ಗ್ಯಾರಂಟಿ ಯೋಜನೆಗಳನ್ನು ರದ್ದುಗೊಳಿಸಿ: ಬಿಟ್ಟೀ ಹಂಚುವುದು ಸಾಕಿನ್ನು, ಕಟ್ಟುವ ಕೆಲಸ ಮಾಡಿ

 ಗ್ಯಾರಂಟಿ ಯೋಜನೆಗಳ ದುರ್ಬಳಕೆಗೆ ಕನ್ನಡಿ ಹಿಡಿದ ಸಿಎಜಿ


ಇರೋದು ಇದ್ದಹಾಗೆ * ಬಿವಿಸೀ


ಯಾವುದೇ ಚುನಾಯಿತ ಸರ್ಕಾರದ ಮೊದಲ ಜವಾಬ್ದಾರಿ ತೆರಿಗೆದಾರರ ಹಣವನ್ನು ಜವಾಬ್ದಾರಿಯಿಂದ ಬಳಸಿ ಶಾಶ್ವತ ಸಾರ್ವಜನಿಕ ಸಂಪತ್ತನ್ನು ನಿರ್ಮಿಸುವುದು. ಅಭಿವೃದ್ಧಿ ಬಿಟ್ಟು ಜನಪ್ರಿಯ ಉಚಿತ ಕೊಡುಗೆಗಳಿಗೆ ಆದ್ಯತೆ ನೀಡಿದಾಗ ರಾಜ್ಯದ ಆರ್ಥಿಕ ಅಡಿಪಾಯ ಕುಸಿಯುತ್ತದೆ. ಕರ್ನಾಟಕ ಇಂದು ಅದೇ ಸಂಕಷ್ಟದಲ್ಲಿದೆ. ಬೃಹತ್ ಸಾರ್ವತ್ರಿಕ ಗ್ಯಾರಂಟಿ ಯೋಜನೆಗಳಿಂದ ಖಜಾನೆ ಖಾಲಿಯಾಗಿ, ಪ್ರಮುಖ ಅಭಿವೃದ್ಧಿ ಕ್ಷೇತ್ರಗಳು ಸಂಪೂರ್ಣ ನಿರ್ಲಕ್ಷ್ಯಕ್ಕೊಳಗಾಗಿವೆ. ಶಾಶ್ವತ ಆರ್ಥಿಕ ಸ್ಥಗಿತ ತಪ್ಪಿಸಲು, ಈ ಅಸಮರ್ಥ ಉಚಿತ ಯೋಜನೆಗಳನ್ನು ರದ್ದುಪಡಿಸಿ ಹಣವನ್ನು ನಿಜವಾದ ಸಾರ್ವಜನಿಕ ಕಾಮಗಾರಿಗಳಿಗೆ ತಿರುಗಿಸುವುದು ಅನಿವಾರ್ಯ.

ಗ್ಯಾರಂಟಿ ಯೋಜನೆಗಳ ಪರಿಣಾಮ ನೆಲಮಟ್ಟದಲ್ಲಿ ಕಾಣುತ್ತಿದೆ. ನಗರ-ಗ್ರಾಮೀಣ ರಸ್ತೆಗಳು ಹದಗೆಟ್ಟಿವೆ. ಸಾರಿಗೆ ಸಂಸ್ಥೆಗಳು ಬಸ್ ಓಡಿಸಲು ಪರದಾಡುತ್ತಿವೆ. ನೀರಾವರಿ ಯೋಜನೆಗಳು ಅರ್ಧಕ್ಕೆ ನಿಂತು ರೈತರು ಸಂಕಷ್ಟದಲ್ಲಿದ್ದಾರೆ. ಸರ್ಕಾರಿ ಶಾಲೆ-ಕಾಲೇಜುಗಳಲ್ಲಿ ಶಿಕ್ಷಕರು, ಮೂಲಸೌಕರ್ಯಗಳ ಕೊರತೆ ಇದೆ. ಆಸ್ಪತ್ರೆಗಳಲ್ಲಿ ಔಷಧ, ವೈದ್ಯರ ಕೊರತೆಯಿಂದ ಬಡವರು ಖಾಸಗಿ ಆಸ್ಪತ್ರೆ ಮೊರೆ ಹೋಗಬೇಕಾಗಿದೆ. ಲಕ್ಷಾಂತರ ಸರ್ಕಾರಿ ಹುದ್ದೆಗಳು ಖಾಲಿ ಇರುವುದರಿಂದ ಆಡಳಿತ ಕುಂಠಿತವಾಗಿದೆ, ಜನಸಾಮಾನ್ಯರ ಕೆಲಸಗಳು ವಿಳಂಬವಾಗುತ್ತಿವೆ.

ರಾಜ್ಯ ಪ್ರತಿ ವರ್ಷ ಸುಮಾರು ಒಂದು ಲಕ್ಷ ಕೋಟಿ ರೂ ಸಾರ್ವತ್ರಿಕ ಸಬ್ಸಿಡಿ, ನಗದು ವರ್ಗಾವಣೆಗೆ ಖರ್ಚು ಮಾಡುತ್ತಿದೆ. ಇದರಿಂದ ಬಂಡವಾಳ ವೆಚ್ಚಕ್ಕೆ ಹಣವೇ ಉಳಿಯುತ್ತಿಲ್ಲ. ನೇರ ನಗದು ವರ್ಗಾವಣೆಯಿಂದ ದೀರ್ಘಕಾಲೀನ ಲಾಭ ಇಲ್ಲ. ಆದರೆ ರಸ್ತೆ, ವಸತಿ, ಶಿಕ್ಷಣಕ್ಕೆ ಹೂಡಿಕೆ ಮಾಡಿದರೆ ಆಸ್ತಿ ಸೃಷ್ಟಿಯಾಗುತ್ತದೆ, ಉದ್ಯೋಗ ಹೆಚ್ಚುತ್ತದೆ, ಭವಿಷ್ಯದ ತೆರಿಗೆ ಆಧಾರ ವಿಸ್ತರಿಸುತ್ತದೆ. ಇಂದು ನೌಕರರ ವೇತನ ವಿಳಂಬ, ಗುತ್ತಿಗೆದಾರರಿಗೆ ಬಾಕಿ ಪಾವತಿ ಆಗದಿರುವುದು, ಕಾಮಗಾರಿಗಳು ನಿಲ್ಲುವುದು ಇದೇ ಅಸಮತೋಲನದ ಫಲ.

ಇದಕ್ಕೆ ಸಿಎಜಿ ವರದಿ ಕನ್ನಡಿ ಹಿಡಿದಿದೆ. ಗೃಹ ಲಕ್ಷ್ಮಿ ಯೋಜನೆಯ ಲೆಕ್ಕಪರಿಶೋಧನೆಯಲ್ಲಿ ಸಿಎಜಿ ಗಂಭೀರ ಅಕ್ರಮಗಳನ್ನು ಬಹಿರಂಗಪಡಿಸಿದೆ. ಸಾವಿರಾರು ಫಲಾನುಭವಿಗಳ ಹೆಸರು ಒಂದೇ ಬ್ಯಾಂಕ್ ಖಾತೆಗೆ ಜೋಡಣೆಯಾಗಿರುವುದು ಪತ್ತೆಯಾಗಿದೆ. ಇದು ನಕಲಿ ಫಲಾನುಭವಿಗಳು, ಹಣ ಸೋರಿಕೆ ಮತ್ತು ದುರ್ಬಳಕೆಯ ಅನುಮಾನವನ್ನು ಹೆಚ್ಚಿಸಿದೆ. ಸಾರ್ವತ್ರಿಕ ಮತ್ತು ಅವಸರದ ಯೋಜನೆಗಳಲ್ಲಿ ಮೇಲ್ವಿಚಾರಣೆ ಅಸಾಧ್ಯವಾಗಿದ್ದು, ದುರ್ಬಳಕೆಗೆ ದಾರಿಯಾಗಿದೆ.

ನಿಜವಾದ ಕಲ್ಯಾಣವೆಂದರೆ ಮಾಸಿಕ ಹಣ ನೀಡಿ ಅವಲಂಬನೆ ಸೃಷ್ಟಿಸುವುದಲ್ಲ. ಗುಣಮಟ್ಟದ ಶಿಕ್ಷಣ, ವಿಶ್ವಾಸಾರ್ಹ ಆರೋಗ್ಯ, ಭದ್ರ ಮೂಲಸೌಕರ್ಯ ನೀಡಿ ಜನರಿಗೆ ಸ್ವಾವಲಂಬನೆಯ ಅವಕಾಶ ಕಲ್ಪಿಸುವುದು. "ಎಲ್ಲವೂ ಸರಿಯಾಗಿದೆ" ಎಂಬ ರಾಜಕೀಯ ಹೇಳಿಕೆಗಳಿಂದ ಬೆಳವಣಿಗೆಗೆ ಅಡ್ಡಿಯಾಗಿರುವ ಕೊರತೆಗಳನ್ನು ಮುಚ್ಚಲಾಗದು. ಕರ್ನಾಟಕ ಆರ್ಥಿಕ ಶಕ್ತಿಯಾಗಿ ಉಳಿಯಬೇಕಾದರೆ ಸರ್ಕಾರ ಆರ್ಥಿಕ ಧೈರ್ಯ ತೋರಬೇಕು. 

ಮೊದಲ ಹೆಜ್ಜೆಯಾಗಿ ಸಾರ್ವತ್ರಿಕ ಉಚಿತ ಗ್ಯಾರಂಟಿ ಯೋಜನೆಗಳನ್ನು ರದ್ದುಗೊಳಿಸಬೇಕು. ಇದರಲ್ಲಿ ಸಿಲುಕಿರುವ ಸಾವಿರಾರು ಕೋಟಿ ರೂ.ಗಳನ್ನು ತಕ್ಷಣವೇ ಬಾಕಿ ಇರುವ ನೀರಾವರಿ ಕಾಮಗಾರಿ, ವಸತಿ ಯೋಜನೆ, ಶಾಲೆಗಳ ಆಧುನೀಕರಣ ಮತ್ತು ಖಾಲಿ ಹುದ್ದೆಗಳ ಭರ್ತಿಗೆ ಬಳಸಬೇಕು. ಉಚಿತ ಕೊಡುಗೆ ವಿತರಕನ ಬದಲು ಜವಾಬ್ದಾರಿಯುತ ಖಜಾಂಚಿಯಾಗಿ ಸರ್ಕಾರ ಕೆಲಸ ಮಾಡಿದರೆ ಮಾತ್ರ ಈ ಆರ್ಥಿಕ ಸಂಕಷ್ಟದಿಂದ ಹೊರಬರಲು ಸಾಧ್ಯ. ಮುಂದಿನ ಪೀಳಿಗೆಗಾಗಿ ಹಂಚುವುದಲ್ಲ, ಕಟ್ಟುವುದು ಮುಖ್ಯ.

Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

When Prestige Is Gifted, Not Earned: The Padma Vibhushan Controversy Of Veerendra Heggade

Why I Will Never Fly Air India Again