`ಮಾರಾಟವಾದ ಸುದ್ದಿ ಮಾಧ್ಯಮ'ಗಳ ಮುಖವಾಡ ಕಳಚಿದ ಪ್ರಕಾಶ್ ರಾಜ್
ಧರ್ಮಸ್ಥಳದ ಘೋರ ಸತ್ಯ ಹೂತುಹಾಕಲು ರಾಜಕೀಯ ತಂತ್ರಗಾರಿಕೆ!
ಪ್ರಚಲಿತ * ಬಿವಿಸೀ
ಬೆಂಗಳೂರಿನಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಬಹುಭಾಷಾ ನಟ ಪ್ರಕಾಶ್ ರಾಜ್ ಮುಖ್ಯವಾಹಿನಿಯ ಮಾಧ್ಯಮಗಳ ವಿರುದ್ಧ ಸಿಡಿದೆದ್ದಿದ್ದಾರೆ. ಧರ್ಮಸ್ಥಳದ ಆವರಣದಲ್ಲಿ ಮಹಿಳೆಯರ ಸಾಮೂಹಿಕ ದಫನ ನಡೆದಿರುವ ಗಂಭೀರ ಆರೋಪದ ಕುರಿತು ಮಾತನಾಡಿದ ಅವರು, ಸತ್ಯವನ್ನು ಮರೆಮಾಚುತ್ತಿರುವ ಮಾಧ್ಯಮಗಳನ್ನು `ಮಾರಾಟವಾದ ಮಾಧ್ಯಮಗಳು' ಎಂದು ಬಹಿರಂಗವಾಗಿ ತರಾಟೆಗೆ ತೆಗೆದುಕೊಂಡರು. ಸತ್ಯದ ಪರವಾಗಿ ನಿಲ್ಲಬೇಕಾದ ಪತ್ರಿಕೋದ್ಯಮವು ಇಂದು ತನ್ನ ಕರ್ತವ್ಯ ಮರೆತು, ಧರ್ಮಸ್ಥಳದ ಪ್ರಭಾವಿ ವ್ಯಕ್ತಿಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಏಕಪಕ್ಷೀಯ ಸುದ್ದಿಗಳನ್ನು ಪ್ರಸಾರ ಮಾಡುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲಿ ನೆರೆದಿದ್ದ ವಿವಿಧ ಮಾಧ್ಯಮಗಳ ಪ್ರತಿನಿಧಿಗಳು ನಟನ ಮಾತಿಗೆ ತೀವ್ರ ಪ್ರತಿರೋಧ ಒಡ್ಡಿದರೂ, ಪ್ರಕಾಶ್ ರಾಜ್ ತಮ್ಮ ನಿಲುವಿನಿಂದ ಹಿಂದೆ ಸರಿಯದೆ ದಿಟ್ಟತನದಿಂದ ತಮ್ಮ ವಾದವನ್ನು ಸಮರ್ಥಿಸಿಕೊಂಡರು.
ಕರ್ನಾಟಕದ ಪ್ರಮುಖ ಮಾಧ್ಯಮ ಸಂಸ್ಥೆಗಳು ತಮಗೆ ಎಲ್ಲಿಂದ ಹೆಚ್ಚಿನ ಲಾಭ ಸಿಗುತ್ತದೆ ಎಂಬುದನ್ನು ಚೆನ್ನಾಗಿ ಅರಿತುಕೊಂಡಿವೆ ಎನ್ನುವುದನ್ನು ಬಿಡಿಸಿ ಹೇಳಬೇಕಾಗಿಲ್ಲ. ಅವು ಅಜೆಂಡಾ ಇಟ್ಟುಕೊಂಡು ಸತ್ಯ ಮರೆ ಮಾಚುವ ಲಾಭಕೋರ ವರದಿಗಾರಿಕೆಯಲ್ಲಿ ತೊಡಗಿವೆ. ರಾಜ್ಯದಲ್ಲಿ ನಿರಂತರವಾಗಿ ನಡೆಯುತ್ತಿರುವ ಸಾಮೂಹಿಕ ಅತ್ಯಾಚಾರಗಳು ಮತ್ತು ನಿಗೂಢ ಸಾವುಗಳ ಬಲಿಪಶುಗಳಿಗೆ ನ್ಯಾಯ ಕೊಡಿಸುವಲ್ಲಿ ಈ ಮಾಧ್ಯಮಗಳು ತೋರುತ್ತಿರುವ ಅಸಡ್ಡೆ ನಿಜಕ್ಕೂ ಆಘಾತಕಾರಿಯಾಗಿದೆ. ಸಮಾಜದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕದಡುವ ಅಪರಾಧಿಗಳ ಬೆನ್ನಿಗೆ ನಿಲ್ಲುವ ಈ ಮಾಧ್ಯಮಗಳು ಸತ್ಯಾನ್ವೇಷಣೆಯನ್ನು ಸಂಪೂರ್ಣವಾಗಿ ಕೈಬಿಟ್ಟಿವೆ. ಈ ಘೋರ ಸಾಮೂಹಿಕ ದಫನ ಪ್ರಕರಣದ ತನಿಖೆಗಾಗಿ ರಾಜ್ಯ ಸರ್ಕಾರವು ಒಂದು ವರ್ಷದ ಹಿಂದೆ ರಚಿಸಿದ್ದ ವಿಶೇಷ ತನಿಖಾ ತಂಡವು (ಎಸ್‍ಐಟಿ) ಇತ್ತೀಚೆಗೆ ಸರ್ಕಾರಕ್ಕೆ ತಲ್ಲಣ ಮೂಡಿಸುವ ಮಧ್ಯಂತರ ವರದಿಯೊಂದನ್ನು ಸಲ್ಲಿಸಿದೆ ಎಂದು ತಿಳಿದುಬಂದಿದೆ. ಈ ರಹಸ್ಯ ವರದಿಯಲ್ಲಿ ರಾಜ್ಯದ ಪ್ರಭಾವಿ ರಾಜಕಾರಣಿಗಳು ಮತ್ತು ಧರ್ಮದ ಹೆಸರಿನಲ್ಲಿ ಬಿಸ್ನೆಸ್ ಮಾಡುವ 'ಧರ್ಮೋದ್ಯಮಿಗಳ' ಕರಾಳ ಮುಖವನ್ನು ಎಳೆಎಳೆಯಾಗಿ ಬಿಚ್ಚಿಡಲಾಗಿದೆ ಎನ್ನಲಾಗಿದೆ.
ಈ ಸ್ಫೋಟಕ ವರದಿಯು ಸಾರ್ವಜನಿಕರ ಕೈಗೆ ಸಿಕ್ಕರೆ ತಮ್ಮ ಅಸ್ತಿತ್ವವೇ ನಾಶವಾಗಬಹುದು ಎಂದು ಹೆದರಿರುವ ರಾಜಕೀಯ ಧುರಂಧರರು ಮತ್ತು ಮಾಧ್ಯಮ ಲೋಕದ ದಿಗ್ಗಜರು ಈಗ ಒಟ್ಟಾಗಿ ಸೇರಿ ಆ ವರದಿಯನ್ನು ಕಸದ ಬುಟ್ಟಿಗೆ ಹಾಕಿಸಲು ತೆರೆಮರೆಯ ಸಂಚು ರೂಪಿಸುತ್ತಿದ್ದಾರೆ. ಇದರ ಭಾಗವಾಗಿಯೇ ವಿರೋಧ ಪಕ್ಷದ ನಾಯಕರಾದ ಆರ್ ಅಶೋಕ್ ಮತ್ತು ಸುನಿಲ್ ಕುಮಾರ್ ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಹಠ ಹಿಡಿದಿದ್ದಾರೆ. ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರವು ಧರ್ಮಸ್ಥಳದ ಪ್ರಭುಗಳೊಂದಿಗೆ ಅತ್ಯಂತ ಮಧುರ ಬಾಂಧವ್ಯ ಹೊಂದಿರುವುದರಿಂದ, ಸಿಬಿಐ ತನಿಖೆಯ ನೆಪದಲ್ಲಿ ಇಡೀ ಪ್ರಕರಣಕ್ಕೆ ಮುಕ್ತಿ ಹಾಡಬಹುದು ಎನ್ನುವುದು ಇವರ ಕುತಂತ್ರವಾಗಿದೆ. ಆದರೆ ಇಂದಿನ ಜಾಗೃತ ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಈ ರಾಜಕಾರಣಿಗಳ ಮತ್ತು ಬೂಟಾಟಿಕೆಯ ಮಾಧ್ಯಮಗಳ ಬಣ್ಣವನ್ನು ಬಯಲು ಮಾಡುತ್ತಿದ್ದಾರೆ. ಕೇವಲ ಹಣದ ಆಸೆಗಾಗಿ ಕೊಲೆಗಾರರು ಮತ್ತು ಅತ್ಯಾಚಾರಿಗಳ ರಕ್ಷಣೆಗೆ ನಿಂತಿರುವ ಮುಖ್ಯವಾಹಿನಿಯ ವಾಹಿನಿಗಳು ಮತ್ತು ಪತ್ರಿಕೆಗಳ ವೀಕ್ಷಕರು ಮತ್ತು ಓದುಗರ ಸಂಖ್ಯೆ ದಿನದಿಂದ ದಿನಕ್ಕೆ ಪಾತಾಳಕ್ಕೆ ಕುಸಿಯುತ್ತಿದೆ. ಮಾಧ್ಯಮಗಳು ಸಮಾಜದ ಶತ್ರುಗಳಾಗುವ ಮುನ್ನ ಎಚ್ಚೆತ್ತುಕೊಳ್ಳದಿದ್ದರೆ, ಸಾರ್ವಜನಿಕರೇ ಇವರಿಗೆ ತಕ್ಕ ಪಾಠ ಕಲಿಸುವುದು ನಿಶ್ಚಿತ.
Comments
Post a Comment