ಭ್ರಮೆಯಲ್ಲಿ ತೇಲಿದ ಸಿದ್ದು ಆಡಳಿತದಲ್ಲಿ ರಾಜ್ಯದ ಹಿತ ಬಲಿ

 ನೇರಾನೇರ * ಬಿವಿಸೀ

ರಾಜ್ಯದ ನೈಜ ಪ್ರಗತಿಯು ಆಯವ್ಯಯದ ನುಣುಪು ಪುಟಗಳಲ್ಲಿ ಅಡಗಿರುವುದಿಲ್ಲ; ಅದು ಸಾರ್ವಜನಿಕರ ದೈನಂದಿನ ಬದುಕಿನಲ್ಲಿ ಬಿಂಬಿತವಾಗುತ್ತದೆ. ಅಧಿಕಾರದಿಂದ ನಿರ್ಗಮಿಸುವ ಸರ್ಕಾರವು ಆರ್ಥಿಕ ಶಿಸ್ತಿನ ದೊಡ್ಡ ಯಶೋಗಾಥೆ ಪ್ರದರ್ಶಿಸಿದರೂ, ವಾಸ್ತವದಲ್ಲಿ ರಾಜ್ಯದ ಆಡಳಿತ ಯಂತ್ರವೇ ಸ್ತಬ್ಧಗೊಂಡಾಗ ಆ ಚಾಣಕ್ಯತನ ಬರೀ ಭ್ರಮೆಯಾಗಿ ಕರಗಿಹೋಗುತ್ತದೆ.

ಸಿದ್ಧರಾಮಯ್ಯ ಆಡಳಿತದ ಅವಧಿಯಲ್ಲಿ ಬಿಂಬಿತವಾದ ಆರ್ಥಿಕ ಸಬಲತೆಯ ಚಿತ್ರಣಕ್ಕೂ, ಕಟು ವಾಸ್ತವಕ್ಕೂ ಅಜಗಜಾಂತರ ವ್ಯತ್ಯಾಸವಿತ್ತು. ಬಹುತೇಕ ಎಲ್ಲ ಸರ್ಕಾರಿ ಇಲಾಖೆಗಳಲ್ಲಿ ತಿಂಗಳುಗಟ್ಟಲೆ ವೇತನ ಬಾಕಿ ಉಳಿದಿರುವಾಗ ಬೊಕ್ಕಸವು ಸಬಲವಾಗಿದೆ ಎನ್ನುವುದು ಶುದ್ಧ ಸುಳ್ಳು. ಇಂತಹ ಮೂಲಭೂತ ವೇತನ ವಿಳಂಬದಿಂದಾಗಿ ಬೇಸತ್ತ ನೌಕರರು ಬೀದಿಗಿಳಿದು ಹೋರಾಟ ಮಾಡಬೇಕಾಯಿತು. ಈ ಪರಿಸ್ಥಿತಿಯು ಆಡಳಿತದಲ್ಲಿ ಭ್ರಷ್ಟಾಚಾರದ ಅತಿರೇಕಕ್ಕೆ ನೇರ ದಾರಿಯಾಯಿತು; ಬದುಕಲು ಆಸರೆಯಿಲ್ಲದ ನೌಕರರಿಗೆ ಅಕ್ರಮ ಗಳಿಕೆಯೇ ಅನಿವಾರ್ಯ ಇಂಧನವಾಯಿತು, ಆದರೆ ಆಡಳಿತಗಾರರು ಇದಕ್ಕೆ ಕಣ್ಣುಮುಚ್ಚಿ ಕುಳಿತರು.

ಬಜೆಟ್ ಪುಸ್ತಕದಲ್ಲಿ ಆರ್ಥಿಕ ಶಿಸ್ತು ತೋರಿಸುವ ಶಾಣ್ಯಾತÀನಕ್ಕೆ ರಾಜ್ಯದ ಮೂಲಸೌಕರ್ಯಗಳು ಬಲಿಯಾದವು. ರಸ್ತೆಗಳು ಗುಂಡಿಬಿದ್ದವು, ಸರ್ಕಾರಿ ಆಸ್ಪತ್ರೆಗಳ ದುರಸ್ತಿ ಕಾರ್ಯಗಳು ನನೆಗುದಿಗೆ ಬಿದ್ದವು ಮತ್ತು ಇಲಾಖೆಗಳ ನಿರ್ವಹಣಾ ಅನುದಾನಗಳನ್ನು ವರ್ಷಗಟ್ಟಲೆ ತಡೆಹಿಡಿಯಲಾಯಿತು. ಸಾವಿರಾರು ಅಗತ್ಯ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡದೆ ಖಾಲಿ ಉಳಿಸಲಾಯಿತು. ಈ ಮೂಲಕ ಸಿಬ್ಬಂದಿ ವೆಚ್ಚವನ್ನು ಕಡಿತಗೊಳಿಸಿ ಕಾಗದದ ಮೇಲೆ ಆರ್ಥಿಕ ಲಾಭ ತೋರಿಸಲಾಯಿತೇ ಹೊರತು, ಸಾರ್ವಜನಿಕ ಸೇವೆಗಳು ಸಂಪೂರ್ಣವಾಗಿ ಹಳಿ ತಪ್ಪಿದವು.

ಯಾವುದೇ ನೈಜ ಆಡಳಿತಾತ್ಮಕ ಸಾಧನೆಗಳಿಲ್ಲದಿದ್ದಾಗ, ಅಧಿಕಾರ ಉಳಿಸಿಕೊಳ್ಳಲು ಆಡಳಿತಗಾರರು ಕೋಮು ರಾಜಕಾರಣದ ದಾಳ ಉರುಳಿಸಿದರು. ಜಾತಿ ನಾಯಕರನ್ನು ಆಯಕಟ್ಟಿನ ಜಾಗದಲ್ಲಿ ಕೂರಿಸಿ ತಮಗೆ ಪೂರಕವಾಗಿ ಮಾತನಾಡುವಂತೆ ಹುಕುಂ ಹೊರಡಿಸಲಾಯಿತು. ಮುಖ್ಯಮಂತ್ರಿಯವರ ಪುತ್ರ ಯತೀಂದ್ರ ನೇತೃತ್ವದ ನಿಷ್ಠಾವಂತ ಸಚಿವರ ಬಳಗವು ನಿರಂತರವಾಗಿ ಭಟ್ಟಂಗಿತನ ಪ್ರದರ್ಶಿಸಿತು. ಈ ಕೃತಕ ವರ್ಚಸ್ಸನ್ನು ಸಾರ್ವಜನಿಕರ ಮೇಲೆ ಹೇರಲು ಮಾಧ್ಯಮಗಳನ್ನು ದುರ್ಬಳಕೆ ಮಾಡಿಕೊಳ್ಳಲಾಯಿತು. ಯಾವುದೇ ಪ್ರಕಟಣಾ ಎಚ್ಚರಿಕೆಯಿಲ್ಲದೆ (ಡಿಸ್‍ಕ್ಲೈಮರ್), ಪ್ರಾಯೋಜಿತ ಜಾಹೀರಾತುಗಳನ್ನು ನೈಜ ಸುದ್ದಿಯಂತೆ ಬಿತ್ತರಿಸುವ ಮೂಲಕ ಮಾಧ್ಯಮಗಳು ಪತ್ರಿಕೋದ್ಯಮದ ಧರ್ಮವನ್ನೇ ಗಾಳಿಗೆ ತೂರಿದವು. ಜ್ವಲಂತ ಸಮಸ್ಯೆಗಳ ಬಗ್ಗೆ ಪ್ರಶ್ನೆ ಕೇಳುವ ಬದಲು ಕೇವಲ ಗುಣಗಾನ ಮಾಡಿದ ಮಾಧ್ಯಮಗಳು ಜನಸಾಮಾನ್ಯರ ಕಡುವೈರಿಯಾಗಿ ಬಿಂಬಿತವಾದವು.

ದೇವರಾಜ ಅರಸು ಅವರ ಸುದೀರ್ಘ ಆಡಳಿತದ ದಾಖಲೆಯನ್ನು ಸಿದ್ಧರಾಮಯ್ಯ ಮುರಿದಿರಬಹುದು, ಆದರೆ ಅದರೊಂದಿಗೆ ಅವರು ಭ್ರಷ್ಟಾಚಾರದ ದಾಖಲೆಯನ್ನೂ ಬರೆದರು. ಮೈಸೂರಿನ ಮುಡಾ ಭೂಹಗರಣ ಸೇರಿದಂತೆ ಸಾಲು ಸಾಲು ಹಗರಣಗಳು ಈ ಅವಧಿಯಲ್ಲಿ ತಲೆಯೆತ್ತಿದವು. ಹಗರಣಗಳ ತೀವ್ರತೆಗೆ ಸಚಿವರ ತಲೆಗಳು ಉರುಳಿದರೂ, ಆಪ್ತ ಸಚಿವರಿಗೆ ಸಾರ್ವಜನಿಕರನ್ನು ಲೂಟಿ ಮಾಡಲು ಮುಕ್ತ ಅವಕಾಶ ನೀಡಲಾಗಿತ್ತು. ನೈಜ ನಾಯಕತ್ವವು ಸಮಾಜವನ್ನು ಬೆಸೆಯುತ್ತದೆಯೇ ಹೊರತು ಒಡೆಯುವುದಿಲ್ಲ. ಕೇವಲ ಚುನಾವಣಾ ಗಣಿತಕ್ಕಾಗಿ ಜಾತಿಗಳ ನಡುವೆ ಕಂದಕ ಸೃಷ್ಟಿಸಿದ ಈ ಆಡಳಿತವು ಕರ್ನಾಟಕವನ್ನು ಸಾಂಸ್ಕøತಿಕವಾಗಿ ಛಿದ್ರಗೊಳಿಸಿದೆ. ಈ ಕೃತಕ ವೈಭವದ ಭೀಕರ ಪರಿಣಾಮವನ್ನು ಮತ್ತು ಆರ್ಥಿಕ ನಷ್ಟವನ್ನು ರಾಜ್ಯದ ಜನತೆ ಇಂದು ಅನುಭವಿಸುವಂತಾಗಿದೆ.


Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

When Prestige Is Gifted, Not Earned: The Padma Vibhushan Controversy Of Veerendra Heggade

Why I Will Never Fly Air India Again