತಹ ವರ್ತನೆ ಹರಿಪ್ರಸಾದ್ ಅವರ ಘನತೆಗೆ ತಕ್ಕುದಲ್ಲ ಎಂದು ಜನಸಾಮಾನ್ಯರು ಭಾವಿಸಿದ್ದರು. ಹರಿಪ್ರಸಾದ್ ಅವರನ್ನು ಕಟ್ಟಾ ಸಾಂಸ್ಥಿಕ ಶಿಸ್ತಿನ ನಾಯಕ ಎಂದು ಅವರ ಬೆಂಬಲಿಗರು ಬಿಂಬಿಸುತ್ತಿದ್ದರೂ, ಕರಾವಳಿಯ ಪ್ರಜ್ಞಾವಂತ ನಾಗರಿಕರು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಭಾವಿಸುವುದೇ ಬೇರೆ. ಸದ್ಯಕ್ಕೆ ಇವರು "ಕಾದು ನೋಡುವ" ಎನ್ನುತ್ತಿದ್ದಾರೆ
Comments
Post a Comment