ಕಲ್ಲಡ್ಕ ಪ್ರಭಾಕರ್ ಭಟ್ಟರ ಆಸಕ್ತಿ ಹಿಂದೂಗಳ ರಕ್ಷಣೆ ಎಂದವರು ಯಾರು?

 ಜನಸ್ಪಂದನ * ವಿಹಾರಿ

ಬಂಟ್ವಾಳದ ಬೆಂಕಿಯುಂಡೆ ಉಗುಳುವ ಭಾಷಣಕಾರ ಆರೆಸ್ಸೆಸ್ಸಿನ ಕಲ್ಲಡ್ಕ ಪ್ರಭಾಕರ್ ಭಟ್ ಸದಾ ಭೀತಿ ಹುಟ್ಟಿಸುವ ನಾಟಕೀಯ ವರ್ತನೆಯ ಮೂಲಕವೇ ಪ್ರಸ್ತುತವಾಗಿರುತ್ತಾರೆ. ಮತ್ತೊಮ್ಮೆ ನಿನ್ನೆ ದಾವಣಗೆರೆಯಲ್ಲಿ ಮಾತನಾಡುತ್ತಾ, ಮುಸ್ಲಿಮರು ಹಿಂದೂಗಳ ಜನಸಂಖ್ಯೆಯನ್ನೇನಾದರೂ ಮೀರಿ ಬೆಳೆದರೆ ಭಾರತ ಪಾಕಿಸ್ತಾನವಾಗುತ್ತದೆ ಎಂದು ಹೇಳಿದ್ದಾರೆ. ಅವರ ಈ ಮಾತು ಹೊಸತೇನಲ್ಲ. ಹಳೆಯ, ಹಳಸಲಾದ ಮಾತುಗಳಾಗಿದ್ದು, ಪದೇಪದೇ ಆಡುತ್ತಲೇ ಇರುತ್ತಾರೆ. ತನ್ಮೂಲಕ ಹಿಂದೂಗಳ ನಡುವೆ ಅಭದ್ರತೆ ಸೃಷ್ಟಿಸಿ ಸಂಘಪರಿವಾರದ ಬಂಡಿಯನ್ನು ದ್ವೇಷದ ಇಂಧನದ ಮೂಲಕವೇ ಚಾಲ್ತಿಯಲ್ಲಿಟ್ಟಿರುತ್ತಾರೆ.

ಮುಂದೊಂದು ದಿನ ಮುಸ್ಲಿಮರು ಹಿಂದೂಗಳಿಗಿಂತಲೂ ಜಾಸ್ತಿಯಾಗುತ್ತಾರೆ ಎಂಬ ಹೇಳಿಕೆಗೆ ಯಾವುದೇ ಬೌದ್ಧಿಕ ಅರ್ಹತೆಯಾಗಲೀ, ಸಾಮಾಜಿಕ ಅಧ್ಯಯನವಾಗಲೀ ಬೇಕಿಲ್ಲ. ಇದೊಂದು ಅರಚಾಟವಾಗಿದ್ದು, ಬೆದರಿಸುವ ತಂತ್ರವಾಗಿ ಬಳಕೆಯಲ್ಲಿದ್ದು, ಕೇವಲ ಎಚ್ಚರಿಕೆಯ ರೂಪದಲ್ಲಿ ಬಳಸಲಾಗುತ್ತದೆ. ಆದರೂ ಸಂಘಪರಿವಾರವು ಇದನ್ನೇ ಆಧರಿಸಿ ಮುನ್ನಡೆಯುತ್ತಿದೆ. ಹಿಂದೂಗಳ ಸಂಖ್ಯೆ ಕಡಿಮೆಯಾಗುತ್ತದೆ ಎಂಬ ಜನಸಂಖ್ಯಾ ಭೀತಿಯನ್ನು ಹರಡುವ ಮೂಲಕ, ಈಗ ಬಹುಸಂಖ್ಯಾತರಾಗಿರುವ ಹಿಂದೂ ಜನತೆ ಕಣ್ಮರೆಯಾಗುವ ಅಂಚಿನಲ್ಲಿದೆ ಎಂಬ ಭೀತಿ ಹುಟ್ಟಿಸಲಾಗುತ್ತಿರುತ್ತದೆ. ಆದರೆ ಭಟ್ ಅವರ ಅನೇಕ ಸಹವರ್ತಿಗಳ ಹಾಗೆ ಈ ಆತಂಕವನ್ನು ಸೃಷ್ಟಿಸುವಲ್ಲಿ ಪರಿಣತರಾಗಿದ್ದು, ಈ ಭೀತಿಯೇ ರಾಜಕೀಯವಾಗಿ ಪ್ರಬಲ ಅಸ್ತ್ರವಾಗುತ್ತದೆ ಎಂಬ ವಾಸ್ತವವನ್ನೂ ಅರಿತಿದ್ದಾರೆ.


ಆದರೆ ಇಲ್ಲಿ ಎದ್ದು ಕಾಣುವುದು ಈ ರೀತಿಯ ಮುಸ್ಲಿಂ ವಿರೋಧಿ ಹೇಳಿಕೆಗಳು ಪದೇಪದೇ ಬರುವುದಲ್ಲ, ಬದಲಾಗಿ ಹಿಂದೂಗಳ ವಿರುದ್ಧ ಮುಸ್ಲಿಮೇತರರೇ ಅಪರಾಧಗಳನ್ನು ನಡೆಸುತ್ತಿರುವಾಗ, ಇವರು ಉದ್ದೇಶಪೂರ್ವಕವಾಗಿ ಮೌನ ವಹಿಸುವ ಲೆಕ್ಕಾಚಾರದ ವರ್ತನೆ. ಧರ್ಮಸ್ಥಳ ಭಟ್ಟರ ಊರಿನಿಂದ ಒಂದರ್ಧ ಗಂಟೆ ಪ್ರಯಾಣದ ದೂರದಲ್ಲಿದೆ. ಈ ಆಧ್ಯಾತ್ಮಿಕ ಊರಿನಲ್ಲಿ, ಬಲಾಢ್ಯ ಡಿ ಗ್ಯಾಂಗ್ ಎಲ್ಲವನ್ನೂ ನಿಯಂತ್ರಿಸುತ್ತದೆ. ಹಿಂದೂ ಬಾಲಕಿಯರು ಭೂಗತ ಜಗತ್ತಿನೊಡನೆ ಸಂಪರ್ಕ ಇರುವ ಡಿ-ಗ್ಯಾಂಗ್ ಕ್ರಿಮಿನಲ್‍ಗಳಿಂದ ಅತ್ಯಾಚಾರ, ಹತ್ಯೆಗೀಡಾಗಿದ್ದಾರೆ. ಆದರೆ ಇಲ್ಲಿ ಭಟ್ಟರ ನಾಲಿಗೆ ಮಾತು ಕಳೆದುಕೊಳ್ಳುತ್ತದೆ. ಅವರ ಪ್ರಜ್ಞೆ ಅನುಕೂಲಕರವಾಗಿ ನಿದ್ರೆ ಮಾಡುತ್ತದೆ. ಕಲ್ಲಡ್ಕ ಭಟ್ಟರು ಹಿಂದೂ ಘನತೆಯ ನೈಜ ರಕ್ಷಕರೇ ಆಗಿದ್ದಲ್ಲಿ ಈ ಅಪರಾಧಗಳ ವಿರುದ್ಧ ದನಿ ಎತ್ತಲು ಅವರನ್ನು ಯಾರೂ ತಡೆಯುತ್ತಿರಲಿಲ್ಲ. ಆದರೆ ಅಪರಾಧ ಮಾಡಿರುವವರು ಮುಸ್ಲಿಮರು ಅಲ್ಲದಿರುವುದರಿಂದ, ಭಟ್ಟರು ಮೌನಕ್ಕೆ ಶರಣಾಗುತ್ತಾರೆ. 

ಈ ರೀತಿಯ ಆಯ್ದ ಆಕ್ರೋಶವು ಸಂಘಪರಿವಾರದ ತಾತ್ವಿಕತೆಯನ್ನು ಬಯಲು ಮಾಡುತ್ತದೆ. ಅದು ಹಿಂದೂ ಯೋಗಕ್ಷೇಮಕ್ಕಾಗಿ ಇರುವ ಸಂಘಟನೆಯಲ.್ಲ ಬದಲಾಗಿ ಹಿಂದೂಗಳನ್ನು ಬಳಸಿಕೊಂಡು ರಾಜಕೀಯವಾಗಿ ಬೆಳೆಯುವ ಒಂದು ಯೋಜನೆಯಾಗಿ ನೋಡುತ್ತದೆ, ಅದೇ ವೇಳೆ ಬಲಿಷ್ಠ ಪಟ್ಟಭದ್ರ ಹಿತಾಸಕ್ತಿಗಳನ್ನೂ ರಕ್ಷಿಸುತ್ತದೆ ಎನ್ನುವುದು ಸ್ಪಷ್ಟವಾಗುತ್ತದೆ. ಭಟ್ಟರು ಪ್ರಬಲ ಶಕ್ತಿಗಳನ್ನು ಮುಟ್ಟಲಾಗದ ಸಂದರ್ಭದಲ್ಲಿ ಸಂಘಪರಿವಾರದ ಪರ, ಯಥಾಸ್ಥಿತಿವಾದದ ಪರ ಇರುವವರಾಗಿರುತ್ತಾರೆ. ಇಲ್ಲಿ ದುರ್ಬಲರನ್ನು ಕಾಲಾಳುಗಳ ಹಾಗೆ ಬಳಸಿಕೊಳ್ಳಲಾಗುತ್ತದೆ.  ಧರ್ಮಸ್ಥಳದ ಬಗ್ಗೆ ಭಟ್ಟರ ಮೌನ ದಾವಣಗೆರೆಯ ಅವರ ದ್ವೇಷ ಭಾಷಣದಷ್ಟೇ ಗಟ್ಟಿಯಾಗಿ ಕೇಳಿಸುತ್ತದೆ.

ಗಾಯಕ್ಕೆ ತುಪ್ಪ ಸವರುವ ಹಾಗೆ ನ್ಯಾಯಾಂಗದೊಡನೆ ಅವರ ವರ್ತನೆಯೂ ಹಾಗೆಯೇ ಇದೆ. ಅನೇಕ ಸಂದರ್ಭಗಳಲ್ಲಿ ಅವರ ವಿರುದ್ಧ ಅಲ್ಪಸಂಖ್ಯಾತ ವಿರೋಧಿ ಪ್ರಚೋದನಕಾರಿ ಭಾಷಣಗಳಿಗಾಗಿ ಮೊಕದ್ದಮೆಗಳು ದಾಖಲಾಗಿವೆ. ಆದರೂ ಪ್ರತಿಬಾರಿಯೂ ಹೈಕೋರ್ಟ್‍ನಿಂದ ತಡೆಯಾಜ್ಞೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಕೆಲ ದಿನ ಮುಕ್ತವಾಗಿರುತ್ತಾರೆ. ಇದರಿಂದ ಮತ್ತಷ್ಟು ಧೈರ್ಯ ಪಡೆಯುವ ಭಟ್ಟರು ಅತಿರೇಕಗಳನ್ನು ತಡೆಯಬೇಕಾದ ವ್ಯವಸ್ಥೆಯಿಂದಲೇ ಸಮಾಧಾನ ಪಡೆಯುತ್ತಾರೆ. ಅವರ ದ್ವೇಷ ಭಾಷಣದ ಈ ಸರಣಿ, ಮೊಕದ್ದಮೆ ದಾಖಲಾಗುವುದು, ದೂರು ದಾಖಲಾಗುವುದು, ನ್ಯಾಯಾಂಗದ ಪರಿಹಾರ ಮತ್ತು ಅದೇ ರೀತಿಯ ವರ್ತನೆಗಳು ಭಟ್ಟರನ್ನು ಕೋಮು ರಾಜಕಾರಣದ ನುರಿತ ಕಲಾವಿದರನ್ನಾಗಿಸಿದೆ.

ಕಲ್ಲಡ್ಕ ಭಟ್ಟರಂತಹ ನಾಯಕರ ಠಕ್ಕುತನವು ಸಮಾಜಕ್ಕೆ ಎಚ್ಚರಿಕೆ ನೀಡಬೇಕಿದೆ. ಇವರು ಹಿಂದೂ ರಕ್ಷಣೆಯ ಅಥವಾ ಹಿಂದೂ ಸಂಸ್ಕøತಿಯ ಪರಿಚಾರಕರಲ್ಲ. ಬದಲಾಗಿ ಭೀತಿಯನ್ನು ಮಾರಾಟ ಮಾಡುವ ರಾಜಕೀಯ ದಲ್ಲಾಳಿಗಳು, ತಮ್ಮದೇ ಪಡೆಯಿಂದ ಅಪರಾಧಗಳು ನಡೆದಾಗ ಕುರುಡಾಗುತ್ತಾರೆ. ಆದರೆ ಅಪರಾಧಿಗಳು ಮುಸ್ಲಿಮರಾಗಿದ್ದರೆ ಅಬ್ಬರಿಸುತ್ತಾರೆ. ದೀರ್ಘ ಅವಧಿಯಲ್ಲಿ ಈ ದ್ವಂದ್ವ ನೀತಿ ಕೋಮು ಸೌಹಾರ್ದತೆಯನ್ನು, ಹಿಂದೂ ಹಿತಾಸಕ್ತಿಗಳ ವಿಶ್ವಾಸಾರ್ಹತೆಯನ್ನೂ ಅಳಿಸಿಹಾಕುತ್ತದೆ.

ಜನರು ಭಟ್ಟರನ್ನು ಪ್ರಶ್ನಿಸಬೇಕಿದೆ. ತಮ್ಮ ಭದ್ರತೆಗಾಗಿ, ಭವಿಷ್ಯಕ್ಕಾಗಿ ಈ ಧ್ವನಿಯನ್ನು ನಾವು ಬೆಂಬಲಿಸಬೇಕೇ ಎಂದು ಗಟ್ಟಿಯಾಗಿ ಕೇಳಬೇಕಿದೆ. ಅಥವಾ ಕೇವಲ ವಿಭಜನೆಯ ಮೂಲಕವೇ ತಮ್ಮ ಅಸ್ತಿತ್ವ ಕಾಪಾಡಿಕೊಳ್ಳುವ ವ್ಯಕ್ತಿಯ ಕ್ಷೀಣ ಧ್ವನಿಯೇ ಎಂದು ಕೇಳಬೇಕಾಗುತ್ತದೆ. ಭಟ್ಟರ ಠಕ್ಕುತನ ಮತ್ತು ಧರ್ಮಸ್ಥಳದ ಬಗ್ಗೆ ಸಂಘಪರಿವಾರದ ಮೌನ, ಈ ಪ್ರಶ್ನೆಗೆ ಉತ್ತರ ನೀಡುತ್ತದೆ. ಯಾವುದೇ ಭಾಷಣ ಇದನ್ನು ಮಾಡಬೇಕಿಲ್ಲ.


Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

When Prestige Is Gifted, Not Earned: The Padma Vibhushan Controversy Of Veerendra Heggade

Why I Will Never Fly Air India Again