ಕರಾವಳಿಯ ಕಂಬಳಕ್ಕೆ ಕಾಸಿಲ್ಲ, ಮೈಸೂರಿನ ಮೋಜಿಗೆ ಕೋಟಿ ಕೋಟಿ

 ಪುತ್ತೂರು ಶಾಸಕನ ಹಿತಾಸಕ್ತಿ ಏನು?


ನೇರಾನೇರ * ಬಿವಿಸೀ


ಪುತ್ತೂರು ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ತಮ್ಮ ಸ್ವಕ್ಷೇತ್ರದ ಅಥವಾ ಜಿಲ್ಲೆಯ ಜನರ ಕಷ್ಟಸುಖಗಳನ್ನು ಆಲಿಸಲು ಸಮಯವಿಲ್ಲದಂತಾಗಿದೆ. ಕರಾವಳಿಯ ರೈತಾಪಿ ವರ್ಗದ ಸಾಂಪ್ರದಾಯಿಕ ಹೆಮ್ಮೆಯಾದ ಕಂಬಳ ಕ್ರೀಡೆಯನ್ನು ರಾಜಧಾನಿ ಬೆಂಗಳೂರಿನ ನಂತರ (ಅದನ್ನು ಒಮ್ಮೆ ಮಾತ್ರ ಆಯೋಜಿಸಿದ್ದು) ಈಗ ಸಾಂಸ್ಕøತಿಕ ನಗರಿ ಮೈಸೂರಿನ ದಸರಾ ಮಹೋತ್ಸವದಲ್ಲಿ ಆಯೋಜಿಸಲು ಅವರು ತೋರುತ್ತಿರುವ ಅತಿರೇಕದ ಆಸಕ್ತಿ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಕರಾವಳಿ ಭಾಗದಲ್ಲಿ ಅತ್ಯಂತ ಕಡಿಮೆ ವೆಚ್ಚದಲ್ಲಿ ಅಚ್ಚುಕಟ್ಟಾಗಿ ನಡೆಯುವ ಸಾಂಪ್ರದಾಯಿಕ ಕಂಬಳಗಳಿಗೆ ಸರ್ಕಾರ ಘೋಷಿಸಿದ್ದ ತಲಾ ಒಂದು ಕೋಟಿ ರೂಪಾಯಿ ಕನಿಷ್ಠ ಅನುದಾನದ ಬಾಕಿಯನ್ನೇ ಇನ್ನು ಪಾವತಿಸದ ಈ ಸರ್ಕಾರ, ಮೈಸೂರಿನಲ್ಲಿ ಹತ್ತಿರಹತ್ತಿರ ಹತ್ತು ಕೋಟಿ ರೂಪಾಯಿಗಳ ಭಾರಿ ವೆಚ್ಚದಲ್ಲಿ ಕಂಬಳ ನಡೆಸಲು ಮುಂದಾಗಿದೆ. ಹಣವಿರುವೆಡೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಲಗ್ಗೆ ಇಡುವುದು ಇತ್ತೀಚಿನ ಹೊಸ ಸಂಪ್ರದಾಯವಾಗಿ ಮಾರ್ಪಟ್ಟಿದೆ.


ಮೂಲತಃ ರಿಯಲ್ ಎಸ್ಟೇಟ್ ವ್ಯವಹಾರದ ಹಿನ್ನೆಲೆಯಿಂದ ಬಂದಿರುವ ಶಾಸಕರು ಮಾಡುವ ಪ್ರತಿಯೊಂದು ಕೆಲಸದಲ್ಲೂ ಅವರ ವೈಯಕ್ತಿಕ ವ್ಯಾಪಾರೀ ಹಿತಾಸಕ್ತಿ ಅಡಗಿದೆಯೇ ಎನ್ನುವ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಬಲವಾಗಿ ಕೇಳಿಬರುತ್ತಿದೆ. ಕರಾವಳಿಯ ಹಳ್ಳಿಗಳ ಕೆಸರುಗದ್ದೆಗಳಲ್ಲಿ ನೈಜ ಸಂಸ್ಕೃತಿಯಾಗಿ ಉಳಿದುಕೊಂಡಿರುವ ಕ್ರೀಡೆಗೆ ನಯಾಪೈಸೆ ಬಿಡುಗಡೆ ಮಾಡದ ಆಡಳಿತ ವ್ಯವಸ್ಥೆ, ಮೈಸೂರಿನಲ್ಲಿ ಕೋಟ್ಯಂತರ ರೂಪಾಯಿಗಳ ಬಜೆಟ್ ಸಿದ್ಧಪಡಿಸುತ್ತಿರುವುದು ಕೇವಲ ಕ್ರೀಡಾ ಪ್ರೇಮದಿಂದಲ್ಲ, ಬದಲಿಗೆ ಅಲ್ಲಿ ಹರಿದಾಡಲಿರುವ ಭಾರಿ ಪ್ರಮಾಣದ ಹಣದ ಆಕರ್ಷಣೆಯಿಂದ ಎನ್ನುವುದು ಸ್ಪಷ್ಟವಾಗುತ್ತದೆ. ಜನಸಾಮಾನ್ಯರ ತೆರಿಗೆ ಹಣವನ್ನು ಇಂತಹ ಕೃತಕ ಪ್ರದರ್ಶನಗಳಿಗೆ ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಖಂಡನೀಯ.


ಇನ್ನು ಪುತ್ತೂರು ಶಾಸಕರ ಇತಿಹಾಸವನ್ನು ಗಮನಿಸಿದರೆ, ಅವರು ಸದಾ ವಿವಾದಗಳ ಸುಳಿಯಲ್ಲೇ ಮುಳುಗಿರುವ ವ್ಯಕ್ತಿ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತೆ ದೇವಸ್ಥಾನದ ಸಂಕೀರ್ಣವನ್ನು ಕೆಡವಿದ ಆರೋಪ ಹಾಗೂ ಮಹಿಳಾ ಸರ್ಕಾರಿ ಅಧಿಕಾರಿಯೊಬ್ಬರಿಗೆ ಸಾರ್ವಜನಿಕವಾಗಿ ನಿಂದಿಸಿದ ಕೀರ್ತಿ ಇವರದ್ದಾಗಿದೆ. ಇಂತಹ ಸಾಂಪ್ರದಾಯಿಕ ಜಮೀನ್ದಾರಿ ಮತ್ತು ಸತ್ವರಹಿತ ರಾಜಕಾರಣದ ಹಿನ್ನೆಲೆಯುಳ್ಳವರು ಕಂಬಳದ ಹೆಸರಿನಲ್ಲಿ ಕೋಟಿ ಕೋಟಿ ರೂಪಾಯಿಗಳ ಯೋಜನೆಯ ಸಾರಥ್ಯ ವಹಿಸಿಕೊಂಡಿರುವುದು ಕರಾವಳಿಯ ಜನರನ್ನು ಕೆರಳಿಸಿದೆ. ಸ್ವಕ್ಷೇತ್ರದ ಜ್ವಲಂತ ಸಮಸ್ಯೆಗಳನ್ನು ಗಾಳಿಗೆ ತೂರಿ, ಕೇವಲ ಕಮಿಷನ್ ದಂಧೆಗಾಗಿ ಮೈಸೂರಿನಲ್ಲಿ ಬೀಡು ಬಿಟ್ಟಿರುವುದು ಅವರ ಬೇಜವಾಬ್ದಾರಿತನಕ್ಕೆ ಸಾಕ್ಷಿಯಾಗಿದೆ. ಕರಾವಳಿಯ ನೈಜ ಕಂಬಳ ಸಮಿತಿಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿರುವಾಗ, ಮೈಸೂರಿನ ಈ ದುಬಾರಿ ಆಟ ಕೇವಲ ಹಣದ ಲೂಟಿಗೆ ವೇದಿಕೆಯಾಗಬಾರದು. ಜನಪ್ರತಿನಿಧಿಗಳು ಮೊದಲು ತಮ್ಮ ಕ್ಷೇತ್ರದ ಜನರ ರಸ್ತೆ, ನಾಗರಿಕ ಸೌಲಭ್ಯಗಳಾದ ಆಸ್ಪತ್ರೆ, ಶೈಕ್ಷಣಿಕ ಸೌಲಭ್ಯಗಳ ವಿಸ್ತರಣೆ ಮತ್ತು ಮೂಲಸೌಕರ್ಯಗಳ ಕಡೆಗೆ ಗಮನಹರಿಸಲಿ.


Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

ಧರ್ಮಸ್ಥಳದ ಪ್ರಕರಣಗಳಲ್ಲಿ ಸತ್ಯ ಸಾಯುವುದಿಲ್ಲ

WHEN COMMUNAL POLITICS POISONS TRADITION: A WARNING FROM UDUPI